ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಯೊಳಗೆ ಕಲೆಯೊ ಕಲೆಯೊಳಗೆ ಗವಿಯೊ...

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನಲ್ಲಿ ತಂಗಿದ್ದ ನನ್ನನ್ನು, ‘ಸಾರ್, ಬೇಗ ಸಿದ್ಧರಾಗಿ. ಗವಿಯೊಳಗೆ ನುಸುಳೋಣ’ ಎಂದು ನನ್ನ ಶಿಷ್ಯ ಅವಿನಾಶ ಹೇಳಿದಾಗ ನಾನು ಗಾಬರಿಗೊಂಡೆ. ಸಿಂಹ, ತೋಳ, ಹಾವು, ಚೇಳುಗಳ ಮಾತಿರಲಿ – ಬಾವಲಿಗಳೇ ಸಾಕು ಹೆದರಿಸಲು ನನ್ನ!

ನನ್ನ ಮುಖಚಹರೆ ಗಮನಿಸಿದ ಶಿಷ್ಯ ‘ನೀವೆಂದೂ ನೋಡಿರದ ಗವಿ ಸಾರ್ ಅದು, ಖಂಡಿತ ಖುಷಿಪಡ್ತೀರಿ’ ಎಂದು ಅಭಯವಿತ್ತ. ಆತ ನನ್ನನ್ನು ಹೊರಡಿಸಿದ್ದು ‘ನ್ಯಾಚುರಲ್ ಬ್ರಿಡ್ಜ್ ಕೇವರಿನ್ಸ್’ಗೆ. ಹೂಸ್ಟನ್‌ನಿಂದ ಪಶ್ಚಿಮಕ್ಕೆ 191 ಮೈಲಿ ದೂರವಿರುವ ನೆಲಗವಿ ಅದು. ಸ್ಯಾನ್ ಆಂಟೊನಿಯೊ ನಗರಕ್ಕೆ 16 ಮೈಲಿ ಸಮೀಪದ ಕೊಮಲ್ ಕಂಟ್ರಿ ಎಂಬ ಪ್ರದೇಶದಲ್ಲಿ ಈ ಗವಿಯಿದೆ.

‘ಕಾರಿನಲ್ಲಿ ಪ್ರಯಾಣಿಸಿ ಮೂರು ತಾಸಿನೊಳಗೆ ತಲುಪಬಹುದು’ ಅಂತ ಅವಿನಾಶ ಪ್ರವರ ಒಪ್ಪಿಸಿದ. ನಸುಕಿನಲ್ಲಿ ತಾನು ಸದ್ದಿಲ್ಲದೆ ತಯಾರಿಸಿದ ಅವಲಕ್ಕಿ ಬಾತ್, ಸಜ್ಜಿಗೆ, ಬ್ರೆಡ್, ಜಾಮ್ ಹಾಗೂ ಬಗೆ ಬಗೆ ಕುರುಕುಗಳನ್ನು ನೀರಿನ ಬಾಟಲಿಗಳ ಸಮೇತ ಡಿಕ್ಕಿಗೇರಿಸಿದ್ದ.

ಏಳೂವರೆಗೆ ಮನೆ ಬಿಟ್ಟು ಸೂರ್ಯ ನೆತ್ತಿಗೇರುವ ಮೊದಲೆ ನೆಲಗವಿಯ ಪ್ರವೇಶ ದ್ವಾರದಲ್ಲಿದ್ದೆವು. ಪ್ರವಾಸಿಗಳು ಸಾಕಷ್ಟು ಮಂದಿಯಿದ್ದರು. ಆದರೆ ಎಂಥ ಜನದಟ್ಟಣೆಯಿದ್ದರೂ ಸ್ವಯಂಶಿಸ್ತಿಗೆ ಗೌಜು–ಗದ್ದಲ ಮಣಿಯುತ್ತದೆ. ಹಾಗೆ ನಾಜೂಕು ಅಲ್ಲಿ.

ಏನಿದು ನೆಲಗವಿ?
ಪರ್ವತ, ಬೆಟ್ಟ ಗುಡ್ಡ, ದಿಣ್ಣೆ ಅಥವಾ ತಿಟ್ಟುಗಳ ಸರಹದ್ದುಗಳಲ್ಲಿ ಪ್ರಕೃತಿ ತನ್ನ ಕಲಾಕೌಶಲವನ್ನು ಸಹಜವಾಗಿಯೇ ಪ್ರದರ್ಶಿಸುತ್ತದೆ. ತೊರೆ, ಝರಿಗಳು ಹರಿವ ತೀವ್ರತೆಯೇ ಕಲ್ಲು ಬಂಡೆಗಳಿಗೆ ಉಳಿಪೆಟ್ಟುಗಳಾಗಿ ಕೊರೆದು ನಿರ್ಮಿಸಿದ ಎಗ್ಗಿಲ್ಲದ ವ್ಯಾಪ್ತಿಯ ಉಬ್ಬು, ಕುಳಿಗಳ ಮೆರವಣಿಗೆಯದು. ಸರಹದ್ದು ಸುಣ್ಣಕಲ್ಲು ಪ್ರದೇಶವಾದರೆ ಕೌಶಲಕ್ಕೆ ಚಿನ್ನದ ಕಳಶವೇ ಸರಿ. ಏಕೆಂದರೆ ವೈವಿಧ್ಯಮಯ ಆಕಾರ, ಆಕೃತಿಗಳನ್ನು ಅವು ಸರಾಗವಾಗಿ ಕೊರೆಸಿಕೊಳ್ಳುತ್ತವೆ.

‘ಅರೆ! ಇದು ನಮ್ಮ ಮನೆಗೆ ಕಟ್ಟಿರುವ ತೋರಣದಂತಿದೆ’ ಅಂತ ಒಬ್ಬರು ಉದ್ಗರಿಸಿದರೆ, ಇನ್ನೊಬ್ಬರು ‘ಇಲ್ಲಿ ಚೌಕಾಭಾರ ಧಾರಾಳವಾಗಿ ಆಡಬಹುದು ಬಿಡಿ’ ಎಂದು ಹೌಹಾರಿರುತ್ತಾರೆ.

ಕೃಷ್ಣ, ಏಸು, ತಪಸ್ವಿ ಬುದ್ಧ, ಫಲಭರಿತ ಮರ, ಹೆಡೆ ಬಿಚ್ಚಿದ ಹಾವು, ಗರಿಗೆದರಿದ ಗುಬ್ಬಿ, ಮೇಜಿನ ಮೇಲೆ ಓದುಮಗ್ನ ವಿದ್ಯಾರ್ಥಿ... ಮುಂತಾಗಿ ಯದ್ ಭಾವಮ್ ತದ್ ಭವತಿ. ಕಾಕತಾಳೀಯ ಅಂತ ಅದಕ್ಕಲ್ಲದೆ ಬೇರೆ ಯಾವುದಕ್ಕೆ ಹೇಳಬೇಕು.

ಒಂದೆಡೆ ಮೈಸೂರರಮನೆ ಸಿಂಹಾಸನವನ್ನು ಹೋಲುವ ವಿನ್ಯಾಸ! ಅಂದಹಾಗೆ, ನಾವು ಸಂದರ್ಶಿಸಿದ ನೆಲಗವಿಯ ಪ್ರವೇಶದ್ವಾರದಲ್ಲೇ ನಿಸರ್ಗ ಒಂದು ಪವಾಡ ನಡೆಸಿದೆ. ಸೇತುವೆಯಾಗಿ ರೂಪುಗೊಂಡಿರುವ 60 ಅಡಿ ಉದ್ದದ ಕಮಾನು ನಮ್ಮನ್ನು ಸ್ವಾಗತಿಸುತ್ತದೆ. ಆ ಕಾರಣಕ್ಕಾಗಿಯೆ ‘ನ್ಯಾಚುರಲ್ ಬ್ರಿಡ್ಜ್ ಕೇವರಿನ್ಸ್’ ಎನ್ನುವ ಹೆಸರು ಅದಕ್ಕೆ.

ಮಳೆ ನೀರು ವಾತಾವರಣದ ಮೂಲಕ ನೆಲಕ್ಕೆ ಬೀಳುವ ಹಾದಿಯಲ್ಲಿ ಇಂಗಾಲದ ಡೈ ಆಕ್ಷೈಡ್ ಹೀರಿಕೊಳ್ಳುವುದು. ಈ ನೀರಿಗೆ ಮಣ್ಣಿನಿಂದಲೂ ಅಷ್ಟು ಇಂಗಾಲದ ಡೈ ಆಕ್ಷೈಡ್ ಸಲ್ಲುತ್ತದೆ. ಪರಿಣಾಮವಾಗಿ ಅಂತರ್ಜಲ ಕಾರ್ಬಾನಿಕ್ ಆಮ್ಲದ ದುರ್ಬಲ ರೂಪ ಹೊಂದುತ್ತದೆ. ಅದು ಸುಣ್ಣಕಲ್ಲಿನೊಡನೆ ಸಂಪರ್ಕ ಹೊಂದಿದಾಗ ಗುಹೆಯ ನಿರ್ಮಿತಿಗೆ ನಾಂದಿ. ನೀರು ಇಂಗುವ ಸ್ಥಳ ಕ್ರಮೇಣ ಹಿರಿದಾಗುತ್ತ ಸವೆತಕ್ಕೂ ಒಂದು ಕಲಾತ್ಮಕತೆ ದೊರೆಯುತ್ತದೆ.

ನೆಲಗವಿಯ ಒಳಹೋಗುವುದು ರುದ್ರ ರಮಣೀಯ ಅನುಭವ. ಹೊಕ್ಕಷ್ಟೂ ಅಚ್ಚರಿ. ದೀಪ ವ್ಯವಸ್ಥೆಯುಂಟು, ಸರಿ. ಆದರೆ ಬೆರಗಿನ ಮೇಲೆ ಬೆರಗು ನಮ್ಮನ್ನು ಸೆಳೆದರೆ ಮಾಯಾಲೋಕದಿಂದ ಹೊರಬರುವುದು ಹೇಗೆಂಬ ಆತಂಕ. ಗೈಡ್ ನಿರರ್ಗಳ ವಿವರಿಸುತ್ತಿದ್ದ. ಆತ ಭೂವಿಜ್ಞಾನಿಯೆ ಇರಬೇಕು. ಶಿಲೆಗಳ ಕಾಲಯಾನವನ್ನು ವಿವರಿಸುತ್ತಿದ್ದ. ಸಂದೇಹ ನಿವಾರಿಸುತ್ತಿದ್ದ. ಯಾವುದಾದರೂ ಪ್ರಶ್ನೆಗಳಿವೆಯೇ ಎನ್ನುವ ಕಾಳಜಿ ಅವನದು.

ನೋಡಿ, ‘ಇಲ್ಲಿ 180 ಅಡಿ ಆಳದತನಕ ಇಳಿಯಬಹುದು. ಮತ್ತೂ ಸಾಹಸಪಟ್ಟರೆ 230 ಅಡಿ ಇಳಿದೇವು’ ಎಂದ. ಗುಹೆಯಲ್ಲಿ ಅರ್ಧ ಮೈಲಿ ಒಳಗೆ ಕರೆದೊಯ್ದು ಸುತ್ತಾಡಿಸುವ ಸಾರಥಿಗಳು ನಮ್ಮ ಗಮನ ಸೆಳೆಯುತ್ತಾರೆ.

ವರ್ಷವಿಡೀ ಈ ನೆಲಗವಿಯೊಳಗಿನ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುತ್ತದಂತೆ. ತೇವಾಂಶ ಶೇ 99ರಷ್ಟು. ಸುಣ್ಣಕಲ್ಲಿನ ಸೀಳುಗಳ  ಮೂಲಕ ನೀರು ಇಂಗುವಾಗ ಕ್ಯಾಲಸೈಟ್ ಎಂಬ ಖನಿಜವನ್ನು ಕರಗಿಸಿಕೊಳ್ಳುವುದರಿಂದ ಮೇಲಿನಿಂದ ನೀರಹನಿ ಜಿನುಗುವುದು. ಪ್ರಕೃತಿದತ್ತ ಶಿಲ್ಪಗಳಿಗೆ ಅದರಿಂದಾಗಿ ಮೇಣದಂಥ ವಿಶಿಷ್ಟ ಮೆರಗು, ಹೊಳಪು ಲಭ್ಯವಾಗುತ್ತದೆ.

ನೆಲಗವಿ ಒಂದು ತಣ್ಣನೆಯ ನೀರವ ಭೂವಿಜ್ಞಾನ ಪ್ರಯೋಗಾಲಯವೇ ಸರಿ. ಅಲ್ಲಿ ಅಧ್ಯಯನ, ಸಂಶೋಧನೆ ನಿಮಿತ್ತ ಭೇಟಿ ನೀಡುವವರಿದ್ದಾರೆ. ಗುಹಾನ್ವೇಷಣೆ ಅನನ್ಯ ರೋಚಕ ಅನುಭವ ತಾನೆ? ಹತ್ತು ಸಾವಿರಕ್ಕೂ ಮೀರಿ ನಿರ್ದಿಷ್ಟ ರಚನೆಗಳನ್ನು ಅಲ್ಲಿ ಗುರುತಿಸಲಾಗಿದೆ.
ಗವಿಯಲ್ಲಿ ಅಡ್ಡಾಡಿ ಕೈಕಾಲುಗಳು ದಣಿದಿದ್ದವು. ಅದು ಬುತ್ತಿ ಕರಗುವ ಸಮಯ ಕೂಡ.

ಅವಿನಾಶನಿಗೆ ‘ಬೇಗ ಹೊರಡೋಣ. ಮನೆ ಸೇರುವ ವೇಳೆಗೆ ಕತ್ತಲಾಗುವುದು ಬೇಡ’ ಅಂದೆ. ‘ಸಾರ್, ಇಲ್ಲಿ ರಾತ್ರಿ ಎಂಟೂವರೆ ತನಕವೂ ಬೆಳಕಿರುತ್ತಲ್ಲ. ಇಲ್ಲೇ ಮೃಗಾಲಯ, ಮ್ಯೂಸಿಯಂ, ಟವರ್ ಅಫ್ ಅಮರಿಕ... ಇದೆ’ ಅಂದ. ‘ನಂತರದ ಭೇಟಿಗೆ ಅವಿರಲಿ’ ಎನ್ನುತ್ತ ಕಾರೇರಿ ಸೀಟ್ ಬೆಲ್ಟ್ ಲಗತ್ತಿಸಿಕೊಂಡೆ.

ಹೋಗುವುದು ಹೇಗೆ?
ಅಮೆರಿಕದ ಯಾವುದೇ ಪ್ರಮುಖ ನಗರದಿಂದ ಹೂಸ್ಟನ್‌ಗೆ ವಿಮಾನ ಲಭ್ಯ. ಅಲ್ಲಿಂದ ಕಾರು–ಟ್ಯಾಕ್ಸಿಯಲ್ಲಿ ಸೆಗುಯಿನ್ ಮೂಲಕ ನೇರ ಕೇವರಿನ್ಸ್ ತಲುಪಬಹುದು. ದಾರಿಯಲ್ಲಿ ವನ್ಯಮೃಗ ಸಂದರ್ಶನಕ್ಕೆ ಸಫಾರಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT