ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಡೆತ ತಿನ್ನಬೇಡಿ!

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಡಾ. ಕೆ. ಎಸ್. ಶುಭ್ರತಾ

‘ಈಗ ಯೋಚಿಸಿದರೂ ಕೂಡ ಈ ಎರಡು ವರ್ಷಗಳ ಕಾಲ ನಡೆದದ್ದು, ಕಣ್ಣ ಮುಂದೆ ಚಿತ್ರದ ಹಾಗೆ ಕಣ್ಣಿಗೆ ಕಟ್ಟಿದ ಹಾಗೆ ಕಾಣುತ್ತದೆ. ಅದರ ಜೊತೆ ನನಗೆ ಗೊತ್ತಿಲ್ಲದೇ ಕಣ್ಣಲ್ಲಿ ದಳದಳನೆ ನೀರು ಸುರಿಯುತ್ತದೆ. ಎಲ್ಲವೂ ಪ್ರಾರಂಭವಾಗಿದ್ದು, ನಾನು ಡಿಗ್ರಿ ಪರೀಕ್ಷೆ ಮುಗಿಸಿದ ಮೇಲೆ. ಅಪ್ಪ–ಅಮ್ಮ ನೋಡಿದ ಹುಡುಗನೊಂದಿಗೆ ಮದುವೆ ನಿಶ್ಚಯವಾಯಿತು.

ತುಂಬಾ ಒಳ್ಳೆಯ ಕುಟುಂಬ, ಹುಡುಗ ಬಹಳ ಓದಿ, ಒಳ್ಳೆಯ ಕೆಲಸದಲ್ಲಿದ್ದಾನೆ ಎಂಬ ಸಂತಸ ನನ್ನ ಪೋಷಕರಿಗೆ. ನನಗೂ ಒಪ್ಪಿಗೆಯಾಗಿತ್ತು. ಹುಡುಗ ಫೋನ್ ಮಾಡುತ್ತಿದ್ದ. ಪ್ರೀತಿಯ ಮಾತುಗಳ ಮಳೆ ಸುರಿಸುತ್ತಿದ್ದ. 

ಉಡುಗೊರೆಗಳು ನೀಡುತ್ತಿದ್ದ.  ಹೊರಗಡೆ, ಹೋಟೆಲ್‌ಗಳಿಗೆ ಕರೆದೊಯ್ಯುತ್ತಿದ್ದ. ಎಲ್ಲವೂ ಸುಂದರ ಕಾಲ್ಪನಿಕ ಕತೆಯಂತಿತ್ತು. ಮದುವೆಯಾಯಿತು. ಒಂದು ತಿಂಗಳು ಸಂತಸದಿಂದ ಕಳೆದವು. ಒಂದು ದಿನ ಏನೋ ಚಿಕ್ಕ ವಿಷಯಕ್ಕೆ ಜಗಳವಾಯಿತು. ಅವನ ಕೋಪದ ಬಗ್ಗೆ ಅರಿವಾದದ್ದೇ ಆವತ್ತು. ಕೈ ಎತ್ತಿ ಹೊಡೆದೇ ಬಿಟ್ಟ. ನನಗೆ ಏನಾಯಿತೆಂದು ಅರ್ಥ ಮಾಡಿಕೊಳ್ಳುವುದಕ್ಕೇ ಸಮಯ ಹಿಡಿಯಿತು.

ಕೆಲವು ನಿಮಿಷಗಳಲ್ಲಿ ಅವನೇ ಪಶ್ಚಾತ್ತಾಪ ಪಟ್ಟು ನನ್ನಲ್ಲಿ ಕ್ಷಮೆ ಬೇಡಿದ. ಏನೋ ಕೋಪದ ಭರದಲ್ಲಿ ಅಚಾತುರ್ಯ ಆಗಿದೆ ಎಂದು ತಿಳಿದು ಸುಮ್ಮನಾದೆ. ಮತ್ತೆ ಇನ್ನೆರಡೇ ದಿನಗಳಲ್ಲಿ ಇನ್ನೊಂದು ಹೊಡೆತ. ಅದೂ ಸಾಲದೆಂಬಂತೆ, ಸಣ್ಣ ಸಣ್ಣ ವಿಷಯಗಳಲ್ಲಿ ಕಿರಿಕಿರಿ ಮಾಡಲಾರಂಭಿಸಿದ. ಸಂತಸದಲ್ಲಿ ತೇಲುತ್ತಿದ್ದ ನನಗೆ ಆಳವಾದ ಗುಂಡಿಗೆ ತಳ್ಳಿದ ಹಾಗಾಗತೊಡಗಿತು.

ದಿನವೂ ಚಿಕ್ಕ ಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು, ನಂತರ ಹೊಡೆಯುವುದು ತಕ್ಷಣ ಪಶ್ಚಾತ್ತಾಪಪಡುವುದು - ಹೀಗೆ ಮುಂದುವರೆಯಿತು. ಹಾಗೆಂದು ಬೇರೆಯವರ ಹತ್ತಿರ ನೂರಕ್ಕೆ ನೂರರಷ್ಟು ಸರಿಯಿರುತ್ತಿದ್ದ. ಬೇರೆಯವರಿಗೆ, ಕುಟುಂಬದವರಿಗೆ ಹೇಳೋಣವೆಂದರೆ ಯಾರೂ ನಂಬಲಿಕ್ಕಿಲ್ಲ ಎಂಬ ಭಯ.

ಪ್ರತಿ ಬಾರಿ ಹೊಡೆದಾಗ, ಬ್ಯಾಗ್ ಎತ್ತಿಕೊಂಡು ಮನೆ ಬಿಟ್ಟು ಸಂಬಂಧ ತೊರೆದು ಹೋಗೋಣ ಎಂದರೆ ಅವನ ಕಣ್ಣಲ್ಲಿ ಪಶ್ಚಾತ್ತಾಪದ ಕಣ್ಣೀರು. ಗೋಗರೆಯುತ್ತಿದ್ದ, ಅಳುತ್ತಿದ್ದ. ಮನೋವೈದ್ಯರಲ್ಲಿ ತೋರಿಸೋಣ ಎಂದರೆ ಒಪ್ಪುತ್ತಿರಲಿಲ್ಲ. ನನಗೇನೂ ಹುಚ್ಚು ಹಿಡಿದಿಲ್ಲ ಎನ್ನುತ್ತಿದ್ದ. ನಾಳೆ ಸರಿ ಹೋಗಬಹುದು ಎಂದು ನಾನೇ ಸುಮ್ಮನಾಗುತ್ತಿದ್ದೆ. ಕಡೆಗೆ ಒಂದು ದಿನ, ಧೈರ್ಯವಾಗಿ ಮನೆ ಬಿಟ್ಟು ಬಂದೆ.

ಈಗ ಡೈವೋರ್ಸ್‌ಗೆ ಹಾಕಿದ್ದೇನೆ. ನನಗೆ ನನ್ನ ಉದ್ಯೋಗವಿದೆ. ಕುಟುಂಬದವರು ನನ್ನ ಸಹಾಯಕ್ಕೆ ಬರದಿದ್ದರೂ, ನಾನು ನೆಮ್ಮದಿಯಿಂದ ಗೌರವಯುತವಾಗಿ ಬದುಕುತ್ತಿದ್ದೇನೆ. ಆ ಎರಡು ವರ್ಷಗಳ ನರಕ ನೆನಪಿಸಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ.’ ಇಪ್ಪತ್ತೆಂಟು ವರ್ಷದ ಮಹಿಳೆಯೋರ್ವಳ ಅನುಭವ ಇದು.

‘ಕೌಟುಂಬಿಕ ಹಿಂಸೆ’(Domestic violence)ಗೆ ಇರುವ ಸಾವಿರಾರು ಉದಾಹರಣೆಗಳಲ್ಲಿ ಇದೂ ಒಂದು. ಅಂಕಿ–ಸಂಖ್ಯೆಗಳ ಪ್ರಕಾರ ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚಿನ ವಿವಾಹಿತ ಮಹಿಳೆಯರು ತಮ್ಮ ಮನೆಯಲ್ಲಿ, ನಾಲ್ಕು ಗೋಡೆಗಳ ಮಧ್ಯದಲ್ಲಿ ಒಂದಿಲ್ಲೊಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ದೈಹಿಕ ದೌರ್ಜನ್ಯ, ಮಾನಸಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ – ಹೀಗೆ ವಿಧವಿಧವಾಗಿ ನರಳುತ್ತಾರೆ. ಯಾವುದೇ ನಿಕಟ ಸಂಬಂಧದಲ್ಲಿ ಒಬ್ಬ ವ್ಯಕ್ತಿ, ಇನ್ನೊಬ್ಬ ವ್ಯಕ್ತಿಯ ಮೇಲೆ ಎಸಗುವ ದೌರ್ಜನ್ಯಕ್ಕೆ ‘ಕೌಟುಂಬಿಕ ಹಿಂಸೆ’ ಎನ್ನುತ್ತೇವೆ. ದಂಪತಿಗಳಲ್ಲಿ ಇಬ್ಬರಲ್ಲಿ ಯಾರೂ ಯಾರ ಮೇಲೆ ದೌರ್ಜನ್ಯ ಎಸಗಬಹುದಾದರೂ, ಭಾರತದಂತಹ ಪುರುಷಪ್ರಧಾನ ಸಮಾಜ ಇರುವ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವೇ ಹೆಚ್ಚು.

ಯಾಕೆ ಈ ರೀತಿ ಕೆಲವರು ಪುರುಷರು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ನೋಡಿದಾಗ ಹಲವಾರು ಕಾರಣಗಳು ಸಿಗುತ್ತವೆ. ಆ ವ್ಯಕ್ತಿಯಲ್ಲಿ ವ್ಯಕ್ತಿತ್ವ ದೋಷವಿರಬಹುದು, ಆ ವ್ಯಕ್ತಿಗೆ ಬಾಲ್ಯದಲ್ಲಿ ತನ್ನ ತಂದೆ-ತಾಯಿಯರನ್ನು ನೋಡಿ ಮನಸ್ಸಿನಲ್ಲಿ ‘ಹೆಂಡತಿಗೆ ಹೊಡೆಯುವುದೇ ಸರಿ’ ಎಂಬ ಭಾವನೆ ಬೇರೂರಿರಬಹುದು ಅಥವಾ ಮದ್ಯವ್ಯಸನ ಇರಬಹುದು ಅಥವಾ ಬೇರೆಯ ಮನೋರೋಗಗಳಿರಬಹುದು.

ಸಾಮಾನ್ಯವಾಗಿ ಮನೆಯಲ್ಲಿ ಹೆಂಡತಿಯ ಮೇಲೆ ದೈಹಿಕ ದೌರ್ಜನ್ಯ ಎಸಗುವ ವ್ಯಕ್ತಿಗೆ ತನ್ನ ಅಧೀನದಲ್ಲಿ ತನ್ನ ಹೆಂಡತಿ ಇರಬೇಕು ಎಂಬ ಆಸೆ ಇರುತ್ತದೆ. ಅದರ ಜೊತೆಗೆ ಪ್ರತಿ ಬಾರಿ ಪತ್ನಿಗೆ ಹೊಡೆದಾಗ, ತನ್ನ ಸಾಮರ್ಥ್ಯದ ಬಗ್ಗೆ ಮತ್ತಷ್ಟು ಸಂತಸವಾಗುತ್ತದೆ.

ನೀವು ಹೊಡೆತ ತಿನ್ನುವವರಾಗಿದ್ದರೆ?
ಬಹಳಷ್ಟು ಬಾರಿ ಇಂತಹ ಸಂಬಂಧಗಳಲ್ಲಿ ಸಿಲುಕಿದ ಮಹಿಳೆಯರಿಗೆ ಹೊರಬರುವ ಮಾರ್ಗವೇ ತಿಳಿಯುವುದಿಲ್ಲ. ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಇದ್ದರೆ, ಹೆಣ್ಣುಮಕ್ಕಳಿಗೆ ದೌರ್ಜನ್ಯದ ವಿರುದ್ಧ ದನಿ ಎತ್ತಲು ಸುಲಭ. ಆದರೆ ಕುಟುಂಬದವರಿಗಾಗಿ/ಸಮಾಜಕ್ಕಾಗಿ ‘ಮದುವೆ’ ಎಂಬುದು, ಬಂಧನ, ದೌರ್ಜನ್ಯದ ಜೈಲಾದರೂ, ಹೊರಬರಲು ಆಗದ ಅನಿವಾರ್ಯತೆ ಈ ಮಹಿಳೆಯರಿಗೆ ಕಾಡುತ್ತದೆ.

ಎಲ್ಲೋ ಒಂದು ಕಡೆ, ‘ಗಂಡ ಹೆಂಡತಿಗೆ ಹೊಡೆಯುವುದು ಸರಿಯೇ’ ಎಂದು ಕೆಲವು ಮಹಿಳೆಯರು ಮನಸ್ಸಿನಲ್ಲಿ ನಂಬಿಕೊಂಡು, ಅದರಂತೆ ಹೊಡೆತ ತಿನ್ನುತ್ತಿರುತ್ತಾರೆ. ಇಲ್ಲ, ಒಬ್ಬ ಮನುಷ್ಯ, ಇನ್ನೊಬ್ಬ ಮನುಷ್ಯನಿಗೆ ಹೊಡೆಯುವುದು ಯಾವ ಕಾರಣಕ್ಕೂ ಸರಿಯಲ್ಲ. ಅದರಲ್ಲೂ ಗಂಡ-ಹೆಂಡತಿ ಮಧ್ಯೆ ಇರಬೇಕಾದದ್ದು ಪ್ರೀತಿ, ಪರಸ್ಪರ ಗೌರವ.

ಮೊದಲು, ದೃಢವಾಗಿ ‘ನಾನು ದೈಹಿಕ ದೌರ್ಜನ್ಯ ಸಹಿಸುವವಳಲ್ಲ’ ಎಂದು ಗಟ್ಟಿಯಾಗಿ ಹೇಳಿ. ಜಗಳ ಆದ ಮರುದಿನ ಗಂಡ ಶಾಂತವಾಗಿದ್ದಾಗ ಮನವರಿಕೆಯಾಗುವಂತೆ ಮತ್ತೆ ಹೇಳಿ. ಗಂಡನಿಗೆ ಮದ್ಯವ್ಯಸನ, ವ್ಯಕ್ತಿತ್ವದೋಷ ಅಥವಾ ಇತರ ಮನೋರೋಗಗಳಿದ್ದರೆ, ಮನೋವೈದ್ಯರ ಸಲಹೆ ಪಡೆಯಿರಿ.

‘ಮರ್ಯಾದೆ ಹೋಗುತ್ತದೆ’ ಎಂದು ಯಾರಿಗೂ ಹೇಳದೇ ಇರಬೇಡಿ. ನಿಮ್ಮ ಆಪ್ತರಿಗೆ ಮತ್ತು ಗಂಡನ ಸಂಬಂಧಿಕರಿಗೆ ತಿಳಿಸಿ.
ಇದ್ಯಾವುದೂ ಕೆಲಸ ಮಾಡದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿ. ಅಗತ್ಯಬಿದ್ದಲ್ಲಿ ತೆಗೆದುಕೊಳ್ಳಿ.

1983ರಲ್ಲಿ ಮೊದಲ ಬಾರಿಗೆ ಕೌಟುಂಬಿಕ ಕಲಹವನ್ನು ಅಪರಾಧವಾಗಿ ಗುರುತಿಸಲಾಯಿತು.  2001ರಲ್ಲಿ ‘Domestic Violence Bill’ ಅನ್ನು ಅನುಷ್ಠಾನಗೊಳಿಸಿದರು. 

2005ರಲ್ಲಿ Protection of Women from Domestic Violence Act, 2005 (DVA 2005) ಜಾರಿಗೆ ಬಂತು. ಇದರಂತೆ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಟ್ಟರೆ, ಅದು ಮ್ಯಾಜಿಸ್ಟ್ರೇಟ್‌ಗೆ ತಲುಪಿ, ನಂತರದಲ್ಲಿ ವಿಚಾರಣೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT