ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಇದ್ದರಷ್ಟೇ ಹೊರಬನ್ನಿ...!

ವಾರದ ಸಂದರ್ಶನ
Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

* ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಎರಡೇ ಕಾಲ ಎಂದು ಹೇಳಲಾಗುತ್ತದಲ್ಲ, ಏಕೆ?

ಕಲಬುರ್ಗಿ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತಾಪಮಾನ ಅಧಿಕ. ಸಾಮಾನ್ಯ ದಿನಗಳಲ್ಲಿ ಇಲ್ಲಿ ದಾಖಲಾಗುವಷ್ಟು ಉಷ್ಣಾಂಶ ಬೇರೆ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿರುತ್ತದೆ. ಈ ಕಾರಣಕ್ಕಾಗಿಯೇ ಹೈದರಾಬಾದ್ ಕರ್ನಾಟಕ ಪ್ರದೇಶದ ಜನ 12 ತಿಂಗಳೂ ಚರ್ಮದ ರಕ್ಷಣೆಗೆ ಆದ್ಯತೆ ನೀಡಬೇಕಾಗುತ್ತದೆ. ಬೇಸಿಗೆಯಲ್ಲಿ ನೇರಳಾತೀತ ಕಿರಣಗಳ ತೀವ್ರತೆ ಹೆಚ್ಚಾಗಿರುವುದರಿಂದ ಹೈದರಾಬಾದ್ ಕರ್ನಾಟಕದ ಮಟ್ಟಿಗೆ ಕಾಲಗಳು ಎಂದರೆ ಬಿಸಿಲು ಮತ್ತು ಅತೀ ಬಿಸಿಲು ಎನ್ನುವಂತಾಗಿದೆ. ಹಾಗೆಂದು ಈಗ ಬೇರೆ ಜಿಲ್ಲೆಗಳಲ್ಲಿ ಬಿಸಿಲು ಕಡಿಮೆ ಏನಿಲ್ಲ.

* ಯಾವ ವಯೋಮಾನದವರು ಬಿಸಿಲಿನಿಂದ ಆರೋಗ್ಯ ಸಂಬಂಧಿ ತೊಂದರೆ ಎದುರಿಸುತ್ತಾರೆ?

0–5 ವರ್ಷದ ಮಕ್ಕಳು ಹಾಗೂ 70 ವರ್ಷ ದಾಟಿದವರಲ್ಲಿ ಬಿಸಿಲಿನ ತೀವ್ರತೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದನ್ನು ಕಾಣಬಹುದು. ದೇಹದಲ್ಲಿ ನೀರು ಮತ್ತು ಲವಣಾಂಶ ಕಡಿಮೆ ಆಗುವುದರಿಂದ ನಮ್ಮ ದೇಹ ಅಧಿಕ ಬಿಸಿಲಿಗೆ ಒಗ್ಗಿಕೊಳ್ಳುವುದಿಲ್ಲ. ಈ ಬಗ್ಗೆ ಮಕ್ಕಳಿಗೆ ಹೇಳಿಕೊಳ್ಳಲು ಆಗುವುದಿಲ್ಲ. ವಯಸ್ಸಾದವರನ್ನೂ ಇದೇ ಸಮಸ್ಯೆ ಕಾಡುತ್ತದೆ.

* ಬಿರು ಬಿಸಿಲಿನಿಂದ ಏನೆಲ್ಲ ತೊಂದರೆಗಳು ಆಗುತ್ತವೆ?

ಸಾಮಾನ್ಯವಾಗಿ ಚರ್ಮದಲ್ಲಿ ಶುಷ್ಕತೆ ಉಂಟಾಗುತ್ತದೆ. ಬೆವರಿನ ದುರ್ವಾಸನೆಯಿಂದ ಪಾರಾಗಲು ಸಾಬೂನಿನಿಂದ ಪದೇ ಪದೇ ಕೈಕಾಲು, ಮುಖ ತೊಳೆಯುವುದರಿಂದ ತೇವಾಂಶ ಕಡಿಮೆಯಾಗಿ ಚರ್ಮ ಶುಷ್ಕವಾಗುತ್ತದೆ. ಈಜುಕೊಳದಲ್ಲಿ ಸ್ನಾನ ಮಾಡಿದ ಬಳಿಕ ಬೇರೆ ನೀರಿನಿಂದ ಮತ್ತೊಮ್ಮೆ ಸ್ನಾನ ಮಾಡದಿದ್ದರೂ ಚರ್ಮ ಸಂಬಂಧಿ ರೋಗಗಳು ಕಾಡುತ್ತವೆ. ಚರ್ಮ ಕೆಂಪಾಗಿ, ತುರಿಕೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬಿಸಿಲಿನ ಝಳದಿಂದ ಕೆಲವರಲ್ಲಿ ‘ಸನ್ ಬರ್ನ್’ (ಚರ್ಮ ಸುಡುವುದು) ಮತ್ತು ಹಲವರಲ್ಲಿ ‘ಸನ್ ಸ್ಟ್ರೋಕ್‌’ (ಸೂರ್ಯಾಘಾತ) ಕಂಡು ಬರುತ್ತದೆ.

* ‘ಸನ್ ಬರ್ನ್’ ಮತ್ತು ‘ಸನ್ ಸ್ಟ್ರೋಕ್’ ನಡುವಿನ ವ್ಯತ್ಯಾಸವೇನು?

ಸನ್ ಬರ್ನ್‌ನ ಪರಿಣಾಮ ದೇಹದ ಮೇಲ್ಭಾಗದಲ್ಲಾದರೆ, ಸನ್ ಸ್ಟ್ರೋಕ್‌ನಿಂದ ದೇಹದ ಒಳಭಾಗದಲ್ಲಿ ಸಮಸ್ಯೆ ಕಂಡು ಬರುತ್ತದೆ. ಚರ್ಮ ಕೆಂಪಾಗುವುದು, ತುರಿಕೆ, ಉರಿ ಹಾಗೂ ಬೆವರುಸಾಲೆ ಉಂಟಾದರೆ ಅದನ್ನು ‘ಸನ್ ಬರ್ನ್’ ಎಂದು ಹೇಳಲಾಗುತ್ತದೆ. ನಿರ್ಜಲೀಕರಣ (ಡಿಹೈಡ್ರೇಶನ್), ರಕ್ತದೊತ್ತಡ, ತಲೆ ಸುತ್ತುವಿಕೆ ಮತ್ತು ಮೂರ್ಚೆ ರೋಗದ ಲಕ್ಷಣ ಕಂಡು ಬಂದರೆ ಅದನ್ನು ‘ಸನ್ ಸ್ಟ್ರೋಕ್’ ಎಂದು ಹೇಳುತ್ತೇವೆ. ಇದು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಂತಹ ಸಂದರ್ಭದಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಬೇಕು.

* ಬಿಸಿಲಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಕಡಿಮೆ ಬಣ್ಣ ಇರುವ ಅಥವಾ ಶುಭ್ರ ಬಿಳಿಯ ಹಾಗೂ ತುಂಬುತೋಳಿನ ಬಟ್ಟೆಗಳನ್ನು ಧರಿಸಬೇಕು. 15ರಿಂದ 25 ಎಸ್‌ಪಿಎಫ್‌ (Sun Protection Factor) ರೇಟಿಂಗ್ ಇರುವ ಹಾಗೂ ಜಲ ನಿರೋಧಕ ಸನ್‌ಸ್ಕ್ರೀನ್‌ ಕ್ರೀಂ ಬಳಸಬೇಕು. ಬಿಸಿಲಿಗೆ ಹೋಗುವ 20 ನಿಮಿಷಗಳ ಮುನ್ನ ಇದನ್ನು ಹಚ್ಚಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಪಡೆಯಲು ಪ್ರತಿ 3–4 ಗಂಟೆಗೊಮ್ಮೆ ಸನ್‌ಸ್ಕ್ರೀನ್‌ ಕ್ರೀಂ ಹಚ್ಚಿಕೊಳ್ಳಬೇಕು. ತಂಪಾದ ಕನ್ನಡಕ, ಟೋಪಿ, ಕೊಡೆಗಳನ್ನು (ಛತ್ರಿ) ಬಳಸಬೇಕು. ಕೈ, ಮುಖಗವುಸು ಧರಿಸುವುದರಿಂದ ಸೂರ್ಯನ ನೇರ ಕಿರಣಗಳಿಂದ ರಕ್ಷಣೆ ಪಡೆಯಬಹುದು.

* ಬೇಸಿಗೆಯಲ್ಲಿ ಆಹಾರ ಸೇವನೆ ಹೇಗಿರಬೇಕು?

ಸಾಧ್ಯವಾದಷ್ಟೂ ಲಘು ಆಹಾರ ಸೇವಿಸಬೇಕು. ಕಚೇರಿ ಒಳಗೆ ಕೆಲಸ ಮಾಡುವವರು 2–3 ಲೀಟರ್ ಹಾಗೂ ಕಚೇರಿ ಹೊರಗಡೆ ಕೆಲಸ ಮಾಡುವವರು 5–6 ಲೀಟರ್ ನೀರು ಅಥವಾ ದ್ರವಾಹಾರ ಸೇವಿಸಬೇಕು. ಎಳನೀರು ಕುಡಿಯುವುದು ಬಹಳ ಉಪಯುಕ್ತ. ಕಲ್ಲಂಗಡಿ, ಕರಬೂಜ, ಸೌತೆಕಾಯಿ, ಟೊಮೆಟೊ ಸೇರಿದಂತೆ ನೀರಿನಾಂಶ ಅಧಿಕವಾಗಿರುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು. ತಂಪು ಪಾನೀಯ, ಜ್ಯೂಸ್‌, ನಿಂಬೆ ಪಾನಕ ಸೇವನೆಯಿಂದ ದೇಹವನ್ನು ತಂಪು ಮಾಡಿಕೊಳ್ಳಬಹುದು. ಚಹಾ, ಕಾಫಿ ಸೇವನೆ ಒಳ್ಳೆಯದಲ್ಲ. ಊಟದಲ್ಲಿ ಜಿಡ್ಡಿನಾಂಶ ಇಲ್ಲದ ಪದಾರ್ಥಗಳನ್ನು ಬಳಸಬೇಕು. ಇಷ್ಟಾದ ಬಳಿಕವೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಸ್ವಯಂ ಔಷಧಿ ತೆಗೆದುಕೊಳ್ಳದೆ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT