ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ, ಪರೀಕ್ಷೆ ಎಂಬ ಈ ಆಟವಾಡೋಣ!

Last Updated 2 ಏಪ್ರಿಲ್ 2017, 20:36 IST
ಅಕ್ಷರ ಗಾತ್ರ
ಎಸ್ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ! ಈಗಾಗಲೇ ಮಕ್ಕಳು ಒಂದು ಪತ್ರಿಕೆ ಬರೆದು ಬಂದಿದ್ದಾರೆ. ಈ ಸಮಯ ಮಕ್ಕಳಿಗೆ, ಪೋಷಕರಿಗೆ ಹಾಗೂ ಮಕ್ಕಳ ಸಂಬಂಧಿಗಳಿಗೂ ಪರೀಕ್ಷಾಕಾಲವೇ. ಪೋಷಕರು ಹಾಗೂ ಸಂಬಂಧಿಗಳು ಹೆಚ್ಚು ನಿರೀಕ್ಷಿಸುವ ಕಾಲವೂ ಹೌದು. ಈಗ ಈ ಎಲ್ಲವನ್ನೂ ಅದೇ ಕ್ರಮದಲ್ಲಿ ನೋಡೋಣ.
 
-ಮಕ್ಕಳೇ, ಈಗ ನೀವು ಬಹಳ ಮುಖ್ಯವಾಗಿ ಮಾಡಬೇಕಾಗಿರುವ ಕೆಲಸವೆಂದರೆ ಆತ್ಮವಿಶ್ವಾಸದಿಂದಿರುವುದು! ಏನೇ ಆಗಲಿ, ಆ ಆತ್ಮವಿಶ್ವಾಸ–ಹುರುಪು ಕಡಿಮೆಯಾಗಬಾರದು. ನೀವು ಜಗತ್ತನ್ನು ಗೆಲ್ಲುವುದು ಆತ್ಮವಿಶ್ವಾಸದಿಂದಲೇ; ಇನ್ನು ಪರೀಕ್ಷೆ ಗೆಲ್ಲಲು ಸಾಧ್ಯವಿಲ್ಲವೇ?
 
-ಪರೀಕ್ಷೆಯ ವೇಳಾಪಟ್ಟಿಯನ್ನು ದೊಡ್ಡದಾಗಿ ಬರೆದು, ಕಣ್ಣಿಗೆ ಕಾಣುವಂತೆ ಹಾಕಿಕೊಳ್ಳಿರಿ. ಯಾವುದೇ ಕಾರಣಕ್ಕೂ ನಾಳಿನ ಪರೀಕ್ಷೆಯ ವಿಷಯವನ್ನು ಇನ್ನಾವುದೇ ಬೇರೆಯದು ಎಂದು ತಿಳಿಯುವ ಪರಿಸ್ಥಿತಿ ಬರಬಾರದು (ಕನ್ನಡ ಎಂದುಕೊಂಡಿದ್ದೆ; ಆದರೆ ಇಂದಿರುವುದು ಇಂಗ್ಲಿಷ್‍ ಎಂದಾಗಬಾರದು!). 
 
-ಪರೀಕ್ಷಾ ಕೊಠಡಿಯಲ್ಲಿ ಆತಂಕಪಡದೆ ಸಮಾಧಾನವಾಗಿರಿ. ತುಸು ಆತಂಕವಿದ್ದೇ ಇರುತ್ತದೆ. ನಿರಂತರವಾಗಿ ಬಾಕ್ಸ್ಆಫೀಸಿನಲ್ಲಿ ಜಯಭೇರಿ ಬಾರಿಸುವ ಚಿತ್ರಗಳಲ್ಲಿ ನಟಿಸಿರುವ ನಾಯಕನಿಗೂ ಹೊಸ ಚಿತ್ರದ ಬಿಡುಗಡೆಯ ದಿನ ಆತಂಕವಿರುತ್ತದೆ. ಆ ಆತಂಕವನ್ನು ಸವಿಯೋಣ, ಅಲ್ಲವೆ?
 
- ಪ್ರಶ್ನಪತ್ರಿಕೆ ಓದಿಕೊಳ್ಳಲೆಂದೇ ಸಮಯ ಕೊಟ್ಟಿರುತ್ತಾರೆ. ಆದ್ದರಿಂದ, ಆತಂಕ ಮಾಡಿಕೊಳ್ಳದೆ ನಿಧಾನವಾಗಿ ಓದಿ. ಚೆನ್ನಾಗಿ ತಿಳಿದಿರುವುದನ್ನು ಮೊದಲು, ಸ್ವಲ್ಪ ಗೊತ್ತಿರುವುದು ನಂತರ ಬರೆಯಿರಿ. ಅಷ್ಟು ಹೊತ್ತಿಗೆ  ನಿಮಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ತಿಳಿಯದಿರುವ ಪ್ರಶ್ನೆಗಳಿಗೂ ಆಗ ಉತ್ತರ ಹೊಳೆಯಬಹುದು. 
 
-ನಿಮ್ಮ ಉತ್ತರಪತ್ರಿಕೆಯಲ್ಲಿ ನಿಮ್ಮ ರಿಜಿಸ್ಟರ್‍ ನಂಬರ್ ಸರಿಯಿದೆಯೇ ಎಂಬುದನ್ನು ಪರೀಶೀಲಿಸಿಕೊಳ್ಳಿ. ಪರೀಕ್ಷಾ ನಿರೀಕ್ಷಕರು ಸಹಿ ಮಾಡಲು ಕೊಟ್ಟ ಹಾಳೆಯಲ್ಲಿ ನಿಮ್ಮ ರಿಜಿಸ್ಟರ್‍ ಸಂಖ್ಯೆ  ಹಾಗೂ ಉತ್ತರಪತ್ರಿಕೆಯ ಸಂಖ್ಯೆ ಸರಿಯಿದೆಯೇ ಪರಿಶೀಲಿಸಿರಿ. ವ್ಯತ್ಯಾಸವಿದ್ದಲ್ಲಿ ಯಾವುದೇ ಆತಂಕವಿಲ್ಲದೆ ಅದನ್ನು ಅವರ ಗಮನಕ್ಕೆ ತಂದು ತಿದ್ದಿಸಿರಿ.
 
-ಒಂದು ಪರೀಕ್ಷೆ ಬರೆದು ಬಂದ ಮೇಲೆ ಮತ್ತೆ ಅದರ ‘ಮರಣೋತ್ತರ ಪರೀಕ್ಷೆ’ ಬೇಡವೇ ಬೇಡ! ಮರಣೋತ್ತರ ಪರೀಕ್ಷೆ ಪದವನ್ನು ಬೇಕೆಂದೇ ಬಳಸುತ್ತಿದ್ದೇನೆ. ‘ಅಯ್ಯೋ! ಹೀಗೆ ಬರೆಯಬೇಕಾಗಿತ್ತು!’, ‘ಇದನ್ನು ಬರಿಯಲೇ ಇಲ್ಲ!’ ಇತ್ಯಾದಿಗಳಿಗೆ ಅವಕಾಶವೇ ಬೇಡ. ಅದೇನೇ ಇದ್ದರೂ ನೀವು ಹಿಂದೆ ಹೋಗಿ ಬದಲಿಸಲು ಸಾಧ್ಯವಿಲ್ಲವಲ್ಲ! ಹಾಗಾಗಿ, ಮುಗಿದ ಪರೀಕ್ಷೆಯ ಗೊಡವೆ ಬಿಟ್ಟು, ಹೊರೆ ಕಡಿಮೆಯಾದ ಭಾವದಲ್ಲಿ ಮುಂದಿನ ಪರೀಕ್ಷೆಯನ್ನು ಎದುರು ನೋಡಿ.
 
-ಪರೀಕ್ಷಾ ದಿನಗಳಲ್ಲಿ ಓದನ್ನು ತಜ್ಞರು ಪುರಸ್ಕರಿಸುವುದಿಲ್ಲ. ಸಾಧ್ಯವಾದಷ್ಟೂ ಶಾಂತತೆಯಿಂದಿರುವುದೇ ಹೆಚ್ಚು ಸೂಕ್ತ ಎನ್ನುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಗುರುತು ಮಾಡಿಟ್ಟುಕೊಂಡ ಮುಖ್ಯವಿಷಯಗಳನ್ನು ಮಾತ್ರ ನೋಡಿರಿ. ಇಲ್ಲಿಯೂ ಆತಂಕ ಬೇಡ.
 
-ಇಲಾಖೆಯವರು ಪಾಸಿಂಗ್ ಪ್ಯಾಕೇಜ್‍ ಎಂದು ಕೊಟ್ಟಿದ್ದರಲ್ಲವೆ? ಆ ಕುರಿತು ನಿಗಾ ವಹಿಸಿ ಆ ವಿಷಯಗಳನ್ನು ಓದಿ ಗಟ್ಟಿ ಮಾಡಿಕೊಳ್ಳಿರಿ. ಅಷ್ಟು ತಿಳಿದಿದ್ದರೆ ನೀವು ತೇರ್ಗಡೆಯಾಗುವುದು ಖಂಡಿತ. ಹೆಚ್ಚಿನ ಎಷ್ಟು ಅಂಕ ಬಂದರೂ ಅದು ಬೋನಸ್‍.
 
-ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೀನಿ. ಸಾಕಷ್ಟು ಗೊತ್ತಿದೆ. ಹಾಗಾಗಿ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಗುತ್ತದೆ  ಎಂಬ ಭರವಸೆಯಿಟ್ಟುಕೊಳ್ಳಿ.
 
-ಯಾವುದೇ ಕಾರಣಕ್ಕೂ ನಕಾರಾತ್ಮಕ ಅಂಶಗಳ ಕುರಿತಾಗಿ ಯೋಚಿಸಲೂ ಹೋಗಬೇಡಿ. ಅಂದರೆ, ಯಾರಿಗೋ ಪ್ರಶ್ನಪತ್ರಿಕೆ ಸಿಗುತ್ತದೆ? ನನಗೂ ಸಿಗಬಹುದೇ? ಪರೀಕ್ಷೆಯಲ್ಲಿ ಕಾಪಿ ಮಾಡಲು ಅವಕಾಶ ಸಿಗುವುದೇ? ಅಲ್ಲಿ ಬರುವ ಶಿಕ್ಷಕರೇ ಹೇಳಿಕೊಟ್ಟುಬಿಟ್ಟರೆ! ಇಂಥವುಗಳ ಕಡೆ ನಿಮ್ಮ ಮನಸ್ಸು ಎಂದಿಗೂ ಹೋಗದಿರಲಿ. ಇವು ನಿಮ್ಮ ಘನತೆಗೆ ತಕ್ಕುದ್ದಲ್ಲ. ನಮ್ಮ ಘನತೆಗೆ ತಕ್ಕುದ್ದಲ್ಲದ್ದನ್ನು ಮಾಡಲೇಬಾರದು.
 
-ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಮಾಜವಿಜ್ಞಾನ – ಈ ವಿಷಯಗಳಲ್ಲಿ ಮುಖ್ಯ ಎಂದು ಅಧ್ಯಾಪಕರು ಗುರುತು ಮಾಡಿಕೊಟ್ಟಿದ್ದನ್ನು ಮಾತ್ರ ಓದಿ.
 
-ಗಣಿತದಲ್ಲಿನ ಸೂತ್ರಗಳು, ವಿಜ್ಞಾನದಲ್ಲಿನ ಚಿತ್ರಗಳನ್ನು ಬರೆದು ಅಭ್ಯಾಸ ಮಾಡಿ, ಮನನ ಮಾಡಿಕೊಳ್ಳಿರಿ. ರೇಖಾಗಣಿತದ ಥಿಯರಂಗಳ ಮುಖ್ಯಾಂಶಗಳನ್ನು ಬರೆದು ಅಭ್ಯಾಸ ಮಾಡಿರಿ. ಭಾಷಾವಿಷಯಗಳ ಕಂಠ ಪಾಠಕ್ಕಿರುವ ಪದ್ಯಗಳನ್ನು ಅಭ್ಯಾಸ ಮಾಡಿರಿ. ಇವುಗಳಿಂದ ಹೆಚ್ಚು ಅಂಕ ಗಳಿಸಲು ಸಾಧ್ಯ.
 
-ನಿಮ್ಮ ಉತ್ತರಗಳಷ್ಟೇ ಮುಖ್ಯ ಅಲ್ಲ, ನೀವು ಅದನ್ನು ಸುಂದರವಾಗಿ ಪ್ರಸ್ತುತ ಪಡಿಸುವುದೂ ಅಷ್ಟೇ ಮುಖ್ಯ. ಗೊತ್ತಿರುವ ಉತ್ತರಗಳನ್ನು ಮೊದಲು ಬರೆಯಿರಿ. ಚಿತ್ತಾಗದಂತೆ ಬರೆಯಿರಿ. ಚಿತ್ತಾದರೆ ಅದನ್ನು ಗೀಚಿ ಪುಟ ಕೊಳಕಾಗುವಂತೆ ಮಾಡಬೇಡಿ. ಒಂದು ಬಾಕ್ಸ್ ಹಾಕಿ ತಪ್ಪು ಚಿಹ್ನೆ ಹಾಕಿ ಇದು ಇಲ್ಲ ಎಂದು ಸೂಚಿಸಿ. ಮುಂದೆ ಅದನ್ನು ಚೆನ್ನಾಗಿ ಬರೆಯಿರಿ. ಉತ್ತರಪತ್ರಿಕೆಯನ್ನು ನೀವೇ ಮೌಲ್ಯಮಾಪನ ಮಾಡುವಂತಿದ್ದರೆ ಹೇಗಿರಬೇಕೆಂದು ನಿರೀಕ್ಷಿಸುತ್ತೀರೋ ಹಾಗೆ ನಿಮ್ಮ ಉತ್ತರಪತ್ರಿಕೆಗಳಿರಲಿ.
 
-ನೀವು ಓದದೇ ಇರುವ ಯಾವುದೋ ಒಂದು ಅಧ್ಯಾಯ ಇದ್ದರೆ ಚಿಂತಿಸಿಬೇಡಿ. ಅದರ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ತಿಳಿಯುವ ಪ್ರಯತ್ನ ಮಾಡಿ. ಬಹಳ ಮುಖ್ಯವಾಗಿರುವುದನ್ನು ನೀವು ಬಿಟ್ಟಿರುವ ಸಾಧ್ಯತೆಯೇ ಇಲ್ಲ. ಹೆಚ್ಚು ಚಿಂತಿಸಲು ಹೋಗಬೇಡಿ.
 
-ವ್ಯಕ್ತಿತ್ವವಿಕಸನದ ಒಂದು ಮೇರುಪರ್ವತ ‘ಮಹಾಟ್ರಿಯಾ ರಾ’ ಏನು ಹೇಳುತ್ತಾರೆ ಗೊತ್ತೆ?  ‘ಸಕಾರಾತ್ಮಕವಾಗಿ ಯೋಚಿಸುವುದೆಂದರೆ ಈ ಬಾರಿಯ ಪರೀಕ್ಷೆಯಲ್ಲಿ ನಾನು ಚೆನ್ನಾಗಿ ಓದಿರುವ ವಿಷಯಗಳ ಕುರಿತ ಪ್ರಶ್ನೆಗಳೇ ಬರುತ್ತವೆ ಎಂದು ದೃಢವಾಗಿ ನಂಬುವುದು.’ ‘ನನ್ನ ಇಷ್ಟು ವರ್ಷದ ಅನುಭವದಿಂದ ಹೇಳುತ್ತಿದ್ದೇನೆ, ನಾವು ದೃಢವಾಗಿ ನಂಬಿದ್ದು ಆಗಿಯೇ ತೀರುತ್ತದೆ’. ಶುಭವಾಗಲಿ!
 
ತಂದೆ–ತಾಯಿ, ಸಂಬಂಧಿಕರಿಗೆ:
ಇದು ನಿಮ್ಮ ಜೀವನದ ಅನುಭವದ ಪ್ರಶ್ನೆ. ನಿಮ್ಮ ಕೂಸು ಜೀವನದ ಮೊದಲ ದೊಡ್ಡ ಪರೀಕ್ಷೆಯನ್ನು ಎದುರಿಸುತ್ತಿದೆ. ಅದಕ್ಕೆ ಬೇಕಾದ ಎಲ್ಲ ಬೆಂಬಲ, ಪ್ರೀತಿ ಕೊಡಬೇಕಾದ ಸಮಯವಿದು. ನೀವು ಪ್ರೀತಿಸುತ್ತೀರಿ ಎಂದು ಅವರಿಗೆ ತೋರ್ಪಡಿಸಲು ಇದು ಸಕಾಲ. 
 
-ಅವರಿಗೆ ಹಿಂದಿನದನ್ನು ನೆನಪು ಮಾಡದೆ ನಾಳೆಗಳ ಕಡೆಗೆ ನೋಡಲು ಅನುವು ಮಾಡಿಕೊಡಿ.
-ಅವರ ಆಹಾರ–ವಿಹಾರ, ವಿಶ್ರಾಂತಿಗಳ ಕಡೆ ಗಮನ ಕೊಡಿ
-ಅತಿಯಾದ ಆತಂಕದಿಂದಿದ್ದರೆ ಸಮಾಧಾನ ಮಾಡಿ. ನಾವಿದ್ದೇವೆಂದು ಹೇಳಿ. ಅವಶ್ಯಕತೆ ಇದ್ದರೆ ತಜ್ಞರ ಸಹಾಯವನ್ನು ಪಡೆಯಲು ಹಿಂಜರಿಯದಿರಿ.
-ಈ ಪರೀಕ್ಷೆ ಮುಖ್ಯ, ಆದರೆ ಅದೇ ಜೀವನವಲ್ಲ. ಏನಾದರೂ ನಾವು ನಿನ್ನೊಂದಿಗೆ ಸದಾ ಇರುತ್ತೇವೆಂಬ ಭಾವ ಅವರಲ್ಲಿ ಮೂಡುವಂತೆ ನಡೆದುಕೊಳ್ಳಿ.
-ಮಾತುಗಳು ಕೇವಲ ಪರೀಕ್ಷೆಯ ಕುರಿತಾಗಿರದೆ ಲೋಕಾಭಿರಾಮದ ಮಾತುಗಳನ್ನು ಆಡಿರಿ. ತಮಾಷೆ ಮಾಡಿ, ಒಟ್ಟಿಗೆ ನಗುವಿನಲ್ಲಿ ಭಾಗಿಯಾಗಿ. ಒಟ್ಟಿಗೆ ಊಟ ಮಾಡಿರಿ.
-ಸಂಬಂಧಿಗಳು ಅನಾವಶ್ಯಕವಾಗಿ ನಿಮ್ಮ ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ತಪ್ಪಿಸಿ.
 
ನಿಮ್ಮ ಅನಿಸಿಕೆಗಳನ್ನು ಈ ನಂಬರ್‌ಗೆ ವಾಟ್ಯ್ಸಾಪ್‌ ಮಾಡಿ: 9842006746
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT