ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದವರ ಮನಮುದುಡಿಸುವ ಮೊಡವೆ

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹದಿಹರೆಯದ ಯುವಕ – ಯುವತಿಯರ ಅಂದವನ್ನು ಕೆಡಿಸುವುದು ಮೊಡವೆ. ತಮ್ಮ ಮುಖ ಸ್ವಚ್ಛವಾಗಿ, ಅಂದವಾಗಿ ಕಾಣಬೇಕು ಎಂದುಕೊಂಡರೂ ಮೊಡವೆ ಅದಕ್ಕೆ ಅಡ್ಡಿಯಾಗುತ್ತದೆ. ಪರಿಹಾರಕ್ಕಾಗಿ ವೈದ್ಯರ ಬಳಿ ಹೋದರೂ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಮೊಡವೆಯ ಸಮಸ್ಯೆ ಕೆಲವೊಮ್ಮೆ ಖಿನ್ನತೆಗೂ ಎಡೆಮಾಡಿಕೊಳ್ಳುವ ಸಂಭವವಿದೆ.

ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಮೊಡವೆಯಿಂದ ಬಳಲುತ್ತಿದ್ದಾರೆ. ಆಂಗ್ಲ ಭಾಷೆಯಲ್ಲಿ ‘ಪಿಂಪಲ್’ ಎಂದು ಕರೆಯುವ ಈ ಮೊಡವೆ ಗೊಡವೆ ನಿಜಕ್ಕೂ ಯಾರಿಗೂ ಬೇಡ.

ಮೊಡವೆ ಹೆಚ್ಚಾಗಿ ಕಾಣಿಸಿಕೊಳ್ಳುವುದು 13ರಿಂದ 20 ವರ್ಷ ವಯಸ್ಸಿನವರಲ್ಲಿ. ಅಂದರೆ ಆ್ಯಂಡ್ರೋಜನ್ ಹಾರ್ಮೋನಿನ ಪ್ರಭಾವ ಹೆಚ್ಚಿರುವಾಗ ಮೊಡವೆಗಳು ಹೆಚ್ಚಾಗುತ್ತವೆ. 25ವರ್ಷ ದಾಟಿದ ಮೇಲೆ  ಮೊಡವೆಗಳು ಕಡಿಮೆಯಾಗುತ್ತವೆ. ಅಪರೂಪಕ್ಕೊಮ್ಮೆ 40 ವರ್ಷ ಮೀರಿದವರಲ್ಲೂ ಮೊಡವೆ ಕಾಣಿಸಿಕೊಳ್ಳಬಹುದು. ಹೆಣ್ಣುಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಮೊಡವೆಗೆ ಕಾರಣಗಳೇನು?
ಆನುವಂಶೀಯತೆಯೊಂದಿಗೆ ಇನ್ನಿತರ ಕಾರಣಗಳಾದ ಹಾರ್ಮೋನುಗಳ ಪ್ರಭಾವ, ಆಹಾರ, ಒತ್ತಡ, ಸೋಂಕು ಮುಂತಾದ ಕಾರಣಗಳಿಂದಲೂ ಮೊಡವೆ ಕಾಣಿಸಬಹುದು.

ಪ್ರಾಯದಲ್ಲಿ ತಂದೆ-ತಾಯಿಯರಲ್ಲಿ ಮೊಡವೆ ಇದ್ದರೆ  ಅದು ಶೇ. 50ರಿಂದ 60ರಷ್ಟು ಮಕ್ಕಳಲ್ಲೂ ಬರಬಹುದು. ಹದಿಹರೆಯದಲ್ಲಿ ಹಾರ್ಮೋನುಗಳ ಮಟ್ಟವು ಹೆಚ್ಚಿದ್ದು ಹೆಣ್ಣುಮಕ್ಕಳಲ್ಲಿ ಋತುಚಕ್ರದ ಮುನ್ನ ದಿನಗಳಲ್ಲಿ ಹಾರ್ಮೋನುಗಳ ಏರುಪೇರಾಗಿ ಮೊಡವೆಗಳು ಉಂಟಾಗಬಹುದು. ಇನ್ನು  ಪಿ.ಸಿ.ಓ.ಡಿ. ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೊಡವೆಯ ಸಮಸ್ಯೆ ಹೆಚ್ಚಬಹುದು.

ಈ ಸ್ಥಿತಿಗಳಲ್ಲಿ ಹೆಚ್ಚಿರುವ ಹಾರ್ಮೋನುಗಳ ಮಟ್ಟವು (ಡೀಹೈಡ್ರೋಎಪಿಆಂಡ್ರೋಸ್ಟೀರಾನ್ ಮತ್ತು ಹೈಡ್ರೋಟೆಸ್ಟೋಸ್ಟಿರಾನ್) ಸ್ವೇದಗ್ರಂಥಿಯಿಂದ ಹೆಚ್ಚು ಸೀಬಂ ಉತ್ಪಾದನೆಯನ್ನು ಪ್ರಚೋದಿಸಿ ಮೊಡವೆಗಳಿಗೆ ಕಾರಣವಾಗುತ್ತದೆ.

ಮೊಡವೆಗಳು ಹೇಗಾಗುತ್ತವೆ?
ಇದೊಂದು ಚರ್ಮದ ಕಾಯಿಲೆ. ಇಲ್ಲಿ ಹಾರ್ಮೋನುಗಳ ಪ್ರಭಾವದಿಂದ ಚರ್ಮದಲ್ಲಿರುವ ಸಿಬೇಶಿಯಸ್ (ಸ್ವೇದ) ಗ್ರಂಥಿಗಳಿಂದ ಹೆಚ್ಚು ಸೀಬಂ ಉತ್ಪಾದನೆಯಾದಾಗ ಹೆಚ್ಚುಹೆಚ್ಚು ಕೆರಾಟಿನ್, ಪ್ರೋಟಿನ್ ಉತ್ಪಾದನೆಯಾಗುತ್ತದೆ. ಚರ್ಮದಲ್ಲಿ ಸಹಜವಾಗಿ ವಾಸವಾಗಿರುವ ‘ಪ್ರೋಪಿನಿಬ್ಯಾಕ್ಟೀರಿಯಾ ಅಕ್ನಿಸ್’ ಎಂಬ ಬ್ಯಾಕ್ಟೀರಿಯಾ ಕಿಣ್ವಗಳ ಸಹಾಯದಿಂದ ಕೊಬ್ಬಿನಾಂಶಗಳನ್ನು ಕೊಬ್ಬಿನಾಮ್ಲಗಳಾಗಿ (ಫ್ಯಾಟಿಯಾಸಿಸ್) ವಿಭಜಿಸುತ್ತದೆ.

ಉರಿಯೂತಕ್ಕೂ ಕಾರಣವಾಗುವ ಹಲವು ರಾಸಾಯನಿಕಗಳು ಬಿಡುಗಡೆಯಾಗಿ ಉರಿಯೂತವುಂಟಾಗಿ, ಸತ್ತಜೀವಕೋಶಗಳೆಲ್ಲಾ ಸೇರಿ ಸಿಬೇಶಿಯಸ್ ಗ್ರಂಥಿಗಳ ಮಾರ್ಗ ಮುಚ್ಚಿಹೋಗಿ ಮೊಡವೆಗಳು ಪ್ರಾರಂಭವಾಗುತ್ತದೆ. ಇದನ್ನು ಮೈಕ್ರೋಕೊಮೆಡೋನ್ ಎನ್ನುತ್ತೇವೆ. ಇದು ಚರ್ಮದ ಹೊರಭಾಗದಲ್ಲಿದ್ದು ಗಾಳಿಗೆ ತೆರೆದುಕೊಂಡಾಗ ಮೆಲನಿನ್‌ಪಿಗ್ಮೆಂಟ್‌ನಿಂದ ಕಪ್ಪಾಗಿ ಕಾಣುತ್ತದೆ. ಇದನ್ನು ‘ಬ್ಲಾಕ್‌ಹೆಡ್ಸ್’ ಎನ್ನುತ್ತೇವೆ.

ಮೈಕ್ರೋಕೊಮೆಡೋನ್ ಹೇರ್‌ಫಾಲಿಕಲ್ ಒಳಗೇ ಇದ್ದರೆ ಅದನ್ನು ‘ವೈಟ್‌ಹೆಡ್’ ಎನ್ನುತ್ತೇವೆ. ಕೆಲವೊಮ್ಮೆ ತೀವ್ರತರವಾದ ಪ್ರತಿಕ್ರಿಯೆಯಿಂದ ದೊಡ್ಡಗುಳ್ಳೆಗಳಾದಾಗ ಅದನ್ನು ‘ಸಿಸ್ಟಿಕ್‌ಅಕ್ನೆ’ ಎನ್ನುತ್ತೇವೆ.


ಮೊಡವೆಗಳನ್ನು ಗುರುತಿಸಲು ಕೊಮೆಡೋನ್‌ಗಳು ಇರಲೇಬೇಕು. ಮತ್ತು ಮೊಡವೆಗಳ ಧರ್ಮವನ್ನು ಬಾಧಿಸುವ ಇತರ ಸಮಸ್ಯೆಗಳಾದ ಎಪಿಡರ್ಮಲ್ ಸಿಸ್ಟ್, ಮಿಲಿಯಾ, ಫಾಲಿಕ್ಯುಲೈಟೆಸ್, ಕೆರಟೋಸಿಸ್‌ಫೈಲಾರಿಸ್ ಮುಂತಾದ ಸ್ಥಿತಿಗಳಿಂದ ಪ್ರತ್ಯೇಕವಾಗಿ ಗುರುತಿಸುವ
ಅಗತ್ಯವಿದೆ. ವೈದ್ಯರ ಸಹಾಯವು ಅಗತ್ಯವಾಗಬಹುದು. ವೈದ್ಯಕೀಯ ಭಾಷೆಯಲ್ಲಿ ಮೊಡವೆಯನ್ನು ‘ಅಕ್ನೆವಲ್ಗ್ಯಾರಿಸ್’ ಎಂದು ಕರೆಯುತ್ತೇವೆ.

ಮೊಡವೆಗಳನ್ನು ಸೌಮ್ಯ ರೀತಿಯ, ಮಧ್ಯಮ ರೀತಿಯ ಹಾಗೂ ಉತ್ಕಟ ರೀತಿಯ ಮೊಡವೆಗಳೆಂದು ವಿಭಜಿಸಲಾಗುತ್ತದೆ. ಈ ವಿಭಜನೆ ಚಿಕಿತ್ಸೆಗೆ ಅತಿ ಮುಖ್ಯ. ಸೌಮ್ಯರೀತಿಯ ಮೊಡವೆಗಳಲ್ಲಿ ಕೇವಲ ಕೊಮೆಡೋನ್‌ಗಳಿರುತ್ತವೆ. ಅವು ಮುಖಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಮಧ್ಯಮ ರೀತಿಯ ಮೊಡವೆಗಳಲ್ಲಿ ಸಣ್ಣಸಣ್ಣ ಬೊಕ್ಕೆಗಳು ಅಥವಾ ದೊಡ್ಡ ಗುಳ್ಳೆಗಳು ಬೆನ್ನಿನ ಮೇಲಿರಬಹುದು. ಉತ್ಕಟ ರೀತಿಯ ಮೊಡವೆಗಳಲ್ಲಿ ದೊಡ್ಡ ದೊಡ್ಡ ಗುಳ್ಳೆಗಳು ಮುಖ ಹಾಗೂ ಕೈ ಎಲ್ಲ ಕಡೆ ಇರಬಹುದು.

ಶೇ. 90ರಿಂದ 95ರಷ್ಟು ಜನರಲ್ಲಿ ಮೊಡವೆಗಳು ಗುರುತು ಅಥವಾ ಕಲೆಯಾಗಿ ಉಳಿಯುತ್ತವೆ. ಶೇ.75ರಷ್ಟು ಜನರಲ್ಲಿ ಕಲೆಗಳು ದುರ್ಬಲವಾಗಿದ್ದು ಕಲೆಗಳ ಜಾಗದಲ್ಲಿ ಹೆಚ್ಚು ಮೆಲನೋಸೈಟ್‌ಗಳಿರುವುದರಿಂದ ಅದು ಕಪ್ಪುಕಲೆಗಳಾಗಿ ಗೋಚರಿಸುತ್ತವೆ. ಕೆಲವೊಮ್ಮೆ ಕಲೆಗಳು ದಪ್ಪವಾಗಿರುವುದು. ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಂಡರೆ ಕಲೆ ಹಾಗೇ ಉಳಿಯುತ್ತದೆ.

ಆಹಾರಕ್ರಮ ಹಾಗೂ ಮೊಡವೆ
ನಿರ್ದಿಷ್ಟವಾಗಿ ಆಹಾರಕ್ರಮಗಳು ಹಾಗೂ ಮೊಡವೆಯಾಗುವುದಕ್ಕೆ ಸಂಬಂಧವಿದೆಯೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್‌ ಇರುವ ಆಹಾರಗಳನ್ನು (ಸಕ್ಕರೆ, ಇನ್ನಿತರ ಸಿಹಿತಿಂಡಿ ಹಾಗೂ ಜಂಕ್‌ಫುಡ್‌ಗಳು) ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ ಮೊಡವೆಗಳ ಸಂಭವ ಕಡಿಮೆಯಾದದ್ದು ಕಂಡುಬಂದಿದೆ.

ಹೆಚ್ಚು ಡೈರಿ ಉತ್ಪನ್ನಗಳ ಸೇವನೆ (ಹಾಲು, ಗಿಣ್ಣು ಇತ್ಯಾದಿ) ಹೆಚ್ಚು ಆಂಡ್ರೋಜನ್ ಉತ್ಪಾದನೆಗೆ ಪರೋಕ್ಷವಾಗಿ ಕಾರಣವಾಗಿ ಹೆಚ್ಚು ಮೊಡವೆಗಳಾಗುತ್ತವೆಯೆಂದು ಸಂದೇಹಿಸಿದ್ದರೂ ಆಧಾರಗಳಿಂದ ಋಜುವಾತು ಮಾಡಲು ಸಾಧ್ಯವಾಗಿಲ್ಲ.

ಮಾನಸಿಕ ಒತ್ತಡಗಳಿಂದಲೂ ಮೊಡವೆ ಹೆಚ್ಚಾಗುವ ಸಾಧ್ಯತೆಗಳಿವೆ. ಯಾಂತ್ರಿಕ ಒತ್ತಡ – ಉದಾ: ಹೆಲ್ಮೆಟ್, ಚಿನ್ವೇರ್‌ಗಳಿಂದ ಮೊಡವೆಗಳು ಹೆಚ್ಚಾಗಬಹುದು. ಮಹಿಳೆಯರಲ್ಲಿ ಗರ್ಭಧಾರಣೆಯ ಸಮಯದಲ್ಲೂ ಮೊಡವೆಗಳು ಕಂಡುಬರುತ್ತವೆ.

ಮೊಡವೆಗಳಿಗೆ ಚಿಕಿತ್ಸೆಗಳೇನು?
ಸರಳ ಮನೆಮದ್ದುಗಳಿಂದ ಹಿಡಿದು ಸೀಬಂ ಉತ್ಪಾದನೆಯನ್ನೇ ಕಡಿಮೆಗೊಳಿಸಲು ಲೇಸರ್ ಚಿಕಿತ್ಸೆಯಿಂದ ಸ್ವೇದಗ್ರಂಥಿಗಳನ್ನೇ ನಾಶಮಾಡಿ ಚಿಕಿತ್ಸೆ ಕೊಡುವವರೆಗೆ ಹಲವು ಬದಲಾವಣೆಗಳಾಗಿವೆ.

ವೈದ್ಯರನ್ನು ಕಾಣುವ ಮೊದಲು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ: ತಾಜಾ ಹಣ್ಣು-ತರಕಾರಿ ಸೇವನೆಗಳಿಂದ ಅದರಲ್ಲಿರುವ ಬೀಟಾ ಕೆರೊಟಿನ್‌ನಿಂದ ಚರ್ಮದ ರಕ್ಷಣೆಯಾಗುತ್ತದೆ.

ಹೆಚ್ಚು ಹಣ್ಣು, ತರಕಾರಿ, ಮೊಳಕೆಕಾಳಿನ ಸೇವನೆ. ಅನವಶ್ಯಕ ಕೊಬ್ಬು, ಜಿಡ್ಡು, ಚಾಕೋಲೇಟ್, ಐಸ್‌ಕ್ರೀಂ, ಹೆಚ್ಚೆಚ್ಚು ಸಿಹಿತಿಂಡಿಯನ್ನು ಸೇವಿಸಬಾರದು. ನಿಖರ ಆಧಾರವಿಲ್ಲದಿದ್ದರೂ ಅವುಗಳನ್ನು ಕಡಿಮೆ ಮಾಡಿದಾಗ ಮೊಡವೆಗಳಾಗುವ ತೀವ್ರತೆ ಕಡಿಮೆಯಾಗುವ ಸಂಭವವಿದೆ.

ಜೊತೆಗೆ ದಿನಕ್ಕೆ 2ರಿಂದ 3 ಬಾರಿಯಾದರೂ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಮೃದು ಸೋಪನ್ನು ಬಳಸಿ. ಕೈ ಉಗುರುಗಳಿಂದ ಮೊಡವೆಗಳನ್ನು ಕೆರೆಯುವುದು, ಹಿಚುಕುವುದು ಮಾಡಿದರೆ ಕಲೆಗಳು ಹೆಚ್ಚಾಗುತ್ತದೆ. ದಿನಕ್ಕೂ 3ರಿಂದ 4 ಲೀಟರ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.  ಹೆಚ್ಚು ಕಾಸ್ಮೆಟಿಕ್‌ಗಳ ಬಳಕೆ ಬೇಡ. ಹೆಚ್ಚು ಪೌಂಡೇಷನ್‌ಕ್ರೀಂ, ಸನ್‌ಸ್ಕ್ರೀನ್ ಲೋಷನ್ ಬಳಸಬೇಡಿ.

ವಾರಕ್ಕೆ ಎರಡು ಬಾರಿಯಾದರೂ ತಲೆಸ್ನಾನ ಮಾಡಿ. ತಲೆಗೆ ಹಾಕಿದ ಎಣ್ಣೆ ಪಸೆಯನ್ನು ಸ್ವಚ್ಛವಾಗಿ ತೊಳೆದುಕೊಂಡು ತಲೆಹೊಟ್ಟು ಆಗದ ಹಾಗೆ ನೋಡಿಕೊಳ್ಳಿ.

ಸೌಮ್ಯಮಟ್ಟದ ಮೊಡವೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದರ ಜೊತೆಗೆ, ಅರಿಶಿನ ಹಚ್ಚುವುದು, ಹೆಸರಿಟ್ಟು, ಕಡಲೆಹಿಟ್ಟಿನಿಂದ ಮುಖ ತೊಳೆಯುವುದರಿಂದ ಸಮಸ್ಯೆ ನಿಯಂತ್ರಣಕ್ಕೆ ಬರಬಹುದು. ಅತಿಯಾಗಿ ಮೊಡವೆಗಳಾಗಿದ್ದರೆ 5ರಿಂದ 6  ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಗಟ್ಟಲೆ ತಜ್ಞವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಬೇಕಾಗಬಹುದು. 

ಸಾಮಾನ್ಯವಾಗಿ ವೈದ್ಯರು ಬೆಂಜೈಲ್‌ಪರಾಕ್ಸೈಡ್, ಸಾಲಿಸಿಲಿಕ್ ಆಸಿಡ್, ರೆಟಿನೋವಿಕ್ ಆಸಿಡ್, ಅಜಿಲಾಯಿಕ್ ಆಸಿಡ್ ಇತ್ಯಾದಿ ಔಷಧಗಳನ್ನು ಶಿಫಾರಸ್ಸು ಮಾಡುತ್ತಾರೆ. ಕೆಲವೊಮ್ಮೆ ಆ್ಯಂಟಿಬಯಾಟಿಕ್ ಕ್ರೀಂಗಳನ್ನು ಶಿಫಾರಸ್ಸು ಮಾಡುತ್ತಾರೆ. ಮೊಡವೆಗಳಲ್ಲಿ ಸೋಂಕು ಉಂಟಾಗಿದ್ದರೆ ಆ್ಯಂಟಿಬಯಾಟಿಕ್ ಮಾತ್ರೆಗಳು ಅಗತ್ಯ ಬರಬಹುದು.

ಯಾವುದಕ್ಕೂ ಇಂತಹ ಚಿಕಿತ್ಸೆ ತಜ್ಞವೈದ್ಯರ ಮೇಲ್ವಿಚಾರಣೆಯಲ್ಲೇ ಇರಲಿ. ತೀವ್ರವಾದ ಮೊಡವೆ ಸಮಸ್ಯೆಗಳಿಗೆ ಲೇಸರ್‌ನಂತಹ ಚಿಕಿತ್ಸೆಯು ಲಭ್ಯವಿದೆ. ಕಲೆಗಳನ್ನು ತೆಗೆಯಲು ಡರ್ಮಬ್ರೇಷನ್ ಮುಂತಾದ ವಿಧಾನಗಳಿವೆ. ಕೆಲವೊಮ್ಮೆ ಹಾರ್ಮೋನು ಚಿಕಿತ್ಸೆಯನ್ನು, ರೆಟಿನಾಯ್ಡ್‌ನ್ನು ಬಾಯಿಯ ಮೂಲಕ ಕೊಡುವ ಚಿಕಿತ್ಸೆಗಳಂಥವುಗಳ ಅವಶ್ಯಕತೆ ಬರಬಹುದು.

ಇಂದಿನ ಯುವಜನತೆ ಮೊಡವೆಗಳ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಚಿಕಿತ್ಸೆಗೆ ಮೊರೆಹೋಗಿ, ಕೆಲವು ಜಾಹಿರಾತುಗಳ ಹಿಂದೆಯೂ ಹೋಗಿ, ಕುಟುಂಬಕ್ಕೆ ಆರ್ಥಿಕ ಹೊರೆಯನ್ನು ಉಂಟುಮಾಡುತ್ತಿದ್ದಾರೆ. ಆದ್ದರಿಂದ ಯುವಜನತೆ ಈ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿಕೊಂಡು ಇದು ವಯೋಸಹಜವಾಗಿ ಆಗುತ್ತಿರುವ ಬದಲಾವಣೆಯೆಂದು ತಿಳಿದು ಸಮತೋಲನ ಪೌಷ್ಟಿಕ ಆಹಾರವನ್ನು ಸೇವಿಸಬೇಕು.

ಜೊತೆಗೆ ಯೋಗ–ಪ್ರಾಣಾಯಾಮ, ಧ್ಯಾನಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಧನಾತ್ಮಕ ನಿಲುವನ್ನು ಹೊಂದಿ ಖಿನ್ನತೆಗೊಳಗಾಗದೆ ಮೊಡವೆಯ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT