ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗೆ ಪರ್ಯಾಯ ದೃಷ್ಟಿಕೋನ ಅಗತ್ಯ

ಜಾತಿಗೆ ಪರ್ಯಾಯ ದೃಷ್ಟಿಕೋನ ಅಗತ್ಯ
Last Updated 28 ಮಾರ್ಚ್ 2017, 8:40 IST
ಅಕ್ಷರ ಗಾತ್ರ
ತುಮಕೂರು: ‘ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಹೊಸ ಪರಿಭಾಷೆಯಲ್ಲಿ ನೋಡಬೇಕಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಆರ್.ಶಶಿಧರ್ ಹೇಳಿದರು. 
 
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಿಂದುಳಿದ ವರ್ಗಗಳ ಘಟಕ ಸೋಮವಾರ ಏರ್ಪಡಿಸಿದ್ದ ‘ಜಾತಿ: ಪರಿಕಲ್ಪನೆ- ವಿದ್ಯಮಾನ-ರಾಜಕಾರಣ’ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. 
 
‘ಜಾತಿ ವ್ಯವಸ್ಥೆ ಸಾಮಾಜಿಕ ಪಿಡುಗು, ಅನಾದಿ ಕಾಲದಿಂದ ಬೇರೂರಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಬ್ರಿಟೀಷರು ಬಂದ ನಂತರ ಹುಟ್ಟಿಕೊಂಡಿರುವ ಸಮಸ್ಯೆ ಇದು. ವಸಾಹತುಶಾಹಿ ವ್ಯವಸ್ಥೆಯಲ್ಲಿ ಸಂಘ ಸಂಸ್ಥೆಗಳ ಹುಟ್ಟಿನೊಂದಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಇದಕ್ಕೆ 150 ವರ್ಷ ಇತಿಹಾಸವಿದೆ ಅಷ್ಟೇ’ ಎಂದು ಹೇಳಿದರು.
 
‘ಈ ಹಿಂದೆ ಸಾರ್ವಜನಿಕ ಸಂವಾದ ಇರಲಿಲ್ಲ. ಹಾಗಾಗಿ ಒಟ್ಟಿಗೆ ಕೂರುವ, ಮಾತನಾಡುವ ಸನ್ನಿವೇಶ ಬರುತ್ತಿರಲಿಲ್ಲ. ರೈಲು ಸೇವೆಯ ನಂತರ ಜನರ ಪ್ರಯಾಣ ಆರಂಭವಾಯಿತು. ಒಬ್ಬರ ಪಕ್ಕ ಒಬ್ಬರು ಕುಳಿತು ಪ್ರಯಾಣಿಸುವುದು ಅನಿವಾರ್ಯವಾಯಿತು. ಆಗ ಜಾತಿ ಸಮಸ್ಯೆ ಹುಟ್ಟಿಕೊಂಡಿತು’ ಎಂದರು. 
 
‘ಜಾತಿ ವ್ಯವಸ್ಥೆ ಹೋಗಲಾಡಿಸಲು ಬುದ್ಧ, ಬಸವಣ್ಣ ಅವರಿಂದಲೂ ಸಾಧ್ಯವಾಗಿಲ್ಲ. ಅದು ಕ್ರಮೇಣ ಬಲವಾಗುತ್ತಲೇ ಇದೆ. ಅಂತರ್ಜಾತಿ ನಡುವಿನ ವ್ಯತ್ಯಾಸ ಜಾತಿ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿದೆ’ ಎಂದು ತಿಳಿಸಿದರು.
 
‘ಹಿಂದೂ ಧರ್ಮ ಅರ್ಥ ಮಾಡಿಕೊಳ್ಳಲು ಬಂದ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮದಲ್ಲಿ ಬೈಬಲ್‌ನ ಪ್ರತಿರೂಪ ಕಂಡವು. ಅವರದ್ದೇ ಆದ ಕಲ್ಪನೆ, ದೃಷ್ಟಿಕೋನದಲ್ಲಿ ಧರ್ಮವನ್ನು ತೂಗಿ ಅಳೆದು, ಹಿಂದೂ ಧರ್ಮ ಶಿಥಿಲವಾಗುತ್ತಿದೆ ಎಂಬ ವಾದಕ್ಕೆ ಬಂದರು’ ಎಂದು ಹೇಳಿದರು.
 
‘ಬ್ರಿಟೀಷರಿಗೂ ಹಿಂದೆಯೇ ಮೊಘಲರು, ಟರ್ಕಿಗಳು, ಇಸ್ಲಾಮರು ದೇಶದಲ್ಲಿ ಆಡಳಿತ ನಡೆಸಿದರು. ಆಗ ಜಾತಿ ವ್ಯವಸ್ಥೆ ಹೇಗಿತ್ತು ಎಂಬ ಪರ್ಯಾಯ ಚಿಂತನೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
 
‘ಸ್ಪರ್ಧಾತ್ಮಕ ಪರೀಕ್ಷೆ ಬ್ರಾಹ್ಮಣರಿಗಷ್ಟೇ ಮೀಸಲು ಎಂಬ ನಿರಾಧಾರಿತ ವಾದವಿದೆ. ಆಗೊಮ್ಮೆ ಸಂಸ್ಕೃತದಲ್ಲೇ ಪರೀಕ್ಷೆ ಇದ್ದಿದ್ದರೆ ಬ್ರಾಹ್ಮಣರು ಸುಲಭವಾಗಿ ಪಾಸು ಮಾಡುತ್ತಿದ್ದರು. ಆದರೆ ವಿಜ್ಞಾನ– ತಂತ್ರಜ್ಞಾನ  ಎಲ್ಲರಿಗೂ ಓದುವ ಅವಕಾಶ ನೀಡಿದೆ’ ಎಂದರು. 
 
ಕುಲಪತಿ ಪ್ರೊ.ಎ.ಎಚ್‌.ರಾಜಾಸಾಬ್‌ ಮಾತನಾಡಿ, ‘ವಿದೇಶದಲ್ಲಿ ಬಣ್ಣ, ಬುಡಕಟ್ಟು ಕಲ್ಪನೆಗಳಿರಬಹುದು. ಆದರೆ, ಭಾರತದಲ್ಲಿ ಇರುವಂತೆ ಅಸ್ಪೃಶ್ಯತೆ ಇಲ್ಲ. ದೇಶದಲ್ಲಿ ಜಾತಿ ವೈಯಕ್ತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ನೆಲೆಗಟ್ಟಿನಲ್ಲೂ ಗಟ್ಟಿಯಾಗಿ ಬೇರೂರಿದೆ. ಜಾತಿ ವ್ಯವಸ್ಥೆ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಕ್ರಿಮಿ. ಇದಕ್ಕೆ ಔಷಧ ನೀಡಲು ಮಹಾಪುರುಷ ಹುಟ್ಟಿ ಬರಬೇಕು’ ಎಂದು ಹೇಳಿದರು. 
 
ಜಾತಿ ನಿರೂಪಣೆ: ವಸಾಹತು ಪೂರ್ವ ಸಂದರ್ಭ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಾಮಿನಿಕ್‌, ಜಾತಿ ಪರಿಕಲ್ಪನೆ: ವಸಾಹತು ಸಂದರ್ಭ ಕುರಿತು ಮೈಸೂರು ಮಹಾರಾಣಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ವಿಜಯಕುಮಾರ ಬೋರಟ್ಟಿ ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಡಿ.ಎಸ್‌.ನಾಗಭೂಷಣ್‌, ಪ್ರೊ.ಮುಜಫರ್‌ ಅಸ್ಸಾದಿ ಇದ್ದರು.
***
ಅಸಮರ್ಥರು ಎಂದರ್ಥ:
‘ಪರಿಶಿಷ್ಟರಿಗೆ 20 ವರ್ಷ ಮಾತ್ರ ಮೀಸಲಾತಿ ಕೊಡಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮೀಸಲಾತಿ ವಿಷಯ ರಾಜಕೀಯ ಭಾಷಣವಾಗಿ ಮಾರ್ಪಟ್ಟಿರುವ ಕಾರಣ ಮುಂದುವರಿದಿದೆ’ ಎಂದು ಶಶಿಧರ್ ಹೇಳಿದರು.

‘ಒಬ್ಬರಿಗೆ ಮೀಸಲಾತಿ ನೀಡಿದರೆ ಒಂದು ಕುಟುಂಬ ಉದ್ಧಾರ ಆಗಲಿದೆ. ಅದರಿಂದ ಸಮಾಜದ ಉದ್ಧಾರ ಆಗದು’ಎಂದರು. ‘ಮೀಸಲಾತಿ ಪ್ರಯೋಜನ ಪಡೆದ ಅಸಮಾನರು ಇಷ್ಟು  ವರ್ಷ ಸಮಾನರಾಗಿಲ್ಲ ಎಂದರೆ ಅವರು ಅಸಮರ್ಥರು ಎಂದರ್ಥ. ಸೌಲಭ್ಯ ಕೊಟ್ಟರೂ ಅಭಿವೃದ್ಧಿ ಹೊಂದದೇ ಇರುವುದು ಮೀಸಲಾತಿಯ ಗುರಿ ಸಾಧನೆ ಅಣಕಿಸುವಂತಿದೆ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT