ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆರೋಗ್ಯ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಕಾಳಜಿ

Last Updated 31 ಮಾರ್ಚ್ 2017, 18:57 IST
ಅಕ್ಷರ ಗಾತ್ರ

ವಾಯುಮಾಲಿನ್ಯ ನಿಯಂತ್ರಣದ ಭಾರತ್‌ ಸ್ಟೇಜ್‌–4 (ಬಿಎಸ್‌–4) ಮಾನದಂಡ ಹೊಂದಿಲ್ಲದ  ಭಾರತ್ ಸ್ಟೇಜ್–3 (ಬಿಎಸ್‌–3) ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಏಪ್ರಿಲ್‌ ಒಂದರಿಂದ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಜನರ ಆರೋಗ್ಯ ರಕ್ಷಣೆ ಮತ್ತು ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶ ಮಹತ್ವದ್ದು.

ವಾಹನ ತಯಾರಿಕಾ ಸಂಸ್ಥೆಗಳ ವಾಣಿಜ್ಯ ಹಿತಾಸಕ್ತಿ ರಕ್ಷಿಸುವಂತಹ ಆರ್ಥಿಕ ಲಾಭಕ್ಕಿಂತ, ಸಾರ್ವಜನಿಕರ ಆರೋಗ್ಯ ರಕ್ಷಣೆಯೇ ಮುಖ್ಯ ಎನ್ನುವುದಕ್ಕೆ  ಕೋರ್ಟ್‌ನ ಈ ತೀರ್ಪು ಆದ್ಯತೆ ನೀಡಿದೆ. ಆದರೆ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಗಳ ಪಾಲಿಗೆ ಇದೊಂದು ದೊಡ್ಡ ಪ್ರಹಾರವಾಗಿದೆ. ಬಿಎಸ್‌–3ಗಿಂತ ಕಡಿಮೆ ಮಾಲಿನ್ಯಕಾರಕವಾದ ಬಿಎಸ್‌–4 ಮಾನದಂಡದ ಎಂಜಿನ್‌ ಹೊಂದಿರುವ ವಾಹನಗಳನ್ನು   ಮಾತ್ರ 2017ರ ಹಣಕಾಸು ವರ್ಷದ  ಮೊದಲ ದಿನದಿಂದ ಮಾರಾಟ ಮತ್ತು ನೋಂದಣಿ ಮಾಡಬೇಕು ಎಂದು ಒಂದೂವರೆ ವರ್ಷದ ಹಿಂದೆಯೇ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.   ಅದನ್ನು ಗಂಭೀರವಾಗಿ ಪರಿಗಣಿಸದ ದ್ವಿಚಕ್ರ ವಾಹನ ಮತ್ತು ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಗಳು ಈಗ ಅದಕ್ಕೆ ಬೆಲೆ ತೆರಬೇಕಾಗಿ ಬಂದಿದೆ. ₹ 20,000 ಕೋಟಿಗಳಷ್ಟು ನಷ್ಟ ಎದುರಿಸಬೇಕಾಗಿದೆ.  ಇಂತಹ ಪರಿಸ್ಥಿತಿ ಆಹ್ವಾನಿಸಿಕೊಳ್ಳುವುದಕ್ಕೆ ವಾಹನ ತಯಾರಿಕಾ ಸಂಸ್ಥೆಗಳ ಎಣಿಕೆ ತಪ್ಪಾಗಿರುವುದೇ ಮುಖ್ಯ ಕಾರಣವಾಗಿದೆ.  ಅದೇ ಈಗ ದುಬಾರಿಯಾಗಿ ಪರಿಣಮಿಸಿದೆ. ಏಳು ವರ್ಷಗಳ  ಹಿಂದಿನ ಅನುಭವ ಪುನರಾವರ್ತನೆಯಾಗಲಿದೆ ಎನ್ನುವುದು ಅವುಗಳ ನಿರೀಕ್ಷೆಯಾಗಿತ್ತು. ಆಗ ಬಿಎಸ್‌–2 ರಿಂದ ಬಿಎಸ್‌–3 ಮಾನದಂಡಕ್ಕೆ ಬದಲಾಗುವಾಗ ಗಡುವನ್ನು ಹಲವು ತಿಂಗಳವರೆಗೆ ವಿಸ್ತರಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಈಗ ಅಂತಹ ರಿಯಾಯಿತಿ ಕಂಡುಬರದಿರುವುದು ವಾಹನ ತಯಾರಿಕಾ ಸಂಸ್ಥೆಗಳಿಗೆ  ಮುಳುವಾಗಿ ಪರಿಣಮಿಸಿದೆ. ನಷ್ಟದ ಹೊರೆ ಕಡಿಮೆ ಮಾಡಿಕೊಳ್ಳಲು ಬೈಕ್‌ ತಯಾರಿಕಾ ಸಂಸ್ಥೆಗಳು ಮಾರ್ಚ್‌ ಕೊನೆಯ ಎರಡು ದಿನಗಳಲ್ಲಿ    ಮಾರಾಟಕ್ಕೆ ಭಾರಿ ರಿಯಾಯಿತಿ ಕೊಡುಗೆ ಪ್ರಕಟಿಸಿದವು.  ಹೀಗಾಗಿ, ಮಾಲಿನ್ಯ ನಿಯಂತ್ರಣ ಮಾನದಂಡ ಪೂರೈಸದ 8.24 ಲಕ್ಷ ವಾಹನಗಳನ್ನು ಭಾರಿ ರಿಯಾಯಿತಿ ಬೆಲೆಗೆ ಮಾರಾಟ ಮಾಡಲು ಮುಂದಾಗುವ ಧಾವಂತ ಪ್ರದರ್ಶಿಸಬೇಕಾಯಿತು. ಆದರೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲೂ ಅವಕಾಶ ಇರುವುದರಿಂದ ಆರ್ಥಿಕ ನಷ್ಟದ ಪ್ರಮಾಣ ಕಡಿಮೆ ಇರಲಿದೆ ಎಂದೂ ಭಾವಿಸಬಹುದು. ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಇಂತಹ ಸೂಕ್ಷ್ಮ ವಿಷಯದಲ್ಲಿ ಸರ್ಕಾರವೂ ಹೊಣೆಗಾರಿಕೆಯಿಂದ ವರ್ತಿಸಿಲ್ಲ.  ಬಿಎಸ್‌–4 ತಂತ್ರಜ್ಞಾನ ಲಭ್ಯವಿದ್ದರೂ, ಅದಕ್ಕೆ ಸೂಕ್ತವಾದ ಇಂಧನವು ಎಲ್ಲೆಡೆ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ವಾಹನ ತಯಾರಿಕಾ ಸಂಸ್ಥೆಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ಇದರಲ್ಲಿ ಸರ್ಕಾರದ ವೈಫಲ್ಯವೂ ಇದೆ. ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಿದ ವಾಹನಗಳು ಕಡಿಮೆ ದರ್ಜೆಯ ಇಂಧನ ಬಳಸಿದರೆ ಅವುಗಳ ಎಂಜಿನ್‌ ಹಾಳಾಗುವ ಸಾಧ್ಯತೆ ಇರುವುದರಿಂದ, ‘ಒಂದು ದೇಶ, ಒಂದು  ಇಂಧನ’ ನೀತಿಯನ್ನೂ ಸರ್ಕಾರ ತುರ್ತಾಗಿ ಜಾರಿಗೆ ತರಬೇಕಾಗಿದೆ.

ಈ ಮೊದಲೇ ನಿಗದಿಪಡಿಸಿದ್ದ ಗಡುವು ಕೊನೆಗೊಳ್ಳಲು ಎರಡೇ ದಿನ ಬಾಕಿ ಇರುವಾಗ ತೀರ್ಪು ಪ್ರಕಟಿಸುವ ಬದಲು, ಇನ್ನಷ್ಟು ಮುಂಚಿತವಾಗಿಯೇ ಕೋರ್ಟ್‌ ಈ ನಿರ್ಧಾರಕ್ಕೆ ಬರಬೇಕಾಗಿತ್ತು. ಕೆಲ ತಿಂಗಳವರೆಗೆ ಗಡುವು ವಿಸ್ತರಿಸಿದ್ದರೆ, ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ದೇಶದಲ್ಲಿನ 19 ಕೋಟಿ  ವಾಹನಗಳ ಪೈಕಿ 8.25 ಲಕ್ಷ ಬೈಕ್‌ಗಳ ಮಾಲಿನ್ಯದ ಕೊಡುಗೆ ಗಮನಾರ್ಹ ಪ್ರಮಾಣದಲ್ಲೇನೂ ಇರುತ್ತಿರಲಿಲ್ಲ. ಒಂದರ್ಥದಲ್ಲಿ ಇದೊಂದು ನ್ಯಾಯಾಂಗದ ಅತಿಯಾದ ಕ್ರಿಯಾಶೀಲತೆಗೆ ನಿದರ್ಶನವಾಗಿದೆ. 2020ರ ಹೊತ್ತಿಗೆ ಬಿಎಸ್‌–5 ಕೈಬಿಟ್ಟು, ಬಿಎಸ್‌–6 ಮಟ್ಟಕ್ಕೆ (ಯುರೊ–6) ವಾಯುಮಾಲಿನ್ಯ ತಗ್ಗಿಸುವ ಗುರಿ ನಿಗದಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆ ಎದುರಾಗದಿರಲು ಸರ್ಕಾರ ಕೆಲ ರಚನಾತ್ಮಕ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ. ವಾಯುಮಾಲಿನ್ಯಕ್ಕೆ ಕಡಿವಾಣ ವಿಧಿಸುವ ಗುಣಮಟ್ಟದ ಇಂಧನ ಪೂರೈಕೆ ಜತೆಗೆ, ವಾಹನ ದಟ್ಟಣೆ ತಗ್ಗಿಸುವ, ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಆಗುವ ಮಾಲಿನ್ಯಕ್ಕೆ ಕಡಿವಾಣ ಹಾಕುವ ಮತ್ತು ಸಾರ್ವಜನಿಕ ಸಾರಿಗೆ ಸೌಲಭ್ಯ ಹೆಚ್ಚಿಸಿದರೆ ಮಾತ್ರ ದೇಶದಾದ್ಯಂತ ವಾಯುಮಾಲಿನ್ಯದ ಮಟ್ಟವು ತಗ್ಗೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT