ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಏಷ್ಯನ್ ಕಪ್: ಚೆಟ್ರಿ ಕಾಲ್ಚಳಕದ ಮೋಡಿಗೆ ಒಲಿದ ಜಯ

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಯಾಂಗಾನ್‌: ಸುನಿಲ್ ಚೆಟ್ರಿಯ ಕೊನೆಯ ನಿಮಿಷದ ಕಾಲ್ಚಳಕದ ಮೋಡಿಯಿಂದಾಗಿ ಭಾರತ ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಮಂಗಳವಾರ 64 ವರ್ಷಗಳ ಬಳಿಕ ಮ್ಯಾನ್ಮಾರ್ ತಂಡವನ್ನು ಅವರದೇ ತವರಿನಲ್ಲಿ ಮಣಿಸಿತು.

1953ರಲ್ಲಿ ಭಾರತ ತಂಡ 4–2ರಲ್ಲಿ ಮ್ಯಾನ್ಮಾರ್ ತಂಡವನ್ನು ಮಣಿಸಿತ್ತು. 2014ರ ಮುಖಾಮುಖಿಯಲ್ಲಿ ಭಾರತ 0–1 ಗೋಲಿನಲ್ಲಿ ಸೋಲು ಕಂಡಿತ್ತು.

‘ಎ’ ಗುಂಪಿನ ಪಂದ್ಯದಲ್ಲಿ ಮ್ಯಾನ್ಮಾರ್‌ ತಂಡ ತವರಿನ ಅಭಿಮಾನಿ ಗಳ ಎದುರು ಆತ್ಮವಿಶ್ವಾಸದಿಂದ  ಆಡಿತು. ಮೊದಲರ್ಧದ ವೇಳೆಗೆ ಈ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ ಇನ್ನೂ ಹೆಚ್ಚು ಆಕ್ರಮಣಕಾರಿಯಾಗಿ ಆಡಿದ ಮ್ಯಾನ್ಮಾರ್ ತಂಡವನ್ನು ಗೋಲು ಗಳಿಸದಂತೆ ತಡೆಯಲು ಭಾರತದ ರಕ್ಷಣಾ ಪಡೆ ಸಾಕಷ್ಟು ಪ್ರಯಾಸಪಟ್ಟಿತು.

ಈ ತಂಡದ ಕ್ಯಾವೊ ಕೊ ಮತ್ತು ಅನುಗ್ ತು ಭಾರತಕ್ಕೆ ಪ್ರಬಲ ಸವಾಲು ಒಡ್ಡಿದರು. ಆದರೆ ಈ ತಂಡದ ಮುನ್ಪಡೆ ಆಟಗಾರರು ವೈಫಲ್ಯ ಅನುಭವಿಸಿದರು.

ಇನ್ನೇನು ಗೋಲು ಗಳಿಸುವ ಹಂತದಲ್ಲಿದ್ದಾಗ ಸುಲಭ ಅವಕಾಶಗಳನ್ನೂ ಕೈಚೆಲ್ಲಿದರು. ಪಂದ್ಯದ ಅಂತಿಮ ವೇಳೆಯಲ್ಲಿ ಸಿಕ್ಕ ಸ್ಪಷ್ಟ ಅವಕಾಶದಲ್ಲೂ ಮ್ಯಾನ್ಮಾರ್‌ ಗೋಲು ಗಳಿಸಲಿಲ್ಲ. ಎದುರಾಳಿ ತಂಡದ ಆಕ್ರಮಣಕಾರಿ  ದಾಳಿಯನ್ನು ಈ ವೇಳೆ ಭಾರತ ಅತ್ಯುತ್ತಮವಾಗಿ ನಿಭಾಯಿಸಿತು.

90ನೇ ನಿಮಿಷದಲ್ಲಿ ಉದಾಂತಸಿಂಗ್ ನೀಡಿದ ಪಾಸ್‌ನಲ್ಲಿ ಸುನಿಲ್ ಚೆಟ್ರಿ ಅಮೋಘವಾಗಿ ಚೆಂಡನ್ನು ಗುರಿ ಸೇರಿಸಿದರು. ಭಾರತ ತಂಡಕ್ಕೆ ಸಂಪೂರ್ಣ ಮೂರು ಪಾಯಿಂಟ್ಸ್ ತಂದುಕೊಡುವಲ್ಲಿ ಅವರು ಯಶಸ್ವಿ ಯಾದರು. ಇದು ಚೆಟ್ರಿ ದಾಖಲಿಸಿದ 53ನೇ ಅಂತರರಾಷ್ಟ್ರೀಯ ಗೋಲು.

ಮ್ಯಾನ್ಮಾರ್ ತಂಡದ ಅಭಿಮಾನಿಗಳೇ ಹೆಚ್ಚಿದ್ದ ಕ್ರೀಡಾಂಗಣದಲ್ಲಿ ಚೆಟ್ರಿ ಗೋಲು ದಾಖಲಿಸುತ್ತಿದ್ದಂತೆ ಒಂದು ಕ್ಷಣ ಮೌನ ಆವರಿಸಿತು. ತವರಿನ ಅಂಗಳದಲ್ಲಿ ಜಯದಾಖಲಿ ಸುವ ನೆಚ್ಚಿನ ತಂಡ ಎನಿಸಿದ್ದ ಮ್ಯಾನ್ಮಾರ್‌ ತಂಡಕ್ಕೆ ಎಎಫ್‌ಸಿ ಕಪ್‌ಗೆ ಅರ್ಹತೆ ಗಳಿಸಲು ಇದು ಉತ್ತಮ ಅವಕಾಶವಾಗಿತ್ತು.

ಫಿಫಾ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ 132ನೇ ಸ್ಥಾನದಲ್ಲಿದೆ. ಮ್ಯಾನ್ಮಾರ್ ಪ್ರವಾಸಿ ತಂಡಕ್ಕಿಂತ 40 ಸ್ಥಾನಗಳಲ್ಲಿ ಕೆಳಗಿದೆ. ಹೀಗಿದ್ದರೂ ಮ್ಯಾನ್ಮಾರ್ ತಂಡವನ್ನು ಭಾರತದ ಪ್ರಬಲ ಎದುರಾಳಿ ಎಂದು ನಂಬಲಾಗಿತ್ತು. ಭಾರತ ತಂಡದ ಕೋಚ್ ಸ್ಟೀಫನ್ ಕಾನ್ಸ್‌ಟಂಟೈನ್ ಕೂಡ ಇದೇ ಮಾತು ಹೇಳಿದ್ದರು.

‘ಈ ಪಂದ್ಯವನ್ನು ನಾವು ಡ್ರಾ ಮಾಡಿಕೊಂಡರೂ ಬೇಸರವಿಲ್ಲ’ ಎಂದು ಅವರು ಹೇಳಿದ್ದರು.

ಕೊನೆಯ ನಿಮಿಷದ ಗೋಲು ಭಾರತ ತಂಡದ ಎಎಫ್‌ಸಿ ಕಪ್ ಹಾದಿ ಯನ್ನು ಇನ್ನಷ್ಟು ಸುಗಮ ಗೊಳಿಸಿದೆ. ತವರಿನಲ್ಲಿ ನಡೆಯುವ ಪಂದ್ಯಗಳಲ್ಲಿ ಜಯ ದಾಖಲಿಸುವ ಸವಾಲು ಈಗ ಭಾರತ ತಂಡದ ಮೇಲಿದೆ.

ಜೂನ್‌ 13ರಂದು ಭಾರತ ತವರಿನಲ್ಲಿ ಕಿರ್ಗಿಸ್ತಾನ ವಿರುದ್ಧ ಆಡಲಿದೆ. ‘ಎ’ ಗುಂಪಿನ ಕೊನೆಯ ಪಂದ್ಯವನ್ನು ಮಕಾವ್‌ ಎದುರು ಆಡಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ನೇರ ಅರ್ಹತೆ ಪಡೆಯಲಿವೆ.

‘ಮ್ಯಾನ್ಮಾರ್‌ಗೆ ಗೋಲು ಗಳಿಸಲು ಸಾಕಷ್ಟು ಅವಕಾಶ ಇತ್ತು. ಆದರೆ ನಮ್ಮ ಆಟಗಾರರು ಕ್ರೀಡಾಂಗಣದಲ್ಲಿ ಹುಮ್ಮಸ್ಸಿನಿಂದ ಆಡಿದರು. ನಮಗೂ ಮೂರರಿಂದ ನಾಲ್ಕು ಬಾರಿ ಗೋಲು ದಾಖಲಿಸುವ ಅವಕಾಶ ಇತ್ತು. ಆದರೆ ಸಾಧ್ಯವಾಗಲಿಲ್ಲ. ನಿರೀಕ್ಷಿಸಿದಂತೆ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು’ ಎಂದು ಕಾನ್ಸ್‌ಟಂಟೈನ್ ಹೇಳಿದ್ದಾರೆ.

‘ಮ್ಯಾನ್ಮಾರ್ ತಂಡವನ್ನು ಮಣಿಸುವುದು ಕಠಿಣ ಕೆಲಸ. ಈ ಬಾರಿ ಉತ್ತಮ ಆಟ ನಮ್ಮ ಕೈಹಿಡಿದಿದೆ’ ಎಂದು ಚೆಟ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT