ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲು ಕೆಡುಕಿಲ್ಲ, ಬ್ಯೂಟಿಫುಲ್ ಮನಗಳಿಗೆ ಕೊರತೆಯೂ ಇಲ್ಲ..

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಗಳನ್ನು ಓದಿ–ನೋಡುವ ನಮಗೆ, ಪ್ರಪಂಚದಲ್ಲಿ ಎಲ್ಲೆಲ್ಲೂ ಅರಾಜಕತೆಯೇ ತುಂಬಿದೆ ಎನ್ನಿಸುತ್ತದೆ. ಆದರೆ, ಮನಸ್ಸನ್ನು ಖೇದಗೊಳಿಸುವ ವಿದ್ಯಮಾನಗಳ ನಡುವೆಯೋ ಎಷ್ಟೋ ಸರಳ–ಸುಂದರ ಘಟನೆಗಳು ನಡೆಯುತ್ತಲೇ ಇರುತ್ತವೆ.

ಅವುಗಳು ಮನಸ್ಸಿಗೆ ಪ್ರಪುಲ್ಲಭಾವವನ್ನು ತರುತ್ತವೆ. ಇಂಥ ಸುಂದರ ಅನುಭವಗಳನ್ನು ಅಮೆರಿಕದಲ್ಲಿ ನನಗೆ ಸಾಕಷ್ಟು ಆಗಿವೆ. ಅಂಥ ಕೆಲವು ಅನುಭವಗಳನ್ನು ಹಂಚಿಕೊಳ್ಳುವುದು ಈ ಬರಹದ ಉದ್ದೇಶ.

‘ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್’ ಎನ್ನುವುದೇ ಸತ್ಯವಾಗಿರುವ ಅಮೆರಿಕದಲ್ಲಿ ಹಲವು ಕಡೆ ಸಾರ್ವಜನಿಕ ಸಾರಿಗೆ ಸೌಲಭ್ಯವೂ ಉಂಟು. ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ವಾಸವಾಗಿರುವ ನನಗೆ ಅನುಕೂಲ ಆಗಿರುವುದೂ ಕೂಡ ಈ ತರಹದ ‘ಸೆಪ್ಟ’  (SEPTA – Southeastern Pennsylvania Transportation Authority) ಎಂಬ ರೈಲು ಸೌಕರ್ಯ.

ಒಮ್ಮೆ ನಾನು ತಿಂಗಳ ಪಾಸ್ ಖರೀದಿ ಮಾಡಿ ಅದನ್ನು ಯಾವಾಗಲೂ ಇಡುವಂತೆ ನನ್ನ ಚೀಲದ ಒಂದು ನಿಗದಿತ ಸ್ಥಳದಲ್ಲಿ ಇಡುವಾಗ, ಒಂದೇ ಒಂದು ಸಲಕ್ಕೆ ಉಪಯೋಗವಾಗುವ ಒಂದು ಟಿಕೆಟ್ ಸಿಕ್ಕಿತು. ನಾನು ಹತ್ತಿದ ಮುಂದಿನ ನಿಲ್ದಾಣದಲ್ಲಿ ಒಬ್ಬ ಹೆಂಗಸು ಒಂದು ಮಗುವಿನ ಜೊತೆ ಹತ್ತಿ ಬಂದು ಕುಳಿತರು. ಪರೀಕ್ಷಕ ಬಂದು ಎಲ್ಲರ ಟಿಕೆಟ್ ಪರೀಕ್ಷಿಸತೊಡಗಿದ.

ಆಗ ಆ ಹೆಂಗಸು ತರಾತುರಿಯಲ್ಲಿ ತಮ್ಮ ಚೀಲದಲ್ಲಿ ಟಿಕೆಟ್ ಹುಡುಕುತ್ತಿದ್ದರು. ಅಲ್ಲಿ ಎಷ್ಟೇ ಹೊತ್ತಾಗಲಿ ಪರೀಕ್ಷಕರು ಕಾಯುತ್ತಾರೆ. ಪ್ರಯಾಣಿಕರ ಮೇಲೆ ಜೋರು ಮಾಡುವುದಾಗಲಿ, ಬೈಯ್ಯುವುದಾಗಲಿ ಮಾಡಿದ್ದು ನಾನು ಇದುವರೆಗೂ ಕಂಡಿಲ್ಲ. ಸ್ವಲ್ಪ ಹೊತ್ತು ಹುಡುಕಿದ ಮೇಲೂ ಸಿಗದಿದ್ದಾಗ ಆ ಹೆಂಗಸು – ‘ಕ್ಷಮಿಸಿ. ನನ್ನ ಟಿಕೆಟ್ ಸಿಗುತ್ತಿಲ್ಲ. ನನ್ನ ಹತ್ತಿರ ದುಡ್ಡು ಕೂಡ ಇಲ್ಲ’ ಎಂದರು.

ಅಷ್ಟು ಹೊತ್ತಿಗೆ ಸರಿಯಾಗಿ ಮಗು ಅಳಲು ಪ್ರಾರಂಭಿಸಿತು. ನನ್ನ ಹತ್ತಿರವಿದ್ದ ಒಂದು ಟಿಕೆಟನ್ನು ಅವರಿಗೆ ಕೊಡಲು ಕೈ ಚಾಚಿದೆ. ಅದಕ್ಕವರು ‘ನಾನು ಪ್ರತಿದಿನ ಇದೇ ನಿಲ್ದಾಣದಲ್ಲೇ ಹತ್ತುತ್ತೇನೆ. ನಾನು ಸ್ಟೇಶನ್‌ನಲ್ಲಿ ಇಳಿದಾಗ ಕ್ರೆಡಿಟ್ ಕಾರ್ಡಿನಲ್ಲಿ ದುಡ್ಡು ಕೊಡುತ್ತೇನೆ.

ನಿಮಗೆ ಧನ್ಯವಾದಗಳು’ ಎಂದರು. ಪರೀಕ್ಷಕರು ಕೂಡ ಅವರನ್ನು ಬೆಂಬಲಿಸುತ್ತ  ‘ಪರವಾಗಿಲ್ಲ. ನಿಮ್ಮ ಮಗುವನ್ನು ನೋಡಿಕೊಳ್ಳಿ. ನಿಲ್ದಾಣದಲ್ಲಿ ಟಿಕೆಟಿನ ಹಣ ಕೊಟ್ಟರಾಯಿತು’ ಎಂದು ಮುಂದಿನ ಡಬ್ಬಕ್ಕೆ ಹೋದರು.

‘ನಾವು ಮಾಡಿದ್ದು ನಮಗೇ ತಿರುಗಿ ಬರುತ್ತದೆ’ ಎನ್ನುವ ಹಾಗೆ, ಅಂದು ಸಾಯಂಕಾಲ ಕೆಲಸ ಮುಗಿಸಿ ತಲೆಯಲ್ಲೇನೋ ಒತ್ತಡ ತುಂಬಿಕೊಂಡು ಹಾಗೂ ಹೀಗೂ ರೈಲಿನಲ್ಲಿ ಕೂತು ಚೀಲಕ್ಕೆ ಕೈ ಹಾಕಿದೆ. ನನ್ನ ತಿಂಗಳ ಪಾಸ್ ಕೈಗೆ ಸಿಗಲೇ ಇಲ್ಲ. ನನ್ನ ಹುಡುಕಾಟ, ‘ಅಯ್ಯೋ’ ಎನ್ನುವ ಸ್ವಗತ ಗಮನಿಸಿದ ಪಕ್ಕದಲ್ಲಿ ಕುಳಿತಿದ್ದ ಹುಡುಗಿ – ‘ನಿಮ್ಮ ಪಾಸ್ ಸಿಗುತ್ತಿಲ್ಲವೇ? ನನ್ನ ಹತ್ತಿರ ಒಂದು ಟಿಕೆಟ್ ಇದೆ. ಬೇಕೆಂದರೆ ಕೊಡುತ್ತೇನೆ’ ಎಂದಳು.

ನನ್ನ ಹತ್ತಿರವೂ ಒಂದು ಟಿಕೆಟ್ ಇರುವುದಾಗಿಯೂ, ಆದರೆ ಹೊಸ ಪಾಸ್ ಸಿಗದಿದ್ದುರಿಂದ ಆಗಿರುವ ಆತಂಕದ ಬಗ್ಗೆ ನಾನು ಹೇಳಿದೆ. ‘ನನಗೆ ಅರ್ಥ ಆಗುತ್ತದೆ. ತಿಂಗಳ ಪಾಸ್ ಬಹಳ ದುಬಾರಿ. ಕಳೆದುಹೋದರೆ ಮನಸ್ಸಿಗೆ ಹಿಂಸೆಯಾಗುತ್ತದೆ. ನಿಮ್ಮ ಪಾಸ್ ಸಿಗಲೆಂದು ಹಾರೈಸುತ್ತೇನೆ’ ಎಂದು ಸಮಾಧಾನ ಹೇಳಿದಳು.

ನನ್ನ ಚೀಲದಿಂದ ಕೆಲವು ಸಾಮಾನುಗಳನ್ನು  ಹೊರತೆಗೆದಾಗ ಅವುಗಳ ಮಧ್ಯೆ ಇದ್ದ ಪಾಸ್ ಕಾಣಿಸಿತು. ಆಫೀಸಿನಿಂದ ಹೊರಡುವಾಗ ಕೆಲವು ಕಾಗದಗಳನ್ನು ಚೀಲದಲ್ಲಿ ತುರುಕಿದ್ದೆ. ಅದರ ಮಧ್ಯದಲ್ಲೆಲ್ಲೋ ನನ್ನ ಪಾಸ್ ಅಡಗಿಕುಳಿತಿತ್ತು. ನನ್ನ ಪಾಸ್ ಸಿಕ್ಕಿದ್ದು ನೋಡಿ, ‘ದೇವರ ದಯೆ. ನಿಮ್ಮ ಪಾಸ್ ಸಿಕ್ಕಿತು. ನಿಮ್ಮ ಸಾಯಂಕಾಲ ಶುಭವಾಗಿರಲಿ. ಆತಂಕದ ಕ್ಷಣಗಳು ಹೇಗೂ ಮುಗಿದವು’ ಅಂದಳು.

ಅವಳಿಂದ ಸಮಾಧಾನ ಪಡೆದ ನಾನು ಧನ್ಯವಾದ ತಿಳಿಸಿ ನೆಮ್ಮದಿಯಿಂದ ಪ್ರಯಾಣ ಮುಂದುವರೆಸಿದೆ. ಪರಿಚಯ ಇಲ್ಲದ ಎಷ್ಟೊಂದು ಜನ ನಮ್ಮ ಜೀವನದಲ್ಲಿ ಒಂದೊಂದು ಛಾಪು ಮೂಡಿಸಿ ಹೋಗಿರುತ್ತಾರೆ ಎನ್ನಲು ಇದೊಂದು ಸರಳ ಉದಾಹರಣೆ.

ಇನ್ನೊಂದು ಅನುಭವವೂ ರೈಲಿನ ಪ್ರಯಾಣಕ್ಕೆ ಸಂಬಂಧಿಸಿದ್ದು. ರೈಲಿನಲ್ಲಿ ಪರೀಕ್ಷಕರು ಟಿಕೆಟ್ ನೋಡಲು ಬರದಿದ್ದರೂ, ಅನೇಕ ಪ್ರಯಾಣಿಕರು ಒಂದು ನಿಗದಿತ ಜಾಗದಲ್ಲಿ ತಮ್ಮ ಟಿಕೆಟ್ ಬಿಟ್ಟು ಹೋಗಿರುತ್ತಾರೆ. ಒಬ್ಬ ವ್ಯಕ್ತಿಗೆ ನಾನೊಮ್ಮೆ ಕೇಳಿದೆ: ‘ನೀವು ನಿಮ್ಮ ಟಿಕೆಟ್ ಬಿಟ್ಟು ಹೋಗುತ್ತಿರುವಿರಿ, ಏಕೆ?’.
ಅದಕ್ಕೆ ಆ ಪ್ರಯಾಣಿಕರ ಉತ್ತರ ಹೀಗಿತ್ತು: ‘ನಾನು ಪ್ರಯಾಣ ಮಾಡಿದ್ದೆನಲ್ಲ? ಅದರ ಬಾಡಿಗೆ ಇದು’.
‘ಬೇರೆ ಪ್ರಯಾಣಿಕರು ಯಾರಾದರೂ ನಿಮ್ಮ ಟಿಕೆಟನ್ನು ತೆಗೆದುಕೊಳ್ಳಬಹುದಲ್ಲ?’.
‘ಅಂಥವರೂ ಇದ್ದಾರೆ. ಆದರೆ ನನ್ನ ಕರ್ತವ್ಯ ನಾನು ಮಾಡುವುದು ನನಗೆ ಮುಖ್ಯ’.

ನಾನು ಇಳಿಯಲು ಇನ್ನೂ ನಾಲ್ಕು ನಿಲ್ದಾಣಗಳು ಬಾಕಿಯಿದ್ದವು. ಆಗ ಹಿಂದೆ ಕುಳಿತವರ ಸಂಭಾಷಣೆ ನನ್ನ ಕಿವಿಗೆ ಬಿತ್ತು. ‘ನಾನು ರೈಲು ಹತ್ತಿದ ಕೂಡಲೇ ಮಲಗಿಬಿಡುತ್ತೇನೆ’ ಒಬ್ಬ ಹೆಂಗಸಿನ ನುಡಿ.

‘ನೀನು ಎರಡು ಕಡೆ ಕೆಲಸ ಮಾಡುತ್ತೀಯಲ್ಲ? ಬೆಳಿಗ್ಗೆ ಐದು ಗಂಟೆಗೆ ಹೊರಡುತ್ತಿ. ಮನೆಗೆ ತಿರುಗಿ ಹೋಗಲು ರಾತ್ರಿ ಎಂಟಾಗುತ್ತೆ’ –ಇನ್ನೊಬ್ಬ ಹೆಂಗಸು.

‘ಹೌದು. ನನಗೆ ಒಂದು ಅನುಕೂಲ ಎಂದರೆ, ಅಫೀಸಿನಿಂದ ಮನೆಗೆ ರೈಲಿನಲ್ಲಿ ಎರಡು ತಾಸಿನ ಪ್ರಯಾಣ. ನನ್ನ ನಿಲ್ದಾಣ ಬಂದಾಗ ಯಾವುದೇ ಕಂಡಕ್ಟರ್ ಇದ್ದರೂ ಬಂದು ನನ್ನನ್ನು ಎಬ್ಬಿಸುತ್ತಾರೆ. ನಾನು ಎಚ್ಚರವಾಗಿದ್ದರೂ ಒಮ್ಮೆ ಬಂದು, ನಿಮ್ಮ ನಿಲ್ದಾಣ ಇಳಿಯಿರಿ ಎಂದು ಹೇಳಿಹೋಗುತ್ತಾರೆ.

ಕಳೆದ ಸುಮಾರು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಒಂದು ದಿನವೂ ನಾನು ನನ್ನ ನಿಲ್ದಾಣವನ್ನು ತಪ್ಪಿಸಿಕೊಂಡಿಲ್ಲ. ನಾನು ಈ ರೈಲಿನ ಜನಕ್ಕೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು’ ಎಂದು ಮೊದಲು ಮಾತನಾಡಿದ್ದ ಹೆಂಗಸು ತಮ್ಮ ತೃಪ್ತಿಯನ್ನು ಹಂಚಿಕೊಂಡರು. ಈ ವಾರ್ತಾಲಾಪ ಕೇಳಿದ ನಂತರ ಈ ರೈಲ್ವೆ ಸಿಬ್ಬಂದಿಯ ಮೇಲೆ ಗೌರವ ಇನ್ನೂ ಹೆಚ್ಚಾಯಿತು.

ಇನ್ನೊಂದು ಘಟನೆ ಇಲ್ಲಿನ ಕಾಸ್ಟ್‌ಕೊಗೆ (Costco) ಸಂಬಂಧಿಸಿದ್ದು. ‘ಕಾಸ್ಟ್‌ಕೊ’ ಒಂದು ಸಗಟು ವ್ಯಾಪಾರ ಕೇಂದ್ರ. ಅಲ್ಲಿಂದ ಒಮ್ಮೆ ಹಾಲು ಕೊಂಡು ಮನೆಗೆ ಬರುವುದರಲ್ಲಿ ಒಂದು ಡಬ್ಬ ಅರ್ಧ ಖಾಲಿಯಾಗಿತ್ತು. ಕಾರಿನ ಡಿಕ್ಕಿಯಲ್ಲೆಲ್ಲಾ ಸೋರಿಹೋಗಿತ್ತು. ಇನ್ನೊಂದು ಡಬ್ಬ ಚೆನ್ನಾಗಿಯೇ ಇತ್ತು. ಅವರಿಗೆ ಫೋನಾಯಿಸಿದೆ.

‘ನಮಸ್ಕಾರ. ನಾನು ಈಗ ಅರ್ಧ ಗಂಟೆ ಮುಂಚೆ ನಿಮ್ಮಲ್ಲಿ ಒಂದು ಹಾಲಿನ ಡಬ್ಬ ತಂದೆ. ಆದರೆ ಮನೆಗೆ ಬರುವುದರಲ್ಲಿ ಅರ್ಧ ಚೆಲ್ಲಿಹೋಗಿತ್ತು. ಅದನ್ನು ನಾವು ಉಪಯೋಗಿಸಬಹುದೇ?’
‘ನಿಮ್ಮ ಕಾಸ್ಟ್‌ಕೊ ಸದಸ್ಯತ್ವದ ಹೆಸರು ಹೇಳಿ’. ನಾನು ಹೇಳಿದೆ.

‘ನಮ್ಮಿಂದ ನಿಮಗೆ ತೊಂದರೆಯಾಯಿತು. ದಯವಿಟ್ಟು ಕ್ಷಮಿಸಿ. ಹಾಲಿನ ಡಬ್ಬ ಮುರಿದಿರಬಹುದು. ನೀವು ಅದನ್ನು ಉಪಯೋಗಿಸಬೇಡಿ. ನಮಗೆ ತಂದು ಕೊಡಿ. ಬದಲಾಗಿ ಬೇರೊಂದು ತೆಗೆದುಕೊಳ್ಳಬಹುದು’.

‘ಈಗ ರಾತ್ರಿಯಾಗಿದೆ. ಅಲ್ಲದೇ ಮಳೆ ಬೇರೆ ಬರುತ್ತಿದೆ. ನಾನು ನಾಳೆ ಬರಲೇ?’
‘ನೀವು ಯಾವಾಗಲಾದರೂ ಅನುಕೂಲವಾದಾಗ ಬನ್ನಿ. ಖಾಲಿ ಡಬ್ಬ ತಂದರೆ ಸಾಕು. ನಮ್ಮಿಂದ ನಿಮಗೆ ತೊಂದರೆಯಾದುದಕ್ಕೆ ಮತ್ತೊಮ್ಮೆ ಕ್ಷಮೆಯಿರಲಿ’ ಎಂದು ನನಗೆ ಸಮಾಧಾನ ಹೇಳಿದರು.

ನಾನು ಮುಂದಿನ ಸಲ ಆ ಡಬ್ಬಿಯನ್ನು ತೆಗೆದುಕೊಂಡು ಹೋಗಿ ನನ್ನ ಜೊತೆ ಫೋನಿನಲ್ಲಿ ಮಾತನಾಡಿದ್ದ ಹೆಂಗಸನ್ನು ಭೇಟಿ ಮಾಡಿದೆ. ಅವರು ಹಣ ಹಿಂತಿರುಗಿಸಿದರು.

ಜಗತ್ತಿನಲ್ಲಿ ಒಳ್ಳೆಯತನ ಇನ್ನೂ ಇದೆ ಎನ್ನಲಿಕ್ಕೆ ಮೇಲಿನ ಉದಾಹರಣೆಗಳು ಸಾಕಷ್ಟೆ. ಇಂಥ ಅನುಭವಗಳೇ ನಾಳೆಗಳ ಕುರಿತು ನಿರೀಕ್ಷೆಗಳನ್ನು ಉಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT