ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪ್ರಚಾರಕ್ಕೆ ಸಿದ್ದರಾಮಯ್ಯ

ರಂಗೇರುತ್ತಿರುವ ವಿಧಾನಸಭಾ ಉಪಚುನಾವಣೆ; ಪ್ರಚಾರ ಕಣಕ್ಕೆ ಕಾಂಗ್ರೆಸ್‌, ಬಿಜೆಪಿ ಮುಖಂಡರು
Last Updated 1 ಏಪ್ರಿಲ್ 2017, 6:56 IST
ಅಕ್ಷರ ಗಾತ್ರ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಕಾರ್ಯವನ್ನು ಶುಕ್ರವಾರದಿಂದ ಆರಂಭಿಸಲಿದ್ದು, ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ವರೆಗೂ ತೊಡಗಿಕೊಳ್ಳಲಿದ್ದಾರೆ. ಈ ಮೂಲಕ ಉಪಚುನಾವಣೆ ಇನ್ನಷ್ಟು ರಂಗು ಪಡೆಯಲಿದೆ.
 
ಒಂದು ವಾರ ಪ್ರಚಾರ ನಡೆಸಿ ಬೆಂಗಳೂರಿಗೆ ತೆರಳಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹ ಶುಕ್ರವಾರ ಪ್ರಚಾರ ಕಾರ್ಯಕ್ಕೆ ಹಿಂತಿರುಗಲಿದ್ದಾರೆ. ಗುರು ವಾರದಿಂದ ಪ್ರಚಾರ ಆರಂಭಿಸಿರುವ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಹ ಯಡಿಯೂರಪ್ಪ ಅವರೊಂದಿಗೆ ಬಹಿರಂಗ ಪ್ರಚಾರದ ಅಂತ್ಯದವರೆಗೂ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
 
ಇವರ ಜತೆ ಬಿಜೆಪಿ ನಾಯಕರಾದ ಎಸ್‌.ಸುರೇಶಕುಮಾರ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಸತತ ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ಮತದಾರರನ್ನು ಸೆಳೆಯಲು ವಿವಿಧ ಕಸರತ್ತು ನಡೆಸಲಿದ್ದಾರೆ.
 
ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಿದ್ದರಾಮಯ್ಯ ಪ್ರಚಾರ: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸುವರು. ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ನಡೆಯುವ ಸಭೆ ಯಲ್ಲಿ ಪಾಲ್ಗೊಳ್ಳುವ ಅವರು ದಿನವಿಡೀ ಪ್ರಚಾರ ಕಾರ್ಯದಲ್ಲಿ ತೊಡಗುವರು.
 
ನಿತ್ಯ ಬೆಳಿಗ್ಗೆ 9ಕ್ಕೆ ಆರಂಭವಾಗುವ ಅವರ ಪ್ರಚಾರ ಕಾರ್ಯ ಸಂಜೆ ವರೆಗೂ ನಡೆಯಲಿದೆ. ಲೋಕೋಪ ಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಂಸದ ಧ್ರುವನಾರಾಯಣ ಹೊರತುಪಡಿಸಿ ಉಳಿದ ಇತರ ಸಚಿವರು ತಾವು ನಡೆಸುವ ಪ್ರಚಾರ ಕಾರ್ಯದಲ್ಲಿ ಜತೆಯಲ್ಲಿ ಇರಬಾರದು ಎಂದು ಅವರು ಸೂಚಿಸಿದ್ದಾರೆ.

ಒಂದು ಕಡೆಯಿಂದ ಸಿದ್ದರಾಮಯ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದರೆ, ಮತ್ತೊಂದು ಕಡೆಯಿಂದ ಉಳಿದ ಸಚಿವರು ಪ್ರಚಾರ ಕಾರ್ಯ ನಡೆಸಬೇಕು. ಆ ಮೂಲಕ ಒಬ್ಬರಲ್ಲ ಒಬ್ಬ ನಾಯಕರು ಪ್ರತಿ ಹೋಬಳಿ ಕೇಂದ್ರದ ಪ್ರಮುಖ ಹಳ್ಳಿಗಳಲ್ಲಿ ನಿತ್ಯ ಪ್ರಚಾರ ನಡೆಸುವಂತೆ ನೋಡಿಕೊಳ್ಳುವ ತಂತ್ರಗಾರಿಕೆ ಹೆಣೆದಿದ್ದಾರೆ. ಏಪ್ರಿಲ್‌ 1ರಿಂದ ಅಡಗೂರು ಎಚ್‌.ವಿಶ್ವನಾಥ್‌ ಪ್ರಚಾರ ನಡೆಸಲಿದ್ದಾರೆ.
 
ತೆರೆಮರೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ: ಈಗಾಗಲೇ ಉಪಚುನಾವಣೆ ಯಲ್ಲಿ ಅಭ್ಯರ್ಥಿಯನ್ನು ಹಾಕದೆ ತಟಸ್ಥ ಧೋರಣೆ ತಳೆದಿರುವ ಜೆಡಿಎಸ್‌ನ ತಾಲ್ಲೂಕುಮಟ್ಟದ ಬಹುತೇಕ ನಾಯಕ ರನ್ನು ಕಾಂಗ್ರೆಸ್‌ ಸೆಳೆದಿದೆ.
 
ಜೆಡಿಎಸ್‌ನಲ್ಲಿದ್ದ ನಗರಸಭೆ ಸದ ಸ್ಯರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾ.ಪಂ.ಸದಸ್ಯರು ಸೇರಿ ದಂತೆ ಬಹುತೇಕ ಎಲ್ಲ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಪರ ಪ್ರಚಾರಕ್ಕೆ ಇಳಿದಿದ್ದಾರೆ. 
 
ಸ್ವಾಭಿಮಾನದ ಪ್ರಶ್ನೆ
ಮೈಸೂರು:  ‘ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ವಿ. ಶ್ರೀನಿವಾಸಪ್ರಸಾದ್ ಅವರ ಸ್ವಾಭಿಮಾನದ ಪ್ರಶ್ನೆ ಅಲ್ಲ. ಅದು ಕ್ಷೇತ್ರದ ಮತದಾರರ ಸ್ವಾಭಿಮಾನದ ಪ್ರಶ್ನೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಪ್ರತಿಪಾದಿಸಿದರು.
 
‘ಶಾಸಕರಾಗುವುದಕ್ಕೆ ಜನ ಮತ ಹಾಕಿದ್ದರೆ ವಿನಾ ಮಂತ್ರಿಯಾಗುವುದಕ್ಕೆ ಅಲ್ಲ. ಸಚಿವ ಸ್ಥಾನ ಕೈತಪ್ಪಿತು ಎಂದು ಶಾಸಕ ಸ್ಥಾನ ತ್ಯಜಿಸುವ ಮೂಲಕ ಪ್ರಸಾದ್ ಜನಾದೇಶಕ್ಕೆ ದ್ರೋಹ ಎಸಗಿ ದ್ದಾರೆ. ಇವರಿಗೆ ಯುವ ಮತದಾರರು ಪಾಠ ಕಲಿಸಲು ಸಿದ್ಧವಾಗಿದ್ದಾರೆ. ಇದನ್ನು ತಿಳಿದ ಪ್ರಸಾದ್ ಹಾಗೂ ಬಿ.ಎಸ್. ಯಡಿಯೂರಪ್ಪ ಹತಾಶರಾಗಿದ್ದಾರೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 
‘ಯಡಿಯೂರಪ್ಪ ಮತಯಾಚಿಸು ವಾಗ ದೇವರ ಮೇಲೆ ಆಣೆ ಇಡುತ್ತಿ ದ್ದಾರೆ. ನಂಜನಗೂಡನ್ನು ದತ್ತು ತೆಗೆದು ಕೊಳ್ಳುತ್ತೇನೆ. ಉಪಚುನಾವಣೆ ಯಲ್ಲಿ ಗೆದ್ದರೆ ಮುಂದಿನ ಮುಖ್ಯಮಂತ್ರಿ ನಾನೇ ಆಗುತ್ತೇನೆ ಎಂದು ಹುಸಿ ವಾಗ್ದಾನಗಳನ್ನು ನೀಡುತ್ತಿದ್ದಾರೆ. ಹಿಂದೆಯೂ ಚಿಕ್ಕಮಗಳೂರು, ಕಡೂರನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದಿದ್ದರು. ಆದರೆ, ಯಾವೊಂದು ಅಭಿವೃದ್ಧಿ ಕಾರ್ಯವೂ ಅಲ್ಲಿ ಆಗಲಿಲ್ಲ. ಈಗಾಗಲೇ 75ರ ಅಂಚಿನಲ್ಲಿರುವ ಯಡಿಯೂರಪ್ಪ ಅವ ರನ್ನು ಬಿಜೆಪಿ ಮುಖ್ಯಮಂತ್ರಿ ಮಾಡುವು ದಿಲ್ಲ. ಇವೆ ಲ್ಲವೂ ಚುನಾವಣೆಗಷ್ಟೇ ಸೀಮಿತವಾದ ವಾಗ್ದಾನಗಳು’ ಎಂದು ಟೀಕಿಸಿದರು.
 
‘ಉಪಚುನಾವಣೆಯು ಮತೀಯ ಶಕ್ತಿಗಳು ಹಾಗೂ ಜಾತ್ಯತೀತ ಶಕ್ತಿಗಳ ನಡುವಣದ ಸೆಣಸಾಟವೇ ಹೊರತು ವ್ಯಕ್ತಿಗತವಾದದ್ದಲ್ಲ. ಸುಖಾಸುಮ್ಮನೇ ಚುನಾವಣೆಯನ್ನು ಬಿಜೆಪಿ ವ್ಯಕ್ತಿಗತ ಮಾಡುವ ಮೂಲಕ ಲಾಭ ಪಡೆಯಲು ಹವಣಿಸುತ್ತಿದೆ. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ’ ಎಂದರು.
 
ವರಪುತ್ರ ಸಿದ್ದರಾಮಯ್ಯ: ‘ವಾಗ್ದಾನ ಗಳನ್ನು ಈಡೇ ರಿಸಿದವರು ಎಂದರೆ ಚಾಮುಂಡೇಶ್ವರಿ ವರಪುತ್ರ ಸಿದ್ದ ರಾಮಯ್ಯ. ಇವರು ನುಡಿದಂತೆ ನಡೆದ ಸರ್ಕಾರವನ್ನು ರಾಜ್ಯಕ್ಕೆ ನೀಡಿದ್ದಾರೆ’ ಎಂದು ಉಗ್ರಪ್ಪ ಶ್ಲಾಘಿಸಿದರು.
 
‘ಅಡಗೂರು ಎಚ್.ವಿಶ್ವನಾಥ್ ಬದ್ಧತೆಯ ರಾಜಕಾರಣಿ. ಅವರು ಟೀಕೆ ಮಾಡಿರಬಹುದು. ಆದರೆ, ಪಕ್ಷಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಂಡಿಲ್ಲ. ಮಂದಿನ ದಿನಗಳಲ್ಲಿ ಅವರು ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 
ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿ, ಕೆ.ಎಸ್. ಈಶ್ವರಪ್ಪ ಅವರಿಗೆ ‘ಅಹಿಂದ’ ಕುರಿತು ಮಾತನಾಡುವ ನೈತಿಕತೆ ಇಲ್ಲ. ಅವರು ಹೇಳಿದಂತೆ ದಲಿತ ಜನಾಂಗಕ್ಕೆ ಮೀಸ ಲಿಟ್ಟ ಹಣ ಖರ್ಚಾಗಿರುವ ವಿವರ ಹಣ ಕಾಸು ವರ್ಷದ ಅಂತ್ಯಕ್ಕೆ ಗೊತ್ತಾಗುತ್ತದೆ. ಈಗಲೇ ಅದು ತಿಳಿಯುವುದಿಲ್ಲ. ಒಂದು ವೇಳೆ ಹಣ ಬಾಕಿ ಉಳಿದರೂ ಅದು ಮುಂದಿನ ವರ್ಷಕ್ಕೆ ದಲಿತರ ಕಲ್ಯಾಣ ಕ್ಕಾಗಿ ಬಳಸಲೆಂದೇ ಮೀಸಲಾಗುತ್ತದೆ ಎಂದು ತಿಳಿಸಿದರು.
 
‘ಜಾತಿ ಗಣತಿ ವರದಿ ಜಾರಿಗೆ ಅಡ್ಡಗೋಡೆ’
ಗುಂಡ್ಲುಪೇಟೆ/ಮೈಸೂರು: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧ ಪಡಿಸಿರುವ ಜಾತಿ ಗಣತಿಯ ವರದಿ ಯನ್ನು ಬಹಿರಂಗಪಡಿಸದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಲೆ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ. ಪರಮೇಶ್ವರ್‌ ಒತ್ತಡ ಹೇರುತ್ತಿದ್ದಾರೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
 
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಜಾತಿ ಗಣತಿ ವರದಿ ಜಾರಿಗೆ ಖರ್ಗೆ ಮತ್ತು ಪರಮೇಶ್ವರ್‌ ಅಡ್ಡಗೋಡೆ ಯಾಗಿದ್ದಾರೆ’ ಎಂದು ಟೀಕಿಸಿದರು.
 
‘ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ಗೆ ಮತ ನೀಡಲು ಪ್ರತಿಯೊಬ್ಬ ಮತದಾರನಿಗೂ ₹ 4 ಸಾವಿರ ನೀಡು3ತ್ತಾರಂತೆ. ಮತದಾ ರರು ಆ ಹಣ ಪಡೆದುಕೊಂಡು ಬಿಜೆಪಿಗೆ ಮತ ಚಲಾಯಿಸಬೇಕು’ ಎಂದರು.
 
‘ಸಿದ್ದರಾಮಯ್ಯ ಸುಳ್ಳು ಹೇಳುವುದ ರಲ್ಲಿ ಸಿದ್ಧಹಸ್ತರು. ವಿಶ್ವದಲ್ಲಿ ಅವರಷ್ಟು ಸುಳ್ಳು ಹೇಳುವವರನ್ನು ಹುಡುಕಿದರೂ ಸಿಗುವುದಿಲ್ಲ. ಭರವಸೆ ಕೊಡುವುದರಲ್ಲಿ ನೊಬೆಲ್‌ ಪ್ರಶಸ್ತಿ ಕೊಡುವುದಾದರೆ ಸಿದ್ದರಾಮಯ್ಯಗೇ ಪ್ರದಾನ ಮಾಡ ಬೇಕಿದೆ’ ಎಂದು ವ್ಯಂಗ್ಯವಾಡಿದರು.
 
‘ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಲಿ ದ್ದಾರೆ. ಕಾಂಗ್ರೆಸ್‌ಗೆ ಪಂಗನಾಮ ಬೀಳಲಿದೆ’ ಎಂದರು.
 
‘ದಲಿತರ ಚಾಂಪಿಯನ್’ ಸಿದ್ದರಾಮಯ್ಯ ಅಲ್ಲ
ಮೈಸೂರು: ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಶೇ 50ಕ್ಕಿಂತ ಕಡಿಮೆ ಮೊತ್ತವನ್ನು ಖರ್ಚು ಮಾಡಿದ್ದರೂ ಸಿದ್ದರಾಮಯ್ಯ ‘ದಲಿತರ ಚಾಂಪಿಯನ್’ ಎಂದು ಬಿಂಬಿಸಿಕೊಳ್ಳುತ್ತಿರುವುದು ಸರಿ ಯಲ್ಲ ಎಂದು ಈಶ್ವರಪ್ಪ ಟೀಕಿಸಿದರು.
 
ಪರಿಶಿಷ್ಟ ಜಾತಿ ಮತ್ತು ಪಂಗಡದ ವರಿಗೆ ಮೀಸಲಿಟ್ಟಿದ್ದ ₹ 19,500 ಕೋಟಿಯಲ್ಲಿ ₹ 9,500 ಕೋಟಿಯನ್ನು ಮಾತ್ರ ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಖರ್ಚು ಮಾಡಲು ಎಷ್ಟು ವರ್ಷ ಬೇಕು ಎಂಬುದನ್ನಾದರೂ ಅವರು ಬಹಿರಂಗಪಡಿಸಬೇಕು.

ಜತೆಗೆ, ದಲಿತರು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 72ಕ್ಕೆ ಹೆಚ್ಚಿಸಲು ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ. ಇದನ್ನು ಅನುಷ್ಠಾನಕ್ಕೆ ತರುವ ಮಾರ್ಗ ಏನು ಹಾಗೂ ಎಷ್ಟು ತಿಂಗಳಲ್ಲಿ ಜಾರಿಗೆ ತರಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
 
ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಕಾಂಗ್ರೆಸ್ ನಾಯಕರಾದ ಅಜೀಜ್‌ ಸೇಠ್, ಮಲ್ಲಿಕಾರ್ಜುನ ಖರ್ಗೆ, ಜಾಫರ್ ಶರೀಫ್, ಸಿ.ಎಂ.ಇಬ್ರಾಹಿಂ, ಖಮರುಲ್ಲಾ ಇಸ್ಲಾಂ, ಧರ್ಮಸಿಂಗ್ ಸೇರಿದಂತೆ ಹಲ ವರು ₹ 54 ಸಾವಿರ ಕೋಟಿ ಮೌಲ್ಯದ ವಕ್ಫ್‌ ಮಂಡಳಿ ಆಸ್ತಿಯನ್ನು ಕಬಳಿಸಿ ದ್ದಾರೆ ಎಂದು ಹೇಳಲಾಗಿದೆ. ನ್ಯಾಯಾ ಲಯ ಹಾಗೂ ಸಭಾಪತಿ ಈಗಾಗಲೇ ವರದಿ ಬಿಡುಗಡೆ ಮಾಡುವಂತೆ ನಿರ್ದೇ ಶನ ನೀಡಿದೆ. ಹೀಗಿದ್ದರೂ, ಸರ್ಕಾರ ವರದಿ ಬಿಡುಗಡೆ ಮಾಡದೇ ಆರೋಪಿ ಗಳನ್ನು ರಕ್ಷಿಸುತ್ತಿದೆ ಎಂದರು.
 
ನಗರಕ್ಕೆ  ಸಿಎಂ
ಮೈಸೂರು
: ನಂಜನಗೂಡು ವಿಧಾನಸಭಾ ಉಪಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿ ಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಶಾರದಾ ದೇವಿನಗರದ ತಮ್ಮ ನಿವಾಸಕ್ಕೆ ಗುರುವಾರ ಬಂದಿದ್ದಾರೆ. ರಸ್ತೆ ಮಾರ್ಗದ ಮೂಲಕ ರಾತ್ರಿ 10.30ಕ್ಕೆ ಬಂದ ಅವರು, ಶುಕ್ರವಾರ ಬೆಳಿಗ್ಗೆ ನಂಜನಗೂಡಿಗೆ ತೆರಳಲಿದ್ದಾರೆ.
 
ಆಕ್ಷೇಪಣೆ ನಿಜವಾಗದಿದ್ದಲ್ಲಿ ಕಾದಿದೆ ಶಿಕ್ಷೆ!
ನಂಜನಗೂಡು (ಮೈಸೂರು):  ನಂಜನ ಗೂಡು ವಿಧಾನಸಭಾ ಉಪಚುನಾವಣೆ ಯಲ್ಲಿ ಮತದಾನಕ್ಕೆ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿ.ವಿ.ಫ್ಯಾಟ್ ಯಂತ್ರ (ಓಟರ್ ವೆರಿಫೈಡ್ ಪೇಪರ್ ಅಡಿಟ್ ಟ್ರಯಲ್) ಅಳವಡಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಜೆ.ಜಗದೀಶ್ ತಿಳಿಸಿದರು.

ನಗರದ ದೇವಿರಮ್ಮನ ಹಳ್ಳಿ ಬಡಾವಣೆಯ ಜೆಎಸ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಉಪಚುನಾವಣೆ ಯಲ್ಲಿ ಬಳಸಲಾಗುತ್ತಿರುವ ವಿ.ವಿ.ಫ್ಯಾಟ್ ಯಂತ್ರಗಳ ಕುರಿತು ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಕಾರ್ಯ ವೈಖರಿ:  ಮತದಾರ ಮತಯಂತ್ರದ ಬ್ಯಾಲೆಟ್ ಪ್ಯಾನೆಲ್ ಮೇಲೆ ಮತ ಚಲಾಯಿಸಿದ ತಕ್ಷಣ ಬೀಪ್ ಶಬ್ದ ಹೊರಡುತ್ತದೆ. ನಂತರ, ವಿ.ವಿ.ಫ್ಯಾಟ್‌ನ ಸಣ್ಣ ಪರದೆಯ ಮೇಲೆ 7 ಸೆಕೆಂಡ್‌ಗಳ ಕಾಲ ಮತದಾರ ಚಲಾಯಿಸಿದ ಅಭ್ಯರ್ಥಿಯ ಹೆಸರು ಹಾಗೂ ಅವರ ಚಿಹ್ನೆ ಮೂಡುತ್ತದೆ.

ನಂತರ, ಯಂತ್ರದಲ್ಲಿ ಮತ ಚಲಾವಣೆಯಾದ ವಿವರವಾದ ಚೀಟಿ ಮುದ್ರಿತವಾಗಿ ಯಂತ್ರದಲ್ಲಿ ಭದ್ರಪಡಿ ಸಿರುವ ಭಾಗದಲ್ಲಿ ಸೇರಿಕೊಳ್ಳುತ್ತದೆ. ಒಂದು ವೇಳೆ ಮತದಾರ ಚಲಾಯಿಸಿದ ಮತದ ವಿವರ ಯಂತ್ರದ ಪರದೆಯಲ್ಲಿ ತಪ್ಪಾಗಿ ಮೂಡಿದರೆ, ಮತದಾರನಿಗೆ ತಾನು ಚಲಾಯಿಸಿದ ಮತ ಬೇರೆ ಅಭ್ಯರ್ಥಿಯ ಖಾತೆಗೆ ಜಮೆಯಾಗುತ್ತಿದೆ ಎಂದು ಅನುಮಾನ ಬಂದರೆ, ಸ್ಥಳದಲ್ಲಿರುವ ಚುನಾವಣಾಧಿಕಾರಿಗಳಲ್ಲಿ ಆಕ್ಷೇಪಣೆ ಸಲ್ಲಿಸಬಹುದು.  ತಕ್ಷಣ ಚುನಾವಣಾಧಿ ಕಾರಿಗಳು ಚುನಾವಣಾ ಆಯೋಗದ ಅನುಮತಿ ಪಡೆದು ಮತದಾರನ ಸಮ್ಮುಖದಲ್ಲೇ ದಾಖಲೆ ಪರಿಶೀಲನೆ ನಡೆಸುತ್ತಾರೆ.

ಪರಿಶೀಲನೆಯಲ್ಲಿ ಮತದಾರನ ಆಕ್ಷೇಪಣೆ ನಿಜವಾಗದಿದ್ದಲ್ಲಿ ಮತದಾನದ ಸಮಯ ಹಾಳು ಮಾಡಿದ್ದಕ್ಕೆ ಮತದಾರನ ಮೇಲೆ ದೂರು ದಾಖಲಿಸಲಾಗುತ್ತದೆ. ಖಾತರಿಪಡಿಸಿಕೊಳ್ಳದೆ ಮತದಾನಕ್ಕೆ ತೊಂದರೆ ನೀಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.

ವಿಶೇಷ ವೀಕ್ಷಕರಾದ ಕರುಣಾ ರಾಜ್,  ವೀಕ್ಷಕರಾದ ಪಂಕಜ್, ಉಪಚುನಾವ ಣಾಧಿಕಾರಿ ಎಂ.ದಯಾನಂದ್, ಮೈಸೂರು ಉಪ ವಿಭಾಗಾಧಿಕಾರಿ ಆನಂದ್, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ, ಅಕ್ಬರ್ ಅಲೀಂ ಹಾಜರಿದ್ದರು.
 
ಭದ್ರತೆ ಪರಿಶೀಲಿಸಿದ ಡಿಜಿಪಿ ದತ್ತ
ಮೈಸೂರು:
ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರೂಪಕ್‌ ಕುಮಾರ್‌ ದತ್ತ ಅವರು ಗುರುವಾರ ನಂಜನಗೂಡಿಗೆ ಭೇಟಿ ನೀಡಿ ಉಪ ಚುನಾವಣೆಯ ಭದ್ರತೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಏ. 9ರಂದು ನಡೆಯುವ ಮತದಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಭದ್ರತೆಯನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಅಗತ್ಯ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಿದರು.

ಮಧ್ಯಾಹ್ನ 1.15ಕ್ಕೆ ನಂಜನಗೂಡಿಗೆ ಧಾವಿಸಿದ ದತ್ತ ಅವರು, ಸುಮಾರು ಒಂದೂವರೆ ಗಂಟೆ ಸಭೆ ನಡೆಸಿದರು. ಕಾನೂನು  ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್‌, ದಕ್ಷಿಣ ವಲಯದ ಐಜಿಪಿ ವಿಪುಲ್‌ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಭದ್ರತೆಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಿದರು.

‘ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಮತದಾನದ ದಿನ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ರೌಡಿಗಳು ಹಾಗೂ ಸಮಾಜಬಾಹಿರ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು’ ಎಂದು ಡಿಜಿಪಿ  ದತ್ತ ಸೂಚನೆ ನೀಡಿದರು ಎಂದು ಮೂಲಗಳು ಮಾಹಿತಿ ನೀಡಿವೆ.

‘ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ಜನರ ವಿಶ್ವಾಸ ಗಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಪಥಸಂಚಲನಗಳನ್ನು ನಡೆಸಬೇಕು. ಸಭೆಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ನಿಷ್ಪಕ್ಷಪಾತ ಚುನಾವಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘236 ಮತಗಟ್ಟೆಗಳ ಪೈಕಿ 72 ಅತಿ ಸೂಕ್ಷ್ಮ ಹಾಗೂ 124 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ ಹೆಡ್‌ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಎಎಸ್‌ಐ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.  ಅಲ್ಲದೇ, ಪ್ರತಿ ಮತಗಟ್ಟೆಯಲ್ಲಿಯೂ ಸಿಸಿಟಿವಿ ಕ್ಯಾಮೆರಾ, ವಿಡಿಯೊ ಚಿತ್ರೀಕರಣ ಹಾಗೂ ಅಂತರ್ಜಾಲ ಪ್ರಸಾರಕ್ಕೆ (ವೆಬ್ ಕಾಸ್ಟಿಂಗ್)  ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿವಿ ಪ್ಯಾಡ್‌ ಜಾಗೃತಿ: ಮತದಾನಕ್ಕೆ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿರುವ ಮತ ಖಾತರಿಪಡಿಸುವ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ (ವಿವಿ ಪ್ಯಾಡ್‌) ಯಂತ್ರಗಳ ಕುರಿತು ನಂಜನಗೂಡು ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ.

ಚುನಾವಣಾಧಿಕಾರಿಯೂ ಆಗಿರುವ, ಜಿಲ್ಲಾಧಿಕಾರಿ ಡಿ.ರಂದೀಪ್‌ ಗುರುವಾರ ಸಭೆ ನಡೆಸಿ ಈ ಸೂಚನೆ ನೀಡಿದರು. ಸಮುದಾಯ ಭವನಗಳಲ್ಲಿ ಜಾಗೃತಿ ಸಭೆ ನಡೆಸುವ ಸಂಬಂಧ ಸಭೆ ನಿರ್ಧಾರ ಕೈಗೊಂಡಿತು. ಮತಯಂತ್ರಗಳಿಗೆ ಅಭ್ಯರ್ಥಿಗಳ ಹೆಸರು, ಚಿಹ್ನೆ ಅಳವಡಿಸುವ ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿ ಮಾಹಿತಿ ಪಡೆದರು.
 
ನೀತಿ ಸಂಹಿತೆ ಉಲ್ಲಂಘನೆ ಆರೋಪ: 42 ಪ್ರಕರಣ; 25 ಮಂದಿ ಬಂಧನ
ಮೈಸೂರು:
ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾ ದಾಗಿನಿಂದ ಮಾರ್ಚ್‌ 29ರವರೆಗೆ 138 ದಾಳಿಗಳನ್ನುನಡೆಸಿದ ಅಬಕಾರಿ ಸಿಬ್ಬಂದಿ 42 ಪ್ರಕರಣಗಳನ್ನು ದಾಖಲಿಸಿ, 25 ಆರೋಪಿಗಳನ್ನುಬಂಧಿಸಿದ್ದಾರೆ.

ಮದ್ಯ ಅಕ್ರಮ ಮರಾಟ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ 9 ಗಂಭೀರ ಪ್ರಕರಣಗಳು ದಾಖಲಾಗಿವೆ. 13 ಅಂಗಡಿಗಳ ಮದ್ಯ ಮಾರಾಟ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವೆನೆಗೆ ಅವಕಾಶ ನೀಡಿದ ಆರೋಪದ ಮೇರೆಗೆ 20 ಪ್ರಕರಣಗಳನ್ನು ದಾಖಲಿಸಲಾಗಿದ್ದು, 90 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗೆ ನೋಟಿಸ್
ಮೈಸೂರು:
ನಿಗದಿತ ದಿನಾಂಕದಂದು ಚುನಾವಣಾ ವೆಚ್ಚಗಳನ್ನು ಪರಿಶೀಲನೆಗೆ ನೀಡಲಿಲ್ಲ ಎಂಬ ಕಾರಣಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿ ಡಿ.ಕೆ.ತುಳಸಪ್ಪ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಆಯೋಗವು ತುಳಸಪ್ಪ ಅವರಿಗೆ ಮಾರ್ಚ್ 28ರಂದು ಚುನಾವಣೆ ವೆಚ್ಚಗಳ ವಿವರಗಳನ್ನು ಸಲ್ಲಿಸಲು ಸೂಚಿಸಿತ್ತು. ಆದರೆ, ಅವರು ಸಲ್ಲಿಸಿಲ್ಲ. ಏಪ್ರಿಲ್ 3ರಂದು ವೆಚ್ಚದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ. ತಪ್ಪಿದ್ದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು ಎಂದು ಚುನಾಣಾಧಿಕಾರಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ದಲಿತ ವಿರೋಧಿ ಸಿದ್ದರಾಮಯ್ಯ’
ನಂಜನಗೂಡು:
  ‘ಅಜಾತ ಶತ್ರು’ ಎನಿಸಿರುವ ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ಸಿದ್ದರಾಮಯ್ಯ ನಡೆಸಿಕೊಂಡ ರೀತಿ ಸರಿಯಲ್ಲ.  ಏಕಾಏಕಿ ಅವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ಸಿದ್ದರಾಮಯ್ಯ ದಲಿತರ ದ್ವೇಷಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ಅವರು ನಗರದ ವಕ್ಕಲಗೇರಿ ಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಪರ ಮನೆ ಮನೆಗೆ ತೆರಳಿ, ಪಾದಯಾತ್ರೆ ನಡೆಸಿ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಜನತಾದಳ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೇವಲ 251 ಮತಗಳಿಂದ ಜಯಗಳಿಸಿದ್ದರು. ಸೋಲುವ ಭೀತಿಯಲ್ಲಿದ್ದ ಸಿದ್ದರಾಮಯ್ಯ ಅವರ ಕೋರಿಕೆ ಮೇರೆಗೆ ಪ್ರಚಾರ ನಡೆಸಿದ ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹೀಗಿದ್ದರೂ. ಸಿದ್ದರಾಮಯ್ಯ ಅವರಿಗೆ ಉಪಕಾರ ಸ್ಮರಣೆ ಇಲ್ಲ. ಶಾಸಕರೊಂದಿಗೆ ದುರಹಂಕಾರದಿಂದ ವರ್ತಿಸುತ್ತಿ ರುವುದರಿಂದ ಕಾಂಗ್ರೆಸ್‌ನ 25 ಮಂದಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು. ಮುಖಂಡರಾದ ಎಸ್.ಎ.ರಾಮದಾಸ್, ಚಿತ್ರ ನಟ ಜಗ್ಗೇಶ್, ಬಸವೇಗೌಡ, ನಾಗೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT