ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಮಾಡಿ ಹರ್ಬಲ್ ತೋಟ!

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಂದು ಬಿದ್ದ ದಿಢೀರ್ ಮಳೆಗೆ ಎರಡು ವರ್ಷದ ಮೊಮ್ಮಗಳು ಸ್ವಲ್ಪ ಕೆಮ್ಮಲು ಶುರುಮಾಡಿದ್ದೇ ತಡ, ಅನಸೂಯಜ್ಜಿ ಮನೆಯಲ್ಲಿ ಮಾಡಿದ್ದ ಪುಟ್ಟ ಹರ್ಬಲ್ ಗಾರ್ಡನ್‌ನ ಕುಂಡದಿಂದ ತುಳಸಿ ಗಿಡದ ಎಲೆಗಳನ್ನು ತಂದು ಕಷಾಯ ಮಾಡಿಕೊಟ್ಟರು.

ಒಂದು ಚಮಚ ಜೇನಿನ ಜತೆ ಪುಡಿ ಮಾಡಿದ ಕರಿಮೆಣಸಿನೊಂದಿಗೆ ತುಳಸಿ ರಸವನ್ನು ರಾತ್ರಿ ಮೊಮ್ಮಗಳಿಗೆ ಕುಡಿಸಿದ್ದೇ ತಡ, ಮರುದಿನ ಬೆಳಿಗ್ಗೆ ಕೆಮ್ಮು ಮಾಯವಾಗಿತ್ತು.

ತರಕಾರಿಗಳ ಜತೆಗೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗೆ ಮನೆಮದ್ದು ಆಗಬಲ್ಲ ಔಷಧೀಯ ಸಸ್ಯಗಳನ್ನು (ಹರ್ಬಲ್ ಗಾರ್ಡನ್‌) ಬೆಳೆಯುವುದು ಇತ್ತೀಚೆಗೆ ಜನಪ್ರಿಯವಾಗಿದೆ. 

ಅಡುಗೆ ಮನೆಯ ಕಿಟಕಿಗಳ ಬದಿಯಲ್ಲೋ, ಮನೆಯಂಗಳದ ಮೂಲೆಯಲ್ಲೋ ಹರ್ಬಲ್ ಗಾರ್ಡನ್‌ ಮಾಡಬಹುದು. ಕೆಲ ಔಷಧೀಯ ಸಸ್ಯಗಳು ಸೂರ್ಯನ ರಶ್ಮಿಯಲ್ಲಿ ಬೆಳೆದರೆ ಮತ್ತೆ ಕೆಲವು ನೆರಳಿನಲ್ಲಿಯೇ ಬೆಳೆಯುತ್ತವೆ. ನೆರಳಿನಲ್ಲಿ ಬೆಳೆಯುವಂಥ ಸಸ್ಯಗಳನ್ನು ಮನೆಯೊಳಗೆ ಒಳಾಂಗಣ ಸಸ್ಯಗಳನ್ನಾಗಿಯೂ ಬೆಳೆಸಬಹುದು.

ಬಿಸಿಲಿನಲ್ಲಿ ಬೆಳೆಯುವಂಥ ಔಷಧೀಯ ಸಸ್ಯಗಳಿಗೆ ಪ್ರತಿನಿತ್ಯ ಕನಿಷ್ಠ ಎಂಟು ತಾಸುಗಳಾದರೂ  ಸೂರ್ಯ ರಶ್ಮಿ ಬೀಳುವಂತಿರಬೇಕು.  ಕುಂಡದ ಗಿಡಗಳಿಗೆ  ಹೆಚ್ಚು ನೀರುಣಿಸಬಾರದು. ಮಣ್ಣಿನ ತೇವಾಂಶ ಕಾಪಾಡುವಷ್ಟು ಮಾತ್ರ ನೀರುಣಿಸಬೇಕು.

ನರ್ಸರಿಯಿಂದ ಔಷಧೀಯ ಸಸಿಗಳನ್ನು ತರುವಾಗಲೇ ಅವುಗಳಿಗೆ ರೋಗ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ತರುವುದೊಳಿತು. ಸಸಿಗಳನ್ನು ಮನೆಗೆ ತಂದಮೇಲೂ ಆಗಾಗ ಗಿಡಗಳ ಎಲೆ, ಕಾಂಡವನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು.

ಮೊಟ್ಟೆ, ಹುಳು, ಕೀಟ ಇತ್ಯಾದಿ ಕಂಡುಬಂದಲ್ಲಿ ಸೂಕ್ತ ಔಷಧೋಪಚಾರ ಮಾಡಬೇಕು. ಇಲ್ಲದಿದ್ದಲ್ಲಿ ಪಕ್ಕದ ಗಿಡಗಳಿಗೂ ಕೀಟ, ರೋಗಬಾಧೆ ಹಬ್ಬಬಹುದು.

ಗಿಡಗಳಿಗೆ ರಾಸಾಯನಿಕ ಗೊಬ್ಬರ ಬಳಸುವುದಕ್ಕಿಂತ ಸಾವಯವ ಗೊಬ್ಬರ ಬಳಸುವುದು ಒಳ್ಳೆಯದು.  ಸ್ಥಳವಿದ್ದರೆ ಮನೆಯಲ್ಲಿಯೇ ಸಾವಯವ ಗೊಬ್ಬರವನ್ನೂ ತಯಾರಿಸಬಹುದು. ಆಹಾರ ತ್ಯಾಜ್ಯ ಪದಾರ್ಥಗಳ ಜತೆ ಉದುರಿದ ಎಲೆಗಳನ್ನು ಒಂದೆಡೆ ಸೇರಿಸಿ ಅವುಗಳ ಮೇಲೆ ಎರೆಹುಳು ಬಿಟ್ಟರೆ ಒಳ್ಳೆಯ ಕಾಂಪೊಸ್ಟ್ ಗೊಬ್ಬರ ಆಗುತ್ತದೆ.

ಜಾಗಕ್ಕೆ ಅನುಗುಣವಾಗಿ ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯಬಹುದು.

ಕಡಿಮೆ ಜಾಗವಿದ್ದರೆ ತುಳಸಿ, ಪುದೀನಾ, ಬೆಳ್ಳುಳ್ಳಿ, ಶುಂಠಿ, ಲೋಳೆಸರದಂಥ ಗಿಡಗಳನ್ನು ಬೆಳೆಯಲು ಆದ್ಯತೆ ನೀಡಿ.  ಅಮೃತಬಳ್ಳಿಯಂಥ ಔಷಧೀಯ ಬಳ್ಳಿಗಳಿಗೆ ಕೋಲು ಅಥವಾ ಆಧಾರ ನೀಡಿದರೆ ಮನೆಯ ಗೋಡೆಯ ಮೇಲೂ ಸುಲಭವಾಗಿ ಹಬ್ಬುತ್ತವೆ.

ಕೆಲ ಔಷಧೀಯ ಸಸ್ಯಗಳು ಅಡುಗೆ, ದೇಹಾರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧನೆಗೂ ಬಳಕೆಯಾಗುತ್ತವೆ. ತುಳಸಿ, ಪುದೀನ, ಅರಿಶಿನದಂಥ ಸಸ್ಯಗಳು  ಬೇಸಿಗೆಯಲ್ಲಿ ಚರ್ಮದ ಸೌಂದರ್ಯ ರಕ್ಷಣೆಗೆ ಪೂರಕವಾಗಿರುತ್ತವೆ.

ಅಂತರ್ಜಾಲದಲ್ಲಿ ಹುಡುಕಿದರೆ ಹರ್ಬಲ್ ಗಾರ್ಡನ್ ಮಾಡುವ ಬಗ್ಗೆ ಸಾಕಷ್ಟು  ಮಾಹಿತಿ ದೊರೆಯುತ್ತವೆ.  

ಏನೇನು ಬೆಳೆಯಬಹುದು?
ಅಮೃತಬಳ್ಳಿ, ಅರಿಶಿಣ, ಅಶ್ವಗಂಧ, ಆಡುಸೋಗೆ, ಒಂದೆಲಗ, ಕರಿಬೇವು, ಕೊತ್ತಂಬರಿ, ಚಕ್ರಮುಖಿ, ತುಂಬೆ, ತುಳಸಿ, ದಾಸವಾಳ, ದೊಡ್ಡಪತ್ರೆ, ನಿಂಬೆಹುಲ್ಲು, ನೆಲನೆಲ್ಲಿ, ಪುದಿನ, ಬಜೆ, ಬಸಳೆಸೊಪ್ಪು, ಬ್ರಾಹ್ಮಿ, ಬೇವು, ಭೃಂಗರಾಜ, ಮೆಂತ್ಯ ಸೊಪ್ಪು, ಲೋಳೆಸರ, ಬೆಳ್ಳುಳ್ಳಿ, ಶುಂಠಿ.

* ಮನೆಯಂಗಳದಲ್ಲೇ ಬೆಳೆಯುವ ತುಳಸಿ, ಶುಂಠಿ, ಪುದೀನಾದಂಥ ಔಷಧೀಯ ಸಸ್ಯಗಳು ಅಡುಗೆ ಬಳಕೆಗೆ ಮಾತ್ರವಲ್ಲ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗೆ ಮನೆಮದ್ದು ಆಗುತ್ತವೆ.

–ಅನಸೂಯಮ್ಮ, ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ, ಸಂಪಂಗಿರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT