ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾನ್ವೇಷಣೆಯ ವಿನೂತನ ಪರಿ

Last Updated 2 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಬಿ.ಸಿ.ರಮೇಶ್‌
ಬಡ್ಡಿ ಆಟ ಇವತ್ತು ಹೊಸ ಆಯಾಮ ಕಂಡು ಕೊಂಡಿದೆ. 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾನು ಕಂಡಿದ್ದ ಕಬಡ್ಡಿ ಇವತ್ತು ಬೆಂಗಳೂರಿನಂತೆಯೇ ಬೆಳೆದು ನಿಂತಿದೆ. ಆ ದಿನಗಳಲ್ಲಿ ನಾವುಗ ಳಾರೂ ಕಲ್ಪಿಸಿಕೊಳ್ಳದೇ ಇದ್ದಂತಹ ಎತ್ತರದಲ್ಲಿ ಇವತ್ತು ಕಬಡ್ಡಿ ಇದೆ.
 
ಬೆಂಗಳೂರು ನಗರದಲ್ಲಿಯೇ ಹೈಸ್ಕೂಲು ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಆಡಿ ಬೆಳೆದ ನಾನು ಅದೊಂದು ದಿನ ಭಾರತ ತಂಡವನ್ನೇ ಪ್ರತಿನಿಧಿಸಿದ್ದಾಗ ಕಂಡ ಕಬಡ್ಡಿಯ ವಾತಾವರಣಕ್ಕೂ ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಈ ಮಟ್ಟದ ಬದಲಾವಣೆಯನ್ನು ನಾನಂತೂ ನಿರೀಕ್ಷಿಸಿರಲಿಲ್ಲ. 
 
ಭಾರತದಲ್ಲಿ ಪ್ರೊ ಕಬಡ್ಡಿ ಚಟುವಟಿಕೆ ಪ್ರವರ್ಧಮಾನಕ್ಕೆ ಬಂದ ನಂತರ ಈ ಕ್ರೀಡೆ ಅಪಾರ ಜನಪ್ರಿಯತೆ ಕಂಡು ಕೊಂಡಿದೆ. ಟೆಲಿವಿಷನ್‌ ಮೂಲಕ ಮನೆಮನೆಗಳನ್ನೂ ಕಬಡ್ಡಿ ಆಟಗಾರರು ತಲುಪಿದ್ದಾರೆ. ಕ್ರಿಕೆಟಿಗರಂತೆ ಹಣ ಎಣಿಸತೊಡಗಿದ್ದಾರೆ. ಇವೆಲ್ಲಾ ಕಬಡ್ಡಿ ಕುಟುಂಬದ ನನ್ನಂತವರಿಗೆ ತೀರಾ ಹೊಸದು.
 
ಏಷ್ಯಾ ದೇಶಗಳ ಸವಾಲು
ಪ್ರಸಕ್ತ ಏಷ್ಯಾದ ಅನೇಕ ದೇಶಗಳಲ್ಲಿ ಕಬಡ್ಡಿ ಸಾಕಷ್ಟು ಜನಮನ್ನಣೆ ಪಡೆದುಕೊಂಡಿದೆ. ಏಷ್ಯನ್‌ ಕ್ರೀಡಾಕೂಟಗಳಂತಹ ಕಡೆ ಇರಾನ್‌, ಜಪಾನ್‌, ಹಾಂಕಾಂಗ್‌, ಪಾಕಿಸ್ತಾನ, ದಕ್ಷಿಣ ಕೊರಿಯ, ಬಾಂಗ್ಲಾದೇಶ ಮುಂತಾದ ದೇಶಗಳ ತಂಡಗಳು ಗಮನ ಸೆಳೆಯುತ್ತಿವೆ. ನಾನು 20 ವರ್ಷಗಳ ಹಿಂದೆ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಆಡುತ್ತಿದ್ದಾಗ, ನಮಗೆ ಚಿನ್ನ ಕಟ್ಟಿಟ್ಟ ಬುತ್ತಿ ಎನ್ನುವಂತಿತ್ತು. ಆದರೆ ಈಗ ಪ್ರಶಸ್ತಿಗಾಗಿ ಸಾಕಷ್ಟು ಬೆವರು ಹರಿಸಬೇಕಾಗಿದೆ.
 
ಬಹಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾರತ ಸತತವಾಗಿ ಆರು ಚಿನ್ನದ ಪದಕಗಳನ್ನು ಗೆದ್ದ ಹೆಗ್ಗಳಿಕೆ ಹೊಂದಿದೆ. ಆದರೆ 60ರ ದಶಕದ ನಂತರ ಜಗತ್ತಿನ ಇತರ ದೇಶಗಳ ಅಬ್ಬರದ ಎದುರು ಭಾರತದ ಸಾಮರ್ಥ್ಯ ಮಂಕಾಯಿತು. ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲಿಕ್ಕೇ ವಿಫಲಗೊಂಡಿತು.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕೊನೆಯ ಸ್ಥಾನಕ್ಕಿಳಿಯಿತು. ಭಾರತದಲ್ಲಿ ಮುಂದೊಂದು ದಿನ ಕಬಡ್ಡಿ ಇಂತಹ ಅಪಾಯ ಕಾಣುವ ಸಾಧ್ಯತೆಯನ್ನು ನಿರೀಕ್ಷಿಸಿಯೇ ಭಾರತ ಕಬಡ್ಡಿ ಫೆಡರೇಷನ್‌ ಹೊಸ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಯೋಜನೆಗೆ ಪ್ರೊ ಕಬಡ್ಡಿ, ಸ್ಟಾರ್‌ ಟಿ.ವಿ. ನೆಟ್‌ವರ್ಕ್‌, ಮಶಾಲ್‌ ಸ್ಪೋರ್ಟ್ಸ್‌ ಸಂಘಟನೆಯವರು ಹೆಗಲು ನೀಡಿದ್ದಾರೆ. ಇವರೆಲ್ಲರೂ ಒಗ್ಗೂಡಿ ಇದೀಗ ದೇಶದಾದ್ಯಂತ ಕಬಡ್ಡಿಗೆ ಬಲವಾದ ಅಡಿಪಾಯ ಹಾಕುವ ಕೈಂಕರ್ಯದಲ್ಲಿ ತೊಡಗಿದ್ದಾರೆ.
 
ಪ್ರತಿಭಾನ್ವೇಷಣೆಯ ಕೈಂಕರ್ಯ
ಇದಕ್ಕೆ ಪೂರಕವಾಗಿ ಅನುಭವಿಗಳ ತಂಡವೊಂದನ್ನು ನೇಮಿಸಲಾಯಿತು. ಮಹಾರಾಷ್ಟ್ರದ ನೀತಾ ದಾಡ್ವೆ,   ಪಂಕಜ್‌ ಶೆರಷೆಟ್‌, ಆಂಧ್ರಪ್ರದೇಶದ ಶ್ರೀನಿವಾಸ ರೆಡ್ಡಿ, ಕೋಲ್ಕತ್ತಾದ ಬನಾನಿ ಷಾ, ಹರಿಯಾಣದ ಬಲವಂತ್‌ ಸಿಂಗ್‌ ಈ ತಂಡದಲ್ಲಿದ್ದಾರೆ.

ಇವರೆಲ್ಲರೂ ಹಿಂದೆ ಭಾರತದ ಪರ ಆಡಿದವರು. ಕಬಡ್ಡಿಯಲ್ಲಿ ನುರಿತವರು. ನಾನೂ ಈ ತಂಡದಲ್ಲಿದ್ದೇನೆ. ನಾವು ಆರು ಮಂದಿ ಮಾರ್ಚ್‌ ತಿಂಗಳಲ್ಲಿ ಡೆಲ್ಲಿ, ಲಖನೌ, ವಾರಣಾಸಿ, ಇಂದೋರ್‌, ಕೋಲ್ಕತ್ತಾ, ಚೆನ್ನೈ ನಗರಗಳಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ಗಳಲ್ಲಿ ಪಾಲ್ಲೊಂಡಿದ್ದೆವು. 
 
ನಿಜಕ್ಕೂ ಇದೊಂದು ಮರೆಯಲಾಗದ ಅನುಭವ. ದೇಶದ ಮೂಲೆ ಮೂಲೆಗಳಲ್ಲಿ 18ರಿಂದ 22ರ ವಯೋಮಿತಿಯ ಆಯ್ದ ಆಟಗಾರರ ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸ ನಮ್ಮದಾಗಿತ್ತು. ಬೆಂಗಳೂರಿನಲ್ಲಿ ನಡೆದ ಮೂರೂ ದಿನವೂ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತ್ತು. ಸುಮಾರು 400ಕ್ಕೂ ಹೆಚ್ಚು ಆಟಗಾರರು ಬಂದಿದ್ದರು. 
 
ಅದೇ ರೀತಿ ಚೆನ್ನೈ, ದೆಹಲಿ, ಕೋಲ್ಕತ್ತ, ಲಖನೌಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕಂಡು ಬಂದಿತು. ವಾರಣಾಸಿಯಲ್ಲಿ ಮಾತ್ರ ಹೆಚ್ಚಿನ ಆಸಕ್ತಿ ಕಂಡು ಬರಲಿಲ್ಲ. ಈ ಎಲ್ಲಾ ಕಡೆ ಒಂದು ತಿಂಗಳ ಕಾಲ ಸುತ್ತಾಡಿದ ನಮ್ಮ ತಂಡ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಒಟ್ಟು 600 ಮಂದಿಯನ್ನು ಆಯ್ಕೆ ಮಾಡಿತು.
 
ಇಷ್ಟೂ ಮಂದಿಯನ್ನು ಆರು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಒಂದೊಂದು ಗುಂಪಿಗೆ ಅಹಮದಾಬಾದ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. 24 ದಿನಗಳ ನಂತರ ಅಂತಿಮ 150  ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ.  ಇಷ್ಟೂ ಮಂದಿ ಮುಂದಿನ ದಿನಗಳಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಅವಕಾಶಗಳು ತೆರೆದುಕೊಳ್ಳುತ್ತವೆ. ಇಂತಹದ್ದೊಂದು ಪ್ರತಿಭಾನ್ವೇಷಣೆ ಪ್ರಕ್ರಿಯೆ ಈ ದೇಶದಲ್ಲಿ ನಡೆದಿರುವುದು ಇದೇ ಮೊದಲು. ಇಂಥಹದೊಂದು ಚಾರಿತ್ರಿಕ ಪ್ರಕ್ರಿಯೆಯಲ್ಲಿ ನಾನೂ ಕಾರ್ಯ ನಿರ್ವಹಿಸಿರುವುದರ ಬಗ್ಗೆ ಅತೀವ ಸಂತಸವಾಗಿದೆ.
 
ಹಿಂದೆಲ್ಲಾ ಹರಿಯಾಣ ಅಥವಾ ಇನ್ನಾವುದೋ ಪ್ರದೇಶದ ಒಂದಷ್ಟು ಮಂದಿಗೆ ಹೆಚ್ಚು ಅವಕಾಶಗಳು ಸಿಕ್ಕುತ್ತಿದ್ದವು. ದಕ್ಷಿಣ ಭಾರತದವರಂತೂ ಅವಕಾಶಗಳಿಗಾಗಿ ಸಾಕಷ್ಟು ಕಾಯಬೇಕಿತ್ತು. ಆದರೆ ಇದೀಗ ಇಂತಹದ್ದೊಂದು ಪ್ರತಿಭಾನ್ವೇಷಣೆಯ ಯೋಜನೆಯಲ್ಲಿ ಈಶಾನ್ಯ ರಾಜ್ಯಗಳ ಮಂದಿಯೂ ಎದ್ದು ಕಾಣತೊಡಗಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಜಾರ್ಖಂಡ್‌, ಛತ್ತೀಸ್‌ಗಡದಿಂದಲೂ ಆಟಗಾರರು ಬಂದಿದ್ದರು. ಸಮಾಜದ ಎಲ್ಲಾ ವರ್ಗಗಳಿಂದ ಬಂದ ಆಟಗಾರರ ಪಾಲ್ಗೊಳ್ಳುವಿಕೆ ಇತ್ತು. ಬರಿಗಾಲಲ್ಲೇ  ಅನೇಕ ಮಂದಿ ಆಯ್ಕೆ ಪೈಪೋಟಿಯಲ್ಲಿ ಭಾಗವಹಿಸಿದ್ದೊಂದು ವಿಶೇಷ.
 
ಹಿಂದೆಲ್ಲಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ರಾಜ್ಯ ತಂಡದಲ್ಲಿ ಗಮನ ಸೆಳೆಯಬೇಕಿತ್ತು. ರಾಜ್ಯದಲ್ಲೇ ಐದಾರು ಮಂದಿ ಅತ್ಯುತ್ತಮವಾಗಿ ಆಡುವವರಿದ್ದರೆ, ಅವರಲ್ಲೇ ಒಬ್ಬರಿಗೋ ಇಬ್ಬರಿಗೋ ಅವಕಾಶ ಸಿಕ್ಕಿದರೆ ಹೆಚ್ಚು ಎನ್ನುವಂತಿತ್ತು.  ಆದರೆ ಈ ಹೊಸ ಆಯ್ಕೆ ಪ್ರಕ್ರಿಯೆಯಿಂದಾಗಿ ಪ್ರತಿಭೆ ಇದ್ದರೆ ಒಂದೇ ರಾಜ್ಯದ ಹಲವರು ರಾಷ್ಟ್ರೀಯ ಎತ್ತರದಲ್ಲಿ ಗಮನ ಸೆಳೆಯಬಹುದಾಗಿದೆ.
 
ಹಿಂದೆ ರಾಜ್ಯವೊಂದರಿಂದ 12 ಜನರಷ್ಟೇ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಿತ್ತು. ಆದರೆ ಈಗ 25ರಿಂದ 40 ಜನರವರೆಗೂ ಅವಕಾಶದ ಬೆನ್ನು ಹತ್ತಲು ಸಾಧ್ಯವಿದೆ.
 
ಪ್ರತಿ ವರ್ಷವೂ 150 ಹೊಸಬರ ದಂಡು
ಅತ್ಯುತ್ತಮವಾಗಿ ಆಡುವ ಅಂತಿಮ 150 ಮಂದಿಗೆ ಹಲವು ದಿನಗಳ ಕಾಲ ವಿಶೇಷ ತರಬೇತಿ ನೀಡಲಾಗುತ್ತದೆ. ಅವರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಫಿಟ್‌ನೆಸ್‌ಗೆ ವಿಶೇಷ ಗಮನ ಕೊಡಲಾಗುತ್ತದೆ. ತಂತ್ರಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ.
 
ಇದೀಗ ಪ್ರೊ ಕಬಡ್ಡಿ ಟೂರ್ನಿಗೆ ಹೆಚ್ಚುವರಿಯಾಗಿ ನಾಲ್ಕು ತಂಡಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರತಿಯೊಂದು ತಂಡದಲ್ಲೂ 18ರಿಂದ 25ರವರೆಗೆ ಆಟಗಾರರನ್ನು ಇರಿಸಿಕೊಳ್ಳಬಹುದಾಗಿದೆ. ಇಂತಹ ಪ್ರತಿಯೊಂದು ಫ್ರಾಂಚೈಸ್‌ ಕೂಡಾ 150 ಮಂದಿ ಕಿರಿಯ ಆಟಗಾರರಲ್ಲಿ ಕನಿಷ್ಠ ಏಳು ಮಂದಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ ಎಂದು ನಿಯಮ ಮಾಡಲಾಗಿದೆ.

ಈ ಹಿಂದೆ ಹಳ್ಳಿಯೊಂದರ ಆಟಗಾರ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟಗಳಲ್ಲಿ ಗಮನ ಸೆಳೆದು ರಾಜ್ಯ ಮಟ್ಟದಲ್ಲಿ ಆಡಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದ ನಂತರ ರಾಷ್ಟ್ರೀಯ ಆಯ್ಕೆ ಸಮಿತಿಯ ಕಣ್ಣಿಗೆ ಬೀಳಲು ಅದೃಷ್ಟದ ಮೊರೆ ಹೋಗಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕುಗ್ರಾಮದ ಅಟಗಾರನೊಬ್ಬ ಅಪ್ರತಿಮ ಪ್ರತಿಭೆ ಇದ್ದರೆ ಕೆಲವೇ ತಿಂಗಳಲ್ಲಿ ರಾಷ್ಟ್ರೀಯ ತಂಡದೊಳಗೂ ಕಾಲಿಡಬಹುದು.
 
ಇಂತಹ ಕಿರಿಯ ಆಟಗಾರರು ಪ್ರೊ ಕಬಡ್ಡಿಯಷ್ಟೇ ಅಲ್ಲ, ರಾಷ್ಟ್ರೀಯ ಜೂನಿಯರ್‌, ಸೀನಿಯರ್‌ ತಂಡದೊಳಗೂ ಆಡಬಹುದು. ಪ್ರೊ ಕಬಡ್ಡಿ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪ್ರಕ್ರಿಯೆಯಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆಯೂ ಗಮನಾರ್ಹ. ತಮಿಳುನಾಡು, ಬೆಂಗಳೂರು,  ಕೋಲ್ಕತ್ತದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಆದರೆ ಉತ್ತರ ಪ್ರದೇಶ, ವಾರಣಾಸಿಯಲ್ಲಿ ಹೆಣ್ಣು ಮಕ್ಕಳ ಪಾಲ್ಗೊಳ್ಳುವಿಕೆ ನಿರೀಕ್ಷಿತ ಮಟ್ಟದ್ದಾಗಿರಲಿಲ್ಲ.
 
ಕರ್ನಾಟಕದ ಮಟ್ಟಿಗೆ ಹೇಳುವುದಿದ್ದರೆ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಿಂದ ದೊಡ್ಡ ಸಂಖ್ಯೆಯಲ್ಲಿಯೇ ಹೆಣ್ಣುಮಕ್ಕಳು ಆಯ್ಕೆ ಟ್ರಯಲ್ಸ್‌ಗೆ ಬಂದಿದ್ದರು. ಆ ಸಂಸ್ಥೆಯಲ್ಲಿ ಮಹಿಳಾ ಕಬಡ್ಡಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ.
 
ಭಾರತದ ಅನೇಕ ಕಡೆ ಪ್ರೊ ಕಬಡ್ಡಿಯ ಪ್ರಭಾವದಿಂದ ಈ ಕ್ರೀಡೆ ಹೊಸ ಆಯಾಮ ಕಂಡು ಕೊಳ್ಳುತ್ತಿದ್ದರೆ, ಕರ್ನಾಟಕದಲ್ಲಿಯೂ ವಿಶಿಷ್ಠ ಹೊಳಪು ಕಂಡು ಕೊಳ್ಳುತ್ತಿದೆ. ಏನೇ ಇದ್ದರೂ, ಮುಂದಿನ ದಿನಗಳು ಕಬಡ್ಡಿ ದಿನಗಳು ಎಂದು ಹೆಮ್ಮೆಯಿಂದಲೇ ಹೇಳಬಹುದು.
(ಲೇಖಕರು: ಭಾರತ ಕಬಡ್ಡಿ ತಂಡದ ಮಾಜಿ ನಾಯಕರು ಮತ್ತು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯರು) 
 
105 ದೇಶಗಳಲ್ಲಿ ನೇರ ಪ್ರಸಾರ
ಈಗ ಪ್ರೊ ಕಬಡ್ಡಿ ಪಂದ್ಯಗಳನ್ನು 105 ದೇಶಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಇಂಥಹದ್ದೊಂದು ಉತ್ತೇಜನಕಾರಿ ಪರಿಸ್ಥಿತಿ ಹಿಂದೆ ಇದ್ದಿದ್ದರೆ ಇನ್ನೂ ಸುಧಾರಿತ ತಂತ್ರ, ಕೌಶಲಗಳನ್ನು ಕಾಣ ಬಹುದಿತ್ತೇನೊ.

ಮಧು ಪಾಟೀಲ್‌, ಗೋಪಾಲಪ್ಪ, ಸುಬ್ಬಣ್ಣ, ಬಲ್ವಿಂದರ್‌ ಸಿಂಗ್‌ ಫಿಡ್ಡಾ, ಶಾಂತಾರಾಮ್‌ ಜಾಧವ್‌, ರಾಜರತ್ನಮ್‌, ಸಂಜೀವ್‌ ಕುಮಾರ್‌, ಅಶೋಕ್‌ ಶಿಂಧೆ  ಸೇರಿದಂತೆ ಕೆಲವರು ಈ ದೇಶ ಕಂಡ ಶ್ರೇಷ್ಠ ಆಟಗಾರರು.

ಇಂತಹ ಅದ್ಭುತ ಆಟಗಾರರಿಗೆ ಅವರದೇ ಆದ ತಂತ್ರಗಳಿದ್ದವು. ಎದುರಾಳಿಗೆ ಸುಲಭವಾಗಿ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಅಂತಹ ತಂತ್ರಗಳನ್ನು ಇವತ್ತು ಈಗಿನ ಪೀಳಿಗೆಯ ಆಟಗಾರರಿಗೆ ಕಲಿಸಬೇಕಾದ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT