ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಇ–ಕಾಮರ್ಸ್‌: ಶಾಪ್‌ಎಕ್ಸ್‌ ಧ್ಯೇಯ

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಗರವಾಸಿಗಳು, ಇಂಗ್ಲಿಷ್‌ ಬಲ್ಲವರು, ಮನೆ – ಕಚೇರಿಯಲ್ಲಿಯೇ ಕುಳಿತು ಆರಾಮವಾಗಿ ಅಂತರ್ಜಾಲ ಜಾಲಾಡುತ್ತ  ಆನ್‌ಲೈನ್‌ನಲ್ಲಿ ತಮಗಿಷ್ಟದ ಉತ್ಪನ್ನ, ಸರಕುಗಳನ್ನು ಖರೀದಿಸುತ್ತಾರೆ. ಆನ್‌ಲೈನ್‌ನಲ್ಲಿಯೇ ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌ ಬಳಸಿ ಹಣ ಪಾವತಿಸುತ್ತಾರೆ. ಖರೀದಿಸಿದ ಸರಕು ಮನೆ ಬಾಗಿಲಿಗೆ ಬಂದು ಬೀಳುತ್ತದೆ.

ಇಂತಹ ಇ–ಕಾಮರ್ಸ್‌ ವಹಿವಾಟು ಮಹಾನಗರಗಳಿಗೆ ಸೀಮಿತವಾಗಿ ಗಮನಾರ್ಹ ಪ್ರಮಾಣದಲ್ಲಿ ನಡೆಯುತ್ತಿದೆ. ಇದನ್ನು ಸಣ್ಣ – ಪುಟ್ಟ ನಗರಗಳಿಗೂ ವಿಸ್ತರಿಸಿ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೂ ಇಂತಹ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಶಾಪ್‌ಎಕ್ಸ್‌ (ShopX) ಸ್ಟಾರ್ಟ್‌ಅಪ್‌ ಕಾರ್ಯನಿರ್ವಹಿಸುತ್ತಿದೆ. ಸಾಂಪ್ರದಾಯಿಕ ಇ–ಕಾಮರ್ಸ್‌ಗೆ ಪರ್ಯಾಯವಾಗಿಈ ಹೊಸ ಪರಿಕಲ್ಪನೆ ಕಾರ್ಯಗತಗೊಳಿಸಲಾಗಿದೆ.

ಇನ್ಫೊಸಿಸ್‌ನ ಮಾಜಿ ಉದ್ಯೋಗಿಗಳಿಬ್ಬರು ಜಂಟಿಯಾಗಿ ಈ ಸ್ಟಾರ್ಟ್‌ಅಪ್‌ ಆರಂಭಿಸಿ, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇನ್ಫೊಸಿಸ್‌ನ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರೂ ಈ ನವೋದ್ಯಮದಲ್ಲಿ ಬಂಡವಾಳ ತೊಡಗಿಸಿದ್ದಾರೆ. ಇದುವರೆಗೆ ₹ 66 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ.

‘ಇ–ಕಾಮರ್ಸ್‌’ ತಾಣಗಳಲ್ಲಿ ಸರಕು ಖರೀದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇಂತಹ ತಾಣಗಳು  ಬಹುತೇಕ ಇಂಗ್ಲಿಷ್‌ ಭಾಷೆಗಳಲ್ಲಿ ಇರುವುದು, ಡಿಜಿಟಲ್‌ ಪಾವತಿ ವ್ಯವಸ್ಥೆ, ವಹಿವಾಟಿನ ವಿಶ್ವಾಸಾರ್ಹತೆಯ ಕಾರಣಕ್ಕೆ ಸಣ್ಣ – ಪುಟ್ಟ ನಗರಗಳ ಗ್ರಾಹಕರನ್ನು ಈ ವಹಿವಾಟು ಹೆಚ್ಚಾಗಿ ಸೆಳೆಯುತ್ತಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇ–ಕಾಮರ್ಸ್‌ ವಹಿವಾಟು ನಿರೀಕ್ಷಿಸಿದ ಪ್ರಮಾಣದಲ್ಲಿ ವಿಸ್ತರಣೆಯೂ ಆಗಿಲ್ಲ.

ದೇಶದಲ್ಲಿ  40 ಕೋಟಿಗಳಷ್ಟು ಇರುವ ಮಧ್ಯಮ ವರ್ಗದವರೆಲ್ಲರನ್ನು ತಲುಪಲು ಈ ವಿದ್ಯುನ್ಮಾನ ವಹಿವಾಟಿಗೆ ವಿಪುಲ ಅವಕಾಶಗಳಿವೆ.  ಅಂತಹ ಸಾಧ್ಯತೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ಶಾಪ್‌ಎಕ್ಸ್‌ ಕಾರ್ಯಪ್ರವೃತ್ತವಾಗಿದೆ.

ಹಲವಾರು ಕಾರಣಗಳಿಗೆ ಸದ್ಯದ ವ್ಯವಸ್ಥೆ ಎಲ್ಲರನ್ನೂ ತಲುಪುತ್ತಿಲ್ಲ. ಅನೇಕ ಅಡಚಣೆಗಳಿಂದಾಗಿ ಆನ್‌ಲೈನ್‌ನಲ್ಲಿ ಸರಕು ಖರೀದಿಸಲು ಹಿಂದೇಟು ಹಾಕುವಂತೆ ಮಾಡುತ್ತವೆ. ಅನೇಕ ಗ್ರಾಹಕರಿಗೆ ಈ ವಹಿವಾಟಿನ ಒಟ್ಟಾರೆ ಸ್ವರೂಪದ ಬಗೆಗಿನ ವಿಶ್ವಾಸವೇ ಮುಖ್ಯವಾಗಿದೆ.

ಮನೆಯ ಹತ್ತಿರದ ಕಿರಾಣಿ ಅಂಗಡಿ, ಮೊಬೈಲ್‌ ಮಳಿಗೆಗಳಲ್ಲಿಯೇ ಜನಪ್ರಿಯ ಇ–ಕಾಮರ್ಸ್‌ ತಾಣಗಳ ವಹಿವಾಟು ನಡೆಸಿದರೆ ಗ್ರಾಹಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಒಂದೇ ಏಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎನ್ನುವ ಕಾರಣಕ್ಕೆ ಈ ಸ್ಟಾರ್ಟ್‌ಅಪ್‌ ಪರಿಕಲ್ಪನೆ ರೂಪುಗೊಂಡಿದೆ.

ಕಿರಾಣಿ ಅಂಗಡಿ ಮಾಲೀಕರ  ಜತೆಗೆ ಸ್ಥಳೀಯ ಭಾಷೆಯಲ್ಲಿನ ಸಂವಹನ, ಮುಖಾಮುಖಿ ವಹಿವಾಟು, ನಗದು ಪಾವತಿ, ಕಂತುಗಳಲ್ಲಿ  ಹಣ ಪಾವತಿ ಸೌಲಭ್ಯದ ಕಾರಣಗಳಿಗೆ ಕಿರಾಣಿ ಅಂಗಡಿಗಳು ಇ–ಶಾಪಿಂಗ್‌ನ ಗ್ರಾಹಕರ ಸಂಪರ್ಕ ಕೊಂಡಿಯಾಗಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಈ ಪರಿಕಲ್ಪನೆಯನ್ನೇ ‘ಶಾಪ್‌ ಎಕ್ಸ್‌’ ಬಂಡವಾಳ ಮಾಡಿಕೊಳ್ಳಲು ಹೊರಟು ಯಶಸ್ಸಿನಿಂದ ಮುನ್ನಡೆಯುತ್ತಿದೆ.

ಕಿರಾಣಿ ಅಂಗಡಿ ಮಾಲೀಕ ಈ ವಹಿವಾಟಿನಲ್ಲಿ ಶಾಪ್‌ಎಕ್ಸ್‌ ಮತ್ತು ಗ್ರಾಹಕರ ಮಧ್ಯೆ ವಿಶ್ವಾಸಾರ್ಹ ಪಾಲುದಾರನ ಪಾತ್ರ ನಿರ್ವಹಿಸುತ್ತಾನೆ. ಕಿರಾಣಿ ಅಂಗಡಿಗಳು ಶಾಪ್‌ಎಕ್ಸ್‌ ಆನ್‌ಲೈನ್‌ ವಹಿವಾಟಿನ ಆಫ್‌ಲೈನ್‌ ಮಳಿಗೆಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಆನ್‌ಲೈನ್‌ ವಹಿವಾಟಿನಲ್ಲಿ ಕಿರಾಣಿ ಅಂಗಡಿ ಮಾಲೀಕರನ್ನು ಹಿಂದೆ ಬಿಟ್ಟು ಹೋಗುವುದರ ಬದಲು ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವುದು ಈ ಸ್ಟಾರ್ಟ್‌ಅಪ್‌ನ ಮುಖ್ಯ ಧ್ಯೇಯವಾಗಿದೆ.

ಗ್ರಾಹಕರು ಕಿರಾಣಿ ಅಂಗಡಿಗೆ ಹೋಗಿ ಅಲ್ಲಿ ಲಭ್ಯ ಇರುವ ಆನ್‌ಲೈನ್‌ ವಹಿವಾಟಿನಲ್ಲಿ ಸಿಗುವ ಉತ್ಪನ್ನಗಳ ವಿವರಗಳ ಪಟ್ಟಿಯಲ್ಲಿ  (ಕ್ಯಾಟಲಾಗ್‌) ತಮಗಿಷ್ಟದ ಸರಕು ಖರೀದಿಸಿ ಅಂಗಡಿ ಮಾಲೀಕನ ಆ್ಯಪ್‌ ಅಥವಾ ಟ್ಯಾಬ್ಲೆಟ್‌ನಲ್ಲಿ ನಮೂದಿಸಿದರೆ ಆಯಿತು. ಮೂರ್ನಾಲ್ಕು ದಿನಗಳಲ್ಲಿ ಸರಕು ಕೊರಿಯರ್‌ನಲ್ಲಿ ಕಿರಾಣಿ ಅಂಗಡಿಗೆ ಬರುತ್ತದೆ. ಖರೀದಿದಾರ ಅಲ್ಲಿಂದಲೇ ಸರಕನ್ನು ಪಡೆಯಬಹುದು. 

ಗ್ರಾಹಕರು ಮನೆಯಲ್ಲಿ ಇಲ್ಲದಿರುವಾಗ ಕೊರಿಯರ್‌ನವರು ಬಂದು ಹೋದ, ಅವರನ್ನು ಹುಡುಕಿಕೊಂಡು ಹೋಗುವ ರಗಳೆ ಇಲ್ಲಿ  ಇರುವುದಿಲ್ಲ. ಖರೀದಿಸಿದ ಸರಕು ಇಷ್ಟವಾಗದಿದ್ದರೆ, ದೋಷಪೂರಿತವಾಗಿದ್ದರೆ ಅಂಗಡಿ ಮಾಲೀಕನಿಗೇ ಮರಳಿಸುವ ಸೌಲಭ್ಯವೂ ಇಲ್ಲಿ ಇದೆ.

‘ಕಿರಾಣಿ ಅಂಗಡಿ ಮಾಲೀಕರು ಗ್ರಾಹಕ ಮತ್ತು ಆನ್‌ಲೈನ್‌ ವಹಿವಾಟಿನ ಮಧ್ಯೆ ಮಧ್ಯವರ್ತಿ ಪಾತ್ರ ನಿರ್ವಹಿಸುವುದಿಲ್ಲ. ಅವರೂ ಈ ವಹಿವಾಟಿನ ಪಾಲುದಾರರಾಗಿರುತ್ತಾರೆ. ಗ್ರಾಹಕರಿಗೆ  ಇಂತಹ ಮೌಲ್ಯವರ್ಧಿತ ಸೇವೆ ಒದಗಿಸುತ್ತ ತಮ್ಮ ಮಾಮೂಲಿ ವಹಿವಾಟನ್ನೂ ನಿರ್ವಹಿಸಿಕೊಂಡು ಹೋಗಬಹುದು. ಈ ವಹಿವಾಟಿನಲ್ಲಿ ಅವರಿಗೂ ಆಕರ್ಷಕ ಲಾಭ ಇದೆ’ ಎಂದು ಶಾಪ್‌ಎಕ್ಸ್‌ನ ಸಹ ಸ್ಥಾಪಕ ಮತ್ತು ಸಿಇಒ ಅಮಿತ್‌ ಶರ್ಮಾ  ಹೇಳುತ್ತಾರೆ.

‘ಹಿಂದೂಸ್ತಾನ್‌ ಲೀವರ್‌, ಸ್ಯಾಮ್ಸಂಗ್‌ನಂತಹ ಜನಪ್ರಿಯ ಬ್ರ್ಯಾಂಡ್‌ ಉತ್ಪನ್ನಗಳ ಜತೆಗೆ ಅಷ್ಟೇನೂ ಪ್ರಚಾರ ಪಡೆಯದ  ಸಣ್ಣ ಬ್ರ್ಯಾಂಡ್‌ನ ಉತ್ಪನ್ನಗಳನ್ನೂ ಗ್ರಾಹಕರು ಇಲ್ಲಿ ಖರೀದಿಸಬಹುದು. ಚಿನ್ನಾಭರಣ, ಮೊಬೈಲ್‌, ಪತಂಜಲಿ, ಹಿಮಾಲಯ ಬ್ರ್ಯಾಂಡ್‌ ಉತ್ಪನ್ನಗಳು ಮತ್ತು ದುಬಾರಿ ಬೆಲೆಯ ಐಫೋನ್ ಮಾರಾಟಕ್ಕೂ ವೇದಿಕೆಯಾಗಿದೆ. ವಿಶ್ವದಲ್ಲಿಯೇ ಇಂತಹ ಆಲೋಚನೆ  ಇದೇ ಮೊದಲು’ ಎಂದೂ ಅವರು ಹೆಮ್ಮೆಯಿಂದ ಹೇಳುತ್ತಾರೆ.

ಸಂಸ್ಥೆಯ ವಹಿವಾಟನ್ನು 6 ತಿಂಗಳ ಹಿಂದೆ ವ್ಯಾಪಕವಾಗಿ ವಿಸ್ತರಿಸಲು ಸಂಸ್ಥೆ ಮುಂದಾಗಿತ್ತು.  ಒಂದೇ ದಿನ 1.4 ಕೋಟಿಗಳಷ್ಟು ವಹಿವಾಟು ನಡೆದ ದಾಖಲೆಯೂ ಇದೆ.

ವಹಿವಾಟಿನ ಸ್ವರೂಪ ಸಾವಿರಾರು ಗ್ರಾಹಕರಿಗೆ ಮೆಚ್ಚುಗೆ ಆಗಿರುವುದರಿಂದ ಸಂಸ್ಥೆಯ ವಹಿವಾಟು ದಿನೇ ದಿನೇ ವೃದ್ಧಿಯಾಗುತ್ತಿದೆ. ಈ ವಹಿವಾಟಿನ ಪಾಲುದಾರರಾಗಿರುವ ಕಿರಾಣಿ ಅಂಗಡಿ ಮಾಲೀಕರು ಶೇ 15 ರಿಂದ ಶೇ 20ರಷ್ಟು ಲಾಭ ಪಡೆಯುತ್ತಾರೆ. ಹೀಗಾಗಿ ಅವರಿಗೂ ಇದು ಆಕರ್ಷಕ ವಹಿವಾಟು ಆಗಿದೆ.

‘ಕಿರಾಣಿ ಅಂಗಡಿಗಳಲ್ಲದೆ, ಬ್ಯೂಟಿ ಪಾರ್ಲರ್‌,  ಮೊಬೈಲ್‌ ಮಳಿಗೆಗಳೂ ಶಾಪ್‌ಎಕ್ಸ್‌ನ ವಹಿವಾಟು ಪಾಲುದಾರರಾಗಬಹುದು. ಸದಸ್ಯತ್ವ ಉಚಿತವಾಗಿದ್ದರೆ ವಹಿವಾಟನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಆಸಕ್ತ ಮಾಲೀಕರು  ಆರಂಭದಲ್ಲಿ ₹  1,000 ಪಾವತಿಸಿ ಕಿರಾಣಿ ಅಂಗಡಿ ಮಾಲೀಕರು ಸದಸ್ಯತ್ವ ಪಡೆಯಬಹುದು’ ಎಂದು ಶರ್ಮಾ ಹೇಳುತ್ತಾರೆ.

ಸಣ್ಣ ಪಟ್ಟಣಗಳಲ್ಲೂ ಪ್ರತಿದಿನ ಗರಿಷ್ಠ ಪ್ರಮಾಣದಲ್ಲಿ ವಹಿವಾಟು ನಡೆಸುವವರನ್ನು (ಎ ಕ್ಲಾಸ್‌ ರಿಟೇಲರ್‌) ವಹಿವಾಟಿನ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಪುಟ್ಟ ಅಂಗಡಿಗಳ ಮಾಲೀಕರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಶಾಪ್‌ಎಕ್ಸ್‌ನ ಸಹ ಸ್ಥಾಪಕ ಮತ್ತು ಸಿಇಒ ಅಮಿತ್‌ ಶರ್ಮಾ ದೆಹಲಿಯವರು.

2003–06ರವರೆಗೆ  ಇನ್ಫೊಸಿಸ್‌ನಲ್ಲಿ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸಿದ್ದರು. ಆನಂತರ ಅಮೆರಿಕೆಗೆ ತೆರಳಿ ಎಂಬಿಎ ಮಾಡಿ ಭಾರತಕ್ಕೆ ಮರಳಿದ್ದರು. ಇನ್ಫೊಸಿಸ್‌ನ ಹಳೆಯ ಸಹೋದ್ಯೋಗಿಯಾಗಿದ್ದ ಸಾಗರದ ಅಪೂರ್ವ ಜೊಯಿಸ್‌ ಜೊತೆ ಸೇರಿ ಈ ನವೋದ್ಯಮಕ್ಕೆ ಚಾಲನೆ ನೀಡಿದ್ದಾರೆ.

ಬೆಂಗಳೂರು ಒನ್‌ ಮಾದರಿಯಲ್ಲಿ, ಆಂಧ್ರಪ್ರದೇಶದಲ್ಲಿ ನಾಗರಿಕ ಸೇವೆಗಳನ್ನು ಒದಗಿಸಲು ಅಲ್ಲಿನ ಸರ್ಕಾರದ  ಜತೆ   ಒಪ್ಪಂದ ಮಾಡಿಕೊಂಡಿರುವುದು  ಇದರ ಇನ್ನೊಂದು ವಿಶೇಷತೆ.

ರಿಟೇಲ್‌, ಗ್ರಾಹಕರ ಆ್ಯಪ್‌
ಸುಲಲಿತ ವಹಿವಾಟಿಗಾಗಿ ಸಂಸ್ಥೆಯು ಎರಡು ಬಗೆಯ ಮೊಬೈಲ್‌ ಕಿರು ತಂತ್ರಾಂಶಗಳನ್ನು  ಅಭಿವೃದ್ಧಿಪಡಿಸಿದೆ. ಶಾಪ್‌ಎಕ್ಸ್‌ ರಿಟೇಲ್‌ ಆ್ಯಪ್‌ನ (ShopX Retail App) ನೆರವಿನಿಂದ ಚಿಲ್ಲರೆ ವರ್ತಕರು ತಮ್ಮ ಗ್ರಾಹಕರಿಗೆ ವೈವಿಧ್ಯಮಯ ಉತ್ಪನ್ನ, ಸೇವೆಗಳನ್ನು ಒದಗಿಸಬಹುದು. 

ಈ ಮೂಲಕ ವರ್ತಕರು ತಮ್ಮದೇ ಆದ ಆನ್‌ಲೈನ್‌ ಮಳಿಗೆ ಆರಂಭಿಸಬಹುದು. ಇದರಿಂದ ವರ್ತಕರು ತಮ್ಮ ಗ್ರಾಹಕರ ಸಂಖ್ಯೆ ಹೆಚ್ಚಿಸಿ, ವರಮಾನ ವೃದ್ಧಿಸಿಕೊಳ್ಳಬಹುದು.

ಶಾಪ್‌ಎಕ್ಸ್‌ ಕನ್ಸುಮರ್‌ ಆ್ಯಪ್‌ನಲ್ಲಿ (ShopX Consumer App) ಗ್ರಾಹಕರು ಶಾಪ್‌ಎಕ್ಸ್‌ನಲ್ಲಿ ಲಭ್ಯ ಇರುವ ಉತ್ಪನ್ನಗಳ ತಾಜಾ ಮಾಹಿತಿ ಪಡೆಯಬಹುದು.

*40ಸಾವಿರ ಸಂಸ್ಥೆಯ ಸಕ್ರಿಯ ರೀಟೇಲ್‌ರುಗಳ ಸಂಖ್ಯೆ.

*₹50 ಕೋಟಿಗೂ ಹೆಚ್ಚು 2016–17ನೆ ಹಣಕಾಸು ವರ್ಷದಲ್ಲಿನ ವಹಿವಾಟು ಸಾಧ್ಯತೆ.

*₹100 ಕೋಟಿ 2017–18ನೆ ಹಣಕಾಸು ವರ್ಷದಲ್ಲಿನ ವಹಿವಾಟಿನ ಗುರಿ.

ಮಾಹಿತಿಗೆ http://shopx.in/ ಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT