ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಸ್ವರಾಸಕ್ತಿಗೆ ಬೆರಗಾಗಿದ್ದ ಮಲ್ಲಿಕಾರ್ಜುನ ಮನಸೂರ

ಕಲಾಯಾತ್ರೆ
Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ನೀನು ಪುಟ್ಟ ಮಗುವಾಗಿದ್ದಾಗ ನಾನು ಹಾಡಿದರಷ್ಟೇ ನಿದ್ದೆ ಮಾಡುತ್ತಿದ್ದೆ. ನಾನು ಗಂಟೆಗಟ್ಟಲೆ ಹಾಡಿಕೊಳ್ಳುತ್ತಿರುವಾಗ ನೀನು ಕಿಲಕಿಲನೆ ನಗುತ್ತಾ ಆಡಿಕೊಳ್ಳುತ್ತಿದ್ದೆ. ನನಗೆ ಆಶ್ಚರ್ಯ, ಈ ಪುಟ್ಟ ಹುಡುಗಿಗೆ ಅದೆಷ್ಟು ಸಂಗೀತಾಸಕ್ತಿ! ಸುಸ್ತಾಗಿ ಹಾಡು ನಿಲ್ಲಿಸಿದರೆ ನಿದ್ದೆಯಲ್ಲೂ ನೀನು ಅಳುತ್ತಿದ್ದೆ. ಹೀಗಾಗಿ ರೇಡಿಯೊ ಹಚ್ಚಿ ನಿನ್ನನ್ನು ಸಂತೈಸುತ್ತಿದ್ದೆ.

ರೇಡಿಯೊ ಹಾಡು ಮುಗಿದಾಗ ಮತ್ತದೇ ಅಳು. ಕಡೆಗೆ ನಿನ್ನನ್ನು ಹಾಡಿ ಪಾಡಿ ಮಲಗಿಸಲು ಹುಡುಗಿಯೊಂದನ್ನು ಗೊತ್ತು ಮಾಡಿದ್ದೆ...! ಮಗುವಾಗಿದ್ದಾಗಲೇ ನೀನು ನನ್ನೊಳಗೆ ಭರವಸೆ ಮೂಡಿಸಿದ್ದೆ...’

***
ನನ್ನಪ್ಪ ಪಂಡಿತ ಮಲ್ಲಿಕಾರ್ಜುನ ಮನಸೂರರು ನನ್ನ ಬಗ್ಗೆ ಹೇಳುತ್ತಿದ್ದ ಮಾತುಗಳಿವು. ನಾನು ಮಗುವಾಗಿದ್ದಾಗ ನನ್ನೊಳಗಿದ್ದ ಸ್ವರಾಸಕ್ತಿಗೆ ಅಪ್ಪ ಬೆರಗಾಗಿದ್ದರಂತೆ. ನನಗೆ ತಿಳಿವಳಿಕೆ ಬರುವ ಹೊತ್ತಿಗಾಗಲೇ ನಾನು ಅಪ್ಪನ ಹಾಡಿಗೆ ತಂಬೂರಿ ಮೀಟುತ್ತಾ ಕುಳಿತಿರುತ್ತಿದ್ದೆ. ಪ್ರತಿದಿನ ಮುಂಜಾನೆ ಅಪ್ಪ ಸ್ವರ ಆರಂಭಿಸಿದರೆ ಸಾಕು, ನಾನು ಪಿಳಪಿಳನೆ ಕಣ್ಣುಬಿಟ್ಟುಬಿಡುತ್ತಿದ್ದೆ. ಇದನ್ನು ನೋಡಿದ ಅಪ್ಪಾ ‘ಅವ್ವ ಎದ್ದೆಯಾ, ಬಾ’ ಎಂದೊಡನೆ ಕಣ್ಣಿಗೆ ನೀರು ಚಿಮುಕಿಸಿಕೊಂಡು ಅಪ್ಪನ ಹಾಡಿಗೆ ಜೊತೆಯಾಗುತ್ತಿದ್ದೆ.

ಒಮ್ಮೆ ಕೇಳಿದೊಡನೆ ಸ್ವರಸ್ಥಾನ ತಪ್ಪದಂತೆ ಹಾಡಿ ತೋರಿಸುತ್ತಿದ್ದೆ. ಅಪ್ಪ ‘ಭೇಷ್‌ ಮಗಾ’ ಎನ್ನುತ್ತಿದ್ದರು. ನನ್ನ ಧ್ವನಿ ಅಪ್ಪನ ಮನಸ್ಸು ಮೀಟಿತ್ತು. ನನ್ನ ಹಾಡು ಕೇಳಿದಾಗ ಒಮ್ಮೆಮ್ಮೆ ಅಪ್ಪನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಮಗಳ ಹಾಡಿಗೆ ಅಪ್ಪನ ಮನಸ್ಸು ಕರಗಿ ನೀರಾಗುತ್ತಿತ್ತು. ಇದನ್ನು ಅಪ್ಪ ‘ನನ್ನ ರಸಯಾತ್ರೆ’ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.

‘ನಿನಗೆ ದೇವರು ಛಲೋ ಧ್ವನಿ ಕೊಟ್ಟಾನವ್ವ’ ಎನ್ನುತ್ತಿದ್ದ ಅಪ್ಪ ನಿರ್ವಂಚನೆಯಿಂದ ತಮ್ಮೊಳಗಿನ ಸಂಗೀತ ದಾನ ಮಾಡಿದರು. ತಮ್ಮ ತಾಯಿಯ ಹೆಸರನ್ನೇ ನನಗೂ ಇಟ್ಟಿದ್ದ ಅವರು ಪ್ರೀತಿಯಿಂದ ‘ಅವ್ವಾ’ ಎಂತಲೇ ಕರೆಯುತ್ತಿದ್ದರು. ಈ ಮಗಳಲ್ಲಿ ಅವರು ತಾಯಿಯನ್ನೂ ಕಂಡಿದ್ದರು.

ಅಡೆತಡೆ ಮೀಟಿ...
ನಾನು ಸಣ್ಣವಳಿದ್ದಾಗ ಹೆಣ್ಣುಮಗಳೊಬ್ಬಳು ಸಂಗೀತ ಕಲಿಯುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಅಪ್ಪನಿಗೆ ಏಳು ಮಂದಿ ಹೆಣ್ಣುಮಕ್ಕಳು. ಒಬ್ಬನೇ ಮಗ. ಮನೆ ತುಂಬೆಲ್ಲ ಹೆಣ್ಣು ಮಕ್ಕಳೇ ಇದ್ದ ಕಾರಣ ಅವ್ವ ಗಂಗಮ್ಮನಿಗೆ ಸದಾ ಮಕ್ಕಳ ಮದುವೆ ಭಯವೇ ಕಾಡುತ್ತಿತ್ತು. ಹೀಗಾಗಿ ಅವ್ವನಿಗೆ ನಾನು ಸಂಗೀತ ಕಲಿಯುವುದು ಇಷ್ಟವಿರಲಿಲ್ಲ.

ಮದುವೆ ಮಾಡಿ ಒಬ್ಬೊಬ್ಬರಿಗೆ ಒಂದೊಂದು ದಾರಿ ತೋರುವುದೇ ಅವ್ವನ ಮಹದಾಸೆಯಾಗಿತ್ತು. ಆದರೆ ಅಪ್ಪ ಹಾಗಿರಲಿಲ್ಲ. ನನ್ನ ಸಂಗೀತಾಸಕ್ತಿ, ತನ್ಮಯತೆ, ಕೇಳ್ಮೆ, ಧ್ವನಿ, ಸ್ವರ ಹಚ್ಚುತ್ತಿದ್ದ ಪರಿಗೆ ಕರಗಿದ್ದ ಅಪ್ಪ ನನ್ನಿಂದ ಹಾಡಿಸುತ್ತಿದ್ದರು. ಅಪ್ಪ ಸಂಗೀತ ಕಲಿಯುವ ಕಾಲಕ್ಕೂ ಇಂಥದ್ದೇ ಅಡೆತಡೆಗಳಿದ್ದವಂತೆ.

ಅಜ್ಜ ಭೀಮರಾಯಪ್ಪ ಮನಸೂರಿನ ಗೌಡರಾಗಿದ್ದರು. ಮಗ ಹಾಡುವುದು ಅವರಿಗೆ ಇಷ್ಟವಿರಲಿಲ್ಲವಂತೆ. ವಿದ್ಯೆ ಕಲಿಯಲಿ ಎಂದು ಶಾಲೆಗೆ ಹಚ್ಚಿದರೆ ಅಪ್ಪ ಮನೆ ಬಿಟ್ಟು ಓಡಿ ಹೋಗಿ ಸಂಗೀತ ಕಲಿಯುತ್ತಿದ್ದರಂತೆ, ನಾಟಕಗಳಲ್ಲಿ ಹಾಡುತ್ತಿದ್ದರಂತೆ. ಇಷ್ಟೆಲ್ಲಾ ಅಡ್ಡಿ ಎದುರಿಸಿದ್ದ ಅಪ್ಪ, ನನಗೆ ಬಂದ ಅಡ್ಡಿ ಆತಂಕಗಳಿಗೆ ಹೆದರದೆ ಸಂಗೀತ ಕಲಿಸಿಕೊಟ್ಟರು.

ಹಾವು...
ಆ ಘಟನೆ ನೆನೆದರೆ ಇಂದಿಗೂ ಮೈನಡುಗುತ್ತದೆ. ಎಂಟು ಮಕ್ಕಳು, ಅಪ್ಪ, ಅವ್ವ ಎಲ್ಲರೂ ಮನೆಯಲ್ಲಿ ಮಲಗಿದ್ದೆವು. ನಾನು ನನ್ನ ಒಂದೂವರೆ ವರ್ಷದ ತಂಗಿ ಗಿರಿಜೆಯನ್ನು ಜೊತೆಯಲ್ಲಿ ಮಲಗಿಸಿಕೊಂಡು ಮಲಗಿದ್ದೆ. ಅಪ್ಪನಿಗೆ ಏನೋ ಬಡಿದಂತಾಯಿತಂತೆ. ಲಾಟೀನು ಹಚ್ಚಿ ನೋಡಿದರೆ ಹಾವು!

ಅಪ್ಪ ಮೆಲ್ಲಗೆ ‘ಅವ್ವಾ’ ಎಂದರು. ‘ಏನಪ್ಪಾ’ ಎಂದೆ. ‘ಹೆದರಬೇಡ ನಿನ್ನ ಕಾಲ ಮೇಲೆ ಹಾವಿನ ಬಾಲವಿದೆ’ ಎಂದೊಡಗೆ ನನ್ನ ಮೈ ನಡುಗಿತು. ದೇಹ ಅದುರಿದೊಡನೆ ಹಾವು ಬಾಲ ತೆಗೆಯಿತು. ಅಪ್ಪ ಒಮ್ಮೆಲೆ ಎಲ್ಲ ಮಕ್ಕಳನ್ನು ಮೂಲೆಗೆ ಎಳೆದುತಂದರು.

ತೊದಲು ಮಾತುಗಳನ್ನಾಡುತ್ತಿದ್ದ ನನ್ನ ತಂಗಿ ಗಿರಿಜೆ ಅದನ್ನು ನೋಡಿ ‘ಹಾ ಹಾವ’ ಎಂದಳು. ನಾನು ಇನ್ನೊಂದು ಕೋಣೆಗೆ ಓಡಿ ಹೋಗಿ ಒನಕೆ ತರುವಷ್ಟರಲ್ಲಿ ಹಾವು ನಾಪತ್ತೆಯಾಗಿತ್ತು. ಬೆಳಿಗ್ಗೆ ಅಪ್ಪಪಕ್ಕದವರ ಜೊತೆ ಎಲ್ಲ ಕಡೆ ಹುಡುಕಿದೆವು. ಹಾವು ಸಿಗಲಿಲ್ಲ.

ಈ ಘಟನೆಯಿಂದ ನಾವೆಲ್ಲರೂ ಭೀತರಾಗಿದ್ದೆವು. ಅಪ್ಪ ಟಾಂಗಾದಲ್ಲಿ ಮುರುಘಾಮಠದತ್ತ ಹೊರಟರು. ಮೃತ್ಯುಂಜಯ ಶ್ರೀಗಳ ಬಳಿ ಹೋಗಿ ಕಣ್ಣೀರು ಹಾಕುತ್ತಾ ಘಟನೆ ವಿವರಿಸಿದರು. ಶ್ರೀಗಳು ‘ಹೆದರಬೇಡಿ. ಅದು ಹಾವಲ್ಲ, ಸಾಕ್ಷಾತ್‌ ಶಿವಯೋಗಿಯೇ ಬಂದಿದ್ದಾನೆ. ಈ ಘಟನೆಯಿಂದ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಸಮಾಧಾನ ಮಾಡಿದರು.

ಶ್ರೀಗಳು ಹೇಳಿದಂತೆ ನಮಗೆ ಒಳ್ಳೆಯದೇ ಆಯಿತು. ಅವ್ವನಿಗೆ ಬಹಳ ಆರಾಮ ಇರಲಿಲ್ಲ. ಬದುಕು­ವುದೇ ಕಷ್ಟ ಎನ್ನುವಂತಾಗಿತ್ತು. ಅಮ್ಮ ಆರಾಮಾದರು. ಅಪ್ಪ ಆಕಾಶವಾಣಿಯಲ್ಲಿ ಸಲಹಾಗಾರರಾಗಿ ನೇಮಕಗೊಂಡರು.

ಅಪ್ಪ ಶಿವಯೋಗಿಗಳ ಅಪ್ರತಿಮ ಭಕ್ತರು. ಮನೆಯಲ್ಲಿ ಪ್ರತಿದಿನ ರಾತ್ರಿ ಮಕ್ಕಳೆಲ್ಲರೂ ಶಿವಯೋಗಿಗಳ ವಚನ ಹೇಳಿದ ನಂತರವೇ ಊಟ. ಶಿವಯೋಗಿಗಳೇ ನಮ್ಮನ್ನೆಲ್ಲ ಹಾವಿನಿಂದ ರಕ್ಷಿಸಿದರು ಎಂದು ಅಪ್ಪ ಆಗಾಗ ಹೇಳುತ್ತಿದ್ದರು.

ಮದುವೆ...
ನಾನು 17 ವರ್ಷಕ್ಕೆಲ್ಲಾ ಹಸೆಮಣೆ ಏರಿದ್ದೆ. ಡಿ.ಎಸ್‌.ಕರ್ಕಿ ಅವರ ‘ತಾಳ ಲಯದಲಿ ಬಾಳ ನಡೆಸು ದೇವ’ ಹಾಡು ಕೇಳಿ ನನ್ನವರು ನನ್ನನ್ನು ಒಪ್ಪಿ ವರಿಸಿದರು. ಪತಿ ಪ್ರೊ.ಎಂ.ಸಿ.ಕೊಡ್ಲಿ ಅವರ ಪ್ರೀತಿ ಹಾಗೂ ಪ್ರೋತ್ಸಾಹದಿಂದ ನಾನು ವಿದುಷಿ ನೀಲಾ ಎಂ.ಕೊಡ್ಲಿಯಾಗಿ ರೂಪುಗೊಳ್ಳಲು ಸಾಧ್ಯ­ವಾಯಿತು.

ಮದುವೆಯಾಗಿ, ಎರಡು ಮಕ್ಕಳಾದ ಮೇಲೂ ನನ್ನ ಸ್ವರಯಾತ್ರೆ ನಿರಂತರವಾಗಿ ನಡೆದಿತ್ತು. ಅಪ್ಪ, ಮನೆಗೇ ಬಂದು ನನಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅಪ್ಪನ ಪಾಠ, ಪತಿಯ ಪ್ರೀತಿ, ಪ್ರೋತ್ಸಾಹದ ಪರಿಯಲ್ಲಿ ನನ್ನ ಮುಂದೆ ಹೊಸ ಲೋಕವೇ ತೆರೆದುಕೊಂಡಿತ್ತು.

ಮಾವ ಚನ್ನಬಸಪ್ಪ ಅವರು ನನ್ನ ಅಭಿಮಾನಿಯೇ ಆಗಿಬಿಟ್ಟಿದ್ದರು. ಆಕಾಶವಾಣಿಯಲ್ಲಿ ನನ್ನ ಹಾಡು ಕೇಳಿ ‘ನನ್ನ ಸೊಸೆ ಹಾಡುತ್ತಿದ್ದಾಳೆ’ ಎಂದು ಸಂತಸಪಡುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗಲೂ ರೇಡಿಯೊ ತರಿಸಿಕೊಂಡು ಕೇಳುತ್ತಿದ್ದರು.

ಸಂಗೀತ ರತ್ನ...
‘ಸಂಗೀತ ರತ್ನ’ ಕೋರ್ಸ್‌ ಕಲಿಯುವಾಗ ಆಶ್ಚರ್ಯವೊಂದು ನಡೆದಿತ್ತು. ಆಯ್ಕೆಯ ಪ್ರಕ್ರಿಯೆಯಲ್ಲಿ ನನ್ನ ಗಾಯನ ಕೇಳಿದ ತೀರ್ಪುಗಾರರು ಅಪ್ಪನ ಮುಂದೆ ನನ್ನ ಬಗ್ಗೆ ಹೇಳಿದ್ದರಂತೆ. ‘ನೀಲಾ ಕೊಡ್ಲಿ ಎನ್ನುವ ಹುಡುಗಿಯೊಬ್ಬಳು ಜೈಪುರ ಘರಾಣೆಯನ್ನು ನಿಖರವಾಗಿ ಹಾಡುತ್ತಾಳೆ’. ಇದಕ್ಕೆ ಅಪ್ಪ ದೊಡ್ಡದಾಗ ನಕ್ಕು ‘ಆಕೆ ನನ್ನ ಮಗಳು’ ಎಂದು ಹೇಳಿದಾಗ ಎಲ್ಲರೂ ಆಶ್ಚರ್ಯ ಪಟ್ಟಿದ್ದರಂತೆ. ‘ಸಂಗೀತರತ್ನ’ ಆರು ವರ್ಷದ ಕೋರ್ಸ್‌. ಆದರೆ ನನ್ನನ್ನು ಮೂರನೇ ವರ್ಷಕ್ಕೆ ದಾಖಲು ಮಾಡಿಕೊಂಡರು.

ಲಘು ಸಂಗೀತ ಹಾಡುತ್ತಿದ್ದ ನಾನು ಕ್ರಮೇಣ ಜೈಪುರ ಘರಾಣೆಯ ಶುದ್ಧ ಶಾಸ್ತ್ರೀಯ ಸಂಗೀತದತ್ತ ಹೊರಳಿದೆ. ಮೊದಲ ಯತ್ನದಲ್ಲೇ ಆಕಾಶವಾಣಿಯಲ್ಲಿ ‘ಬಿ ಹೈ’ ಕಲಾವಿದೆಯಾದೆ. ನೂರಾರು ಕಛೇರಿಗಳು, ರೆಕಾರ್ಡಿಂಗ್‌ಗಳ ನಡುವೆ ಮುಳುಗಿದೆ. ಪಂ. ಪುಟ್ಟರಾಜ ಗವಾಯಿಗಳು ನನ್ನ ಗಾಯನ ಕೇಳಿ ಬೆನ್ನು ತಟ್ಟಿದರು. ಕಲಾಶ್ರೀ, ಸ್ತ್ರೀಕುಲ ಕಣ್ಮಣಿ ಮುಂತಾದ ಬಿರುದು ಬಂದವು.

ನನಗೆ ಇಬ್ಬರು ಪುತ್ರರು. ಇಬ್ಬರೂ ಅವರವರ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ನನಗೆ 72 ವರ್ಷ ವಯಸ್ಸು. ಪತಿಗೆ 82. ಈಗಲೂ ನಾನು ಸಣ್ಣ ಹುಡುಗಿಯಂತೆ ಸಂಗೀತಾಭ್ಯಾಸ ಮಾಡುತ್ತೇನೆ. ಸಂಗೀತ, ಶಿಸ್ತಿನ ಜೀವನ ನಮ್ಮ ಕೈಹಿಡಿದು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT