ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರ ಸೆರೆ,₹4.98 ಕೋಟಿ ಜಪ್ತಿ

Last Updated 28 ಮಾರ್ಚ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ಶಂಕರಪುರ ಹಾಗೂ ರಾಜಾಜಿನಗರ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಹಳೇ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿ ₹ 4.98 ಕೋಟಿ ಮೌಲ್ಯದ ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಶಾಂತಿನಗರದ ನಂಜುಂಡ (46), ಜಯನಗರದ ಆಂಬ್ರೋಸ್ ಡೇವಿಡ್ (42), ಬನ್ನೇರುಘಟ್ಟ ರಸ್ತೆಯ ಆರಿಫ್ ಪಾಷಾ (34) ಹಾಗೂ ಕೇರಳದ ಫೆಲಿಕ್ಸ್ (35) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು (ಎನ್‌ಆರ್‌ಐ) ಬಳಸಿಕೊಂಡು ಹಳೇ ನೋಟುಗಳ ಬದಲಾವಣೆಗೆ ಮುಂದಾಗಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ನಂಜುಂಡ, ಭಾನುವಾರ ಸಂಜೆ ತನ್ನ ಕಾರಿನಲ್ಲಿ ₹ 3 ಕೋಟಿ ಮೌಲ್ಯದ ಹಳೇ ನೋಟುಗಳನ್ನು ಇಟ್ಟುಕೊಂಡು ಶಂಕರಪುರದ ಮರಾಠ ಹಾಸ್ಟೆಲ್ ಬಳಿ ನಿಂತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆಯಲಾಯಿತು.

ಹಳೇ ನೋಟುಗಳ ಬಗ್ಗೆ ವಿಚಾರಿಸಿದಾಗ, ‘ಸ್ನೇಹಿತರಾದ ಅರುಣ್ ಹಾಗೂ ಮಂಜುನಾಥ್ ಅವರು ಹಣದ ಬ್ಯಾಗ್ ಕೊಟ್ಟರು. ಅನಿವಾಸಿ ಭಾರತೀಯರೊಬ್ಬರು ನನ್ನನ್ನು ಭೇಟಿಯಾಗಿ ಈ ಹಣ  ಪಡೆದುಕೊಂಡು ಹೋಗುತ್ತಾರೆ ಎಂದು ಅವರು ತಿಳಿಸಿದ್ದರು. ಕಮಿಷನ್ ಆಸೆಗೆ ಈ ಕೆಲಸಕ್ಕೆ ಒಪ್ಪಿಕೊಂಡಿದ್ದೆ’ ಎಂದು ನಂಜುಂಡ ಹೇಳಿಕೆ ಕೊಟ್ಟಿದ್ದಾನೆ. ಹಣದ ಮಾಲೀಕ ಯಾರೆಂಬುದು ಗೊತ್ತಾಗಿಲ್ಲ. ಅರುಣ್ ಹಾಗೂ ಮಂಜುನಾಥ್‌ಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆಡಿ ಕಾರಿನಲ್ಲಿ ಸಾಗಣೆ: ‘ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಿಕ್ಕಿ ಬಿದ್ದ ಆಂಬ್ರೋಸ್, ಆರಿಫ್ ಹಾಗೂ ಫೇಲಿಕ್ಸ್, ₹1.98 ಕೋಟಿ ಮೌಲ್ಯದ ಹಳೇ ನೋಟುಗಳನ್ನು ಆಡಿ ಕಾರಿನಲ್ಲಿ ಸಾಗಿಸುತ್ತಿದ್ದರು. ನಮ್ಮ ಬಾತ್ಮೀದಾರರ ಸುಳಿವಿನಿಂದ ಆ ಕಾರನ್ನು ಪರಿಶೀಲಿಸಿದಾಗ ಹಣ ಪತ್ತೆಯಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

‘ಮೂವರೂ ರಿಯಲ್ ಎಸ್ಟೇಟ್ ಉದ್ಯಮಿಗಳು. ನಾಲ್ಕು ದಿನಗಳ ಹಿಂದೆ ಇವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ಶೇ 58ರ ಕಮಿಷನ್‌ ದರದಲ್ಲಿ ನೋಟು ಬದಲಾವಣೆ ಮಾಡಿಸಿಕೊಡುವುದಾಗಿ ತಿಳಿಸಿದ್ದ. ಅದಕ್ಕೆ ಒಪ್ಪಿದ ಆರೋಪಿಗಳು, ಹಣ ತೆಗೆದುಕೊಂಡು ಆತನ ಸೂಚನೆಯಂತೆ ಭಾನುವಾರ ರಾತ್ರಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ  ಶಿವಾಲಿ ಲಾಡ್ಜ್‌ ಬಳಿ ಬಂದಿದ್ದರು.’

‘ಮಫ್ತಿಯಲ್ಲಿ ಕಾರ್ಯಾಚರಣೆ  ನಡೆಸಿ ಅವರನ್ನು ವಶಕ್ಕೆ ಪಡೆದೆವು. ಆದರೆ, ಮೂರು ತಾಸು ಕಾದರೂ ಹಣ ಪಡೆಯುವುದಾಗಿ ತಿಳಿಸಿದ್ದ ವ್ಯಕ್ತಿ ಬರಲಿಲ್ಲ. ಕರೆ ಬಂದಿದ್ದ ಮೊಬೈಲ್ ಸಂಖ್ಯೆ ಪಡೆದು  ತನಿಖೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT