ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸವಾಳ ಗಿಡದಲ್ಲಿ ಮಲ್ಲಿಗೆ!

Last Updated 31 ಮಾರ್ಚ್ 2017, 12:22 IST
ಅಕ್ಷರ ಗಾತ್ರ

ಮನಸು ಮಲ್ಲಿಗೆ
ನಿರ್ಮಾಪಕರು: ರಾಕ್‌ಲೈನ್‌ ವೆಂಕಟೇಶ್‌, ಆಕಾಶ್‌ ಚಾವ್ಲಾ
ನಿರ್ದೇಶನ: ಎಸ್‌. ನಾರಾಯಣ್
ತಾರಾಗಣ: ನಿಶಾಂತ್‌, ರಿಂಕು ರಾಜಗುರು, ಅರವಿಂದ್‌

ಮರಾಠಿಯಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಭಾರೀ ಯಶಸ್ಸು ಗಳಿಸಿದ್ದ ‘ಸೈರಾಟ್‌’ ಸಿನಿಮಾವನ್ನು ಎಸ್‌. ನಾರಾಯಣ್‌ ‘ಮನಸು ಮಲ್ಲಿಗೆ’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ಪಕ್ಕದ ಮನೆಯಿಂದ ಮಲ್ಲಿಗೆ ಬಳ್ಳಿ ತಂದು ನೆಟ್ಟು, ಪೋಷಿಸಿ, ಚಿಗುರೊಡೆಯುವವರೆಗೆ ಪಾಲಿಸಿ, ಎಳೆಯ ಎಲೆಗಳ ಮಧ್ಯದಲ್ಲಿ ಮಲ್ಲಿಗೆ ಮೊಗ್ಗರಳುವ ಸಹಜ ವಿಕಾಸವನ್ನು ಕಾಯುವ ಸಂಯಮ ತುಸು ತ್ರಾಸದಾಯಕವಾದದ್ದು. ಹಾಗಾಗಿ ಪಕ್ಕದ ಮನೆಯಂಗಳದ ಬಳ್ಳಿಯಲ್ಲಿ ಅರಳಿದ್ದ ಹೂವನ್ನು ಹಾಗೆಯೇ ಕಿತ್ತು ತಂದು ಕಸಿಮಾಡಲು ಪ್ರಯತ್ನಿಸಿದ್ದಾರೆ ನಾರಾಯಣ್‌.

ಕಿತ್ತು ತಂದ ಹೂವಿನ ರೂಪು ಮೂಲದ ಹಾಗೆಯೇ ಇದೆ.  ಆದರೆ ಸ್ಥಳಾಂತರದ ಸರಭರದಲ್ಲಿ ಆ ಹೂವಿನ ಪರಿಮಳ ಸೋರಿಹೋಗಿದೆ. ಅಲ್ಲಲ್ಲಿ ಕೊಂಚ ಜಜ್ಜಿ ಘಾಸಿಯಾಗಿದೆ. ಇನ್ನು ಕೆಲವು ಕಡೆ ಕೃತಕತೆಯ ಸೋಂಕು ತಗುಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಿತ್ತು ತಂದ ಮಲ್ಲಿಗೆಯನ್ನು ಅವಸರದಲ್ಲಿ ತಮ್ಮ ಮನೆಯಂಗಳದ ದಾಸವಾಳ ಗಿಡಕ್ಕೆ ಕಸಿ ಮಾಡಿಬಿಟ್ಟಿರುವಂತಿದೆ.

ದಾಸವಾಳ ಗಿಡಕ್ಕೆ ಮಲ್ಲಿಗೆ ಕಸಿ ಮಾಡಿದರೆ ಹೇಗಿರುತ್ತದೆಯೋ ಹಾಗಿದೆ ‘ಮನಸು ಮಲ್ಲಿಗೆ’. ಹಾಗಾಗಿ ಬಳ್ಳಿ ಬೇರಿಳಿಸಿದ ಮಣ್ಣು, ಹೂವರಳಿಸಿದ ಬಿಸಿಲು, ಗಂಧ ಹರಡುವ ಗಾಳಿ ಎಲ್ಲಿಯದು ಎಂದೆಲ್ಲ ಕೇಳುವಂತಿಲ್ಲ.

ಕಥೆ, ಚಿತ್ರಕಥೆಯೊಟ್ಟಿಗೆ ಹಾಡುಗಳ  ವಿಷಯದಲ್ಲಿಯೂ ಮೂಲಕ್ಕೆ ನಿಷ್ಠರಾಗಿದ್ದಾರೆ ನಿರ್ದೇಶಕರು. ಒಂದು ಹಾಡು ಬಿಟ್ಟರೆ ಸಿನಿಮಾದಲ್ಲಿನ ಎಲ್ಲ ಹಾಡುಗಳಿಗೂ ಮೂಲ ಸಿನಿಮಾದಲ್ಲಿ ಅಜಯ್‌–ಅತುಲ್‌ ಅವರ ಸಂಯೋಜನೆಯ ಟ್ಯೂನ್‌ಗಳಿಗೇ ಪದ ಹೊಸೆಯಲಾಗಿದೆ. ಎಸ್‌. ನಾರಾಯಣ್‌ ಸಂಯೋಜಿಸಿರುವ ಮತ್ತೊಂದು ಹಾಡು ಅವರದೇ ಹಳೆಯ ಸಿನಿಮಾವೊಂದರ ಹಾಡನ್ನು ನೆನಪಿಸುತ್ತದೆ.

ಮೀನುಗಾರನ ಮಗನೊಬ್ಬ ಊರಿನ ಶ್ರೀಮಂತ ಪಟೇಲನ ಮಗಳನ್ನು ಪ್ರೇಮಿಸಿ ಅದರಿಂದ ಆಗುವ ದುರಂತಗಳನ್ನು ಹೇಳುವ ಕಥೆ ‘ಮನಸು ಮಲ್ಲಿಗೆ’ಯದ್ದು. ಪರಶು ಪಟೇಲರ ಮಗಳು ಸಂಜನಾಳನ್ನು ಗುಟ್ಟಾಗಿ ಪ್ರೇಮಿಸುತ್ತಿರುತ್ತಾನೆ. ಇದು ಅವಳಿಗೂ ತಿಳಿದು ಅವಳೂ ಒಪ್ಪಿಕೊಳ್ಳುತ್ತಾಳೆ. ಅಲ್ಲಿಂದ ದುರಂತಗಳ ಸರಮಾಲೆ ಶುರು.



ಮೊದಲರ್ಧ ಹರೆಯದ ಹಸಿ ಕನವರಿಕೆಗಳು, ಹುಡುಗಾಟಗಳಲ್ಲಿ ಸಾಗುವ ಪ್ರೇಮಕಥನ ದ್ವಿತೀಯಾರ್ಧದಲ್ಲಿ ಜಾತಿ, ಪ್ರತಿಷ್ಠೆ, ಅಂತಸ್ತುಗಳ ಸಂಘರ್ಷದಲ್ಲಿ ನಲುಗುತ್ತದೆ. ಅಂತಸ್ತೇ ಮುಖ್ಯವಾದ ಹಿರಿಯರಿಂದ ತಪ್ಪಿಸಿಕೊಂಡು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುವ ಜೋಡಿಯ ನಡುವೆ ಅನುಮಾನದ ಬಿರುಕು,ಸಂಕಟದ ಬದುಕು, ಅವುಗಳನ್ನೆಲ್ಲ ಮೆಟ್ಟಿನಿಂತು ಗೆಲ್ಲುವ ಪ್ರೀತಿಯ ಶಕ್ತಿ ಎಲ್ಲವೂ ಈ ಕಥನ ಒಳಗೊಳ್ಳುತ್ತದೆ. ಕೊನೆಗೂ ದುರಂತದಲ್ಲಿಯೇ ಕೊನೆಗೊಳ್ಳುತ್ತದೆ.

ಈ ಸಿನಿಮಾದ ಕಥೆ ತೀರಾ ಹೊಸದೇನಲ್ಲ. ಜಾತಿಯನ್ನು ಮೀರಿ ಪ್ರೇಮಿಸಿ ಬದುಕು ಕಟ್ಟಿಕೊಳ್ಳುವ ಪ್ರೇಮಿಗಳು, ಮರ್ಯಾದಾ ಹತ್ಯೆಗಳ ಕಥೆಗಳು ಹಿಂದೆಯೂ ಸಾಕಷ್ಟು ಬಂದಿವೆ. ಆದರೆ ಮರಾಠಿಯ ‘ಸೈರಾಟ್‌’ ಜನರಿಗೆ ಇಷ್ಟವಾಗಿದ್ದು ಆ ಸಿನಿಮಾದಲ್ಲಿ ಅಂತರ್ವಾಹಿನಿಯಂತೆ ಪ್ರವಹಿಸಿದ್ದ ಜೀವಂತಿಕೆಯಿಂದ.

ನಿರೂಪಣೆಯ ತಾಜಾತನ, ತಾಂತ್ರಿಕ ಗಟ್ಟಿತನ, ಕಲಾವಿದರ ಅಭಿನಯ, ಪ್ರಾದೇಶಿಕತೆಯ ಸೊಗಡು ಹೀಗೆ ಹಲವು ಸೆಲೆಗಳು ‘ಸೈರಾಟ್‌’ಗೆ ಜೀವತುಂಬಿದ್ದವು. ಆದರೆ ಅದು ‘ಮನಸು ಮಲ್ಲಿಗೆ’ ಆಗುವ ಹೊತ್ತಿಗೆ ಆ ಸೆಲೆಗಳೆಲ್ಲವೂ ಮಾಯವಾಗಿವೆ.

ಸಂಭಾಷಣೆ ಕನ್ನಡದಲ್ಲಿದೆ ಎನ್ನುವುದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕನ್ನಡತನ ಹುಡುಕಿ ನೋಡಿದರೂ ಕಾಣುವುದಿಲ್ಲ. ಹಾಡುಗಳು, ಸಂಭಾಷಣೆಗಳು, ಪ್ರಾದೇಶಿಕ ಪರಿಸರ ಎಲ್ಲದರಲ್ಲಿಯೂ ಇದು ಮರಾಠಿ ಮಲ್ಲಿಗೆಯೇ.

‘ಸೈರಾಟ್‌’ನಲ್ಲಿ ನಾಯಕಿಯಾಗಿದ್ದ ರಿಂಕು ರಾಜಗುರು ಕನ್ನಡದಲ್ಲಿಯೂ ಅದೇ ಪಾತ್ರ ನಿರ್ವಹಿಸಿದ್ದಾರೆ. ಬಟ್ಟಲುಗಣ್ಣ ಚಲನೆಯಲ್ಲಿಯೇ ಭಾವವನ್ನು ದಾಟಿಸಬಲ್ಲ ಪ್ರತಿಭಾವಂತೆಯಾದರೂ ಅವರ ಕನ್ನಡವನ್ನು ಕೇಳಿಸಿಕೊಳ್ಳುವುದು ಕಷ್ಟ ಕಷ್ಟ. ನಿಶಾಂತ್‌ ಅವರ ಮುಖದಲ್ಲಿನ ಎಳಸುತನ ಅಭಿನಯದಲ್ಲಿಯೂ ಉಳಿದುಕೊಂಡಿದೆ.

ಮೊದಲರ್ಧದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪುಟಾಣಿ ಅಚಿಂತ್ಯ ಚಿನಕುರಳಿತನದಿಂದ ನೆನಪಿನಲ್ಲುಳಿಯುತ್ತಾನೆ. ಅರವಿಂದ್‌, ತಾಜಾನಿ ಗಲ್‌ಗುಂಡೆ ಅವರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಮನೋಹರ್‌ ಜೋಷಿ ಛಾಯಾಗ್ರಹಣವಾಗಲಿ, ಶ್ರೀಕಾಂತ್‌ ಸಂಕಲನವಾಗಲಿ ಚಿತ್ರಕ್ಕೆ ಹೆಚ್ಚಿನದೇನನ್ನೂ ಸೇರಿಸುವುದಕ್ಕೆ ಶಕ್ತವಾಗಿಲ್ಲ. ಒಟ್ಟಾರೆ ಮೂಲ ಸಿನಿಮಾವನ್ನು ಪೂರ್ತಿ ಮರೆತು ನೋಡಿದರೂ ‘ಮನಸು ಮಲ್ಲಿಗೆ’ಯನ್ನು ಅಪ್ಪಟ ಕನ್ನಡದ ಚಿತ್ರವಾಗಿ ಕಲ್ಪಿಸಿಕೊಂಡು ನೋಡುವುದು ಕಷ್ಟಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT