ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಬಾಂಧವ್ಯ ಸಂಭ್ರಮ

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಒಂದು ಗಂಡು, ಒಂದು ಹೆಣ್ಣು ಮತ್ತು ಮಾಂಗಲ್ಯ, ಮೂರು ಗಂಟು, ಸಪ್ತಪದಿ, ಲಾಜಾಹೋಮ, ಮತ್ತೊಂದು ಭರ್ಜರಿ ಊಟ ಇವಿಷ್ಟೇ ವಿವಾಹವೇ? ಅಥವಾ ಅದಕ್ಕೂ ಮೀರಿದ ಆಶಯವೇನಾದರೂ ಅದರಲ್ಲಿದೆಯೇ?

ಇತ್ತೀಚೆಗೆ ಭಾಗಿಯಾದ ಕೆಲವು ಮದುವೆಗಳು ಒಂದಷ್ಟು ಇಂತಹ ವಿಚಾರಗಳನ್ನು ಯೋಚಿಸುವಂತೆ ಮಾಡಿದ್ದು ಸತ್ಯ. ಮದುವೆಗಳ ಸೀಝನ್ನು ಆರಂಭವಾಗುತ್ತಿದ್ದಂತೆ ಕಲ್ಯಾಣಮಂಟಪ, ಊಟೋಪಚಾರಗಳ ವ್ಯಾವಹಾರಿಕ ಪರ್ವದ ನಡುವೆ ವಿವಾಹವೆಂಬ ಹೊಸಬಾಳಿಗೆ ಕಾಲಿಡುವ ಶುಭಗಳಿಗೆಯ ನಿರ್ಮಲಭಾವವೂ ಬದಲಾದಂತೆ ಕಾಣುತ್ತಿದೆ. 

ವಿವಾಹಗಳಲ್ಲಿ ಅನೇಕ ಟ್ರೆಂಡುಗಳು ಬಂದಿದ್ದೂ, ಕಾಲಕಾಲಕ್ಕೆ ವಿವಾಹದ ಚೌಕಟ್ಟೂ ಮಾರ್ಪಾಡು ಕಂಡಿದೆ. ಮನೆಯಂಗಳದಲ್ಲಿ ನಡೆಯುತ್ತಿದ್ದ ಮದುವೆಗಳು ಕಲ್ಯಾಣಮಂಟಪಗಳಿಗೆ ಸ್ಥಳಾಂತರವಾಗಿವೆ. ಸರಳ ಮದುವೆಗಳು ಮರೆಯಾಗಿ ಇದೀಗ ಮತ್ತೆ ಅದ್ದೂರಿ ಸಾಂಪ್ರದಾಯಿಕ ಮದುವೆಗಳಿಗೇ ಪ್ರಾಶಸ್ತ್ಯ.

ಈ ಕಾಲದಲ್ಲಿ ಪ್ರೇಮವಿವಾಹವಾಗಿದ್ದರೂ ಈ ತಲೆಮಾರಿನ ವಧುವರರು ಶಾಸ್ತ್ರೋಕ್ತ ಮದುವೆಯನ್ನು ಇಷ್ಟಪಡಲು ಪ್ರಾಯಶಃ ಎರಡು ಕಾರಣಗಳು. ಒಂದು – ಸಂಭ್ರಮಾಚರಣೆ, ಇನ್ನೊಂದು – ಹೆತ್ತವರಿಗಾಗಿ ಅನ್ನುವ ಕಾರಣ. ಆದರೂ ಈ ಹೊತ್ತಿನ ಮದುವೆಗಳ ಸಂಭ್ರಮಾಚರಣೆ ನೋಡಿದರೆ ಒಂದು ಅವಕಾಶವನ್ನೂ ಬಿಡದೇ ‘ಎಂಜಾಯ್’ ಮಾಡಬೇಕೆನ್ನುವ ಈ ಯುಗದ ಹೊಸ ಟ್ರೇಂಡೇ ಮುಖ್ಯವೆನಿಸುತ್ತದೆ.

ಇಲ್ಲಿ ಅನುಕರಣೆಯ ಆಸೆ, ದುಂದುವೆಚ್ಚ; ಜೊತೆಯಲ್ಲೇ ಯುವಜನತೆ ತೋರುತ್ತಿರುವ ನಿರ್ಲಕ್ಷ್ಯಧೋರಣೆಗಳ ಕುರಿತೂ ಮಾತಾಡಬೇಕೆನಿಸಿದ್ದು ಈ ಹೊತ್ತಿನ ಅಗತ್ಯದಂತೆಯೇ ಕಾಣುತ್ತಿದೆ.

ಉತ್ತರಭಾರತದ ಮದುವೆಗಳಿಗೆ ಹೋಲಿಸಿದರೆ ನಮ್ಮ ದಕ್ಷಿಣ ಭಾರತದ ಮದುವೆಗಳು ಸರಳವಾಗಿ ಕಾಣುವುದಿದೆ. ಆದರೆ ಈಗ ಆಹಾರ, ಉಡುಗೆ–ತೊಡುಗೆ ಎಲ್ಲವೂ ಅನುಕರಣೆಯಾಗಿರುವುದರಿಂದ ಬಹುತೇಕ ಎಲ್ಲ ಮದುವೆಗಳು ಒಂದೇ ರೀತಿ ಕಂಡರೆ ಅಚ್ಚರಿ ಪಡಬೇಕಿಲ್ಲ. ಪೇಟಾ, ಮುಂಡಾಸು, ಪಗಡಿ, ಬಾಸಿಂಗ, ಸೀರೆಯುಡುವ ಕ್ರಮ – ಎಲ್ಲವೂ ನಿಜಕ್ಕೂ ಎರವಲು ಸಂಸ್ಕೃತಿಯನ್ನು ತೋರುತ್ತಿದೆ.

ಹೆಚ್ಚಿನ ಎಲ್ಲದಕ್ಕೂ ಹೆತ್ತವರು, ಹಿರಿಯರು  ಹೊಂದಾಣಿಕೆ ಮಾಡಿಕೊಂಡಾಗಿದೆ. ಆದರೆ ಹಿರಿಯರಿಗೆ ಅತಿಥಿಗಳಿಗೆ ಕಾಳಜಿ, ಗೌರವ ತೋರುವೆಡೆ ತೋರದಿದ್ದರೆ ಮಾತ್ರ ಅದು ಈ ಪೀಳಿಗೆಯ ಸೋಲಾಗಿ ಕಂಡು ಬರುವುದಿಲ್ಲವೇ?

ಮಗುವೊಂದು ಹುಟ್ಟಿದಾಕ್ಷಣದಿಂದ ಅದು ಹೆತ್ತವರಿಗಷ್ಟೆ ಸಂಬಂಧಿಸಿದ್ದಲ್ಲ, ಅದು ಸಮುದಾಯಕ್ಕೂ ಸಂಬಂಧಿಸಿದ್ದು. ಕೂಡು ಕುಟುಂಬವೂ ಮರೆಯಾಗಿ ಮೂರು–ನಾಲ್ಕು ಜನರ ಕುಟುಂಬಗಳಷ್ಟೇ ಇಂದು ಕಂಡುಬರುತ್ತಿವೆ. ಕಾಲಧರ್ಮಕ್ಕನುಗುಣವಾಗಿ ನೋಡುವಾಗ ಇದೂ ಸರಿಯೇ! ಹಾಗೆ ಹುಟ್ಟು, ವಿವಾಹ ಮತ್ತು ಸಾವಿನ ಸಂದರ್ಭದಲ್ಲಿ ಅಪ್ಪ ಅಮ್ಮನ ಎರಡೂ ಕಡೆಯ ಬಂಧುಗಳು ಸೇರಿ ಎಲ್ಲ ವಿಧಿವಿಧಾನಗಳಿಗೆ ಸಾಕ್ಷಿಯಾಗಿ ನೋವಿನಲ್ಲಿ ಭುಜ ಕೊಟ್ಟು, ನಲಿವಿನಲ್ಲಿ ಜೊತೆಯಾಗಿ ನಕ್ಕು ಬಂಧುಬಳಗ ಎನ್ನುವ ಶಬ್ದದ ಅರ್ಥಕ್ಕೆ ಸರಿಯಾಗಿ ನಡೆದುಕೊಳ್ಳುತ್ತಾರೆ.

ಹಾಗೆ, ಇಷ್ಟವಿಲ್ಲದಿದ್ದರೂ ಕೆಲವು ಬಂಧುಗಳು ಅನಿವಾರ್ಯವೂ ಆಗಿರುತ್ತಾರೆ. ಶುಭಸಂದರ್ಭಗಳು ಸಂಪನ್ನಗೊಳ್ಳುವುದೂ ಇಂಥ ಬಂಧುಗಳ ಹಾಜರಿಯಿಂದಲೇ ಎನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ. ಕಳೆದ ವಾರ ನಗರದಲ್ಲಿ ನಡೆದ ವಿವಾಹಗಳಲ್ಲಿ ಭಾಗಿಯಾದಾಗ ಕಣ್ಣಿಗೆ ಕಂಡ ಅನಗತ್ಯ ವೈಭವ ಮತ್ತು ಮದುಮಕ್ಕಳ ‘ಸೆಲ್ಫಿ’ ಹುಚ್ಚು ನೋಡಿ ವಿಷಾದ ಮೂಡಿತು.

ಊಟ ಮುಗಿಸಿ ವಾಲಗದವರ ‘ನಗುಮೋಮು’ ಕೇಳುತ್ತಾ ಕುಳಿತಿದ್ದರೆ ವೇದಿಕೆ ಮೇಲೆ ವಧು–ವರರು ಸ್ನೇಹಿತರೊಂದಿಗೆ ಸೆಲ್ಫಿ ತೆಗೆಯುವುದರಲ್ಲಿ ತೊಡಗಿದ್ದರು. ಅನಾರೋಗ್ಯವಿದ್ದರೂ ಕುಟುಂಬದ ಕೊನೆಯ ಮದುವೆ ಎನ್ನುವ ಕಾರಣದಿಂದ ದೂರದ ಊರಿಂದ ಬಂದಿದ್ದ ನೆಂಟರು ಉಡುಗೊರೆ ಕೊಟ್ಟು ಶುಭ ಹಾರೈಸಲು ವೇದಿಕೆಯ ಬಳಿ ನಿಂತಿದ್ದರೆ ಮದುಮಕ್ಕಳು ಮತ್ತೆ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ಮುಳುಗಿದ್ದರು.

ವಧುವರರ ಸಂತಸದಲ್ಲಿ ಭಾಗಿಯಾಗಲು ಬಂದವರಿಗೆ ಮುಜುಗರವಾಗಿ ಮುಖ ಮುಖ ನೋಡಿಕೊಂಡು ನಿಲ್ಲಬೇಕಾಯಿತು. ನೂತನ ವಧುವರರು ಸಂದರ್ಭದ ಔಚಿತ್ಯ, ಪ್ರಾಮುಖ್ಯವನ್ನು ಅರಿಯದೇ ಹೋದರು. ಹೆಚ್ಚಿನ ಮಕ್ಕಳಿಗೆ ಬಂಧುಗಳ ಅಗತ್ಯವಿಲ್ಲ, ಏನಿದ್ದರೂ ಅವರ ಸ್ನೇಹಿತರಿದ್ದರೆ ಸಾಕು ಎನ್ನುವ ಮನೋಭಾವವೂ ಇದರ ಹಿಂದೆ ಪ್ರಭಾವ ಬೀರಿರಬಹುದು, ಆದರೂ ವಿವಾಹದ ಔನ್ನತ್ಯವನ್ನು ಅರ್ಥೈಸದೇ ಹೋದರು ಎನ್ನುವ ಮಾತು ಕೇಳಬೇಕಾಯಿತು.  

ಈ ಯುವಜನಾಂಗದ ದೊಡ್ಡ ಶಕ್ತಿಯೆಂದರೆ ಆತ್ಮವಿಶ್ವಾಸ. ಯಾವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ; ಎಲ್ಲವನ್ನೂ ನಿಭಾಯಿಸುತ್ತಾರೆ; ಧೃಡನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ. ಆ ಗುರಿಯನ್ನು ತಲುಪಲು ಎಲ್ಲ ಶ್ರಮವನ್ನು ಹಾಕುತ್ತಾರೆ – ಎಲ್ಲವೂ ಸರಿ. ಆದರೆ ಈ ಎಲ್ಲ ಧನಾತ್ಮಕ ವರ್ತನೆಗಳು ಕುಟುಂಬವೂ ಸಮುದಾಯವೂ ಬಂಧುಬಳಗವೂ ಅಷ್ಟೇ ಮುಖ್ಯ ಎನ್ನುವ ಶ್ರದ್ಧೆಯನ್ನೇ ಬುಡಮೇಲು ಮಾಡಿದೆಯೋ ಎನ್ನುವಂತೇ ಸ್ವಕೇಂದ್ರಿತ ಆಲೋಚನೆಗಳೇ ತುಂಬಿದಂತೆ ಕಾಣುತ್ತಿದೆ.

‘ಇದು ನನ್ನ ಮದುವೆ, ನಾನೇ ಇದರ ಕೇಂದ್ರಬಿಂದು’ – ಒಪ್ಪುವಂಥದ್ದೇ. ಆದರೆ ಆ ಮದುವೆ ಸಂಪೂರ್ಣವಾಗುವುದೇ ಸಮುದಾಯದ ಹಾಜರಿಯಿಂದ. ಸಮುದಾಯದ ಅಗತ್ಯವಿಲ್ಲವೆಂದಾದರೆ ಸರಳವಾಗಿ ಯಾರನ್ನೂ ಆಹ್ವಾನಿಸದೇ ವಿವಾಹವನ್ನು ನೋಂದಣಿಯೂ ಮಾಡಬಹುದು ಅಲ್ಲವೇ? ಕುವೆಂಪುರವರು ಬೋಧಿಸಿದ ಮಂತ್ರಮಾಂಗಲ್ಯದಂತೆ ವಿವಾಹವಾಗಿ ಯಶಸ್ವಿ ದಾಂಪತ್ಯಜೀವನವನ್ನು ನಡೆಸಿದವರೂ ಇದ್ದಾರೆ.

ಗಂಡು–ಹೆಣ್ಣಿನ ಮದುವೆಗೆ, ಅವರ ಅತ್ಯಂತ ವೈಯಕ್ತಿಕ ಬದುಕಿನ ನಿರ್ಧಾರಕ್ಕೆ ಯಾರದೂ ಅಗತ್ಯವಿಲ್ಲವೆಂದು ಇಂಥ ಅನೇಕ ಸರಳ ರೀತಿಗಳಿರುವಾಗ ಸಮುದಾಯದ, ಬಂಧುಬಳಗದ ಅಗತ್ಯವಿಲ್ಲವೆಂದಾದ ಮೇಲೆ ಆಹ್ವಾನವನ್ನು ಕೊಡಬೇಕಾಗಿಲ್ಲ. ಆಹ್ವಾನ ಕೊಟ್ಟ ಮೇಲೆ ಅತಿಥಿಗಳ, ಬಂಧುಗಳ ಉಪಸ್ಥಿತಿಗೆ ಗೌರವ ಕೊಡುವುದು ಸುಸಂಸ್ಕೃತ ಲಕ್ಷಣ. ಕಾಲಧರ್ಮಕ್ಕೊಳಗಾಗಿ ಆಚರಣೆಗಳಲ್ಲಿ ಒಂದಷ್ಟು ಮಾರ್ಪಾಡುಗಳಾದರೂ ‘ಸಜ್ಜನಿಕೆ’ ಎನ್ನುವುದು ಎಲ್ಲ ಕಾಲದ ದೊಡ್ಡ ಧರ್ಮವಾಗಿದೆ.  

ಮದುವೆ ಎನ್ನುವುದು ಈ ಭೂಮಿಗೆ ಬಂದ ಜೀವಕ್ಕೊಂದು ಸಂಸ್ಕಾರ. ಗಂಡು–ಹೆಣ್ಣಿನ ಪುರುಷಾರ್ಥಕ್ಕೂ ಬದುಕಿನ ಅರ್ಥಸಾಧನೆಗೂ ಮುನ್ನುಡಿ. ಕುಟುಂಬದಲ್ಲಿ ಜನಿಸಿದ ಮಗುವಿಗೆ ಜನ್ಮದಿಂದಲೇ ಒಂದಷ್ಟು ಬಂಧುಗಳು ಗಂಟು ಬಿದ್ದಿರುತ್ತಾರೆ. ಅನಿವಾರ್ಯವಾದರೂ ಬಂಧುಗಳು ಇದ್ದೇ ಇರುತ್ತಾರೆ. ನಾವು ಬಂಧುಗಳನ್ನು ದೂರವಿಟ್ಟ ತಕ್ಷಣ ಸಂಬಂಧಗಳು ಇಲ್ಲವಾಗುವುದಿಲ್ಲ.

ಸಹನೆಯಿಂದಲೋ ಅಸಹನೆಯಿಂದಲೋ ಸಂಬಂಧಗಳು ಅದರ ಪಾಡಿಗೆ ವೃದ್ಧಿಯಾಗುತ್ತಿರುತ್ತವೆ. ಉಪೇಕ್ಷೆ ಮಾಡುವುದು–ಬಿಡುವುದು, ಅಥವಾ ಸಂಬಂಧಗಳನ್ನು ಪೋಷಿಸುವುದು ವ್ಯಕ್ತಿಯ ಮಾನಸಿಕ ಶಕ್ತಿಗೆ ಬಿಟ್ಟ ವಿಚಾರ. ಸಂಬಂಧಗಳ ಫಲ ಅಥವಾ ಸುಖ ಮಾತ್ರ ಬೇಕು, ಅವುಗಳ ಹೊರೆಯನ್ನು ಹೊರಲು ಸಾಧ್ಯವಿಲ್ಲ ಎನ್ನುವಂತಿಲ್ಲ. ಏಕೆಂದರೆ ಭೂಮಿಗೆ ಬಂದ ಪ್ರತಿಯೊಂದು ಜೀವಿಯೂ ಒಂದಷ್ಟು ಸಂಬಂಧಗಳಿಗೆ ಬದ್ಧವಾಗಿರುತ್ತದೆ.

ಸನ್ಯಾಸಿಯೂ ಸಂಸಾರಿಯೂ ಸಮುದಾಯದ ಜೀವನಕ್ಕೆ ಒಳಪಡಲೇಬೇಕು. ಇನ್ನು ಅವರ ಅಸ್ತಿತ್ವ ಸಮುದಾಯದಲ್ಲಿ ಎಷ್ಟು ಬಲವಾಗಿರುತ್ತದೆ ಎನ್ನುವುದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರವಷ್ಟೇ ಹೊರತು ಬಂಧಗಳಿಗೆ ಒಳಪಡದಿರುವ ಜೀವ ಈ ಭೂಮಿ ಮೇಲೆ ಇಲ್ಲ. ಆದ್ದರಿಂದ ಬಂಧು–ಬಳಗವನ್ನು ಗೌರವಿಸಿ, ಇಂದಿನ ದಿನಗಳು ನಾಳೆ ನಮ್ಮವೂ ಆಗಬಹುದು ಎನ್ನುವ ಎಚ್ಚರಿಕೆ ಒಳಿತು. 

ಇನ್ನೊಂದು ಮದುವೆ, ಅಪ್ಪ ಅಮ್ಮ ಮದುವೆಗಾಗಿಯೇ, ಇದ್ದ ಸೈಟ್‌ ಒಂದನ್ನು ಮಾರಿ ನಗರದ ಪ್ರತಿಷ್ಠಿತ ಕಲ್ಯಾಣಮಂಟಪವನ್ನು ಮೂರು ದಿನಗಳಿಗಾಗಿ ಕಾಯ್ದಿರಿಸಿದ್ದರು. ಉತ್ತರಭಾರತದ ಶೈಲಿಯಲ್ಲಿ ‘ಮೆಹೆಂದಿ’, ’ಸಂಗೀತ್’ ಎಂದು ಮತ್ತೆ ಮದುವೆ–ಆರತಕ್ಷತೆಯೆಂದು ಎಲ್ಲವೂ ಮುಗಿದಾಗ ಹುಡುಗಿಯ ಅಪ್ಪ–ಅಮ್ಮನ ಮುಖ ಸೊರಗಿ ಹೋಗಿತ್ತು.

ರಸ್ತೆಯಂಚಿನಿಂದಲೇ ಹಾಸಿದ್ದ ಕೆಂಪುಹಾಸು, ಕಲ್ಯಾಣಮಂಟಪದುದ್ದಕ್ಕೂ ವೈಕುಂಠದ್ವಾರಗಳಂತೆ ಹೂವಿನ ಅಲಂಕಾರ, ವೇದಿಕೆಯಂತೂ ಇಂದ್ರನ ಒಡ್ಡೋಲಗ! ಊಟ ಮುಗಿಸಿ ಹೊರಬಂದಾಗ ರಾಶಿ ಜರ್ಬೇರಾ ಹೂಗಳು ಬಿಸಿಲಿನ ಝಳಕ್ಕೆ ಬಾಡಿ ಕೆಲವು ತಾಸುಗಳ ವೈಭವಕ್ಕೆ ಸೊರಗಿ ಮುದುಡಿದ್ದವು. ಸೈಟ್ ಮಾರಿ ಮದುವೆ ಮಾಡುವುದು ಹೆತ್ತವರ ಪ್ರತಿಷ್ಠೆಯೋ, ಮಕ್ಕಳ ಹಟವೋ ಅಥವಾ ಬೀಗರ ಬೇಡಿಕೆಯೋ –
ಅದಕ್ಕುತ್ತರವಿಲ್ಲ. ಆದರೆ ಇಂಥವನ್ನು ನೋಡಿ ಅನುಕರಣೆ ಮಾಡುವ ಅಪಾಯವೂ ಇರುವಾಗ ಯೋಚಿಸಿ ನಿರ್ಧಾರ ಮಾಡುವುದು ಒಳ್ಳೆಯದು.

ಎಷ್ಟು ದೊಡ್ಡ ದೊಡ್ಡ ಉಪದೇಶ ನೀಡಿದರೂ ನಮ್ಮ ಸಮಾಜದೊಳಗೂ ಅನೇಕ ವರ್ಗದ ಸಮಾಜಗಳಿರುತ್ತದೆ. ಶ್ರೀಮಂತವರ್ಗದ ಇಂಥ ಮದುವೆಗಳು ನೂರಾರು ಜನರಿಗೆ ಉದ್ಯೋಗ ನೀಡುತ್ತವೆ. ಹೂವಿನ, ಶಾಮಿಯಾನದ ವ್ಯಾಪಾರಿಗಳಿಗೂ ಕೈತುಂಬ ನೀಡುತ್ತಿವೆ ಎಂದೆಲ್ಲಾ ನೂರು ಸಮರ್ಥನೆಗಳಿದ್ದರೂ ಮಧ್ಯಮ ವರ್ಗದವರು ಇಷ್ಟು ಅದ್ದೂರಿ ಮದುವೆ ಮಾಡುವಾಗ ಈ ನೂರಾರು ಜನರಿಗೆ ಕೈತುಂಬ ಕೊಡುವ ಕೈ ಮಾತ್ರ ಒಂದೇ ಎಂಬುದನ್ನು ಮರೆಯಲು ಸಾಧ್ಯವೇ?

ಐನೂರು ಕೋಟಿ ಮದುವೆಯಿಂದ ಹಿಡಿದು, ರಾಜ ಮನೆತನದವರ ಮದುವೆ, ರಾಜಕಾರಣಿಗಳ ಮಕ್ಕಳ ಮದುವೆ, ಸಿನಿಮಾತಾರೆಯರ ಮದುವೆಗಳು ಸಾಮಾನ್ಯರ ಪಾಲಿಗೆ ಕಣ್ಣಲ್ಲಿ ನಕ್ಷತ್ರಗಳನ್ನು ಸೃಷ್ಟಿಸುತ್ತಿರುತ್ತವೆ. ಒಂದಷ್ಟು ಅದ್ದೂರಿ ಮದುವೆಗಳ ಚರ್ಚೆಗಳಾಗುತ್ತವೆ, ಸ್ವಲ್ಪ ದಿನಗಳಲ್ಲಿ ಪರ, ವಿರೋಧ ಮತ್ತು ಮೌನವಾಗಿ ಎರಡನ್ನೂ ನೋಡುವವರ ಜ್ಞಾಪಕ ಚಿತ್ರಶಾಲೆಯಿಂದ ಎಲ್ಲವೂ ಮರೆಯಾಗುತ್ತದೆ, ಅಷ್ಟೇ.

ಅದ್ದೂರಿ, ಸರಳ ಮದುವೆಗಳು ಅವರವರ ಆಯ್ಕೆ. ಆದರೆ ಆಯ್ಕೆಯನ್ನೂ ಅವರ ವರಮಾನವನ್ನು ನೋಡಿಯೇ ನಿರ್ಧರಿಸಬೇಕಲ್ಲವೇ! ಸರಳತೆ ಎನ್ನುವುದು ಬೋಧಿಸಿ ಬರುವಂಥದ್ದಲ್ಲ, ನಿಜ. ಆದರೆ ಹೆತ್ತವರ ಆರ್ಥಿಕ ಸ್ಥಿತಿ ನೋಡಿ ಇಂಥ ತಯಾರಿಗಳನ್ನು ಮಾಡುವುದು ಸರಿಯಲ್ಲವೇ? ಇದರಲ್ಲಿ ಮಕ್ಕಳಿಗೆ ತಿಳಿ ಹೇಳದೇ ಇರುವ ಹೆತ್ತವರ ತಪ್ಪೆಷ್ಟು? ತಿಳಿಹೇಳಿಯೂ ಅರ್ಥ ಮಾಡಿಕೊಳ್ಳದೇ ಹೋಗುವ ಮಕ್ಕಳ ತಪ್ಪೆಷ್ಟು ಎನ್ನುವುದು ಅವರವರೇ ನಿರ್ಧರಿಸಬೇಕಾದ ವಿಷಯ.

ಊರಿನಲ್ಲಿ ನಡೆದ ಇನ್ನೊಂದು ಮದುವೆ, ಸರಳ ವೇದಿಕೆ, ಮದುಮಕ್ಕಳಿಗೆ ಅಡಕೆಸಿಂಗಾರದ ಹಾರ, ಪ್ರತಿಯೊಬ್ಬನಲ್ಲೂ ಬಂದು ಮಾತಾಡಿ ಹೋಗುತ್ತಿದ್ದ ಕುಟುಂಬದ ಯಜಮಾನ ಮತ್ತು ಯಜಮಾನತಿ. ಅತಿರೇಕದ ವೈಭವವಿಲ್ಲದೇ ಆತ್ಮೀಯವಾಗಿದ್ದ ವಾತಾವರಣ ಮನ ತುಂಬಿತ್ತು. ಮದುಮಕ್ಕಳನ್ನು ಎಷ್ಟು ಸಾಧ್ಯವೋ ಅಷ್ಟು ಹತ್ತಿರದ ಸಂಬಂಧಿಗಳು ಗೋಳು ಹೊಯ್ದುಕೊಳ್ಳುತ್ತಿದ್ದರು. ಮದುವೆ ಎಂದರೆ ಹೀಗಿದ್ದರೆ ಚೆನ್ನ ಎಂದು ಅನಿಸಿದ್ದು ಸುಳ್ಳಲ್ಲ.

ವಿವಾಹವೆಂದರೆ ಆಚರಣೆಗಳೊಂದಿಗೆ ಮನಸ್ಸಿಗೂ ಸಂಭ್ರಮವನ್ನು ಉಂಟುಮಾಡುವಂಥದ್ದು. ಬಾಹ್ಯ ಆಚರಣೆಗಳು ಪ್ರಪಂಚದ ಸಾಕ್ಷಿಗಷ್ಟೇ ಹೊರತು ವಿವಾಹ ಮನಸ್ಸಿಗೆ ಹೆಚ್ಚು ಸಂಬಂಧಪಟ್ಟದ್ದು. ಅಪ್ಪಟ ಪೂಜೆಯಂತೆ. ಅದು ಬದ್ಧತೆಯನ್ನು ಬಯಸುವಂಥದ್ದು. ಬದ್ಧತೆ ಸಂಗಾತಿಯೆಡೆಗಷ್ಟೇ ಅಲ್ಲದೆ ಹೆತ್ತವರೊಂದಿಗೆ, ಬಂಧುಗಳೆಡೆಗೂ ಇದ್ದರೆ ವಿವಾಹದ ಆಶಯವೂ ಪೂರೈಸಿದಂತೇ.

ಹೇಗೆ ಪೂಜೆಯಲ್ಲಿ ಹೊರಗಿನ ಆಚರಣೆಗಳು ಹೆಚ್ಚಾದಂತೆ ಮನಸ್ಸು ದೇವರಿಂದ ವಿಮುಖಗೊಳ್ಳುವ ಅವಕಾಶಗಳೂ ಬರುವಂತೆ ವಿವಾಹವೂ ಹಾಗೆ. ಒಂದು ವಿವಾಹ ಎರಡು ಹೊಸ ಕುಟುಂಬಗಳನ್ನು ಒಂದಾಗಿಸುವುದಲ್ಲದೇ ಈಗಾಗಲೇ ಇರುವ ಬಂಧುಗಳ ಬಂಧವನ್ನೂ ಗಟ್ಟಿ ಮಾಡುತ್ತದೆ. ಆಗಲೇ ಅದು ನಿಜವಾದ ಸಂಭ್ರಮವಾಗಿ ಕಾಣುವುದು. ಹೊರಗಿನ ಸಂಭ್ರಮದ ಜೊತೆಗೆ ಹಿರಿಯರ ಬಂಧುಗಳ ಹಾರೈಕೆ, ಹೆತ್ತವರ  ಆರ್ಶಿವಾದ ದಕ್ಕಿಸಿಕೊಂಡು ಒಳಗಿನ ಸಂಭ್ರಮ ಹೆಚ್ಚಿಸಿಕೊಳ್ಳುವುದು ಚೆನ್ನ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT