ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಸುರಕ್ಷತೆಯ ‘ಇ–ತಂತ್ರಜ್ಞಾನ’

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹಣವನ್ನೆಲ್ಲ ಕೂಡಿಟ್ಟು  ಕಟ್ಟಿದ ಮನೆಯನ್ನು ಸುರಕ್ಷಿತವಾಗಿ ಕಾಪಾಡುವುದು ಎಲ್ಲರ ಬಯಕೆ. ಮನೆಯಿಂದ ದೂರವಿದ್ದಾಗಲೂ ಮನೆಯಲ್ಲಿ ಬೆಲೆಬಾಳುವ ವಸ್ತುಗಳ ಸುರಕ್ಷೆಯ ಚಿಂತೆ ಕಾಡುತ್ತಿರುತ್ತದೆ. ಪತ್ರಿಕೆಗಳಲ್ಲಿ ಕಳ್ಳಕಾಕರ ಕುರಿತ ಸುದ್ದಿಯನ್ನು ಕಂಡಾಗಲಂತೂ ಈ ದುಗುಡ ಮತ್ತಷ್ಟು ಹೆಚ್ಚುತ್ತದೆ. ಇರುವಲ್ಲಿಂದಲೇ ಇಂತಹ ಚಿಂತೆಗಳನ್ನು ದೂರ ಮಾಡಿಕೊಳ್ಳುವಂತಿದ್ದರೆ?  

ಹೌದು, ಇಂಥದ್ದೊಂದು ಉಪಕರಣ ಬಂದು  ವರ್ಷಗಳೇ ಕಳೆದಿವೆ. ಆದರೆ ಈಚೆಗೆ ಇದರ ಬಳಕೆ ನಗರದಲ್ಲಿ ಹೆಚ್ಚುತ್ತಿದೆ. ಹೋಂ ಆಟೊಮೇಶನ್‌ಗಳನ್ನು (ಸಂವೇದನಾಶೀಲ ಹಾಗೂ ಯಾಂತ್ರೀಕೃತ ಮನೆ ನಿರ್ವಹಣಾ ಉಪಕರಣ) ಮನೆಯಲ್ಲಿ ಅಳವಡಿಸುವ ಮೂಲಕ ಮನೆಯ ಸುರಕ್ಷೆ ಖಾತ್ರಿಪಡಿಸಿಕೊಳ್ಳಬಹುದು.

ಸೆಕ್ಯುರಿಟಿ ಗಾರ್ಡ್‌ಗಳು ಇದ್ದಾಗಲೂ ಮನೆ ಸುರಕ್ಷಿತವಾಗಿದೆ ಎಂದು ನಂಬುವಂತಿಲ್ಲ. ಅವರ ಕಣ್ಣು ತಪ್ಪಿಸಿ ಕಳ್ಳರು ಮನೆಗೆ ನುಗ್ಗಿರುವ ಹಲವು ಉದಾಹರಣೆಗಳಿವೆ. ಆದರೆ, ಈ ಉಪಕರಣವನ್ನು ಅಳವಡಿಸಿರುವ  ಮನೆಯ ಒಳಗೆ ಅಪರಿಚಿತರು ನುಗ್ಗುವುದು ಸುಲಭವಲ್ಲ.

ಮನೆಯವರು ಹೊರಗೆ ಹೋಗುವಾಗ  ಸೆನ್ಸಾರ್‌ ಆನ್‌ ಮಾಡಿಟ್ಟು ಹೋಗಬೇಕು. ಇದರಿಂದ ಅಪರಿಚಿತರು ಮನೆಯ ಆವರಣ ಪ್ರವೇಶಿಸಿದ ತಕ್ಷಣ ಮಾಲೀಕರಿಗೆ ಕರೆ ಹೋಗುತ್ತದೆ. ಜೊತೆಗೆ ಪೊಲೀಸರಿಗೂ ಕರೆ ಹೋಗುವಂತೆ ಮಾಡಬಹುದು. ಅಕ್ಕಪಕ್ಕದ ಮನೆಯವರಿಗೂ ಕೇಳಿಸುವಷ್ಟು ದೊಡ್ಡ ಶಬ್ದ ಬರುತ್ತದೆ.

ಬೆರಳ ತುದಿಯಲ್ಲಿಯೇ ಮನೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ ಅದಕ್ಕೆ ಪ್ರತಿಕ್ರಿಯಿಸುವ ತಂತ್ರಜ್ಞಾನಕ್ಕೆ ಬೆಂಗಳೂರಿಗರು ಮಾರು ಹೋಗುತ್ತಿದ್ದಾರೆ.

ಇಡೊಮೆಟಿಕ್ಸ್‌, ಐನೊಹೊ, ಐಫೈಹೋಮ್ಸ್‌.ಕಾಮ್‌, ಸಿಲ್ವಾನ್‌, ಶಾರ್ಪ್‌ನೋಡ್‌, ಐ ಮಾನಿಟರ್‌, ಹೋಮ್‌ ಬ್ರೇನ್‌, ಮೆಟಾಗಾನ್‌ ಟೆಕ್ನಾಲಜಿ, ಇಡೊಮೊಟೈಸ್‌, ತಸ್ಮಯ್‌ ಸೇರಿದಂತೆ ವಿವಿಧ ಕಂಪೆನಿಗಳ ಆಟೊಮೇಶನ್‌ ಉಪಕರಣ ದೊರಕುತ್ತವೆ.

‘ಮುಖ್ಯವಾಗಿ ನಾಲ್ಕು ಬಗೆಯ ಆಟೊಮೇಶನ್‌ ಉಪಕರಣಗಳು ಲಭ್ಯವಿವೆ. ವಿವಿಧ ಕಂಪೆನಿಗಳ ಉಪಕರಣಗಳ ಫೀಚರ್‌ಗಳಲ್ಲಿ ಭಿನ್ನತೆ ಇರುತ್ತದೆ. ಮನೆಗೆ ಹೊಂದಿಕೆಯಾಗುವ ಲುಕ್‌ ಇರುವ ಉಪಕರಣಗಳನ್ನು ಕೊಳ್ಳಲು ಗ್ರಾಹಕರು ಆದ್ಯತೆ ನೀಡುತ್ತಾರೆ’ ಎನ್ನುತ್ತಾರೆ  ತಸ್ಮಯ್‌ ಆಟೊಮೇಶನ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕರಿಗಿರೀಶ್‌ ಮೂರ್ತಿ.

ಆ್ಯಂಟಿ ಬರ್ಗ್‌ಲರಿ ವ್ಯವಸ್ಥೆ: ಇವುಗಳಲ್ಲಿ ಮೂರು ಬಗೆಗಳಿವೆ. ಈ ಉಪಕರಣಗಳು ಮನೆಯಲ್ಲಿ ಯಾರೂ ಇಲ್ಲದಾಗ ಬಳಸುವಂತಹವು.

ಮ್ಯಾಗ್ನೆಟಿಕ್‌ ಡೋರ್‌ ಕಾಂಟ್ಯಾಕ್ಟ್‌: ಬಾಗಿಲಿನ ವಾಸ್ಕಲ್‌ಗೆ ಮತ್ತು ಮೇಲೆ ಮ್ಯಾಗ್ನೆಟ್‌ ಇರುತ್ತದೆ. ಬಾಗಿಲು ತೆರೆದಾಗ ಇವುಗಳ ಸಂಪರ್ಕ ತಪ್ಪುತ್ತದೆ. ಆಗ ಸೆನ್ಸಾರ್‌ ಕೆಲಸ ಮಾಡಲು ಆರಂಭವಾಗಿ, ಶಬ್ದ ಬರುತ್ತದೆ. ಮನೆಯವರೇ ಆದಾಗ ಪಾಸ್‌ವರ್ಡ್‌ ಹಾಕುತ್ತಾರೆ. ಅಕ್ರಮವಾಗಿ ಮನೆಗೆ ನುಗ್ಗಲು ಯತ್ನಿಸುವವರು ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಮೋಷನ್‌ ಸೆನ್ಸಾರ್‌: ಬಾಗಿಲು ಒಡೆಯದೇ ಗೋಡೆ ಒಡೆದು ಮನೆಯೊಳಗೆ ಪ್ರವೇಶಿಸಿ ಬಿಟ್ಟರೂ, ಅವರು ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಮನುಷ್ಯನ ದೇಹದ ಉಷ್ಣತೆಯ ಆಧಾರದ ಮೇಲೆ ವ್ಯಕ್ತಿ ಮನೆಯೊಳಗೆ ಪ್ರವೇಶಿಸಿದ್ದಾರೆ ಎಂಬುದನ್ನು ಇದು ಮಾಲೀಕನಿಗೆ ತಿಳಿಸುತ್ತದೆ. ಬೆಡ್‌ರೂಂ ಮತ್ತು ಲಿವಿಂಗ್‌ ಏರಿಯಾಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ಸಾಕುಪ್ರಾಣಿಗಳು ಓಡಾಡಿದಾಗ ಸೆನ್ಸಾರ್‌ ಕೆಲಸ ಮಾಡುವುದಿಲ್ಲ. 

ಗ್ಲಾಸ್‌ ಬ್ರೇಕ್ಸ್‌: ಈಗೆಲ್ಲ ಮನೆಯನ್ನು ಚೆಂದಗಾಣಿಸಲು ದೊಡ್ಡ ಗ್ಲಾಸ್‌ಗಳನ್ನು ಹಾಕಿಸುವುದು ವಾಡಿಕೆ. ಈ ಗ್ಲಾಸ್‌ ಒಡೆದು ಒಳ ನುಗ್ಗಲು ಹೊಂಚು ಹಾಕಿರುವ ಕಳ್ಳರಿಗಾಗಿಯೇ ಕಂಡು ಹಿಡಿದಿರುವ ಉಪಕರಣವಿದು.

ಗ್ಲಾಸ್‌ ಇರುವ ಕಡೆ ಇದನ್ನು ಹಾಕಲಾಗುತ್ತದೆ. ಗ್ಲಾಸ್‌ ಒಡೆದು ಒಳಗೆ ಬರಲು ಯತ್ನಿಸಿದಾಗ ಮಾಲೀಕರಿಗೆ ಮಾಹಿತಿ ತಲುಪುತ್ತದೆ.

ಸಿಸಿಟಿವಿ: ಇದು ಮನೆಯ ಕಣ್ಣಿದ್ದಂತೆ. ಮನೆಗೆ ಯಾರೋ ನುಗ್ಗಿದ್ದಾರೆ ಎಂಬ ಸಂದೇಶ ದೊರಕಿದ ತಕ್ಷಣ ಸಿಸಿಟೀವಿಗೆ ಲಾಗಿನ್‌ ಆಗಿ ಮೊಬೈಲ್‌ ಮೂಲಕವೇ ಮನೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಬಹುದು.

ವಿಡಿಯೊ ಡೋರ್‌ ಫೋನ್‌: ಮನೆಯಲ್ಲಿ ಒಂಟಿಯಾಗಿರುವವರ ಮಾಹಿತಿ ತಿಳಿದುಕೊಂಡೇ ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳ ನಿಯಂತ್ರಣಕ್ಕೆ ತಯಾರಾದ ಉಪಕರಣವಿದು.  ಕಾಲಿಂಗ್‌ಬೆಲ್‌ ಹತ್ತಿರ ಚಿಕ್ಕ ಕ್ಯಾಮೆರಾ ಇರುತ್ತದೆ. ಮನೆಯ ಒಳಗೆ ಮಾನಿಟರ್‌ಗಳಿರುತ್ತವೆ. ಮನೆಯೊಳಗಿರುವ ವ್ಯಕ್ತಿ ಹೊರಗಿರುವ ವ್ಯಕ್ತಿಯೊಡನೆ ಮಾತನಾಡುವ ಜೊತೆಗೆ ಅವರ ಮುಖವನ್ನು ನೋಡಬಹುದು.

ಹೊರಗಿರುವವರಿಗೆ ಮಾತು ಕೇಳಿಸುತ್ತದೆ. ಆದರೆ ಮಾತನಾಡುವ ವ್ಯಕ್ತಿಯ ಮುಖ ಕಾಣುವುದಿಲ್ಲ. ಹೀಗಾಗಿ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯಕ.

ಬಯೋ ಮೆಟ್ರಿಕ್‌ ಸಿಸ್ಟಂ: ಈ ಉಪಕರಣವನ್ನು ಅಳವಡಿಸುವುದರಿಂದ ಬೆರಳಚ್ಚು, ಪಿನ್‌ಕೋಡ್‌ ಹಾಕಿಯೇ ಮನೆಯೊಳಗೆ ಪ್ರವೇಶಿಸಬೇಕು. ಹೀಗಾಗಿ ಕೀ ಕಳೆದುಕೊಂಡಾಗ ನಕಲಿ ಕೀ ಮಾಡಿಸಿಕೊಂಡು ಯಾರಾದರೂ ಮನೆಯೊಳಗೆ ನುಗ್ಗುತ್ತಾರೆ ಎಂಬ ಭಯವಿರುವುದಿಲ್ಲ.
ಈ ಎಲ್ಲಾ ಉಪಕರಣಗಳನ್ನು ಅಳವಡಿಸಲು 60ರಿಂದ 70 ಸಾವಿರ ಖರ್ಚಾಗುತ್ತದೆ.

‘ನಗರದಲ್ಲಿ ಮನೆ ಕಟ್ಟಿಸಲು ಹೆಚ್ಚು ಕಮ್ಮಿ ಒಂದು ಕೋಟಿ ಖರ್ಚು ಮಾಡಿರುತ್ತಾರೆ. ಅಂಥವರಿಗೆ ಇಷ್ಟು ಹಣ ಖರ್ಚು ಮಾಡಿ ಈ ಉಪಕರಣ ಅಳವಡಿಸುವುದು ದೊಡ್ಡ ವಿಷಯವೇನಲ್ಲ. ಫ್ಯಾನ್‌ ಮತ್ತು ಲೈಟ್‌ನಷ್ಟೇ ಪ್ರಾಮುಖ್ಯ ಇವುಗಳಿಗೂ ದಕ್ಕುತ್ತಿದೆ’ ಎನ್ನುತ್ತಾರೆ ಕರಿಗಿರೀಶ್‌ ಮೂರ್ತಿ.

 ‘ಅಪಾರ್ಟ್‌ಮೆಂಟ್‌ಗೆ ಹೋಗುವುದೇ ಸುರಕ್ಷತೆ ದೃಷ್ಟಿಯಿಂದ, ಹಾಗಾಗಿ ಬಿಲ್ಡರ್ಸ್‌ಗಳು ಈ ಉಪಕರಣಗಳನ್ನು ಗ್ರಾಹಕರಿಗೆ ನೀಡುವುದರ ಮಹತ್ವ ಅರಿತಿದ್ದಾರೆ.  ಫ್ಲಾಟ್‌ಗಳಲ್ಲಾದರೆ ಸೆಕ್ಯುರಿಟಿ ಗಾರ್ಡ್‌ ಇರುವುದರಿಂದ ಆ್ಯಂಟಿ ಬರ್ಗ್‌ಲರಿ ಹಾಕಿಸುವುದಕ್ಕೆ ಹೋಗುವುದಿಲ್ಲ. ಸಿಸಿಟೀವಿ ಮತ್ತು ವಿಡಿಯೋ ಡೋರ್‌ ಫೋನ್‌ಗಳನ್ನು ಹಾಕಿಸುತ್ತಾರೆ’ ಎನ್ನುತ್ತಾರೆ ಅವರು. 

ಮನೆಯ ಚಿಂತೆಯೇ ಕಾಡುವುದಿಲ್ಲ 
ಮನೆಗೆ ‘ಐ ಮಾನಿಟರ್‌’ ಕಂಪೆನಿಯ ಆಟೊಮೇಶನ್‌ ಉಪಕರಣ ಹಾಕಿಸಿದ್ದೇನೆ. ಇದರಿಂದ ಬಹಳ ಪ್ರಯೋಜನಕಾರಿಯಾಗಿದೆ. ಮನೆಯಿಂದ ದೂರವಿದ್ದಾಗ ಸೆಕ್ಯುರಿಟಿ ಗಾರ್ಡ್‌ ನಿದ್ದೆ ಮಾಡಿದರೆ ಹೇಗಪ್ಪ? ಎಂದು ಯೋಚಿಸುವ ಅಗತ್ಯವಿಲ್ಲ. ವಿದೇಶದಲ್ಲಿ ಇದ್ದಾಗ ಕೂಡ ಮೊಬೈಲ್‌ನಲ್ಲಿ ಲಾಗಿನ್‌ ಆಗಿ ಮನೆಯ ಸುರಕ್ಷತೆಯ ಬಗ್ಗೆ ಗಮನ ನೀಡಬಹುದು.
–ಲಹರಿ ವೇಲು, ಲಹರಿ ರೆಕಾರ್ಡಿಂಗ್‌ ಕಂಪೆನಿ ನಿರ್ದೇಶಕ

ಎಲ್ಲರಿಗೂ ಬೇಕು

ಎಲ್ಲ ವರ್ಗದ ಜನರು ಹೋಂ ಆಟೊಮೇಶನ್‌ ತಂತ್ರಜ್ಞಾನದ ಬಗ್ಗೆ ಇತ್ತೀಚೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸ್ಮಾರ್ಟ್‌ ಫೋನ್‌ಗಳು ಹಾಗೂ ಹೈಸ್ಪೀಡ್ ಇಂಟರ್‌ನೆಟ್‌ ಸೌಲಭ್ಯದಿಂದಾಗಿ ಈ ತಂತ್ರಜ್ಞಾನ ಬಳಕೆ ಸುಲಭವಾಗಿದೆ. 50 ಲಕ್ಷ ವೆಚ್ಚದಿಂದ 2 ಕೋಟಿವರೆಗಿನ ಮನೆಯನ್ನು ಹೊಂದಿದವರು ಹೋಂ ಆಟೊಮೇಶನ್‌ ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.
–ಅವಿನಾಶ್‌, ಕಾರ್ಯನಿರ್ವಹಣಾಧಿಕಾರಿ, ಸಿಲ್ವಾನ್‌ ಕಂಪೆನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT