ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: ಪ್ರಕೃತಿಯ ಜೀವನ ಪಾಠ

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬದಲಾವಣೆ ಜಗದ ನಿಯಮ – ಎಂಬ ಮಾತಿದೆ. ಬದಲಾವಣೆಯೊಂದೇ ಶಾಶ್ವತ ಎನ್ನುವ ಮಾತೂ ಉಂಟು. ಬದಲಾವಣೇ ನಮ್ಮ ಗಮನಕ್ಕೆ ಬರುತ್ತಿರುತ್ತದೆ. ಇದು ಭೌತಿಕ ಬದಲಾವಣೆಯೂ ಆಗಿರಬಹುದು; ಭಾವನಾತ್ಮಕ ಬದಲಾವಣೆಯೂ ಆಗಿರಬಹುದು; ಬೌದ್ಧಿಕ ಬದಲಾವಣೆಯೂ ಆಗಿರಬಹುದು. 

ಕೆಲವೊಂದು ಬದಲಾವಣೆಗಳನ್ನು ಸುಲಭವಾಗಿ ಗುರುತಿಸಬಹುದು; ಮತ್ತೆ ಕೆಲವೊಂದನ್ನು ಗುರುತಿಸಲು ಕಷ್ಟವಾಗಬಹುದು. ಆದರೆ ನಮಗೆ ಗುರುತಿಸಲು ಆಗಲೀ, ಆಗದಿರಲೀ – ಬದಲಾವಣೆಯಂತೂ ನಡೆಯುತ್ತಲೇ ಇರುತ್ತದೆ. ನಮ್ಮ ಪ್ರಕೃತಿಯಲ್ಲಿ, ಎಂದರೆ ಸ್ವಭಾವದಲ್ಲಿ ನಡೆಯುವ ಬದಲಾವಣೆಯನ್ನು ಗುರುತಿಸಲು ಕಷ್ಟವಾಗಬಹುದು; ಆದರೆ ಪ್ರಕೃತಿಯಲ್ಲಿ, ಎಂದರೆ ಸೃಷ್ಟಿಯಲ್ಲಿ ನಡೆಯುವ ಬದಲಾವಣೆಗಳನ್ನು ಸುಲಭವಾಗಿ ಗಮನಿಸಬಹುದಾಗಿದೆ.

ನಮ್ಮ ಪರಿಸರದಲ್ಲಿರುವ ಗಿಡ–ಮರಗಳನ್ನು ನೋಡುತ್ತಿದ್ದರೆ ಪ್ರಕೃತಿಯಲ್ಲಿ ಎಷ್ಟೆಲ್ಲ ಬದಲಾವಣೆಗಳು ನಡೆಯುತ್ತಿರುತ್ತವೆ ಎನ್ನುವುದು ಸ್ವಲ್ಪವಾದರೂ ಅರ್ಥವಾಗಬಹುದು.

ಬದಲಾವಣೆ ಎಂದರೆ ಈಗಿರುವ ಸ್ಥಿತಿಗೆ ಒದಗುವ ಮಾರ್ಪಾಡು; ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವ ಸಹಜಯಾನ. ಬದಲಾವಣೆಯೇ ಆಗದಿದ್ದರೆ ಆಗ ಪ್ರಕೃತಿಯ ಸ್ವಾರಸ್ಯವನ್ನೂ ಕಳೆದುಕೊಳ್ಳುತ್ತೇವೆ; ಮಾತ್ರವಲ್ಲ, ಬದಲಾವಣೆಗೆ ಒಳಪಡದ ವಸ್ತು ಅದು ನಾಶವೂ ಆಗಬಹುದು; ಅದರ ಮೂಲಗುಣವನ್ನೂ ಶಕ್ತಿಯನ್ನೂ ಕಳೆದುಕೊಂಡು ಕೊಳೆಯಲು ತೊಡಗಬಹುದು; ಕೊಳೆತು ದುರ್ನಾತ ಬೀರಬಹುದು; ರೋಗಕ್ಕೂ ಕಾರಣವಾಗಬಹುದು.

ಹೀಗಾಗಿ ನಮ್ಮ ಆರೋಗ್ಯಕ್ಕೂ ಆನಂದಕ್ಕೂ ಮೂಲಶಕ್ತಿಯಾಗಿಯೂ ಪ್ರೇರಣೆಯಾಗಿಯೂ ಒದಗುವಂಥದ್ದು ಬದಲಾವಣೆ. ಹೀಗೆ ಪ್ರಕೃತಿಯಲ್ಲಿ ಉಂಟಾಗುವ ಇಂಥ ಸುಂದರವಾದ ಬದಲಾವಣೆಯ ಸಮಯವನ್ನೇ ನಮ್ಮ ಪೂರ್ವಜರು ಸೃಷ್ಟಿಯ ಮೊದಲ ಕ್ಷಣ ಎಂದರು; ನಮ್ಮ ಜೀವನದ ಪ್ರಥಮ ಮುಹೂರ್ತ ಎಂದರು. ಕಾಲಚಕ್ರದ ಆರಂಭ ಗತಿ ಎಂದರು. ಇದೇ ‘ಯುಗಾದಿ’.

ಬದಲಾವಣೆ ಎಂದರೆ ಹೊಸತು; ಹೊಸತು ಎಂದರೆ ಸೌಂದರ್ಯ. ಸೌಂದರ್ಯ ಎಂದರೆ ಉಲ್ಲಾಸ; ಉಲ್ಲಾಸ ಎಂದರೆ ಬದುಕು. ಬದುಕು ಎಂದರೆ ಬದಲಾವಣೆ. ಇದು ಯುಗಾದಿಯ ಸಂದೇಶವೂ ಹೌದು, ಸಂತೋಷವೂ ಹೌದು.

ಬೀಜ ಮೊಳಕೆಯಾಗಿ ಒಡೆಯುತ್ತದೆ; ಮೊಳಕೆ ಸಸಿಯಾಗಿ ಗಿಡವಾಗುತ್ತದೆ; ಗಿಡವು ಮರವಾಗಿ ಬೆಳೆಯುತ್ತದೆ; ಬೆಳೆದ ಮರದಲ್ಲಿ ಹೂವು ಅರಳುತ್ತದೆ; ಅರಳಿದ ಹೂವು ಕಾಯಾಗಿ ಕಸುವನ್ನು ಪಡೆಯುತ್ತದೆ; ಕಾಯಿ ಹಣ್ಣಾಗುತ್ತದೆ. ಹಣ್ಣು ಮರದ ಕೊನೆಯ ಸ್ಥಿತಿಯಲ್ಲ – ಅದರ ಪುನರ್ಜನ್ಮದ ಮೊದಲ ಹಂತ. ಹಣ್ಣಿನಲ್ಲಿರುವ ಬೀಜ ಮುಂದಿನ ಮರದ ಸೂಕ್ಷ್ಮರೂಪ.

ಬೀಜವೊಂದು ಮರವಾಗಿ ಬೆಳೆಯುವ ಮತ್ತು ಅದರ ಮುಂದಿನ ಹಂತಗಳೂ ಕೂಡ, ಒಂದು ಇನ್ನೊಂದಕ್ಕೆ ಪೂರಕ; ಯಾವುದೇ ಹಂತವೂ ತನ್ನಷ್ಟಕ್ಕೆ ತಾನೇ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಎಲ್ಲ ಹಂತಗಳೂ ಸುಂದರವಾದಂಥವು; ಅನಿವಾರ್ಯವಾದಂಥವು; ಪರಿಪೂರ್ಣವಾದಂಥವು.

ಮರವು ಎಲೆಗಳನ್ನೆಲ್ಲ ಕಳೆದುಕೊಂಡು ಸೊರಗಿರುವಂತೆ ಕಾಣುತ್ತಿರುತ್ತದೆ. ನಾವು ನೋಡುತ್ತಿರುವಂತೆಯೇ ಮತ್ತೆ ಆ ಮರ ಚಿಗುರಗಳನ್ನು ಪಡೆದು ಎಲೆಗಳಿಂದ ತುಂಬಿಕೊಂಡು ಹೂವುಗಳಿಂದ ನಳನಳಿಸಲು ತೊಡಗುತ್ತದೆ. ಇದು ಪ್ರಕೃತಿಯ ನಿತ್ಯ ಪವಾಡದಂತೆ ನಡೆಯುತ್ತದೆ.

ಪ್ರಕೃತಿಯ ಈ ಬದಲಾವಣೆಯ ಸೊಗಸಿನ ಸಂದರ್ಭಗಳೇ ಋತುಗಳು. ಒಂದೊಂದು ಋತುವಿಗೂ ಅದರದ್ದೇ ಆದ ಸೊಬಗು; ಸಂಭ್ರಮ. ವಸಂತಋತು ಎಂದರೆ ಪ್ರಕೃತಿಯು ಹಸುರಿನಿಂದ ಸಜ್ಜಾಗುವ ಸುಂದರಕ್ಷಣ. ಈ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯಲು ಸಾಧ್ಯವಾಗಿಸುವಂಥ ಆರಂಭದ ಕ್ಷಣವಿದು.

ಇಂಥ ಸಮಯವನ್ನು ಹಬ್ಬವನ್ನಾಗಿ ಆವರಿಸುವುದರಲ್ಲಿ ಅರ್ಥವಂತಿಕೆಯೂ ಇದೆ; ಸಾರ್ಥಕತೆಯೂ ಇದೆ. ಮರದಲ್ಲಿಯ ಎಲೆ ಉದುರುವುದು ಎಷ್ಟು ಸಹಜವೋ, ಹಾಗೆ ಉದುರಿದ ಎಲೆ ಮತ್ತೆ ಮರದಲ್ಲಿ ಚಿಗುರುವುದೂ ಸಹಜ. ಹೀಗೆ ಉದುರುವಿಕೆ; ಅರಳುವಿಕೆ; ಅಗಲುವಿಕೆ; ಚಿಗುರುವಿಕೆ – ಸಮಗ್ರವೂ ಪರಿಪೂರ್ಣವೂ ಆದ ಕಾರ್ಯಚಕ್ರದ ಬೇರೆ ಬೇರೆ ಗತಿಗಳಷ್ಟೆ. ಇಂಥ ಸಂದೇಶವನ್ನು ನಮಗೆ ಪ್ರಕೃತಿ ನೀಡುತ್ತಿದೆ.

ಈ ಸಂದೇಶವನ್ನು ಜೀವನದಲ್ಲಿ ನಾವು ಅಳವಡಿಸಿಕೊಂಡಾಗ ನಮ್ಮ ಜೀವನವೂ ಸುಮಭರಿತವೂ ಫಲಭರಿತವೂ ಆಗುತ್ತದೆ. ಸುಖ–ದುಃಖಗಳ ಚಕ್ರ ಜೀವನಸಾರ್ಥಕತೆಗೆ ಒದಗಿದ ಪೂರಕ ಪರಿಭ್ರಮಣವೇ ಹೊರತು ಅವೇ ಶಾಶ್ವತವಲ್ಲ.

ಸುಖ–ದುಃಖಗಳನ್ನು ಹೀಗೆ ನಾವು ಸ್ವೀಕರಿಸಿದ್ದೇವೆ ಎಂದು ಆ ಪ್ರಕೃತಿಮಾತೆಯ ಮುಂದೆ ಸಿದ್ಧವಾಗುವುದರ ಸಾಂಕೇತಿಕತೆಯನ್ನು ಬೇವು–ಬೆಲ್ಲಗಳ ಮಿಶ್ರಣವನ್ನು ತಿನ್ನುವುದರಲ್ಲಿ ಕಾಣಬಹುದಾಗಿದೆ. ಯುಗದ ಆದಿಯಲ್ಲಿಯೇ ಬದುಕನ್ನು ಧೈರ್ಯವಾಗಿಯೂ ಸಂತಸವಾಗಿಯೂ ಸ್ವೀಕರಿಸುವಂಥ ವಿವೇಕವೇ ಯುಗಾದಿಹಬ್ಬದ ಮೂಲತತ್ತ್ವ.
-ಹರಿತಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT