ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಭಿವೃದ್ಧಿ ಮಾದರಿ ಪಣಕ್ಕಿಟ್ಟು ಚುನಾವಣೆ

Last Updated 28 ಮಾರ್ಚ್ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮದು ಕರ್ನಾಟಕದ ಅಭಿವೃದ್ಧಿ ಮಾದರಿ. ನಮ್ಮ ಮಾದರಿಯನ್ನು ಮುಂದಿಟ್ಟುಕೊಂಡೇ 2018ರ ಚುನಾವಣೆಗೆ ಹೋಗುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಜೆಟ್‌ ಮೇಲೆ ನಡೆದ ಚರ್ಚೆಗೆ ಉಭಯ ಸದನಗಳಲ್ಲೂ ಮಂಗಳವಾರ ಉತ್ತರಿಸಿದ ಅವರು, ‘ಬಿಜೆಪಿಯವರು ಹಿಂದೆ ಗುಜರಾತ್‌ ಮಾದರಿ ಎಂದು ಹೇಳುತ್ತಿದ್ದರು. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದ ಮೇಲೆ ನವಭಾರತ್‌ ಮಾದರಿ ಎಂದು ಬಣ್ಣ ಬದಲಾಯಿಸಿದ್ದಾರೆ’ ಎಂದು ಟೀಕಿಸಿದರು.

‘ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ಬಿಜೆಪಿಗೆ ಸಾಧ್ಯವಿಲ್ಲ. ನರೇಂದ್ರ ಮೋದಿ  ಅಲೆ ಇದೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರ ಬಂಡವಾಳ ಗೊತ್ತಾಗಲಿದೆ’ ಎಂದು ಆವೇಶದಿಂದ ಹೇಳಿದರು.

‘ನಾವು ಉತ್ತರ ಪ್ರದೇಶ, ಉತ್ತರಾ ಖಂಡದಲ್ಲಿ ಗೆದ್ದಿಲ್ಲವೇ’ ಎಂದು ಬಿಜೆಪಿ ಸದಸ್ಯರು ಕುಟುಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಪಂಜಾಬ್‌, ಗೋವಾ, ಮಣಿಪುರದಲ್ಲಿ ಮೋದಿ ಮಂತ್ರದಂಡದಿಂದ ಗಾಳಿ ಬೀಸಲಿಲ್ಲವೇ... ಗೋವಾದಲ್ಲಿ  ಮುಖ್ಯಮಂತ್ರಿಯಾಗಿದ್ದ ಪರ್ಸೇಕರ ಮತ್ತು ಅವರ ಸಂಪುಟದ ಆರು ಸಚಿವರು  ಚುನಾವಣೆಯಲ್ಲಿ  ಸೋಲಲಿಲ್ಲವೇ.  ಇಷ್ಟೆಲ್ಲಾ ಆದರೂ ನಿಮಗೆ ಮರ್ಯಾದೆ ಇಲ್ಲ’ ಎಂದು ಹೀಗಳೆದರು.

ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌: ‘ಅಲ್ಪಸಂಖ್ಯಾತರನ್ನು ನನ್ನ ಸರ್ಕಾರ ಓಲೈಸಿದೆ ಎಂದು ಶೆಟ್ಟರ್‌ ಟೀಕಿಸಿದ್ದಾರೆ. ₹1.86 ಲಕ್ಷ ಕೋಟಿ ಮೊತ್ತದ ಬಜೆಟ್‌ನಲ್ಲಿ ಕೇವಲ ₹2,200 ಕೋಟಿ ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಟ್ಟಿದ್ದೇನೆ. ಶೇ 13ರಷ್ಟು ಮುಸ್ಲಿಮರು, ಶೇ 2 ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಅಲ್ಲದೆ ಜೈನರು, ಬೌದ್ಧರು, ಸಿಖ್ಖರು  ರಾಜ್ಯದಲ್ಲಿದ್ದು, ಇದು ಅತ್ಯಂತ ಕಡಿಮೆ ಪ್ರಮಾಣದ ಅನುದಾನ’ ಎಂದೂ ಅವರು ಹೇಳಿದರು.

‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಿಮ್ಮ ಪಕ್ಷದ ಘೋಷಣೆ. ಅಲ್ಪಸಂಖ್ಯಾತರನ್ನು ಒಳಗೊಳ್ಳದೆ ಇದ್ದರೆ ಸಬ್ ಕಾ ವಿಕಾಸ್‌ ಹೇಗಾಗುತ್ತದೆ. ಶೇ 20ರಷ್ಟು ಮುಸ್ಲಿಮರು ಉತ್ತರ ಪ್ರದೇಶದಲ್ಲಿದ್ದರೂ ಒಬ್ಬರಿಗೂ ಟಿಕೆಟ್‌ ನೀಡಲಿಲ್ಲ. ಇದು ಬಿಜೆಪಿಯ ಆತ್ಮವಂಚನೆಯಲ್ಲವೇ’ ಎಂದು ಕಟುವಾಗಿ ಪ್ರಶ್ನಿಸಿದರು.

ಚುನಾವಣೆ ಬಜೆಟ್‌: ‘ನಾನು ಮಂಡಿಸಿದ್ದು ಚುನಾವಣೆ ಬಜೆಟ್‌ ಎಂದು ಕೆಲವರು ಟೀಕೆ ಮಾಡಿದ್ದಾರೆ. ರಾಜಕೀಯ ಪಕ್ಷವೊಂದಕ್ಕೆ ಚುನಾವಣೆ ಎದುರಿಸುವುದೂ ಅತಿ ಮುಖ್ಯ. 2018ರ ಚುನಾವಣೆ ಮಾತ್ರವಲ್ಲ, ಎಲ್ಲ ಚುನಾವಣೆಯೂ ಮುಖ್ಯ’ ಎಂದು ಅವರು ಪ್ರತಿಪಾದಿಸಿದರು.

ಸಭಾತ್ಯಾಗ: ‘ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಮಾತ್ರ ರಾಜ್ಯ ಸರ್ಕಾರವೂ ಮನ್ನಾ ಮಾಡಲಿದೆ’ ಎಂದು ಮುಖ್ಯಮಂತ್ರಿ ಪಟ್ಟು ಹಿಡಿದ ಕಾರಣ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲೂ ಮಂಗಳವಾರ ಸಭಾತ್ಯಾಗ ಮಾಡಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ಮಾತ್ರ ರಾಜ್ಯ ಸರ್ಕಾರವೂ  ಸಹಕಾರಿ
ಸಂಘಗಳಲ್ಲಿನ ಸಾಲ ಮನ್ನಾ ಮಾಡಲು ಬದ್ಧವಾಗಿದೆ’ ಎಂದು ಪುನರುಚ್ಚರಿಸಿದರು.

ರೈತರ ಸಾಲ ಮನ್ನಾ ಮಾಡದೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸಿ ಪಲಾಯನ ಮಾಡುತ್ತಿದೆ. ಇದು ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದ ಬಿಜೆಪಿ ಸದಸ್ಯರು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಹಾಗೂ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ಇದರಿಂದ ಸಿಟ್ಟಾದ ಸಿದ್ದರಾಮಯ್ಯ, ‘ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಸದನದಲ್ಲಿ ಹೇಳಿದ್ದರಿಂದ ಅವರ ಬಂಡವಾಳ ಬಯಲಾಯಿತು. ಹೀಗಾಗಿ ಸಭಾತ್ಯಾಗ ಮಾಡಿದರು. ಬಿಜೆಪಿ ರೈತ, ಬಡವ, ಅಲ್ಪಸಂಖ್ಯಾತ, ದಲಿತ ಮತ್ತು ಮಹಿಳಾ ವಿರೋಧಿ’ ಎಂದು ಟೀಕಾಪ್ರಹಾರ ನಡೆಸಿದರು.

**

‘ಅಹಿಂದ ಪರ ಎನ್ನಲು ಮುಜುಗರವಿಲ್ಲ’

‘ಅಹಿಂದ ಪರ ಎಂದು ಹೇಳಲು ಯಾವುದೇ ಮುಜುಗರ ಇಲ್ಲ. ಹಾಗಂತ ನನ್ನ ಬಜೆಟ್‌ ಅಹಿಂದಕ್ಕೆ ಮಾತ್ರ ಸೀಮಿತವಲ್ಲ. ಮುಖ್ಯಮಂತ್ರಿಯಾದ ಮೇಲೆ ಮಂಡಿಸಿದ  5 ಬಜೆಟ್‌ಗಳಲ್ಲಿ ಎಲ್ಲ ಜಾತಿ ಹಾಗೂ ಧರ್ಮದ ಬಡವರು, ಮಹಿಳೆಯರ  ಏಳಿಗೆಗೆ ಪೂರಕವಾದ ಕಾರ್ಯಕ್ರಮ ಘೋಷಿಸಿದ್ದೇನೆ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

‘1.8 ಕೋಟಿ  ಕುಟುಂಬಗಳಿಗೆ ಅನ್ನಭಾಗ್ಯ ಸೌಲಭ್ಯ ಸಿಗುತ್ತಿದೆ. ನೀರಾವರಿಗಾಗಿ ₹15 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಕ್ಷೀರಧಾರೆ ಯೋಜನೆಯಡಿ ಪ್ರತಿ ಲೀಟರ್‌ ಹಾಲಿಗೆ ₹5 ಪ್ರೋತ್ಸಾಹಧನ ನೀಡುತ್ತಿದ್ದು, ಇದಕ್ಕಾಗಿ ₹1,240 ಕೋಟಿ ಹಂಚಿಕೆ ಮಾಡಲಾಗಿದೆ. ಇವೆಲ್ಲವೂ ಅಹಿಂದ ಸಮುದಾಯಕ್ಕೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದರು.

**

‘ನೂರು ಪಟ್ಟು ಹೆಚ್ಚು ಅನುದಾನ’

‘ಬಿಜೆಪಿ ಸರ್ಕಾರದ ಐದು ವರ್ಷದಲ್ಲಿ ಎಲ್ಲಾ ಇಲಾಖೆಗಳಿಗೂ ಸೇರಿ ಒಟ್ಟು ₹3.99 ಲಕ್ಷ ಕೋಟಿ ಅನುದಾನ ನೀಡಿದ್ದರೆ, ಕಳೆದ 5 ವರ್ಷದ ಅವಧಿಯಲ್ಲಿ ₹8.04 ಲಕ್ಷ ಕೋಟಿ ನೀಡಲಾಗಿದೆ. ಒಟ್ಟಾರೆ ₹4.05 ಲಕ್ಷ ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಮಾತಿನುದ್ದಕ್ಕೂ ಹಿಂದಿನ ಬಿಜೆಪಿ ಮತ್ತು ತಮ್ಮ ಸರ್ಕಾರದ ಸಾಧನೆಯನ್ನು ಒರೆಗೆ ಹಚ್ಚಿದ ಅವರು, ‘ಕೃಷಿ ಇಲಾಖೆಗೆ ಬಿಜೆಪಿ ಅವಧಿಯಲ್ಲಿ ₹7,338 ಕೋಟಿ ಕೊಟ್ಟಿದ್ದರೆ, ನಮ್ಮ ಸರ್ಕಾರ ₹19,523 ಕೋಟಿ ನೀಡಿದೆ. ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕೆ ಬಿಜೆಪಿ ಅವಧಿಯಲ್ಲಿ ₹21 ಸಾವಿರ ಕೋಟಿ ನೀಡಿದ್ದರೆ, ನಮ್ಮ ಸರ್ಕಾರ ಈ ವರ್ಷವೂ ಸೇರಿ ₹84 ಸಾವಿರ ಕೋಟಿ ಒದಗಿಸಿದೆ’ ಎಂದು ವಿವರಿಸಿದರು.

**

‘ಉತ್ತರ ಪ್ರದೇಶದಲ್ಲಿ ಸಾಲ ಮನ್ನಾ ಮಾಡಿದರೆ ನಾವೂ ಮಾಡುತ್ತೇವೆ’ ಎಂದು ಪ್ರಕಟಿಸಿ.

-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
(ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ನೀಡಿದ ಸಲಹೆ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT