ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿಗೆ ಜ್ವರ, ಎಮ್ಮೆಗೆ ಬರೆ

Last Updated 31 ಮಾರ್ಚ್ 2017, 19:13 IST
ಅಕ್ಷರ ಗಾತ್ರ

ಉತ್ತರಪ್ರದೇಶದಲ್ಲಿ ಆದಿತ್ಯನಾಥ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವು ದಿನಗಳಲ್ಲಿಯೇ ಅಲ್ಲಿನ ಮಾಂಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲಾಗುವುದು ಎಂಬುದು ‘ಲೋಕಸಂಕಲ್ಪ ಪತ್ರ’ ಎಂಬ ಹೆಸರಿನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಭರವಸೆ.  ಅಧಿಕಾರಕ್ಕೆ ಬಂದ ಕೂಡಲೇ ಆದಿತ್ಯನಾಥ ನೇತೃತ್ವದ ಸರ್ಕಾರ ಈ ಭರವಸೆ ಈಡೇರಿಕೆಗೆ ಮುಂದಾಗಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ರಾಹುಲ್‌ ಭಟ್ನಾಗರ್‌ ಅವರು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲಾಧಿಕಾರಿಗಳು, ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಗಳ ಆಯುಕ್ತರಿಗೆ ಬರೆದ ಮೊದಲ ಪತ್ರದಲ್ಲಿಯೇ ಸರ್ಕಾರದ ಆದ್ಯತೆ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಅನಧಿಕೃತ ಕಸಾಯಿಖಾನೆಗಳನ್ನು ಬಂದ್‌ ಮಾಡಿಸುವುದು ಮತ್ತು ಯಾಂತ್ರೀಕೃತ ಕಸಾಯಿಖಾನೆಗಳನ್ನು ನಿಷೇಧಿಸುವುದು ಈ ಸರ್ಕಾರದ ಆದ್ಯತೆ’ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.

ಈ ಪತ್ರ ತಲುಪಿದ ಕೂಡಲೇ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರಿ ಯಂತ್ರ ಕಾರ್ಯಪ್ರವೃತ್ತವಾಗಿದೆ. ರಫ್ತು ಉದ್ದೇಶಕ್ಕಾಗಿ ಮಾಂಸ ಸಂಸ್ಕರಣೆ ಮಾಡುವ ಹತ್ತಕ್ಕೂ ಹೆಚ್ಚು ಘಟಕಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ ಎಂದು ಮಾಂಸ ರಫ್ತುದಾರರ ಸಂಘ ಹೇಳಿದೆ. ಘಟಕಗಳನ್ನು ಮುಚ್ಚಿಸುವುದಕ್ಕಾಗಿ ಅಧಿಕಾರಿಗಳು ನೆಪ ಹುಡುಕುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಆದರೆ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರದ ನೀತಿ ವಿರೋಧಿಸಿ ಮಾಂಸ ವ್ಯಾಪಾರಿಗಳ ಸಂಘ ಮುಷ್ಕರ ನಡೆಸುತ್ತಿದೆ. ಸಂಘದ ಪದಾಧಿಕಾರಿಗಳು ಮತ್ತು ಆರೋಗ್ಯ ಸಚಿವ ಸಿದ್ಧಾರ್ಥನಾಥ ಸಿಂಗ್‌ ಅವರ ನಡುವೆ ನಡೆದ ಮಾತುಕತೆ ಫಲ ನೀಡಿಲ್ಲ. ಹಾಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ.

ಯಾರಿಗೆಲ್ಲ ತಟ್ಟಿದೆ ಬಿಸಿ?: ಎನ್‌ಡಿಟಿ.ವಿಯಲ್ಲಿ ಪ್ರಸಾರವಾದ ವರದಿಯೊಂದು ಉತ್ತರಪ್ರದೇಶದಲ್ಲಿ ಈಗಿನ ಒಂದು ಚಿತ್ರಣವನ್ನು ನಮಗೆ ಕಟ್ಟಿ ಕೊಡುತ್ತದೆ: ಬುಲಂದ್‌ಶಹರ್‌ ಜಿಲ್ಲೆಯ ಗುಲಾವೊಥಿ ಪಟ್ಟಣ, ರಾಜಧಾನಿ ದೆಹಲಿಯಿಂದ 60 ಕಿ.ಮೀ ದೂರದಲ್ಲಿದೆ. ಇಲ್ಲಿನ ಜಾನುವಾರು ಮಾರುಕಟ್ಟೆ ಸದಾ ಗಿಜಿಗುಟ್ಟುತ್ತಿರುತ್ತದೆ. ಇಲ್ಲಿ 1,500ರಿಂದ 2,000 ಕೋಣಗಳು ಮಾರಾಟವಾಗುತ್ತವೆ. ಆದರೆ ಕಳೆದ ಸೋಮವಾರ ಜಾನುವಾರು ಮಾರುಕಟ್ಟೆ ಹೊರಭಾಗದಲ್ಲಿರುವ ಮರಕ್ಕೆ ಒಂದು ಕೋಣವನ್ನು ಕಟ್ಟಿ ಹಾಕಿ ಒಬ್ಬ ರೈತ ಮಾತ್ರ ನಿಂತಿದ್ದ. ಉಳಿದಂತೆ ಇಡೀ ಮಾರುಕಟ್ಟೆ ನಿರ್ಜನವಾಗಿತ್ತು. ಕೋಣ ಮಾರಿ ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಆತ ಬಯಸಿದ್ದ. ಆದರೆ ಕೋಣವನ್ನು ಕೊಳ್ಳುವವರು ಯಾರೂ ಇರಲಿಲ್ಲ.

ಹೀಗಾಗಿ, ಮಾಂಸ ಉದ್ಯಮದ ಬಂದ್‌ನಿಂದ ಯಾರ ಮೇಲೆಲ್ಲ ಪರಿಣಾಮ ಉಂಟಾಗಬಹುದು ಎಂದು ಅಂದಾಜಿಸಲಾಗಿದೆಯೋ ಪರಿಣಾಮ ಈ ಅಂದಾಜಿಗೆ ಸೀಮಿತವಾಗಿಲ್ಲ ಎಂಬುದು ಈಗ ಅರಿವಾಗುತ್ತಿದೆ. ಮಾಂಸ ಮಾರಾಟ, ಚರ್ಮೋದ್ಯಮ ಮತ್ತು ಜಾನುವಾರು ಸಾಕಣೆಯ ಮೇಲಿನ ಪರಿಣಾಮ ನೇರ ಮತ್ತು ಸ್ಪಷ್ಟ. ಕೋಣ ಅಥವಾ ಎಮ್ಮೆಯನ್ನು ಮಾರಿ ಬೇಸಾಯ ಅಥವಾ ಕುಟುಂಬದ ಅಗತ್ಯಗಳಿಗೆ ಹಣ ಹೊಂದಿಸಲು ಬಯಸುವ ರೈತನಿಗೆ ಈಗ ಆ ದಾರಿ ಮುಚ್ಚಿ ಹೋಗಿದೆ. ಉತ್ತರ ಪ್ರದೇಶದಲ್ಲಿ ಬರಪೀಡಿತ ಪ್ರದೇಶಗಳು ಸಾಕಷ್ಟಿವೆ. ಕೋಣ ಅಥವಾ ಎಮ್ಮೆಯನ್ನು ಮಾರಿ ಸದ್ಯದ ಸಂಕಷ್ಟದಿಂದ ಪಾರಾಗುವುದು ರೈತನಿಗೆ ಸಾಧ್ಯವಿಲ್ಲ.
ಇಂಡಿಯಾ ಸ್ಪೆಂಡ್‌ ಸಂಸ್ಥೆ ಇತ್ತೀಚೆಗೆ ಸಿದ್ಧಪಡಿಸಿದ ವರದಿ ಪ್ರಕಾರ, ಜಾರ್ಖಂಡ್‌ ನಂತರ ಅತ್ಯಂತ ಹೆಚ್ಚು ನಿರುದ್ಯೋಗ ಪ್ರಮಾಣ ಇರುವ ರಾಜ್ಯ ಉತ್ತರಪ್ರದೇಶ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದೇಶದಲ್ಲಿ ಎಂಟನೇ ಅತ್ಯಂತ ಹಿಂದುಳಿದ ರಾಜ್ಯ ಇದು.

ಈ ರಾಜ್ಯದಲ್ಲಿ ಮಾಂಸದ ಉದ್ಯಮ ನೇರವಾಗಿ ಮತ್ತು ಪರೋಕ್ಷವಾಗಿ 26 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಈಗ ನಿರುದ್ಯೋಗಿಗಳಾಗಿದ್ದಾರೆ.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ  (ಎಪಿಇಡಿಎ) ವರದಿಯ ಪ್ರಕಾರ, ಅನಧಿಕೃತ ಕಸಾಯಿಖಾನೆಗಳು ಕೂಡ ರಫ್ತು ಉದ್ದೇಶಕ್ಕೆ ಮಾಂಸ ಸಂಸ್ಕರಣೆ ನಡೆಸುತ್ತಿವೆ.

ನೋಂದಾಯಿತ ಕಸಾಯಿಖಾನೆಗಳಲ್ಲಿ ಹೆಚ್ಚಿನವು ರಫ್ತು ಮಾಡುವ ಮಾಂಸದ ಸಂಸ್ಕರಣೆಯನ್ನಷ್ಟೇ ಮಾಡುತ್ತವೆ. ದೇಶದೊಳಗಿನ ಮಾಂಸದ ಬೇಡಿಕೆ ಪೂರೈಸುವುದಕ್ಕಾಗಿ ಅಕ್ರಮ ಕಸಾಯಿಖಾನೆಗಳು ಹುಟ್ಟಿಕೊಂಡಿವೆ.

ಜಾರ್ಖಂಡ್‌ನಲ್ಲಿ ನಿಷೇಧ: ಉತ್ತರಪ್ರದೇಶದ ರೀತಿಯಲ್ಲಿಯೇ ಬಿಜೆಪಿ ಆಡಳಿತದಲ್ಲಿರುವ ಜಾರ್ಖಂಡ್‌ನಲ್ಲಿಯೂ ಅಕ್ರಮ ಕಸಾಯಿಖಾನೆ ಮತ್ತು ಯಾಂತ್ರೀಕೃತ ಕಸಾಯಿಖಾನೆಗಳನ್ನು ನಿಷೇಧಿಸಲಾಗಿದೆ.  ಆದರೆ ರಾಜ್ಯದಲ್ಲಿ ಇರುವ ಅಧಿಕೃತ ಕಸಾಯಿಖಾನೆಗಳು ಎಷ್ಟು ಮತ್ತು ಯಾವುವು ಎಂಬ ಬಗ್ಗೆ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಇತ್ತೀಚೆಗೆ ವರದಿಯಾಗಿದೆ.

ಈಶಾನ್ಯದಲ್ಲಿ ಬೇರೊಂದು ನೀತಿ: ಮೇಘಾಲಯ, ನಾಗಾಲ್ಯಾಂಡ್‌ ಮತ್ತು ಮಿಜೊರಾಂನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರಪ್ರದೇಶದಲ್ಲಿ ಜಾರಿಗೆ ತಂದ ರೀತಿಯ ಕಸಾಯಿಖಾನೆ ನಿಷೇಧವನ್ನು ಅನುಷ್ಠಾನ ಮಾಡುವುದಿಲ್ಲ ಎಂದು ಈ ಮೂರೂ ರಾಜ್ಯಗಳ ಬಿಜೆಪಿ ಮುಖ್ಯಸ್ಥರು ಹೇಳಿದ್ದಾರೆ.

ಈ ರಾಜ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದನದ ಮಾಂಸ ಇಲ್ಲಿಯ ಜನರ ಸಾಮಾನ್ಯ ಆಹಾರವಾಗಿದೆ.

*

ಕಾನೂನು ಏನೆನ್ನುತ್ತದೆ?
* ಕಸಾಯಿಖಾನೆಗಳ ಆಧುನೀಕರಣ ಮತ್ತು ಅವುಗಳನ್ನು ನಗರ ವ್ಯಾಪ್ತಿಯಿಂದ ಹೊರಗೆ ಸ್ಥಳಾಂತರಿಸುವುದರ ಮೇಲೆ ನಿಗಾ ಇರಿಸಲು ರಾಜ್ಯ ಸರ್ಕಾರಗಳು ಸಮಿತಿ ರಚಿಸಬೇಕು ಎಂದು 2012ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ.

* ಪರವಾನಗಿ ಹೊಂದಿಲ್ಲದ ಕಸಾಯಿಖಾನೆಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಬಾರದು ಎಂದು 2015ರಲ್ಲಿ ರಾಷ್ಟ್ರೀಯ ಹಸಿರು ಪೀಠ ಹೇಳಿದೆ.

* ಉತ್ತರ ಪ್ರದೇಶ ಮಹಾನಗರಪಾಲಿಕೆ ಕಾಯ್ದೆ 1959ರ ಪ್ರಕಾರ, ಕಸಾಯಿಖಾನೆಗಳ ಮೂಲಕ ಜನರಿಗೆ ತಾಜಾ ಮತ್ತು ಆರೋಗ್ಯಕರ ಮಾಂಸ ಪೂರೈಸಬೇಕು. ಕಸಾಯಿಖಾನೆಗಳು ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ತಪ್ಪಿಸಬೇಕು

* ಉತ್ತರ ಪ್ರದೇಶದಲ್ಲಿರುವ ಕಾನೂನಿನ ಪ್ರಕಾರ, ದನ ಮತ್ತು ಎತ್ತನ್ನು ಕೊಲ್ಲುವಂತಿಲ್ಲ. ಇವುಗಳ ಮಾಂಸ ತಿನ್ನುವುದು ಅಥವಾ ಇರಿಸಿಕೊಳ್ಳುವುದು ಅಪರಾಧ. ಆದರೆ ಕೋಣ ಮತ್ತು ಎಮ್ಮೆಗೆ ಇದು ಅನ್ವಯ ಆಗುವುದಿಲ್ಲ
* 2014ರ ಜೂನ್‌ 30ರಂದು ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು

*

ಚರ್ಮೋದ್ಯಮಕ್ಕೆ ಇಕ್ಕಟ್ಟು

ದೇಶದ ಸುಮಾರು 25 ಲಕ್ಷ ಜನರಿಗೆ ಚರ್ಮೋದ್ಯಮ ಉದ್ಯೋಗ ನೀಡಿದೆ. 2015–16ರಲ್ಲಿ ಭಾರತದ ಚರ್ಮ ಉತ್ಪನ್ನಗಳ ರಫ್ತಿನ ಮೊತ್ತ ₹38,396 ಕೋಟಿ. ಚರ್ಮೋದ್ಯಮದಲ್ಲಿ ಕೆಲಸ ಮಾಡುವವರು ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದವರು. ಇವರಲ್ಲಿ ಮೂರನೇ ಒಂದು ಭಾಗ ಮಹಿಳೆಯರಾದರೆ, ನಾಲ್ಕನೇ ಒಂದು ಭಾಗದಷ್ಟು ಜನರು ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದವರು.

ಮಾಂಸ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಗಳಿಂದ ಸರ್ಕಾರಕ್ಕೂ ದೊಡ್ಡ ಮಟ್ಟದ ಆದಾಯ ಇದೆ. ಆದರೆ ಈಗ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕೆ ಕತ್ತರಿ ಬೀಳಲಿದೆ. ಅಷ್ಟೇ ಅಲ್ಲ, ರೈತರು ತೊಂದರೆಗೆ ಒಳಗಾಗುವುದರ ಜತೆಗೆ ನಿರುದ್ಯೋಗವೂ ಹೆಚ್ಚಲಿದೆ ಎಂದು ಹಲವು ವಿಶ್ಲೇಷಕರು ಹೇಳುತ್ತಾರೆ.

*

ಮಾಲಿನ್ಯದಲ್ಲಿ ಪಾಲು

ತ್ಯಾಜ್ಯ ಮತ್ತು ಮಾಲಿನ್ಯವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಜಲ ಮೂಲಗಳಿಗೆ ಬಿಡುವ ಉದ್ಯಮಗಳಲ್ಲಿ ಕಸಾಯಿಖಾನೆಗಳೂ ಸೇರಿವೆ. ಅಕ್ರಮ ಕಸಾಯಿಖಾನೆಗಳು ಯಾವ ನಿಯಮವನ್ನೂ ಪಾಲಿಸದೆ ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ.

2015ರಲ್ಲಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಪಟ್ಟಿ ಮಾಡಿದ ಅತ್ಯಂತ ಮಾಲಿನ್ಯಕಾರಕ 129 ಕೈಗಾರಿಕಾ ಘಟಕಗಳಲ್ಲಿ 44 ಕಸಾಯಿಖಾನೆಗಳೂ ಸೇರಿದ್ದವು.

**

-ಹಮೀದ್‌ ಕೆ.
ಪ್ರಜಾವಾಣಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT