ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಕ್ಷ ಬೆಳೆಸದಿದ್ದರೆ ಉಳಿಗಾಲವಿಲ್ಲ

ವಾರದ ಸಂದರ್ಶನ
Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

* ಮಾರ್ಚ್‌ನಲ್ಲಿ ಅತ್ಯಧಿಕ ತಾಪಮಾನ ರಾಜ್ಯದಲ್ಲಿ ದಾಖಲಾಗಿದೆ. ಇದಕ್ಕೆ ಕಾರಣಗಳೇನು?

ಮಾರ್ಚ್‌ ಆರಂಭದಲ್ಲಿ ಅಂದರೆ, ಮೊದಲ ಒಂದೆರಡು ವಾರಗಳು ಗರಿಷ್ಠ ಉಷ್ಣಾಂಶ ಸಾಮಾನ್ಯ ಸ್ಥಿತಿಯಲ್ಲೇ ಇತ್ತು. ಆದರೆ, ಕಳೆದ ಒಂದು ವಾರದಲ್ಲಿ ಉತ್ತರ ಒಳನಾಡಿನ  ಕೆಲವು ಜಿಲ್ಲೆಗಳು, ಅದರಲ್ಲೂ ಬಳ್ಳಾರಿಯಲ್ಲಿ 42 ಡಿಗ್ರಿ ಮತ್ತು ಕಲಬುರ್ಗಿಯಲ್ಲಿ 41 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಅಲ್ಲದೆ, ಉತ್ತರ ಒಳನಾಡಿನ ಇತರ ಜಿಲ್ಲೆಗಳಲ್ಲೂ  ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ 2ರಿಂದ 2.5 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಅಧಿಕ ದಾಖಲಾಗಿದೆ. ಈ ವಿದ್ಯಮಾನಕ್ಕೆ ಮುಖ್ಯ ಕಾರಣ ಗುಜರಾತ್‌, ರಾಜಸ್ತಾನದ ಕಡೆಯಿಂದ ಬೀಸುತ್ತಿರುವ ಮೇಲ್ಮೈ ಸುಳಿಗಾಳಿ. ಉತ್ತರದ ಕಡೆಯಿಂದ ಹಾದು ಬರುವ ಮೇಲ್ಮೈ ಸುಳಿಗಾಳಿ ಬಿಸಿಗಾಳಿಯನ್ನು ಹೊತ್ತು ರಾಜ್ಯದ ಉತ್ತರ ಒಳನಾಡು ಪ್ರದೇಶದ ಮೇಲೆ ಸುರುಳಿ ಸುತ್ತಿ ಹಾದು ಹೋಗುತ್ತಿದೆ. ಇದು ಬಳ್ಳಾರಿ, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ರಾಯಚೂರು ಪ್ರದೇಶದಲ್ಲಿ ಉಷ್ಣಾಂಶ ಅಧಿಕಗೊಳ್ಳಲು ಕಾರಣವಾಗಿದೆ.

* ದಕ್ಷಿಣ ಒಳನಾಡಿನಲ್ಲಿ  ಅದರ ಪ್ರಭಾವ ಆಗುತ್ತಿಲ್ಲವೇ?

ಅಪಾರ ಶಾಖವನ್ನು ಹೊತ್ತು ತರುತ್ತಿರುವ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿಗೆ ಯಾವುದೇ ತೊಂದರೆ ಆಗಿಲ್ಲ. ಬಂಗಾಳ ಕೊಲ್ಲಿಯಿಂದ ಬೀಸುವ ಗಾಳಿಯು ದಕ್ಷಿಣ ಒಳನಾಡಿಗೆ ತಂಪನ್ನೆರೆಯುತ್ತಿದೆ. ಹೀಗಾಗಿ ಉತ್ತರ ಒಳನಾಡಿನಷ್ಟು ಧಗೆಯ ಬವಣೆ ದಕ್ಷಿಣ ಒಳನಾಡಿನಲ್ಲಿ ಕಂಡು ಬಂದಿಲ್ಲ. ಈಗಾಗಲೇ ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳು ಹಾಗೂ ಜಿಲ್ಲೆಗಳಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ ದಾಟಿದ್ದರೂ ಸಹನೀಯ ಎನಿಸಿದೆ.

* ಮುಂದಿನ ಎರಡು ತಿಂಗಳು ತಾಪಮಾನ ಹೇಗಿರುತ್ತದೆ?

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬಹಳ ವ್ಯತ್ಯಾಸವನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರುತ್ತದೆ. ತಾಪಮಾನದ ಏರಿಕೆಯಿಂದಾಗಿ ಮಧ್ಯದಲ್ಲಿ ಮಳೆ ಆಗುವ ನಿರೀಕ್ಷೆಯೂ ಇದೆ. ಈ ವರ್ಷದ ಬೇಸಿಗೆಯಲ್ಲಿ ಕಠಿಣ ದಿನಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆ ಹೆಚ್ಚು ಕಠಿಣವಾಗಲು ಜಾಗತಿಕ ತಾಪಮಾನ ಏರಿಕೆ ಆಗುತ್ತಿರುವುದೇ ಕಾರಣ. 

ತಾಪಮಾನ ಇನ್ನಷ್ಟು ಏರಿಕೆಯಾಗಿ ಒತ್ತಡ ಸೃಷ್ಟಿಯಾಗಿ ಮಳೆಯಾಗುವ ಸಾಧ್ಯತೆಯೂ ಇದೆ. ಅದರಿಂದ ಜನರಿಗೆ ಸ್ವಲ್ಪ ನಿರಾಳ ಆಗಬಹುದು. ನಿಖರವಾಗಿ ಯಾವಾಗ ಮಳೆ ಆಗಬಹುದು ಎಂಬುದನ್ನು ಈಗಲೇ ಊಹಿಸಲು ಆಗುವುದಿಲ್ಲ.

* ವರ್ಷದಿಂದ ವರ್ಷಕ್ಕೆ  ತಾಪಮಾನ ಹೆಚ್ಚುತ್ತಿರಲು ಕಾರಣಗಳೇನು?

ಜಾಗತಿಕ ತಾಪಮಾನದ ಏರಿಕೆಯೇ (ಗ್ಲೋಬಲ್‌ ವಾರ್ಮಿಂಗ್‌) ಕಾರಣ. ಇದರಲ್ಲಿ ಭಾರತವೂ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳ ಪಾತ್ರವಿದೆ. ಪಳೆಯುಳಿಕೆ ಇಂಧನ ಉರಿಸುವಿಕೆ, ಕೈಗಾರಿಕಾ ಮಾಲಿನ್ಯ, ಮಿತಿಮೀರಿದ ವಾಹನಗಳ ಬಳಕೆಯೇ ಜಾಗತಿಕ ತಾಪಮಾನ ಏರಲು ಕಾರಣವಾಗಿದೆ. ಮರ ಗಿಡಗಳ ನಾಶವನ್ನು ಎಲ್ಲಿಯವರೆಗೆ ತಡೆಯುವುದಿಲ್ಲವೋ ಅಲ್ಲಿಯ ತನಕ ಈ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

* ಉಷ್ಣಾಂಶವನ್ನು ತಗ್ಗಿಸಲು ನಾವು ಕೈಗೊಳ್ಳಬಹುದಾದ ಕ್ರಮಗಳೇನು?

ಮೊದಲಿಗೆ ನಾವು ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು ಮತ್ತು ಹೆಚ್ಚುಹೆಚ್ಚು ಸಸಿಗಳನ್ನು ಬೆಳೆಸುವತ್ತ ಗಮನ ಹರಿಸಬೇಕು. ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳ ಮೇಲೆ ಕಡಿವಾಣ ಹಾಕಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳಿಂದ ಶಾಖ ಉತ್ಪನ್ನ ಆಗುವುದರ ಜತೆಗೆ ಇಂಗಾಲಾಮ್ಲವೂ ಅಪಾರ ಪ್ರಮಾಣದಲ್ಲಿ ವಾತಾವರಣ ಸೇರುತ್ತದೆ. ಇಂಗಾಲವನ್ನು ಹೀರುವ ಮತ್ತು ಅಧಿಕ ಆಮ್ಲಜನಕವನ್ನು ನೀಡುವ ಮರಗಳನ್ನು ಬೆಳೆಸಬೇಕು.

ಯಾವ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಮರಗಳಿರುತ್ತವೆಯೊ, ಅಲ್ಲಿ ಎಂಥದ್ದೇ ತಾಪಮಾನ ಇದ್ದರೂ ಸಹಿಸಿಕೊಳ್ಳುವ ಶಕ್ತಿ ಇರುತ್ತದೆ. ಆದ್ದರಿಂದ, ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವತ್ತ ಗಮನ ಹರಿಸಬೇಕು.

ಬೆಂಗಳೂರು ನಗರದಲ್ಲಿ 80ರ ದಶಕದಲ್ಲಿ ಬೇಸಿಗೆಯಲ್ಲಿ 34 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತಿತ್ತು. ಆದರೆ, ಬೇಸಿಗೆಯ ತಾಪದ ಅನುಭವ ಆಗುತ್ತಿರಲಿಲ್ಲ. ಆಗ ಮರಗಳ ಸಂಖ್ಯೆ ಇಂದಿಗಿಂತಲೂ ಅಧಿಕವಾಗಿತ್ತು. ಹಸಿರು ಪ್ರಮಾಣ ಹೆಚ್ಚಿದಷ್ಟೂ  ತಾಪಮಾನದಲ್ಲಿ 1ರಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮರಗಳನ್ನು ದೇವತೆಗಳು ಎಂದು ಭಾವಿಸಿ ಅವುಗಳನ್ನು ಬೆಳೆಸಬೇಕು ಮತ್ತು ರಕ್ಷಿಸಬೇಕು. ಆಗ ಮಾತ್ರ ತಾಪಮಾನವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT