ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳೆಂದರೆ ಮದುವೆಯೇ ...?

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ನಾನು ಪತ್ರಿಕೋದ್ಯಮ ವಿದ್ಯಾರ್ಥಿನಿ. ಇತ್ತೀಚೆಗೆ ಊರಿಗೆ ಹೋದಾಗ ನನ್ನನ್ನು ಬಲವಾಗಿ ಕಾಡಿದ ಪ್ರಶ್ನೆಯೆಂದರೆ – ‘ಮಗಳಿಗೊಂದು ಮದುವೆ ಮಾಡಿದರೆ ಹೆತ್ತವರ ಜವಾಬ್ದಾರಿ ಮುಗಿಯಿತಾ...?’

ನನಗೆ ತಿಳಿಯದಂತೆ ನನ್ನ ಮದುವೆಗಾಗಿ ಪ್ರಯತ್ನಗಳು ನಡೆದಿದ್ದವು. ಆಗ ಕೇಳಬೇಕು ಎಂದುಕೊಂಡೆ, ‘ಮಗಳಿಗೆ ಮದುವೆ ಮಾಡಿಬಿಟ್ಟರೆ ಜವಾಬ್ದಾರಿ ಮುಗಿಯಿತಾ’ ಎಂದು. ಆದರೆ ಕೇಳಲಾಗಲಿಲ್ಲ.

‘ಪಪ್ಪಾ... ನಾನು ಓದುತ್ತೇನೆ, ಮುಂದೆ ಕೆಲಸಕ್ಕೆ ಹೋಗುತ್ತೇನೆ’ ಎಂದು ಹೇಳಿದ್ದೇ ತಪ್ಪಾಯಿತು. ಅಂದಿನಿಂದ ಪಪ್ಪ, ಕಣ್ಣಲ್ಲಿ ಕಣ್ಣಿಟ್ಟು ನನ್ನ ನೋಡಿ ಮಾತನಾಡಿಸಲೇ ಇಲ್ಲ. ಪಪ್ಪಾ ನಿಮಗೆ ಗೊತ್ತಾ...? ಆಗೆಲ್ಲಾ ನನಗೆ ಎಷ್ಟು ಕಷ್ಟವಾಗುತ್ತಿತ್ತೆಂದು. ಮನೆಯಲ್ಲಿದ್ದರೂ ಅಳುವೊಂದೇ ನನ್ನ ಸಂಗಾತಿ ಎನಿಸಿತ್ತು.

ಪಪ್ಪಾ ನಿಮಗೆ ನೆನಪಿದೆಯಾ...?  ನನ್ನ ತಮ್ಮ ಸಿದ್ದು 6ನೇ ತರಗತಿಗೆ ಮನೆ ಬಿಟ್ಟು ಬೋರ್ಡಿಂಗ್ ಶಾಲೆಗೆ ಹೋದಾಗ ಮನೆಯಲ್ಲಿ ನನ್ನದೇ ಅಧಿಪತ್ಯ. ಕೇಳಿದ್ದೆಲ್ಲವನ್ನು ಇಲ್ಲ ಎನ್ನದೇ ಕೊಡಿಸುತ್ತಿದ್ದಿರಿ. ಹೈಸ್ಕೂಲಿನ ಮೂರು ವರ್ಷ ಟೂರ್ ಕಳಿಸಿದಿರಿ. ಅದು ನನ್ನ ಮೇಲಿನ ಅಕ್ಕರೆ, ಪ್ರೀತಿಗಲ್ಲವೇ ಪಪ್ಪಾ... ಹಾಗೆಯೇ ನನಗೆ ಈಗಲೇ ಮದುವೆ ಬೇಡವೆಂದು ಹೇಳುತ್ತಿದ್ದೇನೆ. ಇದನ್ನೂ ಅಕ್ಕರೆಯಿಂದ ಕೇಳಿಸಿಕೊಳ್ಳಿ ಪಪ್ಪಾ.

ನಿಮಗೆಲ್ಲವೂ ಗೊತ್ತು, ಪಿ.ಯು.ಸಿ. ಮುಗಿಸಿ ನಾನು ಏತಕ್ಕಾಗಿ ಮನೆಯಲ್ಲಿದ್ದೆ , ಆಗೆಲ್ಲಾ ಹಿತೈಷಿಗಳೆನಿಸಿಕೊಂಡವರಿಂದ  ಎಷ್ಟು ಮಾತುಗಳನ್ನು, ಕುಹುಕಗಳನ್ನು ಕೇಳಿದೆ. ಕೊನೆಗೆ ಮಾನಸಿಕವಾಗಿ ಜರ್ಜರಿತಳೂ ಆಗಿದ್ದೆ. ಆಗೆಲ್ಲಾ ನನ್ನನ್ನು ಹುರಿದುಂಬಿಸಿ – ‘ಬರೆಯುವ ಹವ್ಯಾಸವಿದೆ, ಅದು ಅಭ್ಯಾಸವೂ ಆಗುತ್ತದೆ, ಜರ್ನಲಿಸಂ ಮಾಡು’ ಎಂಬ ನಿಮ್ಮ  ಕಾಳಜಿಯುಕ್ತ ಪ್ರೀತಿ ಕಡಿಮೆಯಾಯಿತಾ ಪಪ್ಪಾ?

ನೀವು ಅಂದು ಕೊಟ್ಟ ಪ್ರೋತ್ಸಾಹ ಇಂದಿಗೂ ನನ್ನ ಮನದಲ್ಲಿದೆ. ನಾನು ಇಚ್ಛಿಸಿದಂತೆಯೇ ಬದುಕುತ್ತಿರುವ ಈ ದಿನಗಳಲ್ಲಿ ವೃತ್ತಿ ಬದುಕಿನೆಡೆಗೆ ಕಟ್ಟಿದ ಕನಸುಗಳನ್ನು ಕನಸುಗಳಾಗಿಯೇ ಬಿಟ್ಟುಬಿಡಲೇ ? ಮತ್ತೆ ಮತ್ತೆ ಬದುಕಿನೆಡೆಗೆ ನನ್ನನ್ನು ಎಚ್ಚರಿಸುತ್ತಿರುವ ಆತ್ಮಸಾಕ್ಷಿಗೆ, ಇನ್ನೊಬ್ಬರಿಗೆ ಆದರ್ಶವಾಗಬೇಕು ಎಂಬ ವ್ಯಕ್ತಿತ್ವಕ್ಕೆ ಬೆಲೆ ಇಲ್ಲವೇ? ಆ ಕನಸುಗಳನ್ನು ನನ್ನಲ್ಲಿ ಬಿತ್ತಿದವರು ನೀವಲ್ಲವೇ ಪಪ್ಪಾ? ಅವುಗಳನ್ನು ಬರೋಬ್ಬರಿ ನಾಲ್ಕು ವರ್ಷದಿಂದ ಜತನದಿಂದ ಪೋಷಿಸಿದ್ದೇನೆ.

ನನ್ನನ್ನು ಹಾಸ್ಟೆಲ್‌ಗೆ ಬಿಟ್ಟು ಹೋಗಲು ಬಂದಾಗ ‘ಏನನ್ನಾದರೂ ಸಾಧಿಸಿ ಬಾ... ಹೋದೆ ಪುಟ್ಟ ಬಂದೆ ಪುಟ್ಟ ಆಗಬೇಡ ಮಗಳೇ’ ಎಂದಿರಲ್ಲಿಲ್ಲವೇ ನೀವು... ಈಗ, ‘ಇದೆಲ್ಲಾ ಸಾಕು ಮದುವೆ ಮಾಡಿಕೊಡುತ್ತೇವೆ, ನಿನ್ನ ವಾರಿಗೆಯ ಹುಡುಗಿಯರೆಲ್ಲಾ ಮದುವೆಯಾಗಿದ್ದಾರೆ, ವಯಸ್ಸು ಕಳೆಯುತ್ತಿದೆ, ಹೆಚ್ಚು ಓದಿರುವವರನ್ನು ಹುಡುಗರು ಒಪ್ಪುವುದಿಲ್ಲ’ – ಹೀಗೆ ನಾನಾ ಕಾರಣ ನೀಡಿ ಮದುವೆ ಪ್ರಸ್ತಾಪ ತೆಗೆದಾಗ ಹಿಂಸೆ ಎನ್ನಿಸುತ್ತದೆ. ನನ್ನ ಅಪ್ಪ ಸಾಮಾನ್ಯ ಅಪ್ಪಂದಿರಂತೆ ಯೋಚಿಸುತ್ತಿದ್ದಾರೆ ಎನ್ನಿಸುತ್ತದೆ.

ಅಮ್ಮನ ಬಳಿ ನನ್ನ ಸಂಕಟ ಹೇಳಿದರೆ, ಅವಳದು ಒಂದೇ ನಿಲುವು –‘ನೀನುಂಟು ನಿನ್ನಪ್ಪ ಉಂಟು’. ನನ್ನ ಅಪ್ಪ ಎಲ್ಲರ ಅಪ್ಪನಂತೆ ಸಾಮಾನ್ಯ ಅಪ್ಪನಂತಾಗಬಾರದು. ಎಲ್ಲ ಹೆಣ್ಣು ಮಕ್ಕಳ ತಂದೆಯರಿಗೆ ನನ್ನಪ್ಪ ಮಾದರಿ ಅಪ್ಪನಾಗಬೇಕು ಎನ್ನುವುದು ನನ್ನ ಆಸೆ.

ನನಗೆ ಅನಿಸುತ್ತದೆ, ಇದು ನನ್ನದೊಬ್ಬಳ ಸ್ಥಿತಿಯಲ್ಲ; ಪ್ರತಿಯೊಬ್ಬ ತಂದೆ–ಮಗಳ ಮಧ್ಯೆ ನಡೆಯುವ ಸಹಜ ಸಂಘರ್ಷವನ್ನೇ ನಾನು ಎದುರಿಸುತ್ತಿದ್ದೇನೆ ಎಂದು. ಮಗಳನ್ನು ಹೆಚ್ಚು ಓದಿಸಿದರೆ ಅವಳಿಗೆ ಅನುರೂಪನಾದ ಗಂಡು ಹುಡುಕುವುದು ಕಷ್ಟ ಎಂಬ ಮನೋಭಾವನೆ ಬೇಡ. ಮೌಲ್ಯಯುತ ಜೀವನಕ್ಕೆ ಅಣಿಗೊಳಿಸಿದ ನೀವೇ ನನ್ನನ್ನು ಸಮಾಜದ ಸಂಕೋಲೆಗಳ ಮಿತಿಗಳೊಳಗೆ ಸಿಲುಕಿಸುತ್ತಿದ್ದೀರಿ ಎಂದು ಅನಿಸುತ್ತಿದೆ.

ನನ್ನ ಇತ್ತೀಚಿನ ವರ್ತನೆಗಳಿಂದ ನೀವು ಬೇಸರಗೊಂಡಿರಬಹುದು. ಆದರೆ ನನ್ನ ಈ ವರ್ತನೆಗೆ ನನ್ನ ಓದು ಕಾರಣವೆಂಬುದಾದರೆ, ಜಗತ್ತಿನ ಯಾವ ಹೆಣ್ಣು ಮಕ್ಕಳೂ ಸಂಶೋಧನೆ ಮಾಡುತ್ತಿರಲಿಲ್ಲ, ವೈದ್ಯೆಯರಾಗುತ್ತಿರಲಿಲ್ಲ, ವಿಮಾನ ಹಾರಿಸುವ ಪೈಲಟ್‌ಗಳಾಗುತ್ತಿರಲಿಲ್ಲ.

ಮಗಳೆಂದರೆ ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಿ ಕಳುಹಿಸುವ ವಸ್ತುವಲ್ಲ, ಅಲ್ಲವೇ ಪಪ್ಪಾ? ನನ್ನದಿಷ್ಟೇ ಪ್ರಾರ್ಥನೆ: ಮತ್ತೆ ನನ್ನ ವಾತ್ಸಲ್ಯಮೂರ್ತಿ ಅಕ್ಕರೆಯ ಅಪ್ಪ ಸಿಗಲಿ. ಅಸಹಾಯಕತೆಯ ಬಂಧನದಲ್ಲಿ ಬಂಧಿಯಾಗಿರುವ ನನ್ನಮ್ಮ ಬಿಡುಗಡೆಯಾಗಲಿ.    
–ಸಂಧ್ಯಾರಾಣಿ ಎಚ್.ಎಂ., ಧಾರವಾಡ

*
ಗಂಡನಿಗೆ ಏಡ್ಸ್, ಹೆಂಡತಿಗೆ ನೆಮ್ಮದಿ!
ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳಿರುವ ಕುಟುಂಬ ನಮ್ಮ ಪಕ್ಕದ ಮನೆಗೆ ಬಾಡಿಗೆಗೆ ಬಂತು. ಸುಮಾರು ಒಂದು ತಿಂಗಳು ಕಳೆದಿರಬಹುದು – ಆ ಬಾಡಿಗೆ ಮನೆಯಾಕೆ ನನ್ನ ಹೆಂಡತಿಗೆ, ‘ಇಂದು ನಮ್ಮ ಮನೆಯಲ್ಲಿ ಪೂಜೆ ಇದೆ. ಪೂಜೆಗೆ ಬನ್ನಿ’ ಎಂದು ಕರೆದಳು. ನನ್ನ ಹೆಂಡತಿ ಹೋದಳು.

‘ಏನಿದು ಪೂಜೆ?’ ಎಂದು ನಮ್ಮ ಮನೆಯಾಕೆ ಕೇಳಿದಾಗ – ‘ಅಮ್ಮಾ, ಆ ಏಡ್ಸ್ ಅನ್ನೋ ಮಹಾಮಾರಿ ಕಾಯಿಲೆ ಬಂದಿರೋದ್ರಿಂದಲೇ ನನ್ನ ಬಾಳು ಬಂಗಾರವಾಯ್ತಮ್ಮಾ. ಪ್ರತೀ ಶುಕ್ರವಾರ ನನ್ನ ಮನೆದೇವಿಯನ್ನು ಪೂಜಿಸುತ್ತಾ ಜೊತೆಯಲ್ಲಿ ಆ ಏಡ್ಸ್ ಕಾಯಿಲೆಯನ್ನು ಪೂಜಿಸುತ್ತೇನಮ್ಮಾ’ ಎನ್ನುವ ಉತ್ತರ ಬಂತು.

ಏನೂ ಅರ್ಥವಾಗದ ನನ್ನ ಹೆಂಡತಿ, ‘ನನಗೇನೂ ಅರ್ಥವಾಗಲಿಲ್ಲವಲ್ಲ!’ ಎನ್ನಲು ಆಕೆ, ‘ಅಮ್ಮಾ ನಾವು ಈ ಹಿಂದೆ ಇದ್ದ ಊರಲ್ಲಿ ನನ್ನ ಗಂಡ ದಿನಾಲು ಒಂದೊಂದು ವೇಶ್ಯೆಯನ್ನು ರಾತ್ರಿ ಮನೆಗೆ ಕರೆದುಕೊಂಡು ಬಂದು ಅವರ ಜತೆ ಮಲಗುತಿದ್ದನಮ್ಮ. ವಿರೋಧ ಮಾಡಿದ ನನಗೆ ನಾಯಿಗೆ ಬಡಿದ ಹಾಗೆ ಬಡಿಯುತ್ತಿದ್ದ. ನನ್ನ ಗೋಳು ನೋಡಲಾಗದೇ ನನ್ನ ಗಂಡ ಕರೆದುಕೊಂಡು ಬಂದ ವೇಶ್ಯೆಯರೇ ನನ್ನ ಗಂಡ ನನಗೆ ಹೊಡೆಯುವುದನ್ನು ತಪ್ಪಿಸುತಿದ್ದರು.

ಒಮ್ಮೆ ಇವರಂತೆ ದುಶ್ಚಟ ಇರುವ ಗೆಳೆಯನೊಬ್ಬ ವೇಶ್ಯೆಯರ ಸಂಗ ಮಾಡಿ ಮಾಡಿ, ಕಲ್ಲು ಗುಂಡಿನಂತಿದ್ದ ಆತ ಕೆಲವೇ ತಿಂಗಳುಗಳಲ್ಲಿ ಏಡ್ಸ್ ಕಾಯಿಲೆಗೆ ಬಲಿಯಾಗಿ ನರಳಿ ತೀರಿಹೋದ. ಅವನ ಸ್ಥಿತಿ ನೋಡಿ ಹೆದರಿದ ನನ್ನ ಯಜಮಾನರು ಆ ವೇಶ್ಯೆಯರ ಸಂಗ ಬಿಟ್ಟರು. ಆದರೇನು ಕಾಯಿಲೆ ಹೋಗುತ್ತದೆಯೇ?

ಆ ಏಡ್ಸ್ ಕಾಯಿಲೆ ಅನ್ನೋದು ಇರದಿದ್ದರೆ ನನ್ನ ಗಂಡ ನನ್ನನ್ನು ಬಡಿಯುವ ಪರಿಗೆ ನಾನು ಎಂದೋ ಸತ್ತು ಹೋಗುತಿದ್ದೆ. ಅದಕ್ಕಾಗೇ ಪ್ರತೀ ಶುಕ್ರವಾರ ಮನೆ ದೇವರ ಪಕ್ಕದಲ್ಲಿ ಒಂದಿಷ್ಟು ಹೂ ಹಾಕಿ, ಅದನ್ನೇ ಏಡ್ಸ್ ದೇವತೆ ಅಂತ ತಿಳಿದು ಪೂಜೆ ಮಾಡ್ತೇನೆ’ ಎಂದು ಕಣ್ಣೀರಿಟ್ಟಳಂತೆ.

‘ಒಂದು ಕಾಯಿಲೆಯಿಂದ ಒಬ್ಬರ ಜೀವನ ನರಕವಾದರೆ, ನಿಮ್ಮ ಜೀವನಕ್ಕೆ ನೆಮ್ಮದಿ ದೊರೆಯಿತು. ನಿಮಗಿಲ್ಲಿ ಯಾವುದೇ ತೊಂದರೆ ಇಲ್ಲ, ನಿಶ್ಚಿಂತೆಯಿಂದಿರಿ’ ಎಂದು ನನ್ನ ಹೆಂಡತಿ ಸಮಾಧಾನ ಹೇಳಿ, ಪ್ರಸಾದ ಸ್ವೀಕರಿಸಿ ಮನೆಗೆ ಬಂದಳು.
–ದೇವಿದಾಸ ಸುವರ್ಣ, ಅಂಕೋಲಾ

*
ಅಜ್ಜಿಗೆ ಮೊಮ್ಮಗಳ ಸಾಂತ್ವನ
ನಮ್ಮ ಬಾಲ್ಯದ ನೆನಪುಗಳಲ್ಲಿ ಅಜ್ಜಿ ಮನೆಯಕದ್ದು ಸಿಂಹ ಪಾಲು! ಶಾಲೆಗೆ ರಜೆ ಬಂತೆಂದರೆ ಅಜ್ಜಿಯ ಮನೆಗೆ ಹೊರಡುತ್ತಿತ್ತು ನಮ್ಮ ಸವಾರಿ. ಹಾಗೆ ಹೋಗಿ ಅಜ್ಜಿ ಮನೆ ಸೇರಿದ ನಾವು ಶಾಲೆಯ ಪುನರಾರಂಭದ ಹಿಂದಿನ ದಿನವಷ್ಟೇ ಊರಿಗೆ ಹಿಂತಿರುಗುತ್ತಿದ್ದುದು.  ರಜೆಯ ಸಂಪೂರ್ಣ ಮಜೆ ಅಜ್ಜಿಯ ಮನೆಯಂಗಳದಲ್ಲಿಯೇ!

ಹಿಂದೆ ಸಾಮಾನ್ಯವಾಗಿ ಎಲ್ಲ ಶಾಲೆಗಳಿಗೂ ಏಕಕಾಲಕ್ಕೆ ರಜೆ ಸಿಗುತ್ತಿತ್ತು. ಹಾಗಾಗಿ, ನಮ್ಮ ತಾಯಿಯವರ ಅಕ್ಕ–ತಂಗಿಯರ ಮಕ್ಕಳೂ ಆ ಸಮಯದಲ್ಲಿ ‘ಅಜ್ಜಿಮನೆ’ಗೆ ಹಾಜರ್!

ಅತ್ತೆ, ಮಾಮ, ಅಜ್ಜ, ಅಜ್ಜಿಯರ ಅಕ್ಕರೆ  ಆರೈಕೆಯಲ್ಲಿ, ತೋಟ–ಗದ್ದೆಯ ಆ ತಿಳಿ ಪರಿಸರದಲ್ಲಿ ರಜೆ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಅಜ್ಜಿಯ ಅಣತಿಯಂತೆ ಬೆಳಗಿನ ಹತ್ತು ಗಂಟೆಯವರೆಗೆ ಮನೆಯ ಸಣ್ಣ–ಪುಟ್ಟ ಕೆಲಸಗಳಲ್ಲಿ ನೆರವಾಗಿ, ನಂತರ ಹೊರಗೆ ಆಡಲು ಹೊರಡುತ್ತಿದ್ದೆವು. ಗೊಂಬೆ ಆಟ, ಅಡುಗೆ ಆಟ ಎಂದು ದಿನವಿಡೀ ಮನೆಯ ಹೊರಗೇ ಕುಣಿದು ಕುಪ್ಪಳಿಸುತ್ತಿದ್ದೆವು.

ರಜೆ ಮುಗಿಯಲು ಇನ್ನೂ ಒಂದು ವಾರವಿದೆ ಎನ್ನುವಾಗ ಅಜ್ಜಿ ನಮ್ಮನ್ನೆಲ್ಲಾ ಒಂದು ಸಿನಿಮಾ(ಸಾಮಾನ್ಯವಾಗಿ ರಾಜ್ ಕುಮಾರ್ ಸಿನಿಮಾ) ತೋರಿಸಲು ಕರೆದೊಯ್ಯುತ್ತಿದ್ದರು. ಎಲ್ಲರಿಗೂ ಒಂದೊಂದು ಜೊತೆ ಬಟ್ಟೆ ಕೊಡಿಸುತ್ತಿದ್ದರು. ನಾವೆಲ್ಲ ಅತಿ ಸಂಭ್ರಮದಿಂದ ಅದನ್ನು ತೆಗೆದುಕೊಂಡು ಶಾಲೆ ಪುನರಾರಂಭವಾಗುವ ವೇಳೆಗೆ ನಮ್ಮ ನಮ್ಮ ಊರು ಸೇರುತ್ತಿದ್ದೆವು.

ಹೀಗೆ ಒಮ್ಮೆ ನಾವು ಅಜ್ಜಿ ಮನೆಯಲ್ಲಿರುವಾಗ, ಇದ್ದಕ್ಕಿಂದ್ದಂತೆ ನಮ್ಮ ಅಜ್ಜನವರಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತು. ಅಜ್ಜ ನಡೆಯುವಾಗ ವಾಲುತ್ತಿದ್ದರು, ಮಾತನಾಡುವಾಗ ತೊದಲತೊಡಗಿದರು. ಮನೆ ಹತ್ತಿರದ ಕ್ಲಿನಿಕ್ ನಿಂದ ಮಣಿಪಾಲದವರೆಗೂ ಹೋಗಿ ಚಿಕಿತ್ಸೆ ಕೊಡಿಸಿದ್ದಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಜ್ಜನವರು ತೀರಿಕೊಂಡರು.

ಅಜ್ಜನವರು ತೀರಿಕೊಂಡ ನಾಲ್ಕಾರು ದಿನಗಳಲ್ಲಿಯೇ, ನಾವು ಮಕ್ಕಳು ಊರಿಗೆ ಮರಳುವ ದಿನ ಬಂದಿತ್ತು. ಮೊದಲೇ ದುಃಖಭರಿತರಾಗಿದ್ದ ಅಜ್ಜಿ ನಾವು ಹೊರಡಲು ಅನುವಾದದ್ದನ್ನು ಕಂಡು ಗದ್ಗದಿತರಾದರು. ನನ್ನನ್ನೂ ಮತ್ತು ಸುಮಾರು ಐದು ವರ್ಷದ ನನ್ನ ಚಿಕ್ಕಮ್ಮನ ಮಗಳನ್ನು ತಬ್ಬಿ ಹಿಡಿದು, ‘ಈ ಬಾರಿ ನಿಮಗೆ ಏನೂ ತೆಗೆದುಕೊಡಲಾಗಲಿಲ್ಲ... ನಿಮ್ಮ ಅಜ್ಜನೂ ತೀರಿ ಹೋದರು... ನನ್ನ ಬಳಿಯೂ ಹಣವಿಲ್ಲದಂತಾಯಿತು’ ಎನ್ನುತ್ತಾ ಕಣ್ಣುಗಳನ್ನು ತುಂಬಿಕೊಂಡರು.

ಅಜ್ಜಿಯ ಮಾತುಗಳನ್ನು ಕೇಳಿದ ನನ್ನ ಚಿಕ್ಕಮ್ಮನ ಮಗಳು ಒಳಗೆ ಓಡಿದಳು. ಒಳಗಿನಿಂದ ಬಂದವಳೇ ಅಜ್ಜಿಯ ಗಲ್ಲವನ್ನು ಹಿಡಿದು – ‘ದುಡ್ಡಿಲ್ಲ ಎಂದು ಅಳಬೇಡ ಅಜ್ಜಿ, ಆ ದಿನ ಅಜ್ಜ ಕೊಟ್ಟಿದ್ದ ದುಡ್ಡು ನನ್ನ ಹತ್ತಿರವೇ ಇದೆ, ಅದನ್ನು ನೀನೇ ತೆಗೆದುಕೋ... ನೀ ಮಾತ್ರ ಅಳಬೇಡ’ ಎಂದು ತನ್ನಲ್ಲಿದ್ದ ಎರಡು ರೂಪಾಯಿಯ ನೋಟನ್ನು ಅಜ್ಜಿಗೆ ಕೊಟ್ಟಳು. ಆ ಪುಟ್ಟ ಬಾಲೆಯ ಮುಗ್ಧ ಹಾಗೂ ಮಾನವೀಯ ಸ್ಪಂದನವನ್ನು ಕಂಡು ನಾವೆಲ್ಲ ಮೂಕರಾಗಿದ್ದೆವು.
–ಡಾ. ವಿನಯ ಶ್ರೀನಿವಾಸ್, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT