ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ವ್ಯಕ್ತಿಗಳನ್ನಾಗಿ ರೂಪಿಸುವುದು...

Last Updated 2 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಎ. ಪಿ. ಅಶ್ವಿನ್ ಕುಮಾರ್
ಇತ್ತೀಚೆಗೆ ನನ್ನ ಸ್ನೇಹಿತೆಯೊಬ್ಬರ ಮನೆಗೆ ಹೋಗಿದ್ದೆ. ಅವರು ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿ. ಅವರ ಗಂಡ   ಕೈಗಾರಿಕೋದ್ಯಮಿ. ಈ ದಂಪತಿಗಳು ಶ್ರೀಮಂತರು, ವಿದ್ಯಾವಂತರು ಮತ್ತು ಸುಸಂಸ್ಕೃತರು. ಆಧುನಿಕ ನಗರ ಬದುಕಿನ ಎಲ್ಲಾ ಆಚಾರ–ವಿಚಾರಗಳಿಗೂ ಬಹಳ ಸ್ವಾಭಾವಿಕವಾಗಿ ಒಗ್ಗಿಕೊಂಡಿರುವ ಕುಟುಂಬ.
 
ಲೋಕಾಭಿರಾಮವಾಗಿ ಮಾತನಾಡುತ್ತಾ ತಮ್ಮ ಮಗಳ ಬಗ್ಗೆಯೂ ಮಾತನಾಡತೊಡಗಿದರು. ಎಲ್ಲ ತಂದೆ–ತಾಯಂದಿರಂತೆ ಅವರಿಗೂ ತಮ್ಮ ಮಗಳ ಬಗ್ಗೆ ಬಹಳ ಹೆಮ್ಮೆ. ಜೊತೆಗೆ, ತಮ್ಮ ಮಗಳು ‘ಕ್ವಿಯರ್’ ಎಂದು ಬೇರೆ ಹೇಳಿದರು. ಅದರಲ್ಲೂ ಒಂದು ಮೇಲ್ಮೆ ಮತ್ತು ಸಂತಸ ಈ ತಂದೆ–ತಾಯಂದಿರಿಗೆ.
 
ನಿಮಗೆ ಈಗಾಗಲೇ ತಿಳಿದಿಲ್ಲದಿದ್ದರೆ, ಕ್ವಿಯರ್ ಎನ್ನುವುದು ಭಿನ್ನವಾದ ಲೈಂಗಿಕ ಆಸಕ್ತಿಯುಳ್ಳ ಎಲ್ಲರನ್ನೂ ಒಟ್ಟಾರೆಯಾಗಿ ಕರೆಯುವುದಕ್ಕೆ ಇರುವ ಪದ. ಸಲಿಂಗಕಾಮಿಗಳು, ದ್ವಿಲಿಂಗಿಗಳು ಇತ್ಯಾದಿ. ನನಗೆ ತಕ್ಷಣಕ್ಕೆ ವಿಚಿತ್ರ ಎನ್ನಿಸಿದರೂ, ನಂತರ ಈ ತಂದೆ–ತಾಯಂದಿರು ಎಷ್ಟು ಉದಾರಮನಸ್ಸಿನವರು ಮತ್ತು ಎಷ್ಟು ವಿಚಾರಶೀಲರು ಎಂದು ಮತ್ತೊಂದು ಕ್ಷಣಕ್ಕೆ ಅನ್ನಿಸಿತು.
 
ತಮ್ಮ ಮಗಳು ಕ್ವಿಯರ್ ಸ್ವಭಾವದವಳು ಎನ್ನುವ ಕಾರಣಕ್ಕೆ ಅವಳನ್ನು ಅವಮಾನಕ್ಕೆ ಈಡು ಮಾಡದೇ, ಅವಳ ಈ ವಿಶೇಷ ಸ್ವಭಾವವನ್ನು ಕುರಿತು ಹೆಮ್ಮೆಯಿಂದ ಮಾತಾಡುತ್ತಿದ್ದಾರಲ್ಲ ಎಂದು.  
  
ಆದರೆ, ಅವರ ಮನೆಯಿಂದ ಹೊರಟು ಬಂದಮೇಲೆ ಮತ್ತೆ ಮನಸ್ಸಿಗೆ ಇದು ಕಿರಿಕಿರಿ ಉಂಟುಮಾಡುವುದಕ್ಕೆ ಶುರುವಾಯಿತು. ನಿಮ್ಮಲ್ಲಿ ಹಲವರಿಗೆ ಈ ಕ್ವಿಯರ್, ಸಲಿಂಗರತಿ ಇಂತಹ ವಿಚಾರಗಳ ಬಗ್ಗೆ ಆಳದ ಜುಗುಪ್ಸೆ, ಅಸಹ್ಯ ಅಥವಾ ತಿರಸ್ಕಾರ ಇರಬಹುದು. ಅದೊಂದು ರೋಗ ಎಂದೂ ಕೆಲವರು ಅಂದುಕೊಳ್ಳಬಹುದು.
 
ಆದರೆ ನನಗೆ ಇದರ ಬಗ್ಗೆ ಅಂತಹ ತೀವ್ರವಾದ ಅಭಿಪ್ರಾಯಗಳಿಲ್ಲ. ನನಗೆ ಎಷ್ಟೋ ಜನ ಸ್ನೇಹಿತರು ಈ ರೀತಿ ಸಲಿಂಗಿಗಳು, ಕ್ವಿಯರ್‌ಗಳು, ಲೆಸ್ಬಿಯನ್‌ಗಳು ಇದ್ದಾರೆ. ಆದರೆ ಅವರೆಲ್ಲಾ ಯಾವತ್ತೂ ನನಗೆ ವಿಚಿತ್ರದ ಜನ ಎಂದಾಗಲೀ, ರೋಗಿಗಳು ಎಂದಾಗಲೀ ಅನ್ನಿಸಿಲ್ಲ. ಈ ಅಭಿಪ್ರಾಯಗಳು, ದುರಭಿಪ್ರಾಯಗಳು ಎಲ್ಲಾ ನಮ್ಮ ನಮ್ಮ ಒಡನಾಟದಿಂದ ರೂಪಿತವಾಗುವಂಥವೇ ಇರಬೇಕು. 
 
ಹಾಗಾದರೆ, ಯಾಕೆ  ನನ್ನ ಸ್ನೇಹಿತರು ಅವರ ಮಗಳ ಬಗ್ಗೆ ಹೇಳಿದ್ದು ಕಿರಿಕಿರಿಯಾಗಬೇಕು? ಬಹಳ ಯೋಚಿಸಿದ ಮೇಲೆ, ನನಗೆ ಅನ್ನಿಸಿದ್ದು ಇದು. ನನ್ನ ಕಿರಿಕಿರಿಗೆ ಕಾರಣ ಅವರ ಮಗಳ ಸ್ವಭಾವವಲ್ಲ. ಬದಲಿಗೆ, ಈ ಪಾಲಕರಿಗೆ ಅವರ ಮಗಳ ಜೊತೆಗಿದ್ದ ಸಂಬಂಧ, ಅಥವಾ ಅವರ ಮಗಳನ್ನು ಅವರು ನೋಡುತ್ತಿದ್ದ ರೀತಿ.
 
ಈ ಪಾಲಕರು ಬಹಳ ಉದಾರಮನಸ್ಸಿನವರು ಎಂದು ಹೇಳಿದೆನಲ್ಲ. ಅದು ಬಹುಶಃ ನಿಜಕ್ಕೂ ಉದಾರತೆಯಲ್ಲ. ಅದು ಒಂದು ರೀತಿಯ ಮಿಥ್ಯೆ. ಅಥವಾ ಅವರ ವಿದ್ಯೆ, ಆಧುನಿಕತೆ ಮತ್ತು ಸಾಮಾಜಿಕ ಸಂಸ್ಕಾರಗಳಿಂದ ಅವರಿಗೆ ಬಂದಿದ್ದ ಒಂದು ರೀತಿಯ ಬೌದ್ಧಿಕ ಲೋಲುಪತೆ.
 
ಸಾಮಾನ್ಯವಾಗಿ, ತಂದೆತಾಯಂದಿರು ತಮ್ಮ ಮಕ್ಕಳು ಒಳ್ಳೆಯ ವ್ಯಕ್ತಿಗಳಾಗಬೇಕು ಎಂದು ಬಯಸುತ್ತಾರೆ. ಇದರಲ್ಲಿ ‘ಒಳ್ಳೆಯದು’ ಎನ್ನುವ ಪದದ ಬಗ್ಗೆ ಸಮಸ್ಯೆ ಇಲ್ಲ. ಒಳ್ಳೆಯ ಬುದ್ಧಿ ಇರುವವರು, ಒಳ್ಳೆಯ ಗುಣ ಇರುವವರು, ಒಳ್ಳೆಯ ಹೆಸರು ಮಾಡುವವರು, ಒಳ್ಳೆಯ ಸಂಪತ್ತು ಇರುವವರು, ಇನ್ನು ಕೆಲವರ ಪ್ರಕಾರ, ಒಳ್ಳೆಯ ರೂಪ ಇರುವವರು, ಹೀಗೆ, ಈ ಮಾತಿಗೆ ಇಂತಹ ಸರಳವಾದ ಅರ್ಥಗಳಿವೆ. ಸಮಸ್ಯೆ ಇರುವುದು ‘ವ್ಯಕ್ತಿಗಳು’ ಎನ್ನುವ ಪದದಲ್ಲಿ. ನಮ್ಮ ಮಕ್ಕಳು ‘ವ್ಯಕ್ತಿಗಳಾಗಬೇಕು’ ಎಂದರೆ ಅದರ ಅರ್ಥ ಏನು? ಇದನ್ನೂ ನಮ್ಮ ನಿತ್ಯಜೀವನದಲ್ಲಿ ನಾವು ಬಳಸುವ ರೀತಿಯಿಂದಲೇ ಪರೀಕ್ಷಿಸೋಣ. ವ್ಯಕ್ತಿ ಎನ್ನುವುದನ್ನು ಎರಡು ಬೇರೆ ಪದಗಳಿಗೆ ಹೋಲಿಸಿ ಅರ್ಥೈಸಬಹುದು.

ಒಂದು, ವಸ್ತುಗಳಿಗೆ ವಿರುದ್ಧವಾಗಿ. ಮತ್ತೊಂದು, ಪ್ರಾಣಿಗಳಿಗೆ ವಿರುದ್ಧವಾಗಿ. ‘ನಾನೊಂದು ವಸ್ತು ಅಲ್ಲ; ಬೇಕೆಂದಾಗ ಬಳಸಿ, ಬೇಡವೆಂದಾಗ ಬಿಸಾಡಲು’ ಎನ್ನುವ ರೀತಿಯ ಮಾತನ್ನು ನಾವೇ ಆಡಿರುತ್ತೇವೆ, ಇಲ್ಲಾ ಎಲ್ಲಾದರೂ ಕೇಳಿರುತ್ತೇವೆ. ಹಾಗೆಯೇ, ‘ನೀನೇನು ಮನುಷ್ಯನೋ ಅಥವಾ ಪ್ರಾಣಿಯೋ’ ಎಂದು ಯಾರನ್ನಾದರೂ ಬೈದಿರುತ್ತೇವೆ ಅಥವಾ ಯಾರಿಂದಲಾದರೂ ಬೈಸಿಕೊಂಡಿರುತ್ತೇವೆ.
 
ಈ ವ್ಯತ್ಯಾಸಗಳು ಏನನ್ನು ಹೇಳುತ್ತಿವೆ? ಮೊದಲನೆಯದರಲ್ಲಿ, ವಸ್ತುಗಳು ನಮಗೆ ಉಪಯೋಗಕ್ಕೆ ಬರುವ ಸಾಧನಗಳು. ಅವುಗಳಿಗೆ ಇರುವ ಕೆಲವು ಲಕ್ಷಣಗಳಿಂದ ಅಥವಾ ಸ್ವಭಾವಗಳಿಂದ ಅವು ನಮಗೆ ಉಪಯೋಗಕ್ಕೆ ಬರುತ್ತವೆ. ಹಾಗೆಯೇ, ಎರಡನೆಯದರಲ್ಲೂ, ಪ್ರಾಣಿಗಳು ತಮ್ಮ ಸ್ವಭಾವಕ್ಕೆ ಅಡಿಯಾಳಾಗಿರುವಂಥವು. ಸಾಮಾನ್ಯವಾಗಿ ಪ್ರಾಣಿಗಳಿಗೆ ತಮ್ಮ ಸ್ವಭಾವವನ್ನು ಬಿಟ್ಟು ಬೇರೆ ರೀತಿಯಲ್ಲಿ ವರ್ತಿಸಲು ಆಗುವುದಿಲ್ಲ. ಹುಲಿಗೆ ಹುಲ್ಲು ತಿನ್ನಲು ಸಾಧ್ಯವಿಲ್ಲ; ಹಾಗೆಯೇ ಹಸಿವಾದಾಗ ಜಿಂಕೆಯನ್ನು ಕೊಲ್ಲದೇ ಇರಲೂ ಸಾಧ್ಯವಿಲ್ಲ.
 
ಆದರೆ ಮನುಷ್ಯರು ಹಾಗಲ್ಲ. ನಮಗೆಲ್ಲರಿಗೂ ನಮ್ಮ ನಮ್ಮ ಸ್ವಭಾವಗಳಿವೆಯಾದರೂ, ಆ ಸ್ವಭಾವಗಳಿಗೆ ಅಡಿಯಾಳಾಗದಿರುವುದೇ ಮನುಷ್ಯತ್ವದ ಲಕ್ಷಣ. ಕೆಲವರಿಗೆ ಕೋಪ ಹೆಚ್ಚು. ಅದು ಅವರ ಸ್ವಭಾವ. ಆದರೆ, ಆ ಸ್ವಭಾವಕ್ಕೆ ಅವರು ಅಡಿಯಾಳಾಗಿದ್ದರೆ ನಾವು ಅಂಥವರನ್ನು ಟೀಕಿಸುತ್ತೇವೆ. ಅದೇ, ಪಾಪದ ಜಿಂಕೆಯನ್ನು ಕೊಂದು ತಿನ್ನುತ್ತದೆ ಎಂದು ಹುಲಿಯನ್ನು ಟೀಕಿಸಲು ಬರುವುದಿಲ್ಲ. ಅಥವಾ, ಸಿಕ್ಕಾಪಟ್ಟೆ ಚೂಪಾಗಿದೆ ಎಂದು ಒಂದು ಚಾಕುವನ್ನು ಟೀಕಿಸಲು ಬರುವುದಿಲ್ಲ.
 
ಏಕೆಂದರೆ, ಅದು ಅವುಗಳ ಸ್ವಭಾವ. ವಸ್ತುಗಳು ಮತ್ತು ಪ್ರಾಣಿಗಳ ಲಕ್ಷಣವೇ ತಂತಮ್ಮ ಸ್ವಭಾವಕ್ಕೆ ಅಡಿಯಾಳಾಗಿರುವುದು. ಪ್ರಾಣಿಗಳಲ್ಲೂ ತಂತಮ್ಮ ಸ್ವಭಾವಕ್ಕೆ ವಿರುದ್ಧವಾದ ಸದ್ಗುಣಗಳು ಒಮ್ಮೊಮ್ಮೆ ಕಾಣಿಸಬಹುದು. ಹುಲಿ ಹುಲ್ಲೆಗೆ ಹಾಲೂಡಬಹುದು. ಆದರೆ ಅದು ನಮಗೆ ಆಶ್ಚರ್ಯದ ಸಂಗತಿ ಎಂದೇ ಕಾಣುತ್ತದೆ. ಒಟ್ಟಾರೆಯಾಗಿ, ಏನನ್ನಾದರೂ ಒಂದು ವಸ್ತುವನ್ನಾಗಿ ಅಥವಾ ಪ್ರಾಣಿಯನ್ನಾಗಿ ನೋಡುವುದು ಎಂದರೆ ಅದನ್ನು ಅದರ ಸ್ವಭಾವಕ್ಕೆ ಅಡಿಯಾಳಾಗಿ ನೋಡುವುದು ಎಂದರ್ಥ.
 
ಆದರೆ ಒಬ್ಬರನ್ನು ವ್ಯಕ್ತಿಯನ್ನಾಗಿ ನೋಡುವುದು ಎಂದರೆ ಅವರನ್ನು ಅವರ ಸ್ವಭಾವಕ್ಕೆ ಅಡಿಯಾಳಾಗಿ ನೋಡುವುದಲ್ಲ. ಬದಲಾಗಿ ಅವರವರ ಸ್ವಭಾವಕ್ಕೆ ಅತೀತರನ್ನಾಗಿ ನೋಡುವುದು ಎಂದು. ಇದನ್ನು ಸ್ವಲ್ಪ ವಿವರಿಸಬೇಕು. ನನಗೆ ಸಿಹಿತಿಂಡಿ ಬಹಳ ಇಷ್ಟ ಎಂದಿಟ್ಟುಕೊಳ್ಳಿ. ಇದನ್ನು ನಾನು ಎರಡು ರೀತಿಯಲ್ಲಿ ಹೇಳಬಹುದು.

ಒಂದು, ನನ್ನ ಇಷ್ಟವನ್ನು ವ್ಯಕ್ತಪಡಿಸುವ ರೀತಿಯಲ್ಲಿ. ಇನ್ನೊಂದು ನನ್ನ ಸ್ವಭಾವವನ್ನು ವ್ಯಕ್ತಪಡಿಸುವ ರೀತಿಯಲ್ಲಿ. ‘ನನಗೆ ಸಿಹಿ ಇಷ್ಟ’ ಎನ್ನುವುದು ನನ್ನ ಅಭಿಪ್ರಾಯ, ಅಥವಾ ನನ್ನ ಮಾತು. ಇದು ಒಬ್ಬ ವ್ಯಕ್ತಿಯಾಗಿ ನಾನು ಹೇಳಿದ್ದು. ನನ್ನ ರುಚಿ, ಇಷ್ಟಾನಿಷ್ಟ ವಿವೇಕ ಇವುಗಳ ಬಗ್ಗೆ ಇರುವಂತಹ ಮಾತು.ಆದರೆ, ವೈದ್ಯರು ನನಗೆ ಸಿಹಿ ತಿನ್ನಬಾರದು ಎಂದು ಹೇಳಿದ್ದಾರೆ ಎಂದಿಟ್ಟುಕೊಳ್ಳಿ. ಆದರೆ ನನಗೆ ಸಿಹಿಯ ಆಮಿಷವನ್ನು ತಡೆಯಲಾಗುತ್ತಿಲ್ಲ.

ಆಗ ‘ನನಗೆ ಸಿಹಿಯನ್ನು ಬಿಡಲು ಸಾಧ್ಯವಾಗುತ್ತಿಲ್ಲ’ ಎಂದು ನಾನು ಹೇಳಿದರೆ, ಅದು ನನ್ನ ಇಷ್ಟಾನಿಷ್ಟಗಳ ಬಗ್ಗೆ ನನ್ನ ಅಭಿಪ್ರಾಯವಲ್ಲ. ಬದಲಿಗೆ ನನ್ನ ಬಗ್ಗೆ, ಅಂದರೆ ನನ್ನ ಸ್ವಭಾವದ ಬಗ್ಗೆ, ನಾನು ಹೇಳುತ್ತಿರುವ ಮಾತು. ಇಲ್ಲಿ ನಾನು ಇಷ್ಟಾನಿಷ್ಟಗಳನ್ನು ಸೂಚಿಸುತ್ತಿರುವ ಒಬ್ಬ ವ್ಯಕ್ತಿಯಲ್ಲ. ಬದಲಾಗಿ, ಯಾವುದೋ ಒಂದು ಸ್ವಭಾವದ ದಾಸ್ಯಕ್ಕೆ ಕಟ್ಟುಬಿದ್ದಿರುವ ಒಂದು ಮನುಷ್ಯಪ್ರಾಣಿ. ಮತ್ತು ಇಂತಹ ಸಂದರ್ಭದಲ್ಲಿ ನಾನಾಡಿದ ಮಾತು ಈ ಮನುಷ್ಯಪ್ರಾಣಿಯ ಬಗ್ಗೆ ನಾನು ಸೂಚಿಸುತ್ತಿರುವ ವ್ಯಥೆ. 
 
ಮಕ್ಕಳನ್ನು ಬೆಳೆಸುವುದು ಎಂದರೆ ಅವರನ್ನು ತಂತಮ್ಮ ಸ್ವಭಾವಗಳ ದಾಸ್ಯದಿಂದ ಹೊರತಂದು, ತರತಮಗಳನ್ನು ಸರಿಯಾಗಿ ತಿಳಿಯುವ ವಿವೇಕವನ್ನು ಬೆಳೆಸುವುದು ಎಂದು. ಮಕ್ಕಳು ತಾವು ಮಾಡುವ ಕೆಲಸಗಳನ್ನು ಅದು ಸರಿಯೋ? ತಪ್ಪೋ? ಎಂದು ತೂಗಿ ನೋಡುವ ವಿವೇಕವನ್ನು ಬೆಳೆಸಿಕೊಳ್ಳಬೇಕೇ ಹೊರತೂ, ತಾವು ಮಾಡಿದ್ದಕ್ಕೆ ತಮ್ಮ ಸ್ವಭಾವವೇ ಕಾರಣ ಎನ್ನುವ ವಿವರಣೆಯನ್ನು ಕೊಡುವವರಾಗಬಾರದು.

ಒಬ್ಬ ಹುಡುಗ ಸುಳ್ಳು ಹೇಳುತ್ತಾನೆ ಎಂದಿಟ್ಟುಕೊಳ್ಳಿ. ನೀವು ಆ ಹುಡುಗನನ್ನು ಅದಕ್ಕಾಗಿ ಬೈದಾಗ, ಅವನು ಸುಳ್ಳು ಹೇಳುವುದು ತಪ್ಪು ಎಂದು ತಿಳಿದುಕೊಳ್ಳಬೇಕು. ಅಥವಾ, ಏಕೆ ಆ ಸಂದರ್ಭದಲ್ಲಿ ತಾನು ಸುಳ್ಳು ಹೇಳಲೇಬೇಕಾಗಿ ಬಂತು ಎಂದು ಸಮಜಾಯಿಷಿಯನ್ನಾದರೂ ಕೊಡಬೇಕು. ಅದು ಬಿಟ್ಟು, ‘ಮನುಷ್ಯರು ಕಷ್ಟಬಂದಾಗ ಸುಳ್ಳು ಹೇಳುತ್ತಾರೆ. ಅದು ಮನುಷ್ಯರ ಸ್ವಭಾವ.

ಅದಕ್ಕೆಲ್ಲಾ ನೀವು ನನ್ನನ್ನು ಬೈಯುವ ಹಾಗಿಲ್ಲ’ ಎಂದು ವಾದ ಮಾಡಿದರೆ ಹೇಗಿರುತ್ತದೆ? ವಾದವೇನೋ ಸರಿಯಾಗಿದೆ. ತರ್ಕಬದ್ಧವಾಗಿದೆ. ಆದರೆ, ಹೀಗೆ ಹೇಳುತ್ತಿರುವ ಆ ಹುಡುಗ ತನ್ನನ್ನು ತಾನು ಸರಿತಪ್ಪುಗಳ ವಿವೇಚನೆ ಮಾಡುವ ವ್ಯಕ್ತಿ ಎಂದು ತಿಳಿದುಕೊಳ್ಳುತ್ತಿಲ್ಲ. ಬದಲಾಗಿ, ಸ್ವಭಾವಗಳ ದಾಸ್ಯಕ್ಕೆ ಕಟ್ಟುಬಿದ್ದಿರುವ ಒಂದು ಪ್ರಾಣಿ ಎಂದು ತಿಳಿದುಕೊಳ್ಳುತ್ತಿದ್ದಾನೆ. 
 
ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡುವುದು ಎಂದರೆ ತಾವು ಮಾಡುವ ಕೆಲಸಗಳ ಬಗ್ಗೆ ವಿವೇಕ ಮತ್ತು ವಿವೇಚನೆಯನ್ನು ಬೆಳೆಸುವುದು ಎಂದೇ ಹೊರತೂ, ತಾವು ಮಾಡುವ ಕೆಲಸಗಳಿಗೆ ವಿವರಣೆ ಮತ್ತು ಕಾರಣ-ಪರಿಣಾಮಗಳನ್ನು ಕೊಡುವುದಲ್ಲ. ವಿವರಣೆ ಮತ್ತು ಕಾರಣ-ಪರಿಣಾಮಗಳು ಹಲವು ಸಂದರ್ಭಗಳಲ್ಲಿ ಮುಖ್ಯವಾಗುತ್ತವೆ.

ಘಟನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದಾಗ, ಇನ್ನೊಬ್ಬರ ವಿಚಿತ್ರ ವರ್ತನೆಗಳನ್ನು ವಿವರಿಸಬೇಕು ಎನ್ನುವಾಗ, ಇಂತಹ ಸಂದರ್ಭದಲ್ಲಿ ಇದು ಮುಖ್ಯ. ಆದರೆ, ತನ್ನ ಜೀವನದಲ್ಲಿ ಹೇಗೆ ವರ್ತಿಸಬೇಕು ಎನ್ನುವ ಪ್ರಶ್ನೆ ಬಂದಾಗ, ಯಾವುದು ಸರಿ, ಯಾವುದು ತಪ್ಪು ಎನ್ನುವ ಪ್ರಶ್ನೆ ಬಂದಾಗ ಈ ವಿವರಣೆ, ಕಾರಣ-ಪರಿಣಾಮಗಳ ರೀತಿಯ ಮಾತನ್ನು ಬಿಟ್ಟು, ತರತಮ, ಸರಿ-ತಪ್ಪುಗಳ ವಿವೇಕ, ವಿವೇಚನೆಯ ಮಾತನ್ನು ರೂಢಿಸಿಕೊಳ್ಳಬೇಕು.
       
ನಾನು ಪ್ರಾರಂಭದಲ್ಲಿ ಹೇಳಿದ ನನ್ನ ಸ್ನೇಹಿತರ ಕಥೆ ನನಗೆ ವಿಚಿತ್ರವಾಗಿ ಅನ್ನಿಸಿದ್ದು ಈ ಕಾರಣಕ್ಕೆ. ಅವರು ತಮ್ಮ ಮಗಳ ಬಗ್ಗೆ ಬಹಳ ಉದಾರವಾದ, ತೆರೆದ ಮನಸ್ಸಿನಿಂದ ಇದ್ದರು ಎಂದು ಮೇಲುನೋಟಕ್ಕೆ ಅನ್ನಿಸುವುದೇನೋ ನಿಜ. ಆದರೆ ನಿಜಕ್ಕೂ ಅವರು ತಮ್ಮ ಮಗಳನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುವ ಬದಲು, ಒಂದು ಸ್ವಭಾವದ ಪ್ರತೀಕವಾಗಿ ನೋಡುತ್ತಿದ್ದರು.
 
ಕ್ವಿಯರ್ ಜನರನ್ನು ಸಮಾನತೆಯ ನೆಲೆಯಲ್ಲೇ ನೋಡಬೇಕು ಎನ್ನುವ ಉದಾರವಾದಿ ಚಿಂತನೆಯನ್ನು ಈ ಪಾಲಕರು ತಮ್ಮ ಆಧುನಿಕ ಸಂಸ್ಕಾರದ ಮೂಲಕ ಪಡೆದುಕೊಂಡಿದ್ದಾರೆ. ಆದರೆ, ಆ ಆಶಯವನ್ನು ತಪ್ಪಾಗಿ ಅರ್ಥೈಸಿಕೊಂಡು ಕ್ವಿಯರ್ ಎನ್ನುವ ಸ್ವಭಾವದಲ್ಲೇ ಒಂದು ಶ್ರೇಷ್ಠತೆ ಅಥವಾ ಮೇಲ್ಮೆ ಇದೆ ಎಂದು ತಿಳಿದುಕೊಂಡಿದ್ದಾರೆ. 
 
ನಮ್ಮ ಮಗ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಪಾಲಕರು ಹೆಮ್ಮೆ ಪಡಬಹುದು. ಏಕೆಂದರೆ ಅದು ಆ ಹುಡುಗನ ನ್ಯಾಯಾನ್ಯಾಯ ವಿವೇಕದ ಲಕ್ಷಣ. ಹೆಮ್ಮೆ ಪಡುವಂಥದ್ದೇ. ಆದರೆ, ಈ ಅನ್ಯಾಯವನ್ನು ಸಹಿಸದ ಮಗ ಮೋಸಗಾರರು ಕಂಡರೆ, ಕಂಡಕಂಡಲ್ಲಿ ಬೀದಿಜಗಳಕ್ಕಿಳಿಯುತ್ತಾನೆ ಎಂದೂ ಹೆಮ್ಮೆ ಪಡುವುದು ಸಾಧ್ಯವೇ? ಅದು ಅವನು ತನ್ನ ಸ್ವಭಾವಕ್ಕೆ ಅಡಿಯಾಳಾಗಿರುವ ಅವಿವೇಕದ ಚಿಹ್ನೆ. ಕಳ್ಳ-ಪೊಲೀಸ್ ಕಥೆಗಳಿರುವ ಸಿನೆಮಾದಲ್ಲಿ ಹೀರೋಗಳೇ ಪೊಲೀಸರಾಗಿದ್ದಾಗ ಮಾತ್ರ ಇಂತಹ ಮತಿಗೇಡಿಗಳನ್ನು ದೊಡ್ಡ ಸಾಧಕರು ಎಂದು ಬಿಂಬಿಸಲು ಸಾಧ್ಯವೇ ಹೊರತೂ ನಮ್ಮ ನಿತ್ಯಜೀವನದ ವಿವೇಕದಲ್ಲಿ ಸಾಧ್ಯವಿಲ್ಲ.
 
ನಮ್ಮ ಮಕ್ಕಳು ಕ್ವಿಯರ್ ಆಗಿರುವುದು ತಪ್ಪಲ್ಲ. ಅಥವಾ ಅವಳನ್ನು ಆ ಸ್ಥಿತಿಯಿಂದ ಗುಣಪಡಿಸಬೇಕಾದ ಅಗತ್ಯವೂ ಇಲ್ಲ. ಆದರೆ ಅದು ಹೆಮ್ಮೆಯ ಸಂಗತಿಯಂತೂ ಖಂಡಿತ ಅಲ್ಲ. ಅದೇ ಹೆಮ್ಮೆಯ ವಿಷಯವಾಗಿಬಿಟ್ಟರೆ, ಇನ್ನು ಆ ಮಕ್ಕಳು ತರತಮ ವಿವೇಕದ ಜ್ಞಾನವನ್ನು ಪಡೆಯುವುದು, ವ್ಯಕ್ತಿಗಳಾಗುವುದು ಎಲ್ಲಿಂದ?   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT