ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್–ಪೋರ್ಟ್‌ನ ಬವಣೆಗಳು

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಒಮ್ಮೆ ಮಗಳ ಮನೆಗೆ ನಾನೊಬ್ಬಳೆ ಹೋಗಬೇಕಾದ ಪ್ರಸಂಗ ಎದುರಾಯಿತು. ಮಗಳು ಕೆನಡಾದ ಟೊರೇಂಟೊದಲ್ಲಿದ್ದಳ. ಏನು ಭಯವಿಲ್ಲ; ಇಲ್ಲಿ ಹತ್ತಿದರೆ ಅಲ್ಲಿ ಇಳಿಯುತ್ತೀಯ – ಎಂದು ಮಗಳು ಧೈರ್ಯ ತುಂಬಿದ್ದಳು. ಆದರೂ ನನ್ನ ಎದೆಯಾಳದಲ್ಲಿ ಭಯವಿದ್ದೇ ಇತ್ತು.

ಆರು ತಿಂಗಳಿಗಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ಒಂದು ಸೂಟ್‌ಕೇಸ್ ತುಂಬ ಬಟ್ಟೆಗಳಿದ್ದವು. ಮತ್ತೊಂದರಲ್ಲಿ ತಿಂಡಿ, ಮಸಾಲೆಪುಡಿಗಳಿದ್ದವು. ವಿಮಾನದಲ್ಲಿಡಬಹುದಾದ ಪುಟ್ಟ ಸೂಟ್‌ಕೇಸ್ ಮತ್ತು ಕೈಯಲ್ಲಿ ಸಾಕಷ್ಟು ದೊಡ್ಡದಾದ ಹ್ಯಾಂಡ್‌ಬ್ಯಾಗ್ ಇತ್ತು. ಈ ಮೂರು ಸೂಟ್‌ಕೇಸ್‌ಗಳನ್ನು ಸಾಗಿಸಿಕೊಂಡು ಏರ್‌ಪೋರ್ಟಿನ ಗಾಜಿನ ಬಾಗಿಲನ್ನು ದಾಟಿ ಮನೆಯವರಿಗೆಲ್ಲ ‘ಬಾಯ್, ಬಾಯ್’ ಹೇಳಿದೆ.

ಎರಡು ಭಾರವಾದ ಸೂಟ್‌ಕೇಸುಗಳನ್ನು ತೂಕಕ್ಕೆ ಹಾಕಿ ಲೇಬಲ್ ಅಂಟಿಸಿ ಹೆಸರು ಬರೆದು ಅದನ್ನು ಒಳಗೆ ನೂಕಿದಾಗ ಅಬ್ಬ ಅರ್ಧ ಕೆಲಸ ಮುಗಿಯಿತು ಎಂದುಕೊಂಡೆ. ಇನ್ನು ಉಳಿದಿದ್ದ ಚಿಕ್ಕ ಸೂಟ್‌ಕೇಸ್ ಮತ್ತು ಪರ್ಸ್‌ನೊಂದಿಗೆ ಫ್ಲೈಟ್ ಏರಿ ಸೀಟ್ ಬೆಲ್ಟ್ ಬಿಗಿದು ಕುಳಿತಾಗ ನಿರಾಳವಾಯಿತು.

ಸುಮಾರು ಹನ್ನೆರಡು ಗಂಟೆಗಳಷ್ಟು ಕಳೆದಾಗ ವಿಮಾನವು ಫ್ರಾಂಕ್ ಫರ್ಟ್ ನಿಲ್ದಾಣ ಸೇರಿತು. ಅಲ್ಲಿ ಇಳಿದು ಟೊರೇಂಟೊ ಸೇರಲು ಮತ್ತೊಂದು ವಿಮಾನವನ್ನು ಹತ್ತಬೇಕಾಗಿತ್ತು.

ಇಲ್ಲಿಂದ ಪ್ರಾರಂಭವಾಯಿತು ನನ್ನ ಬವಣೆ. ಆಗಷ್ಟೆ ಉಗ್ರಗಾಮಿಗಳ ವಿಮಾನಗಳು ‘ವರ್ಲ್ಡ್‌ ಟ್ರೇಡ್‌ ಸೆಂಟರ್‌’ಗೆ  ಅಪ್ಪಳಿಸಿ ಅದನ್ನು ಧ್ವಂಸ ಮಾಡಿ ಭಾರಿ ಸಾವು–ನೋವಿಗೆ ಈಡಾದ್ದರಿಂದ ಏರ್‌ಪೋರ್ಟ್‌ಗಳಲ್ಲಿ ವಿಪರೀತ ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಷ್ಟು ದೊಡ್ಡದಾದ ಫ್ರಾಂಕ್ ಫರ್ಟ್ ಏರ್‌ಪೋರ್ಟ್‌ನಲ್ಲಿಳಿದಾಗ ಎತ್ತಹೋಗುವುದೆಂದು ತಿಳಿಯದೆ ಅಯೋಮಯವಾಗಿತ್ತು.

ನನ್ನಲ್ಲಿದ್ದ ಆಧಾರವೆಂದರೆ ಪಾಸ್‌ಪೋರ್ಟ್.  ಅದನ್ನೇ ಎಲ್ಲ ಕಡೆ ತೋರಿಸುತ್ತಾ ಬರುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಒಂದೇ ಲಗ್ಗೇಜ್ ಇರಬೇಕು ಎಂದಾಗ ಪರ್ಸನ್ನೂ ಸೂಟ್‌ಕೇಸ್ ಗೆ ಸೇರಿಸಿದೆ.  ಒಂದು ಕೈಯಲ್ಲಿ ಗಾಲಿ ಸೂಟ್‌ಕೇಸ್ ಎಳೆದುಕೊಂಡು, ಮತ್ತೊಂದು ಕೈಯಲ್ಲಿದ್ದ ಪಾಸ್‌ಪೋರ್ಟ್ ಅನ್ನು ಎದೆಗವಚಿಕೊಂಡು ಮುಂದೆ ನಡೆಯುತ್ತಿದ್ದಂತೆ ಕಾರ್ಟ್ ಒಂದು ಹತ್ತಿರ ಬಂದು ನಿಂತಿತು.

ಡ್ರೈವ್ ಮಾಡುತ್ತಿದ್ದ ಮಹಿಳೆ ‘ಹಲ್ಲೋ’ ಎಂದು ಪ್ರಶ್ನಾರ್ಥಕವಾಗಿ ನೋಡುತ್ತಾ ಫ್ರೆಂಚ್ ಭಾಷೆಯಲ್ಲಿ ಏನೋ ಕೇಳಿದಳು. ನನಗೆ ಆ ಭಾಷೆ ಅರ್ಥವಾಗದಿದ್ದರೂ ಇದೇ ಇರಬಹುದೆಂದು ಊಹಿಸಿ ಟೊರೇಂಟೊ ಫ್ಲೈಟ್ ಎಂದೆ. ಅವಳು ‘ಓಕೆ’  ಎನ್ನುತ್ತಾ ಹತ್ತುವಂತೆ ಸೂಚಿಸಿದಳು. ಸದ್ಯ ನಡೆಯುವ ಪ್ರಮೇಯವೇ ತಪ್ಪಿತೆಂದು ಹತ್ತಿ ಕುಳಿತೆ.

ಅವಳು ಶರವೇಗದಿಂದ ಹೊರಟ ಕಾರ್ಟ್ ‘ರೊಯ್’ ಎಂದು ಸುತ್ತುತ್ತಾ ಒಂದು ಕಡೆ ನಿಲ್ಲಿಸಿದಾಗ ನಾನು ಇಳಿಯಬೇಕೆಂದುಕೊಂಡು ಸೂಟ್‌ಕೇಸ್ ಎತ್ತಿದೆ. ಅದರಿಂದ ನೀರು ಸೋರತೊಡಗಿತು. ಓಡಾಟದ ಗಾಬರಿಯಲ್ಲಿ ನೀರಿನ ಬಾಟಲ್ ಪರ್ಸ್‌ನಲ್ಲಿಟ್ಟಿದ್ದು ಮರೆತೇಹೋಗಿತ್ತು. ಕೆಳಗಿಳಿದು ಸೂಟ್‌ಕೇಸ್ ತೆರೆದು ನೋಡಿದಾಗ ಬಾಟಲು ತೆಗೆದುಕೊಂಡು ಕೆಳಗಿಳಿದೆ. ಕಾರ್ಟ್ ಮುಂದೆ ಹೊರಟಿತು.

ನನ್ನ ಕೈಯಲ್ಲಿ ಯಾವಾಗಲೂ ಹಿಡಿದುಕೊಂಡೆ ಇರುತ್ತಿದ್ದ ಪಾಸ್‌ಪೋರ್ಟ್ ಇದ್ದ ಚಿಕ್ಕ ಫೈಲ್ ಕಾಣೆಯಾಗಿತ್ತು. ಎದೆ ಝಗ್ ಎಂದಿತ್ತು. ನೀರಿನ ಬಾಟಲನ್ನು ತೆಗೆಯುವ ಅವಾಂತರದಲ್ಲಿ ಕಾರ್ಟ್‌ನ ಸೀಟಿನ ಮೇಲಿಟ್ಟು ಹಾಗೇ ಇಳಿದುಬಂದಿದ್ದೆ. ಮುಂದೆಯೇ ಹೋಗುತ್ತಿದ್ದ ಕಾರ್ಟ್‌ನತ್ತ ‘ಹಲೊ’ ‘ಹಲೋ’ ಎನ್ನುತ್ತ ಓಡಿದೆ. ಡ್ರೈವರ್‌ಗೆ ಕೇಳಿಸಲಿಲ್ಲ. ಹತಾಶಳಾಗಿ ನಿಂತಿದ್ದೆ.

ಇನ್ನೇನು ನನ್ನ ಗತಿ? ಹೊರದೇಶದಲ್ಲಿ ಪಾಸ್‌ಪೋರ್ಟ್  ಕಳೆದುಕೊಂಡರೆ ದೇವರೂ ಕಾಪಾಡಲಾರ – ಎನ್ನಿಸಿ ನನ್ನ ಕಣ್ಣಲ್ಲಿ ನೀರು ತುಂಬಿತು. ಇದನ್ನೆಲ್ಲ ದೂರದಿಂದ ನೋಡುತ್ತಿದ್ದ ಸಿಬ್ಬಂದಿಯೊಬ್ಬ ಹತ್ತಿರ ಬಂದು ‘ಕಾರ್ಟ್ ಮತ್ತೆ ಬರುತ್ತದೆ; ಡೋಂಟ್‌ ವರಿ’ ಎಂದು ಧೈರ್ಯ ಹೇಳಿದ.  ಹತ್ತು ನಿಮಿಷಗಳು ಯುಗಗಳೇ ಆದಂತಾಗಿ ನಿಂತಿದ್ದಾಗ ಕಾರ್ಟ್ ಹತ್ತಿರ ಬಂದು ನಿಂತಿತು. ಅದೇ ನಾನು ಕುಳಿತಿದ್ದ ಕಾರ್ಟ್.

ಅಬ್ಬ! ನನ್ನ ಫೈಲ್ ಅಲ್ಲೇ ಭದ್ರವಾಗಿತ್ತು. ಕೂಡಲೆ ನಿಧಿ ದೊರೆತಂತೆ ಅದನ್ನು ಅವುಚಿ ಹಿಡಿದು ಅವಳಿಗೆ ಥ್ಯಾಂಕ್ಸ್ ಹೇಳಿದಾಗ ನಕ್ಕ ಅವಳು ಡ್ರೈವ್ ಮಾಡುತ್ತಾ ಹೊರಟಳು.

ಇಲ್ಲಿಗೆ ಮುಗಿಯಲಿಲ್ಲ ನನ್ನ ಕಷ್ಟಗಳು ಅಲ್ಲಿಂದಲೇ ಕಾಣುತ್ತಿದ್ದ ಟೊರೇಂಟೊ ಎಂದಿದ್ದ ಬೋರ್ಡ್‌ನತ್ತ ನಡೆದು ಕ್ಯೂನಲ್ಲಿ ನಿಂತು ಪಾಸ್‌ಪೋರ್ಟ್‌ ಮುಂದೆ ಚಾಚಿದೆ. ಅದನ್ನು ಪರಿಶೀಲಿಸಿದ ಅಧಿಕಾರಿ ನನ್ನ ಕೈಲಿದ್ದ ನೀರಿನ ಬಾಟಲನ್ನೇ ನೋಡುತ್ತಾ ‘ಡ್ರಿಂಕ್‌ ದಿಸ್ ವಾಟರ್‌’ ಎಂದು ನೀರನ್ನು ಕುಡಿಯಲು ಹೇಳಿದರು.

ಅರ್ಧ ಬಾಟಲಿನಷ್ಟಿದ್ದ ನೀರನ್ನು ಕುಡಿಯುವುದು ಕಷ್ಟವೆನ್ನಿಸಿದರೂ ವಿಧಿಯಿಲ್ಲದೆ ಅಲ್ಲೇ ಚೇರಿನ ಮೇಲೆ ಕುಳಿತು ಅಷ್ಟೂ ನೀರನ್ನು ಕುಡಿದು ಮುಗಿಸಿದೆ. ಎಲ್ಲ ನೀರನ್ನೂ ಖಾಲಿ ಮಾಡಿದ ಮೇಲೆಯೇ ನನ್ನನ್ನು ಅಲ್ಲಿಂದ ಮುಂದೆ ಹೋಗಲು ಬಿಟ್ಟರು.

ಪ್ಲೈಟ್ ಹತ್ತಿ ಕುಳಿತಾಗ ಹೊಟ್ಟೆಯೆಲ್ಲ ಊದಿದಂತಾಗಿ ಟಾಯ್ಲೇಟ್‌ಗೆ ತಿರುಗಾಡುವುದೇ ಆಗಿ ಉಸ್ಸಪ್ಪ ಎಂದು  ಕಣ್ಣು ಮುಚ್ಚಿ ಕುಳಿತೆ. ಎಚ್ಚರವಾದಾಗ ನನ್ನ ಒಂಟಿ ಪ್ರಯಾಣವು ಮುಗಿದಿತ್ತು. ಎದುರಾದ ಕಷ್ಟಗಳನ್ನು ಗೆದ್ದು ಬಂದು ಅಂತೂ ಮಗಳ ಊರು ಸೇರಿದೆ.
-ಎಸ್. ವಿಜಯ ಗುರುರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT