ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರುತ್ತಿದೆ ಹೊಸ ಒಎಸ್‌ ‘ಓರಿಯೊ’

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಾರುಕಟ್ಟೆಗೆ ಹೊಸ ಮೊಬೈಲ್‌ ಬರುತ್ತಿದೆ ಎಂದಾಗ ಎಷ್ಟು ಕುತೂಹಲವಿರುತ್ತದೆಯೋ, ಹೊಸ ಕಾರ್ಯ ನಿರ್ವಹಣಾ ವ್ಯವಸ್ಥೆ (ಒ.ಎಸ್: ಆಪರೇಟಿಂಗ್‌ ಸಿಸ್ಟಮ್‌) ಬಂದಾಗ ಕೂಡ ಅಷ್ಟೇ ಕುತೂಹಲವಿರುತ್ತದೆ.

ಒ.ಎಸ್‌ನ ಹೆಸರಿನಿಂದ ಹಿಡಿದು ಅದರ ವಿಶೇಷಗಳವರೆಗೆ ಎಲ್ಲವೂ ಕುತೂಹಲವೇ. ಆಂಡ್ರಾಯ್ಡ್‌ನಿಂದ ಬರಲಿರುವ ಮುಂದಿನ ಒ.ಎಸ್‌ಗೆ ‘ಓರಿಯೊ’ ಎಂದು ಹೆಸರಿಡಲಾಗಿದೆ. ತಂತ್ರಾಂಶ ಅಭಿವೃದ್ಧಿಪಡಿಸುವವರಿಗಾಗಿ ಈಗಾಗಲೇ ಒ.ಎಸ್ ಪ್ರಿವ್ಯೂ ವರ್ಷನ್‌ ಬಿಡುಗಡೆ ಮಾಡಲಾಗಿದೆ. 

ಮೇ 17ರಿಂದ 19ರವರೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಗೂಗಲ್ ವಾರ್ಷಿಕ ಸಭೆಯಲ್ಲಿ ಬಳಕೆದಾರರ ಆವೃತ್ತಿ ಬಿಡುಗಡೆಯಾಗಲಿದೆ. ಈ ಹೊಸ ಒ.ಎಸ್‌ನಲ್ಲಿರುವ ವಿಶೇಷಗಳ ಮಾಹಿತಿ ಇಲ್ಲಿದೆ.

*ಹೊಸ ಒ.ಎಸ್‌ನಲ್ಲಿ ಸಮಯ, ವಾತಾವರಣ, ಪ್ರದೇಶಕ್ಕೆ ತಕ್ಕ ಹಾಗೆ ಐಕಾನ್‌ಗಳ ಮೇಲೆ ‘ಥಂಬ್‌ನೇಲ್’ ಬದಲಾಗುವ ಹಾಗೆ ‘ಅಡಾಪ್ಟಿವ್’ ಆ್ಯಪ್ ಐಕಾನ್ಸ್ ವ್ಯವಸ್ಥೆ ಮಾಡಲಾಗಿದೆ. ಉದಾಹರಣೆಗೆ ಕ್ಯಾಲೆಂಡರ್ ಐಕಾನ್‌ನಲ್ಲಿ ಹಗಲಿನಲ್ಲಿ ಸೂರ್ಯ ಮೂಡುವಂತೆ, ರಾತ್ರಿಯಲ್ಲಿ ಚಂದ್ರ ಬರುವ ಹಾಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಬೇಕಿದ್ದರೆ ಸೂರ್ಯ, ಚಂದ್ರರ ಎಂಒಜಿಗಳನ್ನು ನಿಮಗಿಷ್ಟ ಬಂದ ಹಾಗೆ ಬದಲಾಯಿಸಕೊಳ್ಳಬಹುದು. ಅದರ ಜತೆಗೆ ಹೊಸ ಒ.ಎಸ್‌ನಲ್ಲಿ ದಿನಾಂಕವೂ ಬದಲಾಗುತ್ತದೆ.

*ಆ್ಯಪ್‌ ಅಥವಾ ಬ್ರೌಸರ್ ಪೇಜ್‌ನಲ್ಲಿರುವ ಅಕ್ಷರಗಳನ್ನು ಕಾಪಿ ಮಾಡಬೇಕೆಂದರೆ ಅವನ್ನು ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಈಗಿರುವ ಒ.ಎಸ್‌ನಲ್ಲಿ ಇದು ಸ್ವಲ್ಪ ಕಷ್ಟವೇ. ಒರಿಯೊದಲ್ಲಿ ಈ ಜಂಜಾಟ ಇರುವುದಿಲ್ಲ. ತೆರೆಯ ಮೇಲಿನ ಅಕ್ಷರಗಳನ್ನು ಸುಲಭವಾಗಿ ಕಾಪಿ ಮಾಡಿಕೊಳ್ಳಲು ಸಾಧ್ಯವಾಗುವಂತೆ ‘ಸ್ಮಾರ್ಟ್‌ ಸೆಲೆಕ್ಷನ್‌ ಫೀಚರ್’ ಇರಲಿದೆ.

*ಪಿಕ್ಸಲ್‌ ಲಾಂಚರ್‌ನಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇನ್ನು ಮುಂದೆ ಆ್ಯಪ್‌ ಡ್ರಾಯರ್ ತೆರೆಯಲು ‘ಮೆನು’ ಗುಂಡಿ ಒತ್ತುವ ಅಗತ್ಯವಿರುವುದಿಲ್ಲ. ತೆರೆಯ ಯಾವುದೇ ಮೂಲೆಯಲ್ಲಿ ಬೆರಳಿಟ್ಟರೂ ಅದು ತೆರೆದುಕೊಳ್ಳಲಿದೆ.

*ಆ್ಯಪ್‌ ಚಾಲನೆಯಲ್ಲಿ ಇರದಿದ್ದರೆ ಅದಕ್ಕೆ ಸಂಬಂಧಿಸಿದ ಸೂಚನೆಗಳು (ನೋಟಿಫಿಕೇಶನ್ಸ್) ಬರುವುದಿಲ್ಲ. ಹಾಗೆಯೇ ರನ್‌ ಮಾಡುತ್ತಿದ್ದರೆ  ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಈ ಸಮಸ್ಯೆ ನೀಗಿಸಲು ಬ್ಯಾಕ್‌ಗ್ರೌಂಡ್ ಎಕ್ಸಿಕ್ಯುಷನ್ ಲಿಮಿಟ್ಸ್‌ ಇರಲಿದೆ. ಇದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ ಚಾಲನೆಯಲ್ಲಿರುತ್ತದೆ. ಇದರ ಜತೆಗೆ ನಿಮ್ಮ ಲೊಕೇಷನ್‌ ಆ್ಯಕ್ಸೆಸ್‌ ಮಾಡುವ ಸಮಯವೂ ಕಡಿಮೆ ಆಗಲಿದೆ. ಇದರಿಂದ ಬ್ಯಾಟರಿ ದೀರ್ಘಕಾಲ ಬರಲಿದೆ.

*ಎರಡು ಆಂಡ್ರಾಯ್ಡ್ ಮೊಬೈಲ್‌ಗಳನ್ನು ಪರಸ್ಪರ ಸಂಪರ್ಕಕ್ಕೆ ತರಬೇಕಾದರೆ ಅವು ಒಂದೇ ವೈಫೈ ಪರಿಧಿಯಲ್ಲಿ ಇರಬೇಕಾಗಿತ್ತು. ಈಗ ವೈಫೈ ಅವೈರ್ ತಂತ್ರಜ್ಞಾನದ ಮೂಲಕ ಎರಡೂ ಒಂದೇ ಪರಿಧಿಯಲ್ಲಿ ಇಲ್ಲದಿದ್ದರೂ ಸಂಪರ್ಕ ಏರ್ಪಡಿಸಬಹುದು.

*ಸೂಚನೆಗಳನ್ನು ನಿರ್ಣಯಿಸಿದ ಸಮಯದವರೆಗೆ ನಿಲ್ಲಿಸುವ ವ್ಯವಸ್ಥೆ ಓರಿಯೊದಲ್ಲಿ ಇರಲಿದೆ. ಈಗಾಗಲೇ ಫೇಸ್‌ಬುಕ್‌, ಮೆಸೆಂಜರ್, ವಾಟ್ಸ್‌ಅಪ್‌ನಂತಹ ತಂತ್ರಾಂಶಗಳು ಮತ್ತು ಜಾಲತಾಣಗಳು  ಈ ಸೌಲಭ್ಯ ಒದಗಿಸುತ್ತಿವೆ. ಉದಾಹರಣೆಗೆ ಪ್ರಸ್ತುತ ಜಿ–ಮೇಲ್‌ನಲ್ಲಿ ಮುಖ್ಯವಾದ ಇ–ಮೇಲ್‌ಗಳು, ಸಾಮಾನ್ಯ ಇ–ಮೇಲ್‌ಗಳು  ಇನ್‌ಬಾಕ್ಸ್‌ನಲ್ಲಿ ಪ್ರತ್ಯೇಕವಾಗಿ ಕಾಣಿಸುತ್ತವೆ.

*ಪ್ರಸ್ತುತ ಬಳಕೆಯಲ್ಲಿರುವ ಆಂಡ್ರಾಯ್ಡ್‌ ನೊಗಟ್‌ನಲ್ಲಿ ಮೊಬೈಲ್‌ ಪರದೆ ಮೇಲೆ ಎರಡು ಆ್ಯಪ್‌ಗಳನ್ನು  ಒಮ್ಮೆಲೆ ತೆರೆಯಬಹುದು. ಅಂದರೆ ಮೊಬೈಲ್‌ ಪರದೆ ಎರಡು ಭಾಗವಾಗುತ್ತದೆ. ಓರಿಯೊದಲ್ಲಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಒಮ್ಮೆಲೇ ಎರಡೂ ಆ್ಯಪ್‌ಗಳನ್ನು ಬಳಸಬಹುದು. ಉದಾಹರಣೆಗೆ ಯೂಟ್ಯೂಬ್‌ನಲ್ಲಿ ದೃಶ್ಯಗಳನ್ನು ನೋಡುತ್ತಲೇ ಫೇಸ್‌ಬುಕ್‌ನಲ್ಲಿ ಸ್ನೇಹಿತರಿಗೆ ಮೆಸೇಜ್‌ ಮಾಡಬಹುದು. ಇದನ್ನು ‘ಪಿಕ್ಚರ್ ಇನ್‌ ಪಿಕ್ಚರ್ ಮೋಡ್‌’ ಎಂದು ಕರೆಯಲಾಗುತ್ತದೆ.

*ಈವರೆಗಿನ ಒ.ಎಸ್‌ಗಳಲ್ಲಿ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಮೂಲಕ ಮೊಬೈಲ್‌ ಅನ್‌ಲಾಕ್‌ ಮಾಡಲು ಸಾಧ್ಯವಿದೆ. ಓರಿಯೊದಲ್ಲಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್ ಮೂಲಕ ಕರೆಗಳನ್ನು ಸ್ವೀಕರಿಸಬಹುದು ಅಂದರೆ, ಸ್ಕ್ಯಾನರ್ ಮೇಲೆ ಬೆರಳಿಟ್ಟರೆ ಸಾಕು ಕಾಲ್‌ ಕನೆಕ್ಟ್ ಆಗುತ್ತದೆ.

*ಈವರೆಗೆ ಬಳಸಿರುವ ಒ.ಎಸ್‌ಗಳಲ್ಲಿ ಲಾಕ್‌ ಸ್ಕ್ರೀನ್‌ನಲ್ಲಿ ಕ್ಯಾಮೆರಾ ಬಳಕೆ ಮತ್ತು ಫೋನ್‌ ಮಾಡಲು ಮಾತ್ರ ಅವಕಾಶವಿತ್ತು. ಓರಿಯೊದಲ್ಲಿ ನಿಮಗಿಷ್ಟ ಬಂದ ತಂತ್ರಾಂಶವನ್ನು ಲಾಕ್‌ ಸ್ಕ್ರೀನ್‌ನಲ್ಲಿ ಇಟ್ಟುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT