ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ಖಾಸಗೀಕರಣ, ನಷ್ಟ ಸಾಮಾಜೀಕರಣ

Last Updated 1 ಏಪ್ರಿಲ್ 2017, 14:45 IST
ಅಕ್ಷರ ಗಾತ್ರ

ಆರೋಗ್ಯ, ಔಷಧಗಳ ವಿಚಾರದಲ್ಲಿ ಬೌದ್ಧಿಕ ಹಕ್ಕು ಸ್ಥಾಪಿಸಲು ಇತ್ತೀಚಿನ ದಿನಗಳಲ್ಲಿ ಪೈಪೋಟಿ ಹೆಚ್ಚುತ್ತಿವೆ. ಖಾಸಗಿ ಕಂಪೆನಿಗಳು, ಸ್ಥಳೀಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಹಕ್ಕನ್ನು ಸ್ಥಾಪಿಸಲು ಪೇಟೆಂಟ್, ಟ್ರೇಡ್‌ಮಾರ್ಕ್‌ಗಳನ್ನು ಬಳಸಿ ತಮ್ಮ ಹಣಬಲದಿಂದ ಅಬ್ಬರದ ಜಾಹೀರಾತುಗಳ ಮೂಲಕ ಭೂಮಿಯ ಮೇಲಿನ ಜೈವಿಕ ಮತ್ತು ಅಜೈವಿಕ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಪೈಪೋಟಿಯಲ್ಲಿ ನಿರತವಾಗಿವೆ.

ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ತಮ್ಮ ಅಸ್ತಿತ್ವಕ್ಕೆ ಮತ್ತು ಬಂಡವಾಳಕ್ಕಾಗಿ ಅಮೆರಿಕದ ಮಾದರಿಯಂತೆ ಖಾಸಗಿ ಕಂಪೆನಿಗಳತ್ತ ವಾಲುವುದು ಸಾಮಾನ್ಯವಾಗಿದೆ. ಅಮೆರಿಕದ ಬೆ-ಡೋಲ್ ಅಕ್ಟ್ (Bayh-Dole Act)  ಪ್ರಕಾರ ಪ್ರಪಂಚದಲ್ಲಿ ಯಾವುದಾದರೂ ಮನುಷ್ಯ ಮಾಡಿದ್ದು ಬೌದ್ಧಿಕಹಕ್ಕಿಗೆ ಯೋಗ್ಯವೇ (Anything under the sun that is made by man can be patented).

ಮನುಷ್ಯ ಮಾಡಿದ್ದು ಎಂದರೆ ‘ಆತ ಪ್ರಕೃತಿಯಲ್ಲಿ ಕಂಡುಕೊಂಡದ್ದು, ಅವುಗಳ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದು, ಇದ್ದುದ್ದನ್ನೇ ಶುದ್ಧೀಕರಿಸಿದ್ದು’ ಎಂದು ಗ್ರಹಿಸುವುದೇ ಸರಿಯಾಗಿದೆ. ಈಗ ಜಗತ್ತಿನಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಬೌದ್ಧಿಕ ಹಕ್ಕಿನ ಸಮರ ಕ್ರಿಸ್ಪರ್ ಕ್ಯಾಸ್ 9 (crisper cas9) ಎಂದು ಕರೆಯುವ ಸೂಕ್ಷ್ಮಜೀವಿಗಳಲ್ಲಿ ವಿಜ್ಞಾನಿಗಳು ಕಂಡುಕೊಂಡಿರುವ ಗುಣಾಣುಗಳನ್ನು ತಿದ್ದುವ ಸಾಧನವಾಗಿದೆ.

ಇದು ಪ್ರಾಕೃತಿಕವಾಗಿ ಕಂಡುಬಂದಿರುವ ಸಾಧನ ಹಾಗೂ ಇಪ್‍ಪತ್ತೊಂದನೇ ಶತಮಾನದ ಮನುಷ್ಯನ ಕೈಗೆ ಸಿಕ್ಕಿರುವ ಅತ್ಯಂತ ಆಧುನಿಕ ಜೈವಿಕ ಸಾಧನ ಇದಾಗಿದೆ.  ಇದನ್ನು ಉಪಯೋಗಿಸಿ ಕೊಂಬಿಲ್ಲದ ಹಸು, ಬೊಗಳದ ನಾಯಿ, ಬಾಲವಿಲ್ಲದ ಎಮ್ಮೆ ಇವುಗಳನ್ನು ಸೃಷ್ಟಿಸಬಹುದಾಗಿದೆ.

ಅಲ್ಲದೇ ಬೇಕಾದ ಬಣ್ಣ, ಬೆಕ್ಕಿನ ಕಣ್ಣು – ಹೀಗೆ ಜೀವಜಗತ್ತನ್ನು ನಮಗೆ ಬೇಕಾದ ಹಾಗೆ ಮಾರ್ಪಡಿಸಬಹುದಾದ ಸಾಧನವಾಗಿದೆ. ಬರೀ ಅಲಂಕಾರ ಅಥವಾ ಆನಂದಕ್ಕಾಗಿ ಮಾತ್ರವಲ್ಲ, ದೋಷಪೂರಿತ ಆನುವಂಶಿಕ ಅಂಶಗಳನ್ನು ತಿದ್ದಿ ತೀಡುವ ಸಾಮರ್ಥ್ಯ ಇದರಿಂದ ನಮ್ಮ ಕೈಯಲ್ಲಿದೆ.

ಭವಿಷ್ಯದಲ್ಲಿ ಹುಟ್ಟುವ ಮೊದಲೇ ಭ್ರೂಣದ ಹಂತದಲ್ಲಿಯೇ ಕಾಯಿಲೆಯ ಮೂಲವನ್ನು ಬದಲಾಯಿಸುವ ಜೈವಿಕ ಉಪಕರಣ ಇದಾಗಿದೆ ಎನ್ನಲಾಗುತ್ತಿದೆ. ಇದನ್ನು ಕಂಡುಕೊಂಡದ್ದು ಬ್ಯಾಕ್ಟೀರಿಯಾದಂತ ಸೂಕ್ಷ್ಮಜೀವಿಗಳಲ್ಲಿ. ಅವುಗಳು ತಮ್ಮ ಶತ್ರುವನ್ನು ಸದೆಬಡಿಯಲು ಈ ಸಾಧನಗಳನ್ನು ಬಳಸುತ್ತವೆ.

ಇದನ್ನು ಕಂಡುಕೊಂಡವರಿಗೆ ಇದರ ಬೌದ್ಧಿಕ ಹಕ್ಕುಪತ್ರ ಕೊಡುವುದಾಗಿದೆ. ಇದಕ್ಕೆ ಅಮೆರಿಕದ ಸಂಸ್ಥೆಗಳು ಪೈಪೋಟಿಗಿಳಿದಿವೆ.  ಸಮುದ್ರದಲ್ಲಿ ಬಿದ್ದಿರುವ ಕಚ್ಚಾ ಎಣ್ಣೆಯನ್ನು ತಿನ್ನುವ ಬ್ಯಾಕ್ಟೀರಿಯಾವನ್ನು ಭಾರತಮೂಲದ ವಿಜ್ಞಾನಿ ಆನಂದ್ ಮೋಹನ್ ಚಕ್ರವರ್ತಿ ಜೈವಿಕವಾಗಿ ಕುಲಾಂತರಿಸಿದ್ದರು. ಅವರು ಅದರ ಬೌದ್ಧಿಕ ಹಕ್ಕನ್ನು ನ್ಯಾಯಾಲಯದ ಹೋರಾಟದ ಮೂಲಕ ಸ್ಥಾಪಿಸಿದ್ದರು.

ಈ ರೀತಿ ಮೊದಲು ಲೂಯಿ ಪ್ಯಾಶ್ಚರ್ ಯೀಸ್ಟ್‌ಗೆ ಪೇಟೆಂಟ್ ಪಡೆದಿದ್ದ. ಥಾಮಸ್ ಆಲ್ವಾ ಎಡಿಸನ್ 2332 ಪೇಟೆಂಟ್ ಪಡೆದಿದ್ದ! ಈಗ ಕ್ರಿಸ್ಪರ್ ಪೇಟೆಂಟ್ ಸಿಕ್ಕ ಸಂಸ್ಥೆ ಬಿಲಿಯನ್ ಡಾಲರ್ ಗಳಿಸುವ ಸಾಮರ್ಥ್ಯ ಹೊಂದಲಿದೆ. ಪ್ರಕೃತಿಯಲ್ಲಿ ಇನ್ನೂ ಇಂತಹ ಅನೇಕ ನಿಗೂಢಗಳು ನಮಗೆ ಕಾಣಸಿಗಬಹುದು. ಕಂಡುಕೊಂಡವರಿಗೆ ಅದರ ಹಕ್ಕು ಸಿಗುವುದಾಗಿದೆ.

ಬಾರ್ನಿಯೋ ದೇಶದ ಕಾಡಿನಲ್ಲಿ ಕಪ್ಪೆಯೊಂದಿದೆ. ಅದಕ್ಕೆ ಏಡ್ಸ್ ವೈರಸ್ ಚುಚ್ಚುಮದ್ದಿನ ಮೂಲಕ ಹರಡಿಸ ಹೋದರೆ ಸಾದ್ಯವಾಗಲಿಲ್ಲ. ಕಾರಣ ಏಡ್ಸ್ ವೈರಸ್ ವಿರುದ್ಧ ಅದರಲ್ಲಿ ಆಯುಧಗಳಿವೆ. ಅಂದರೆ ಆ ಕಪ್ಪೆಯಲ್ಲಿ ಔಷಧವಿದೆ  ಎಂದಾಯಿತು. ಹೀಗೆ ಪ್ರಕೃತಿಯಲ್ಲಿ ಇನ್ನೂ ತಿಳಿಯದ ಅನೇಕ ಔಷಧ ಹಾಗೂ ಜೈವಿಕ ಸಾಧನಗಳು ಅಡಗಿವೆ. ಅದನ್ನು ಕಂಡುಕೊಂಡು ಅವುಗಳ ಮೇಲೆ ಹಕ್ಕು ಸಾಧಿಸಿ ವಾಣಿಜ್ಯ/ವ್ಯಾಪಾರಕ್ಕಾಗಿ ಬಳಸಿ ಕೋಟಿಗಟ್ಟಲೆ ಹಣ ಮಾಡಿಕೊಳ್ಳುವುದಾಗಿದೆ.

ಯಾವುದೇ ಬೌದ್ಧಿಕ ಹಕ್ಕನ್ನು ಪಡೆಯಲು ಆ ವಿಷಯ, ವಿಚಾರ, ವಸ್ತು ಮೂರು ಪ್ರಮುಖ ಷರತ್ತುಗಳಿಗೆ ಬದ್ಧವಾಗಿರಬೇಕು. ಅವುಗಳು ಉಪಯುಕ್ತತೆ, ಹೊಸತನ ಮತ್ತು ಸುಳುವಾಗಿ ತಿಳಿಯದ (usefulness, novelty and non-obviousness) ಅಂಶಗಳಾಗಿವೆ. ಆದರೆ ಇವುಗಳ ಸರಿಯಾದ ವಿವೇಚನೆ ಇಲ್ಲದೆ ಪೇಟೆಂಟ್ ಕೊಟ್ಟಿರುವ ಉದಾಹರಣೆಗಳು ಅನೇಕ. ಅದು ಹಳದಿ, ಬಾಸುಮತಿ, ಬೇವು ವಿಚಾರದಲ್ಲಿ ಸ್ಪಸ್ಟವಾಗಿ ತಿಳಿಯುತ್ತದೆ. ಹಾಗೆಯೇ ಹಿಟ್ಟು ಮಾಡುವ ಚಕ್ಕಿ ಮಿಲ್ಲಿಗೂ ಅಮೆರಿಕ ಪೇಟೆಂಟ್ ಕೊಟ್ಟಿತ್ತು.

ಅವುಗಳನ್ನು ರದ್ದುಪಡಿಸಲು ಹತ್ತಾರು ಕೋಟಿ ಖರ್ಚು ಮಾಡಿ ದಶಕಗಳ ಕಾಲ ಹೋರಾಟ ಮಾಡಬೇಕಾಯಿತು. ಈಗಲೂ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಜ್ಞಾನ ಪರಂಪರೆಯನ್ನು ತನ್ನ ಖಾಸಗಿ ಆಸ್ತಿಯನ್ನಾಗಿಸಿಕೊಂಡು ಕೋಟಿಗಟ್ಟಲೇ ಹಣ ಮಾಡಿಕೊಳ್ಳುತ್ತಿರುವ ಅನೇಕ ಉದಾಹರಣೆಗಳಿವೆ.

ಆಫ್ರಿಕಾ ಖಂಡದ ‘ಕಲಹಾರಿ’ ಮರುಭೂಮಿ ವಾಸಿಗಳಾದ ‘ಸ್ಯಾನ್ ಬುಶ್‌ಮ್ಯನ್’ ಬುಡಕಟ್ಟು ಜನ ಊಟದ ಕೊರತೆ ಇದ್ದಾಗ ಹಸಿವನ್ನು ಹತ್ತಿಕ್ಕಲು ಪಾಪಾಸುಕಳ್ಳಿಯ ರೀತಿಯ ಗಿಡವಾದ ‘ಹೂಡಿಯಾ’  ಹಣ್ಣನ್ನು ತಿನ್ನುತ್ತಾರೆ. ಇದನ್ನು ಕಂಡುಕೊಂಡ ಅನೇಕ ಕಂಪೆನಿಗಳು ಈ ಹಣ್ಣಿನ ಪದಾರ್ಥವನ್ನು ಬೊಜ್ಜು ಇಳಿಸಲು ಮಾರಾಟ ಮಾಡುತ್ತಿದ್ದಾರೆ.

ಹಸಿವು ಕಡಿಮೆಯಾದರೆ, ಊಟ ಕಡಿಮೆ. ಊಟ ಕಡಿಮೆಯಾದರೆ ಬೊಜ್ಜು ಕಡಿಮೆ –ಎನ್ನುವ ಸುಲಭ ಲೆಕ್ಕಾಚಾರ. ನಮ್ಮಲ್ಲೂ ಈ ರೀತಿ ಹಸಿವನ್ನು ತಡೆಯಲು ಹಳ್ಳಿಗರು ಪಾಪಾಸುಕಳ್ಳಿಯ ಹಣ್ಣು ತಿನ್ನುತ್ತಿದ್ದದ್ದು ಉಂಟು. ಕೇರಳದ ಕಾಣಿ ಬುಡಕಟ್ಟಿನ ಜನರು ಆರೋಗ್ಯಪಾಚ ಎನ್ನುವ ಹಣ್ಣು ತಿಂದು ಹಸಿವನ್ನು ಮುಂದೂಡುತ್ತಾರೆ. ಇದನ್ನು ವಾಣಿಜ್ಯೀಕರಣಗೊಳಿಸಲು ಈಗ ಪ್ರಯತ್ನಗಳು ನಡೆಯುತ್ತಿವೆ. ಈ ಜ್ಞಾನ ಪಡೆದೆ ಸಂಸ್ಥೆ ತನ್ನ ಲಾಭದ ಕೆಲವು ಭಾಗವನ್ನು ಆ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಕೊಡುವ ಯೋಜನೆಯಾಗಿದೆ.

ಈ ರೀತಿಯ ಪರಂಪರೆಯಲ್ಲಿ ಜನಸಾಮಾನ್ಯರಲ್ಲಿ ಅನೇಕ ವರ್ಷಗಳಿಂದ  ಹಾಸುಹೊಕ್ಕಾಗಿರುವ ಜ್ಞಾನವನ್ನು ಯಾವುದೇ ಕಂಪೆನಿಗಳು ಯಾವುದೇ ದೇಶದಲ್ಲಿ ಬೌದ್ಧಿಕ ಹಕ್ಕು ಸ್ಥಾಪಿಸುವುದನ್ನು ತಡೆಯಲು  ನಮ್ಮ ಕೌನ್ಸಿಲ್ ಒಫ಼್ ಸೈಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(CSIR)  ಎಂಬ ಲೈಬ್ರರಿಯನ್ನು ಸ್ಥಾಪಿಸಿತು.

ಇದರಿಂದ ಅಮೆರಿಕ ಮತ್ತು ಯೂರೋಪ್‌ನ ದೇಶಗಳಲ್ಲಿ ಪೇಟೆಂಟ್ ಕೊಡುವ ಮೊದಲು ಅದು ಇದಾಗಲೇ ಬಳಕೆಯಲ್ಲಿರುವ ಜ್ಞಾನವೇ ಇಂದು ಆನ್‌ಲೈನ್ ಮೂಲಕವೇ ಈ ಲೈಬ್ರರಿಯಲ್ಲಿ ಕಂಡುಕೊಳ್ಳಬಹುದು. ಹಾಗಾಗಿ ಬೌದ್ಧಿಕ ಹಕ್ಕನ್ನು ನಿರಾಕರಿಸಬಹುದು. ಅಲ್ಲದೇ ಅಲ್ಲಿರುವ ಮಾಹಿತಿ ದುರುಪಯೋಗಪಡಿಸಿಕೊಳ್ಳುವಂತಿಲ್ಲ. ಇದರಿಂದಾಗಿ ಸುಮಾರು 200ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ವಿದೇಶಗಳಲ್ಲಿ ನಿರಾಕರಿಸಲಾಯಿತು.

ಇದಕ್ಕೆ ಹಳದಿಯ ಪೇಟೆಂಟ್ ತೆಗೆಸಲು ಮಾಡಿದ ಹಾಗೆ ಯಾವುದೇ ಹಣ ಖರ್ಚಾಗಲಿಲ್ಲ. ಇದೇ ಮಾಹಿತಿಯನ್ನು, ಕಾನೂನನ್ನು ತಿರುಚಿ ವಿದೇಶಿ ಮತ್ತು ದೇಶಿ ಕಂಪೆನಿಗಳು ಸುಲಭವಾಗಿ ಮಾಹಿತಿಯನ್ನು ಕದ್ದು ತನಗೆ ಅನುಕೂಲಕರವಾಗಿ ಜಾಣತನದಿಂದ ಯಾವುದೇ ಖರ್ಚಿಲ್ಲದೇ ಬಳಸಿಕೊಂಡಿವೆ ಎನ್ನುವ ಆರೋಪ ಸಹ ಇದೆ.

ಈಗ ಮಾರ್ಚ್ 31ಕ್ಕೆ ಈ ಪ್ರಮುಖ ಸಂಸ್ಥೆ  ಕೊನೆಯುಸಿರೆಳೆಯುವಂತಾಯಿತು. ಇದನ್ನೇ ಬೇರೆ ಅವತಾರದಲ್ಲಿ ಹೊರುತರುವುದಾಗಿ ಹೇಳಲಾಗುತ್ತಿದೆ. ಆದರೆ ತಮ್ಮ ಸಂಪ್ರದಾಯ ಜ್ಞಾನ ಪರಂಪರೆಯನ್ನು ಕದ್ದು ಲಾಭಕ್ಕಾಗಿ ಕಂಪೆನಿಗಳು ಬಳಸಿಕೊಳ್ಳುವುದನ್ನು ತಡೆಗಟ್ಟುವತ್ತ ಇನ್ನು ಮುಂದೆ ಹೆಚ್ಚಿನ ಸವಾಲುಗಳು ನಮಗೆ ಎದುರಾಗಲಿವೆ. ಇದಕ್ಕೆ ಇನ್ನೂ ಹೆಚ್ಚಿನ ಸಿದ್ಧತೆ ಬೇಕಾಗಿದೆ.

ಯೋಗದ ವಿವಿಧ ಆಸನಗಳಿರಬಹುದು, ಕೃಷಿಯಲ್ಲಿ ಬಳಸುವ ಬೀಜ, ಪಂಚಗವ್ಯ, ಪಶುಸಂಗೋಪನೆಯ ವಿಧಾನ – ಹೀಗೆ ಸಾವಿರಾರು ವರ್ಷಗಳಿಂದ ಬಂದಿರುವ ಜ್ಞಾನವನ್ನು ಕೈಚೆಲ್ಲಿ ಕೂರಲಾಗದು. ಇದಾಗಲೇ ನಮ್ಮಲ್ಲಿ ಶೇ.70 ರಷ್ಟು ಔಷಧ ನಮ್ಮ ಸುತ್ತಮುತ್ತಲಿನ ಜೈವಿಕ ಜಗತ್ತಿನ ವಸ್ತುಗಳಾಗಿವೆ.

ಅದು ಜೀರಿಗೆ ಕಷಾಯವಿರಬಹುದು, ತುಳಸಿ ರಸವಿರಬಹುದು, ಮೆಂತ್ಯದ ನೀರಿರಬಹುದು –ಇವು, ಇಂಥವು ಮನೆಯಲ್ಲಿ, ಸಮುದಾಯದಲ್ಲಿ ಯಾರ ಹಕ್ಕಿಗೂ ಸಿಕ್ಕದೇ ಬಳಕೆಯಾಗುತ್ತಿವೆ. ಇದಾಗಲೇ ಇಂತಹ ವಿಷಯಗಳು ಪೇಟೆಂಟ್ ಇಲ್ಲದಿದ್ದರು ಬ್ರಾಂಡ್ ರೂಪದಲ್ಲಿ, ಮಾರುಕಟ್ಟೆಯಲ್ಲಿ ಕಂಪೆನಿಗಳ ಪಾಲಿಗೆ ಹೋಗಿ ಪರೋಕ್ಷವಾಗಿ ಹಕ್ಕು ಸ್ಥಾಪಿತವಾಗಿರುವುದು ಕಂಡುಬರುತ್ತದೆ.

We are brand-washed in consumption. ಇದಕ್ಕಾಗಿಯೇ ‘ಕಿಂಗ್‌ಫಿಶರ್’ ಹಕ್ಕಿಯಾಗಿ ಉಳಿದಿಲ್ಲ. ಅದು ಈಗ ಬಿಯರ್ ಎನ್ನುವುದು! ಹಣಬಲವಿದ್ದಲ್ಲಿ ಸಾಂಪ್ರದಾಯಿಕ ಜ್ಞಾನವನ್ನು ತಮ್ಮದೇ ಎಂಬಂತೆ ಬಿಂಬಿಸಿ ಜೊತೆಗೆ ಉತ್ತಮ, ಶ್ರೇಷ್ಠ ಎಂದು ಮಾರುಕಟ್ಟೆಯಲ್ಲಿ ಸ್ಥಾಪಿಸಬಹುದು. ಉದಾಹರಣೆಗೆ, ಪೆಪ್ಸಿ ಕಂಪೆನಿಯ ಬಿಕನಿಯರ್ ಬುಜಿಯಾ! ಬೇಲಿ ಹಾಕಿದವನಿಗೆ ಹಕ್ಕುಪತ್ರ ಎನ್ನುವಂತಿದೆ.

1669ರಿಂದ 1676ರವರೆಗೆ ಕೇರಳದಲ್ಲಿ ಡಚ್ ಇಸ್ಟ್ ಇಂಡಿಯಾ ಕಂಪೆನಿಯ ಮಿಲಿಟರಿ ಅಧಿಕಾರಿ ಹಾಗೂ ಪ್ರಕೃತಿ ಶಾಸ್ತ್ರಜ್ಞನೂ ಆಗಿದ್ದ ಹೆನ್ರಿಕ್ ವ್ಯಾನ್ ರೀಡ್ ಕೇರಳ ಆಯುರ್ವೇದ ಜ್ಞಾನ ಪರಂಪರೆಯನ್ನು ಹೋರ್ತುಸ್ ಮಲಬಾರಿಕಸ್ (Hortus Malabaricus) ಎನ್ನುವ ಹೆಸರಿನ 12 ಸಂಪುಟದ ಪುಸ್ತಕ ಹೊರತಂದಿದ್ದ. ಇದನ್ನೇ ಸಸ್ಯಸಾಮ್ರಾಜ್ಯವನ್ನು ವಿಂಗಡಿಸಿದ ಲೀನಿಯಸ್ ಆಧಾರವಾಗಿ ಬಳಸಿಕೊಂಡ ಎನ್ನುತ್ತಾರೆ.

ಹಾಗೂ ಯೂರೋಪಿನ ಆಧುನಿಕ ಔಷಧ ಅಭಿವೃದ್ಧಿಗೆ ಇದು ಆಧಾರವಾಯಿತು ಎನ್ನುತ್ತಾರೆ. ಈ ಪುಸ್ತಕಕ್ಕೆ ಮೂಲ ಆಧಾರ ಕೇರಳದ ವೈದ್ಯ ಇತ್ತಿ ಅಚ್ಚುತನ್‌ರ ತಾಳೆಗರಿ ಬರಹಗಳು. ಇದೇ ರೀತಿ ಗೋವಾದ ಪೋರ್ಚುಗೀಸ್ ಸಾಮ್ರಾಜ್ಯದಲ್ಲಿ ವೈದ್ಯನಾಗಿದ್ದ ಗ್ರಾಸಿಯಾ ಡಿಯೋರ್ಟನ ಸಂಗ್ರಹ ಮತ್ತು ಬರಹ ಕೂಡ ಆಧುನಿಕ ಆಲೋಪತಿಗೆ ಆಧಾರವಾಯಿತು. ಈ ರೀತಿ ತಮ್ಮದಲ್ಲದ ಬೌದ್ಧಿಕ ಸಾಧನೆಯಿಂದ ಲಾಭ ಪಡೆದುಕೊಂಡವರಿಗೆ ನಾವು ಇಂದು ರಾಯಲ್ಟಿ ಕೊಡುತ್ತಿದ್ದೇವೆ.

ದೊಡ್ಡಗೋಣಿಸೊಪ್ಪಿನಲ್ಲಿ ಮೆದುಳಿಗೆ ಬೇಕಾದ ಒಮೇಗಾ-3 ಎಣ್ಣೆಯ ಆಂಶವಿದೆ. ಇದು ಕೆರೆಬದಿಯಲ್ಲಿ ಸಿಕ್ಕುವಂಥದ್ದು. ಇದೇ ಒಮೇಗಾ-3 ಔಷಧದ ಅಂಗಡಿಯಲ್ಲಿ ಕೊಂಡರೆ ಕೆ.ಜಿ.ಗೆ 20 ಲಕ್ಷ! ಇದು ಸಾಮಾನ್ಯಜ್ಞಾನ ವಾಣಿಜ್ಯೀಕರಣಗೊಂಡು ಹೊಸ ಅವತಾರದಲ್ಲಿ ನಮ್ಮನ್ನು ಎದುರಿಸಿದಾಗ ನಾವು ಕೊಡಬೇಕಾದ ಬೆಲೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ವ್ಯಾಪಾರ ಒಡಂಬಡಿಕೆಯಲ್ಲಿನ ಟ್ರಿಪ್ಸ್ (TRIPS), ಸಿಬಿಡಿ(CBD), ರೈತರ ಹಕ್ಕು ಈ ರೀತಿ ವಿವಿಧ ರೀತಿಯ ರಕ್ಷಣೆಗಳಿದ್ದರೂ ಜನಸಾಮಾನ್ಯರ ಜ್ಞಾನ ಸಂಪತ್ತು (knowledge of the commons) ಖಾಸಗೀಕರಣಗೊಳ್ಳುತ್ತಿರುವುದು ಕಂಡುಬರುತ್ತದೆ. 
ನಿಜವಾದ ಸಂಶೋಧನೆಗೆ ಪೇಟೆಂಟ್ ಸಿಕ್ಕಲ್ಲಿ ಅದು ಇಪತ್ತು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಎಲ್ಲರಿಗೂ ದಕ್ಕುವ ಸಂಶೋಧನೆಯಾಗುತ್ತದೆ.

ಇದು ಪೇಟೆಂಟ್‌ನಿಂದ ಆಗುವ ಲಾಭ ಎನ್ನುವವಾದ. ಅಲ್ಲದೇ ಸಂಶೋಧನೆಗೆ ಪ್ರೋತ್ಸಾಹ ಕೊಡಬೇಕಾಗುತ್ತದೆ ಮತ್ತು ಸಂಶೋಧನೆಗೆ ಆದ ಖರ್ಚು ವೆಚ್ಚ ಲಾಭದೊಂದಿಗೆ ಮರುಪಡೆಯುವುದು ಮುಖ್ಯ. ಅಲ್ಲದೇ ನಮ್ಮಲ್ಲಿ ‘copyright is right to copy’ ಎನ್ನುವ ಮಾತಿದೆ. ಇದೇ ದಾಟಿಯಲ್ಲಿ ಪೇಟೆಂಟ್, ಪೇಷೆಂಟ್‌ಗಿಂತಲೂ ಮುಖ್ಯವಾಗಬಾರದು ಎನ್ನುವುದು ಸತ್ಯ.

ಹಾಗೆಯೇ ಒಂದು ಸಮುದಾಯದ ಜ್ಞಾನ ಸಂಪತ್ತು ಖಾಸಗೀಕರಣಗೊಂಡಾಗ ಜನಸಾಮಾನ್ಯರ ಜೀವನೋಪಾಯ ಮಾರ್ಗಗಳು ಮಾಯವಾಗುತ್ತವೆ. ಜೀವ ವೈವಿಧ್ಯಕ್ಕೆ ಕುತ್ತು ಬರುತ್ತದೆ. ಒಬ್ಬನಿಗೆ ಸಿಕ್ಕ ಹಕ್ಕು ಕೋಟಿ ಜನರ ಮೇಲೆ ಹೇರಿಕೆಯಾಗುತ್ತದೆ. ಜಗತ್ತೇ ಒಂದು ಹಳ್ಳಿ ಎನ್ನುವ ಈಗಿನ ಜಾಗತೀಕರಣದೊಂದಿಗೆ ಸಾರ್ವಜನಿಕ ಸ್ವತ್ತನ್ನು ಕೈಯಿಂದ ಕಸಿದುಕೊಳ್ಳದಂತೆ ನಾವು ಕಾಪಾಡಿಕೊಳ್ಳಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT