ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಜ್ಯೋತಿಗೆ ಎಲ್ಲಿದೆ ಜಾತಿ?

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

-ಶಿರೀಷ ಜೋಶಿ

***

ಸಂಗೀತ ಲೋಕದಲ್ಲಿ ಇತ್ತೀಚೆಗೆ ವಿವಾದವೊಂದು ಹುಟ್ಟಿಕೊಂಡು, ದೇಶದಾದ್ಯಂತ ಚರ್ಚೆಗೆ ಒಳಗಾಯಿತು. ಸುಹಾನಾ ಎಂಬ ಗಾಯಕಿ ಟಿ.ವಿ. ಚಾನೆಲ್ ಒಂದರಲ್ಲಿ ದೇವರನಾಮಗಳನ್ನು ಹಾಡಿದ ಬಗೆಗೆ ಧರ್ಮಾಂಧರು ಟೀಕೆ ಮಾಡಿದರು. ಈ ಪ್ರಕರಣದಲ್ಲಿ ಅನೇಕ ಮಹನೀಯರು ಸುಹಾನಾಳನ್ನು ಬೆಂಬಲಿಸಿದ್ದು ಸಂತಸದ ಸಂಗತಿ. ಸಂಗೀತ ಜ್ಯೋತಿಗೆ ಎಲ್ಲಿದೆ ಜಾತಿ? ಅದು ಎಲ್ಲ ಜಾತಿಯ ಮನೆಗಳಲ್ಲೂ ಬೆಳಕನ್ನು ನೀಡುವ ಜ್ಯೋತಿ.

ನಮ್ಮ ಭಾರತೀಯ ಸಂಗೀತ ಕ್ಷೇತ್ರ ಮೊದಲಿನಿಂದಲೂ ಭಾವೈಕ್ಯವನ್ನು ಪೋಷಿಸುತ್ತಾ ಬಂದಿರುವುದನ್ನು ಇತಿಹಾಸದ ಪುಟಗಳು ಸಾರಿ ಸಾರಿ ಹೇಳುತ್ತಿವೆ. ಸಂಗೀತದ ಅಭಿಮಾನಕ್ಕೆ ಧಕ್ಕೆ ಬಂದಾಗ ಅನೇಕ ಮುಸ್ಲಿಂ ಗಾಯಕರು ಸಂಗೀತದ ಪಕ್ಷವನ್ನು ವಹಿಸಿದ ಉದಾಹರಣೆಗಳಿವೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ನಂತರ ತಮ್ಮ ನೆಲೆಗಾಗಿ ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಂಡ ಕಲಾವಿದ ಉಸ್ತಾದ್‌ ಬಡೇಗುಲಾಂ ಅಲಿಖಾನ್ ಸಾಹೇಬರು ಒಮ್ಮೆ ಕರಾಚಿಯಲ್ಲಿ ಕಾರ್ಯಕ್ರಮವನ್ನು ನೀಡುತ್ತಿದ್ದರು. ‘ಕನ್ಹಯ್ಯಾ ನೆ ಬಯಿಯಾ ಮರೋರಿ’ ಎಂಬ ಬಂದಿಶ್‌ ಅನ್ನು ಸೊಗಸಾಗಿ ಹಾಡುತ್ತಿರುವಾಗ ಪಾಕಿಸ್ತಾನದ ಅಧಿಕಾರಿಗಳು ಆ ಹಾಡಿನಲ್ಲಿನ ‘ಕನ್ಹಯ್ಯ’ ಎಂಬ ಶಬ್ದವನ್ನು ಬಿಟ್ಟು ಹಾಡುವಂತೆ ಆದೇಶಿಸಿದರು. ‘ಕನ್ಹಯ್ಯ’ ಎಂಬುದು ಕೃಷ್ಣನ ಹೆಸರು. ಇದನ್ನು ಕೇಳಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿದ ಅಲಿಖಾನರು ತಕ್ಷಣ ತಮ್ಮನ್ನು ಭಾರತಕ್ಕೆ ಕಳುಹಿಸುವಂತೆ ಭಾರತದ ಆಗಿನ ರಾಯಭಾರಿಗೆ ದುಂಬಾಲು ಬಿದ್ದರು. ಇದನ್ನು ಅವರು ಪಾಕಿಸ್ತಾನದ ಅಧಿಕಾರಿಗಳಿಗೆ ತಿಳಿಸಿದಾಗ ಧಾವಿಸಿ ಬಂದ ಪಾಕಿಸ್ತಾನದ ಅಧಿಕಾರಿಗಳಿಗೆ ಉಸ್ತಾದರು ವಿವರಣೆ ನೀಡಿದ್ದು ಹೀಗೆ: ‘ನಾನು ದೇಶವನ್ನು ಬಿಡುತ್ತೇನೆಯೇ ವಿನಾ ಬಂದಿಶ್‌ ಅನ್ನು ಬದಲಿಸುವುದಿಲ್ಲ’. ಆಗ ಭಾರತಕ್ಕೆ ಮರಳಿದ ಉಸ್ತಾದರು ಕೊನೆಯವರೆಗೂ ಭಾರತದಲ್ಲಿಯೇ ಉಳಿದರು. ನಮ್ಮ ಕಲಾವಿದರು ಸಂಗೀತವನ್ನು ಆರಾಧಿಸಿದ ಬಗೆಯಿದು.

ಇಂಥ ಇನ್ನೂ ಕೆಲವು ಉದಾಹರಣೆಗಳ ಪಟ್ಟಿ ಇಲ್ಲಿದೆ. ವಿಜಯಪುರದ ದೊರೆ ಜಗದ್ಗುರು ಇಬ್ರಾಹಿಂ ಆದಿಲ್ ಷಾನು ಗಣಪತಿ, ಸರಸ್ವತಿ ಮೊದಲಾದ ದೇವತೆಗಳ ಸ್ತುತಿಪರ ಗೀತೆಗಳನ್ನು ರಚಿಸಿದ್ದಾನೆ. ಭೂಗಂಧರ್ವರೆಂದೇ ಖ್ಯಾತಿವೆತ್ತ ಉಸ್ತಾದ್‌ ರೆಹಮತ್‌ ಖಾನರು ಬಹಳಷ್ಟು ವರ್ಷಗಳ ಕಾಲ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ವಾಸವಾಗಿದ್ದರು. ಶಾಹೂ ಮಹಾರಾಜರ ಆಸ್ಥಾನದಲ್ಲಿದ್ದ ಉಸ್ತಾದ್‌ ಅಲ್ಲಾದಿಯಾ ಖಾನರು ತಾವು ಶಾಂಡಿಲ್ಯ ಗೋತ್ರದವರೆಂದು ಹೇಳಿಕೊಳ್ಳುತ್ತಿದ್ದರು ಮತ್ತು ಹಿಂದೂ ದೇವತೆಗಳನ್ನು ಸ್ತುತಿಸುವ ಅನೇಕ ಬಂದಿಶ್‌ಗಳು ಅವರ ಭಂಡಾರದಲ್ಲಿದ್ದವು. ಉಸ್ತಾದ್‌ ಬಿಸ್ಮಿಲ್ಲಾಖಾನರನ್ನು ಪಾಕಿಸ್ತಾನಕ್ಕೆ ಬರುವಂತೆ ಆಗ್ರಹಿಸಿದಾಗ, ‘ಕಾಶಿಯಲ್ಲಿನ ಗಂಗೆ ಮತ್ತು ವಿಶ್ವನಾಥ ಪಾಕಿಸ್ತಾನಕ್ಕೆ ಬಂದರೆ ನಾನೂ ಬರುತ್ತೇನೆ’ ಎಂದು ಹೇಳಿದರೆಂಬ ಸಂಗತಿ ಸಂಗೀತ ಲೋಕದಲ್ಲಿ ಜನಜನಿತವಾದುದು. ಕಿರಾಣಾ ಘರಾಣೆಯ ಆದ್ಯಪ್ರವರ್ತಕರಾದ ಉಸ್ತಾದ್‌ ಅಬ್ದುಲ್‌ ಕರೀಂಖಾನರು ಬ್ರಾಹ್ಮಣರಾದ ಸವಾಯಿ ಗಂಧರ್ವರಿಗೆ ನಿರ್ವಂಚನೆಯಿಂದ ಸಂಗೀತ ದೀಕ್ಷೆ ನೀಡಿದರು. ಪಂಡಿತ ಮಲ್ಲಿಕಾರ್ಜುನ ಮನ್ಸೂರರ ಗುರುಗಳಾದ ಉಸ್ತಾದ್‌ ಬುರ್ಜಿಖಾನರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಪ್ರಖ್ಯಾತ ಸರೋದ್‌ ವಾದಕ ಅಮ್ಜದ್‌ ಅಲಿಖಾನರ ತಂದೆ ಉಸ್ತಾದ್‌ ಹಾಫಿಜ್‌ ಖಾನರು, ಮನೆಬಿಟ್ಟು ಓಡಿಬಂದ ಪಂಡಿತ್‌ ಭೀಮಸೇನ ಜೋಶಿಯವರಿಗೆ ಗ್ವಾಲಿಯರ್‌ನಲ್ಲಿ ಆಶ್ರಯ ದೊರಕಿಸಲು ನೆರವಾದುದಲ್ಲದೆ ಅವರಿಗೆ ಅಪೂರ್ವವಾದ ‘ಮಾರವಾ’ ರಾಗವನ್ನು ಕಲಿಸಿಕೊಟ್ಟರು. ಈ ಎಲ್ಲ ಪ್ರಕರಣಗಳಲ್ಲಿ ‘ಜಾತಿ’ ಅಥವಾ ‘ಧರ್ಮಕಟ್ಟಳೆ’ ಎಂಬುದು ಎಂದಿಗೂ ಸಂಗೀತಕ್ಕೆ ಅಡ್ಡಿಯಾಗಲಿಲ್ಲ ಎಂಬುದನ್ನು ಗಮನಿಸಬೇಕು.

ಇಸ್ಲಾಂ ಧರ್ಮದವರು ಮಾತ್ರವಲ್ಲ ಹಿಂದೂಗಳೂ ಮುಸ್ಲಿಂ ಕಲಾವಿದರನ್ನು ಅಷ್ಟೇ ಗೌರವದಿಂದ ನಡೆಸಿಕೊಂಡ ಉದಾಹರಣೆಗಳೂ ನಮ್ಮಲ್ಲಿವೆ. ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಹಿಂದೂಸ್ತಾನಿ ಸಂಗೀತ ಶಿಕ್ಷಣವನ್ನು ಕೊಡಿಸಬೇಕೆಂಬ ಉದ್ದೇಶದಿಂದ ಹಾನಗಲ್ ಕುಮಾರಸ್ವಾಮಿಗಳು ಉಸ್ತಾದ್‌ ವಹೀದ ಖಾನರನ್ನು ಶಿವಯೋಗ ಮಂದಿರಕ್ಕೆ ಕರೆತಂದರು. ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಬಾರಿಗೆ ಸರ್ಕಸ್ ಕಂಪೆನಿಯನ್ನು ಸ್ಥಾಪಿಸಿದ ಮತ್ತು ಕರ್ನಾಟಕದ ಏಕೈಕ ಧೃಪದ ಗಾಯಕ ವಿಜಯಪುರದ ಪಂಡಿತ್‌ ವಿಷ್ಣುಪಂತ ಛತ್ರೆಯವರು ಭೂಗಂಧರ್ವ ರೆಹಮತ್‌ ಖಾನರಿಗೆ ಹಲವಾರು ವರ್ಷ ಆಶ್ರಯವನ್ನು ನೀಡಿದ್ದರು.

ಅನೇಕ ಮುಸ್ಲಿಂ ಗಾಯಕಿಯರೂ ಈ ಸಾಲಿನಲ್ಲಿ ನಿಲ್ಲುತ್ತಾರೆ. ಕರ್ನಾಟಕದ  ಅಮೀರಬಾಯಿ ಕರ್ನಾಟಕಿ, ಗೋಹರಜಾನ್ ಕರ್ನಾಟಕಿ, ರೆಹಮಾನವ್ವ ಕಲಮನಿ, ಜುಬೇದಾಬಾಯಿ ಸವಣೂರ ಇವರೆಲ್ಲ ರಂಗಭೂಮಿಯಲ್ಲಿ ದೇವರನಾಮಗಳನ್ನು ಹಾಡಿದ್ದಾರೆ. ಗೋಹರಜಾನ್ ಕಲ್ಕತ್ತೆವಾಲಿ, ರೋಷನಾರಾ ಬೇಗಂ, ಬೇಗಂ ಅಖ್ತರ್, ಅಸಗರಿಬಾಯಿ ಹಾಗೂ ಸಮಕಾಲೀನ ಸಂಗೀತಗಾರ್ತಿ ಬೇಗಂ ಪರ್ವೀನ್‌ ಸುಲ್ತಾನಾ ಮೊದಲಾದವರೆಲ್ಲ ದೇವತೆಗಳ ಸ್ತುತಿಯನ್ನು ಹಾಡಿ ಜನಾನುರಾಗಿಗಳಾಗಿದ್ದಾರೆ.

ಸಂಗೀತ ಲೋಕದಲ್ಲಿ ಭಾವೈಕ್ಯದ ಪರಂಪರೆ ಈಗಲೂ ನಡೆದುಕೊಂಡು ಬಂದಿದೆ ಎಂಬುದು ಸಂತಸದ ಸಂಗತಿ. ಪ್ರಖ್ಯಾತ ಗಾಯಕರಾದ ರಶೀದ್‌ ಖಾನ್, ಬೆಂಗಳೂರಿನ ಫೈಯಾಜ್‌ ಖಾನ್ ಮೊದಲಾದವರು ಅನೇಕ ದೇವತಾ ಸ್ತುತಿಗಳನ್ನು ಹಾಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ರಂಗಭೂಮಿಯ ಸೇವೆ ಮಾಡುತ್ತಿರುವ  ಗೆಳೆಯ ಝಕೀರ ನದಾಫ ಅವರು ಸವದತ್ತಿಯವರಾಗಿದ್ದು ಎಲ್ಲಮ್ಮನ ಭಕ್ತಿಗೀತೆಗಳ ಹತ್ತಾರು ಧ್ವನಿಸುರುಳಿಗಳಿಗೆ ದನಿಯಾಗಿದ್ದಾರೆ. ಹುಸೇನ ದಾಸರೆಂದೇ ಖ್ಯಾತರಾಗಿರುವ ರಾಯಚೂರಿನ ಹುಸೇನ್‌ಸಾಬ್, ದಾಸರ ಪದಗಳನ್ನು ಈಗಲೂ ಮಠ-ಮಂದಿರಗಳಲ್ಲಿ ಹಾಡುತ್ತಾರೆ. ಸಿನಿಮಾ ಸಂಗೀತದ ಮೊಹಮ್ಮದ್‌ ರಫಿ, ಎ.ಆರ್.ರೆಹಮಾನ್, ಸಲೀಂ-ಸುಲೈಮಾನ್ ಸಹ ಇದೇ ಕಾಯಕವನ್ನು ಮಾಡಿದ್ದಾರೆ. ಯಾರೂ ಇವರೆಲ್ಲರ ವಿರುದ್ಧ ದನಿ ಎತ್ತಿಲ್ಲ ಎಂಬುದು ನಮ್ಮ ಭಾವೈಕ್ಯ ಮತ್ತು ಕಲಾಪ್ರಿಯ ಪರಂಪರೆಗೆ ಸಾಕ್ಷಿಯಾಗಿದೆ.

ಸಂಗೀತ ಲೋಕದ ಭಾವೈಕ್ಯ ಪರಂಪರೆಯನ್ನು ಮುಂದುವರಿಸಬೇಕಾಗಿದೆ. ಜಾತಿಯ ದುರ್ಲೇಪವಾದರೆ ಸಂಗೀತ ಲೋಕವೂ ಕೆಟ್ಟು ಹೋಗುವುದರಲ್ಲಿ ಎರಡು ಮಾತಿಲ್ಲ. ಜಾತಿಬಡುಕತನವನ್ನು ದೂರವಿಟ್ಟು ಸಂಗೀತ ಲೋಕವನ್ನು ಪವಿತ್ರವಾಗಿಯೇ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT