ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ, ಸಂಸ್ಕೃತಿಯ ರಕ್ಷಕ ಅಂತರ್ಜಾಲ

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಂತರ್ಜಾಲವು (ಇಂಟರ್ನೆಟ್‌) ಕಲೆ ಹಾಗೂ ಸಂಸ್ಕೃತಿಯ ಅವನತಿಗೆ ಕಾರಣವಾಗುತ್ತಿದೆ ಎಂಬ ಆರೋಪ ಹೊಸದೇನಲ್ಲ. ಆದರೆ ಇದೇ ಅಂತರ್ಜಾಲವು ಸಂಸ್ಕೃತಿಯ ರಕ್ಷಣೆಯ ಕೆಲಸವನ್ನೂ ಮಾಡುತ್ತಿದೆ ಎಂಬುದು ಅಷ್ಟೇ ಸತ್ಯ.

ತಂತ್ರಜ್ಞಾನದ ನಾಗಾಲೋಟ ಇಂದು ಕಲೆ ಮತ್ತು ಸಂಸ್ಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ವ್ಯವಸ್ಥೆಗೆ ತಂತ್ರಜ್ಞಾನ ಬಲುದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.

ಸಂಗೀತೋದ್ಯಮ ನಷ್ಟದ ಹಾದಿಯಲ್ಲಿ ಸಾಗಿದರೆ, ಕೇಬಲ್‌ ನೆಟ್‌ವರ್ಕ್‌ ಉದ್ಯಮ ಕೂಡಾ ಅವನತಿಯ ಹಾದಿ ಹಿಡಿದಿದೆ. ದಿನಪತ್ರಿಕೆಗಳು ಉಳಿವಿಗಾಗಿ ಹೋರಾಟ ನಡೆಸುತ್ತಿವೆ.

ಸಿನಿಮಾ, ಸಂಗೀತ ಅಥವಾ ದೃಶ್ಯ ಕಲೆಯೇ ಇರಲಿ, ಎಲ್ಲೆಡೆ ಡಿಜಿಟಲ್ ತಂತ್ರಜ್ಞಾನ ಕ್ರಾಂತಿಯನ್ನೇ ಸೃಷ್ಟಿಸಿದೆ. ಹೊಸ ಅವಕಾಶಗಳ ಬಾಗಿಲು ತೆರೆದಿದ್ದು, ಹೊಸ  ಸಂಶೋಧನೆಗಳಿಗೆ ಹಾದಿಯೊದಗಿಸಿದೆ. ಮಾತ್ರವಲ್ಲ, ಪ್ರೇಕ್ಷಕರು ಮತ್ತು ಕಲಾವಿದರನ್ನು ಕೂಡಾ ಈ ಬದಲಾವಣೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ.

ಬ್ಲಾಗ್, ಪಾಡ್‌ಕಾಸ್ಟ್‌ ಮತ್ತು ಯೂ–ಟ್ಯೂಬ್... ಹೀಗೆ  20 ವರ್ಷಗಳಲ್ಲಿ ಒಂದರ ಹಿಂದೆ ಒಂದರಂತೆ ಹೊಸ ವ್ಯವಸ್ಥೆಗಳು ಬಳಕೆಗೆ ಬಂದಿವೆ. ಇವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿವೆ. ಆದರೂ, ವಿವಿಧ ಕಲಾ ಪ್ರಕಾರಗಳ ಮಾರಾಟದಿಂದ ಕಲಾವಿದರಿಗೆ ಹಣ ಸಂಪಾದಿಸುವುದು ಮಾತ್ರ ಇದುವರೆಗೂ ಕಷ್ಟ ಎನಿಸಿತ್ತು. ಆನ್‌ಲೈನ್‌ನಲ್ಲಿ ದೊರೆಯುವ ಸಾಹಿತ್ಯ, ಕಾದಂಬರಿ, ಹಾಡು, ವಿಡಿಯೊಗಳನ್ನು ದುಡ್ಡು ಕೊಟ್ಟು ಖರೀದಿಸಲು ಯಾರೂ ಮುಂದಾಗುತ್ತಿರಲಿಲ್ಲ.

ಒಂದು ವಸ್ತು ಅಥವಾ ವಿಷಯವನ್ನು  ತಿಳಿದುಕೊಳ್ಳಲು ಹಣ ಪಾವತಿಸಲೇಬೇಕಿಲ್ಲ, ಉಚಿತವಾಗಿಯೂ ಪಡೆಯಬಹುದು ಎಂಬುದನ್ನು ಅಂತರ್ಜಾಲ ಇಂದಿನ ಪೀಳಿಗೆಯ ಜನರಿಗೆ ಕಲಿಸಿಕೊಟ್ಟಿದೆ. ಆನ್‌ಲೈನ್‌ ಮೂಲಕ ಸುದ್ದಿ, ಸಂಗೀತ, ವಿಡಿಯೊ ಹಾಗೂ ಇತರ ಕಲಾ ಪ್ರಕಾರಗಳ ಮಾರಾಟದಲ್ಲಿ ತೊಡಗಿರುವ ಕಂಪೆನಿಗಳು ಹಲವು ವರ್ಷಗಳಿಂದ ಲಾಭವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವು. 

ಹಲವು ವೆಬ್‌ಸೈಟ್‌ಗಳು ಅನ್ಯ ಮಾರ್ಗವಿಲ್ಲದೆ ತಮ್ಮ ಉಳಿವಿಗಾಗಿ ಜಾಹೀರಾತು ಆಧಾರಿತವಹಿವಾಟಿನತ್ತ ಮುಖ ಮಾಡಿದ್ದವು. ಬಳಕೆದಾರರ ಸಂಖ್ಯೆ ಆಧರಿಸಿ ಜಾಹೀರಾತಿಗೆ ಹಣ ದೊರೆಯುತ್ತಿರುವ ಕಾರಣ ಹೆಚ್ಚೆಚ್ಚು ಬಳಕೆದಾರರನ್ನು ತಲುಪಲು ಹರಸಾಹಸ ಪಡುತ್ತಿದ್ದವು.

ಓದುಗರನ್ನು ಒಂದು ನಿರ್ದಿಷ್ಟ ಲಿಂಕ್‌ ಮೇಲೆ ‘ಕ್ಲಿಕ್‌’ ಮಾಡುವಂತೆ ಪ್ರೇರೇಪಿಸುವುದಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದವು. ಇದು ಆರೋಗ್ಯಪೂರ್ಣ ಬೆಳವಣಿಗೆಯಲ್ಲ. ಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತಿತ್ತು.

ಬದಲಾವಣೆಯ ಗಾಳಿ
ಪರಿಸ್ಥಿತಿ ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಕೆಲ ವರ್ಷಗಳಿಂದ ಅದರಲ್ಲೂ ಮುಖ್ಯವಾಗಿ 12 ತಿಂಗಳಿನಿಂದ ಜನರು ಆನ್‌ಲೈನ್‌ನಲ್ಲಿ ದೊರೆಯುವ ಮಾಹಿತಿ ಮತ್ತು ವಿಷಯಗಳನ್ನು ದುಡ್ಡು ಕೊಟ್ಟು ಖರೀದಿಸುತ್ತಿದ್ದು, ಚಂದಾದಾರರಾಗಲು ಆಸಕ್ತಿ ತೋರುತ್ತಿದ್ದಾರೆ.  

ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಎಚ್‌ಬಿಒ, ಸ್ಪೋಟಿಫೈ ಮತ್ತು ಆ್ಯಪಲ್‌ ಮ್ಯೂಸಿಕ್‌– ಮುಂತಾದ ಚಂದಾ ಆಧಾರಿತ ಆನ್‌ಲೈನ್‌ ಸಂಸ್ಥೆಗಳು ಜನಪ್ರಿಯತೆ ಪಡೆದುಕೊಂಡಿವೆ.

ಪಾಡ್‌ಕಾಸ್ಟರ್‌, ಹಾಸ್ಯ ಕಲಾವಿದರು, ಯೂ–ಟ್ಯೂಬ್‌ ತಾರೆಯರು, ಕಾದಂಬರಿಕಾರರು ಮತ್ತು ಕಾಮಿಕ್‌ ಪುಸ್ತಕ ಕಲಾವಿದರು ಆನ್‌ಲೈನ್‌ನಲ್ಲಿ ಹಾಕಿರುವ ಮಾಹಿತಿಯನ್ನು ಹಣ ಕೊಟ್ಟು ಪಡೆಯುವವರ ಸಂಖ್ಯೆ   ಹೆಚ್ಚುತ್ತಿದೆ. ಇದೀಗ ಜನರು ಸುದ್ದಿಯನ್ನೂ ಖರೀದಿಸುತ್ತಿದ್ದಾರೆ.

‘ಈಗ ನಡೆಯುತ್ತಿರುವ ಬೆಳವಣಿಗೆಗಳು ಉತ್ತೇಜನಕಾರಿ ಮತ್ತು ಕುತೂಹಲಕಾರಿಯಾಗಿವೆ’ ಎಂದು ಪ್ಯಾಟ್ರಿಯನ್‌ಕಂಪೆನಿಯ ಸ್ಥಾಪಕ ಜಾಕ್‌ ಕಾಂಟೆ ಹೇಳುತ್ತಾರೆ. ಜಾಕ್‌ 2013 ರಲ್ಲಿ ಪ್ಯಾಟ್ರಿಯನ್ ಡಾಟ್‌ ಕಾಮ್‌ ಹೆಸರಿನ ವೆಬ್‌ಸೈಟ್‌ ಆರಂಭಿಸಿದ್ದರು.

ತಮ್ಮ ಕೆಲಸವನ್ನು (ಚಿತ್ರ, ಹಾಡು, ವಿಡಿಯೊ) ಆನ್‌ಲೈನ್‌ನಲ್ಲಿ ನಿಯಮಿತವಾಗಿ ಪ್ರಕಟಿಸುವ ಕಲಾವಿದರಿಗೆ ವೇದಿಕೆಯಾಗಿ ಈ ಸಂಸ್ಥೆ ಕೆಲಸ ಮಾಡುತ್ತದೆ. ಹಲವು ಬರಹಗಾರರು, ಸಂಗೀತಗಾರರು ತಮ್ಮ ರಚನೆಗಳಿಗೆ ಅಭಿಮಾನಿಗಳಿಂದ ನೇರವಾಗಿ ಹಣ ಪಡೆದುಕೊಳ್ಳುವರು. 

ಸುದ್ದಿಗಳನ್ನು ನೀಡುವ ವೆಬ್‌ಸೈಟ್‌ಗಳಲ್ಲೂ ಈ ಬದಲಾವಣೆ ಕಂಡುಬಂದಿದೆ. ಸುದ್ದಿಯನ್ನು ಹಣತೆತ್ತು ಓದಲು ಜನರು ಸಿದ್ಧರಿಲ್ಲ ಎಂಬ ಮಾತು ಈಗ ಸುಳ್ಳಾಗುತ್ತಿದೆ.

ನ್ಯೂಯಾರ್ಕ್‌ ಟೈಮ್ಸ್‌ ಸೇರಿದಂತೆ ಹಲವು ಪತ್ರಿಕೆಗಳ ಆನ್‌ಲೈನ್‌ ಆವೃತ್ತಿಗಳು ಉಚಿತವಾಗಿ ಲಭ್ಯವಿಲ್ಲ. ಶುಲ್ಕ ಪಾವತಿಸಬೇಕು.  ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಇತರ ಹಲವು ದಿನಪತ್ರಿಕೆಗಳ ಆನ್‌ಲೈನ್‌ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚವಾಗಿದೆ.

ನ್ಯೂಯಾರ್ಕ್‌ಟೈಮ್ಸ್‌ನ ಆನ್‌ಲೈನ್‌ ಆವೃತ್ತಿ ಓದಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಕಳೆದ ಕೆಲ ತಿಂಗಳುಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆತಿದೆ. ಇದುವರೆಗೆ ಸಂಗ್ರಹವಾದ ಹಣದಿಂದ ಸುಮಾರು 13 ಲಕ್ಷ ವಿದ್ಯಾರ್ಥಿಗಳು ಆನ್‌ಲೈನ್‌ ಆವೃತ್ತಿಯ ಚಂದಾದಾರರಾಗಿದ್ದಾರೆ.

ಇದೀಗ ಒಟ್ಟು 30 ಲಕ್ಷಕ್ಕೂ ಅಧಿಕ ಮುದ್ರಣ ಮತ್ತು ಡಿಜಿಟಲ್‌ ಚಂದಾದಾರರನ್ನು ನಾವು ಹೊಂದಿದ್ದೇವೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಹೇಳಿದೆ. ಪತ್ರಿಕೆಗಳ ಆನ್‌ಲೈನ್‌ ಆವೃತ್ತಿ ಮಾತ್ರವಲ್ಲದೆ, ಇತರ ಸೇವೆಗಳನ್ನು ನೀಡುವ ವೆಬ್‌ಸೈಟ್‌ಗಳ ಚಂದಾದಾರರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ.

ಆ್ಯಪಲ್‌ ಮೊಬೈಲ್‌ ಬಳಸುವವರು 2016 ರಲ್ಲಿ ತಮ್ಮ ‘ಆ್ಯಪ್‌ ಸ್ಟೋರ್’ನಿಂದ 270 ಕೋಟಿ ಡಾಲರ್‌ನಷ್ಟು‌ (ಅಂದಾಜು ₹17 ಸಾವಿರ ಕೋಟಿ) ಚಂದಾ ಪಾವತಿ ಮಾಡಿದ್ದಾರೆ. 2015ರ ಸಾಲಿಗೆ ಹೋಲಿಸಿದರೆ, ಈ ಪ್ರಮಾಣ ಶೇ 74 ರಷ್ಟು ಏರಿಕೆಯಾಗಿದೆ.

ಡಿಜಿಟಲ್‌ ಮ್ಯೂಸಿಕ್‌ ಸೇವೆ ಒದಗಿಸುವ ಸ್ಪೋಟಿಫೈ (Spotify.com) ತನ್ನ ಚಂದಾದಾರರ ಸಂಖ್ಯೆ ಮೂರು ಕೋಟಿಯಿಂದ ಐದು ಕೋಟಿಗೆ ಹೆಚ್ಚಿದೆ ಎಂದು ತಿಳಿಸಿದೆ. ‘ಆ್ಯಪಲ್‌ ಮ್ಯೂಸಿಕ್’ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು ಎರಡು ಕೋಟಿ ಚಂದಾದಾರರನ್ನು ಪಡೆದುಕೊಂಡಿದೆ.

ಆನ್‌ಲೈನ್‌ನಲ್ಲಿ ವಿವಿಧ ಕಲಾವಿದರ ವಿಡಿಯೊ ಮಾರಾಟ ಮಾಡುವ ಅಮೆರಿಕದ ಪ್ರಮುಖ ಕಂಪೆನಿಗಳಲ್ಲಿ ಒಂದೆನಿಸಿರುವ ನೆಟ್‌ಫ್ಲಿಕ್ಸ್‌ (Netflix) 2016ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 70 ಲಕ್ಷ ಹೊಸ ಚಂದಾದಾರರನ್ನು ಸೇರಿಸಿಕೊಂಡಿದೆ.

ನಿರೀಕ್ಷೆಗೂ ಮೀರಿದ ಸಾಧನೆ ಇದು. ತ್ರೈಮಾಸಿಕ ಅವಧಿಯೊಂದರಲ್ಲಿ ಇಷ್ಟು ಸಂಖ್ಯೆಯ ಚಂದಾದಾರರನ್ನು ಪಡೆದುಕೊಂಡದ್ದು ಕಂಪೆನಿಯ ಇತಿಹಾಸದಲ್ಲಿ ಇದೇ ಮೊದಲು. ಇದೀಗ ಕಂಪೆನಿ ಒಟ್ಟು 9.4 ಕೋಟಿ ಚಂದಾದಾರರನ್ನು ಹೊಂದಿದೆ.

ಕಲಾವಿದರು ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳು ಅವರ ನೆರವಿಗೆ ಬಂದಿವೆ.

ಇಂತಹ ಸಾಮಾಜಿಕ ಜಾಲತಾಣಗಳ ಮೂಲಕ ಕಲಾವಿದರಿಗೆ ತಮ್ಮ ಅಭಿಮಾನಿಗಳ ಜತೆ ನಿಕಟ ಸಂಪರ್ಕ ಇರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ತಮ್ಮ ಹಾಡು, ರಚನೆಗಳನ್ನು ಮಾರಾಟ ಮಾಡುವ ಜತೆಗೆ ಅಭಿಮಾನಿಗಳಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಆನ್‌ಲೈನ್‌‌ ಮೂಲಕ ಪ್ರೇಕ್ಷಕರನ್ನು ಕಂಡುಕೊಂಡ ಬಳಿಕ ಅವರಿಂದ ಶುಲ್ಕ ತೆಗೆದುಕೊಳ್ಳಲು ಪ್ಯಾಟ್ರಿಯನ್‌ ಡಾಟ್‌ಕಾಮ್‌ (Patreon.com) ಮುಂತಾದ ವೆಬ್‌ಸೈಟ್‌ಗಳ ನೆರವು ಪಡೆದುಕೊಳ್ಳಬಹುದು. ಆದರೆ ಈ ರೀತಿಯ ವಹಿವಾಟು ನಿರೀಕ್ಷಿಸಿದಷ್ಟು ಸುಲಭವಲ್ಲ. ಯಶಸ್ಸು ಸಾಧಿಸಬೇಕಾದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

‘ನಾನು ಈಗ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇನೆ’ ಎಂದು ಗಾಯಕ ಪೀಟರ್‌ ಹಾಲೆನ್ಸ್‌ ಹೇಳುತ್ತಾನೆ. ಅಮೆರಿಕದ ಅರೆಗಾನ್‌ನ ಯೂಜಿನ್‌ನ  ನಿವಾಸಿಯಾಗಿರುವ ಹಾಲೆನ್ಸ್‌ ಅವರು ಪ್ಯಾಟ್ರಿಯನ್‌ (Patreon.com) ಜಾಲತಾಣವನ್ನು ವೇದಿಕೆಯಾಗಿ ಬಳಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತರ್ಜಾಲದಲ್ಲಿ ತಮ್ಮ ವಿಡಿಯೊಗಳ ಮಾರಾಟದಿಂದ ತಿಂಗಳಿಗೆ 20 ಸಾವಿರ ಡಾಲರ್‌ (ಅಂದಾಜು ₹ 13 ಲಕ್ಷ) ಸಂಪಾದಿಸುತ್ತಿದ್ದಾರೆ.

ಇದರಿಂದ  ಜೀವನ ನಿರ್ವಹಣೆ ಸುಲಭವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಒಬ್ಬ ಕಲಾವಿದನಾಗಿ ಬದುಕಿಗೆ ಭದ್ರತೆ ತಂದುಕೊಟ್ಟಿದೆಯಂತೆ. ‘ಹಣ ಸಂಪಾದಿಸಲು ಬಾರ್‌ಗಳಿಗೆ ತೆರಳಿ ಅಥವಾ ರಸ್ತೆಬದಿಯಲ್ಲಿ ನಿಂತು ಹಾಡಬೇಕೆಂದಿಲ್ಲ’ ಎನ್ನುವ ಮೂಲಕ ಅವರು ತಮ್ಮ ಯಶಸ್ಸನ್ನು ಮುಂದಿಡುತ್ತಾರೆ.
ಫರ್ಹಾದ್‌ ಎಂ. (ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT