ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಟ್ರೊ ಸವಾಲು ಮೀರಿದ ಫೆಡರರ್‌

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಿಯಾಮಿ: ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿ ಯಲ್ಲಿ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರೋಜರ್‌ ಫೆಡರರ್‌ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಸ್ವಿಟ್ಜರ್‌ಲೆಂಡ್‌ನ ಆಟಗಾರ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಕ್ರಾಂಡನ್‌ ಪಾರ್ಕ್‌ ಅಂಗಳದಲ್ಲಿ ಸೋಮವಾರ ನಡೆದ ಮೂರನೇ ಸುತ್ತಿನ ಪೈಪೋಟಿಯಲ್ಲಿ ಫೆಡರರ್‌ 6–3, 6–4ರ ನೇರ ಸೆಟ್‌ಗಳಿಂದ ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರ ಸವಾಲು ಮೀರಿ ನಿಂತರು.

ಇದರೊಂದಿಗೆ ಪೊಟ್ರೊ ವಿರುದ್ಧದ ಗೆಲುವಿನ ದಾಖಲೆಯನ್ನು 16–5ಕ್ಕೆ ಹೆಚ್ಚಿಸಿಕೊಂಡರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಮತ್ತು ಇಂಡಿ ಯಾನ ವೆಲ್ಸ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ವಿಶ್ವಾಸ ದಿಂದ ಪುಟಿಯುತ್ತಿರುವ ಫೆಡರರ್‌ ಮೊದಲ ಸೆಟ್‌ನಲ್ಲಿ ಪರಾಕ್ರಮ ಮೆರೆದರು.

35 ವರ್ಷದ ಆಟಗಾರನ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಶರವೇಗದ ಸರ್ವ್‌ಗಳನ್ನು ಹಿಂತಿರುಗಿ ಸಲು ಪ್ರಯಾಸ ಪಟ್ಟ ಪೊಟ್ರೊ 38ನೇ ನಿಮಿಷದಲ್ಲಿ ಸೆಟ್‌ ಕೈಚೆಲ್ಲಿದರು.

ಇದರಿಂದ ಇನ್ನಷ್ಟು ವಿಶ್ವಾಸ ಹೆಚ್ಚಿಸಿಕೊಂಡ 18 ಬಾರಿಯ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ವಿಜೇತ ಆಟಗಾರ ಫೆಡರರ್‌ ಎರಡನೇ ಸೆಟ್‌ನಲ್ಲೂ ಮಿಂಚಿನ ಆಟ ಆಡಿ 80ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ನಾಲ್ಕನೇ ಸುತ್ತಿನಲ್ಲಿ ಫೆಡರರ್‌ ಅವರಿಗೆ ಸ್ಪೇನ್‌ನ ರಾಬರ್ಟೊ ಬಟಿಸ್ಟಾ ಅಗತ್‌ ಅವರ ಸವಾಲು ಎದುರಾಗಲಿದೆ.

ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ರಾಬರ್ಟೊ 3–6, 6–2, 6–3ರಲ್ಲಿ ಅಮೆರಿಕಾದ ಸ್ಯಾಮ್‌ ಕ್ವೆರಿ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಜೆಕ್‌ ಗಣ ರಾಜ್ಯದ ಥಾಮಸ್‌ ಬರ್ಡಿಕ್‌ 6–3, 6–4ರಲ್ಲಿ ಲಕ್ಸಮ್‌ಬರ್ಗ್‌ನ ಗಿಲ್ಲೆಸ್‌ ಮುಲ್ಲರ್‌ ಎದುರೂ, ಫ್ರಾನ್ಸ್‌ನ ಆಡ್ರಿಯನ್‌ ಮನ್ನಾರಿನೊ 6–4, 2–6, 7–6ರಲ್ಲಿ ಕ್ರೊವೇಷ್ಯಾದ ಬೊರ್ನಾ ಕೊರಿಕ್‌ ಮೇಲೂ, ಸ್ಟಾನಿಸ್ಲಾಸ್‌ ವಾವ್ರಿಂಕ 6–3, 6–4ರಲ್ಲಿ ಮಲೆಕ್‌ ಜಜಿರಿ ವಿರುದ್ಧವೂ, ಅಲೆಕ್ಸಾಂಡರ್‌ ಜ್ವೆರೆವ್‌ 6–7, 7–6, 7–6ರಲ್ಲಿ ಜಾನ್‌ ಇಸ್ನರ್‌ ಮೇಲೂ ಗೆದ್ದರು.

ಕ್ವಾರ್ಟರ್‌ಗೆ ವೀನಸ್‌: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅಮೆರಿಕಾದ ವೀನಸ್‌ ವಿಲಿಯಮ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

(ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಸಿದಾಗ ವೀನಸ್ ವಿಲಿಯಮ್ಸ್‌ ಸಂಭ್ರಮ)

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವೀನಸ್‌ 6–3, 7–6ರಲ್ಲಿ ಸ್ವೆಟ್ಲಾನ ಕುಜ್ನೆತ್ಸೋವಾ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಏಂಜಲಿಕ್‌ ಕೆರ್ಬರ್‌ 6–2, 6–2ರಲ್ಲಿ ರಿಸಾ ಒಜಾಕಿ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT