ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಹಂತಹಂತವಾಗಿ ಬೆಳೆಯುವ ಪ್ರಕ್ರಿಯೆ

Last Updated 2 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅರ್ಜುನ್‌ ಹಾಲಪ್ಪ
ವಿಶ್ವಕಪ್‌ನಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಬೇಕು ಎನ್ನುವುದು ನನ್ನನ್ನೂ ಸೇರಿದಂತೆ  ಕೋಟ್ಯಂತರ ಅಭಿಮಾನಿಗಳ ಆಸೆ. ಆದರೆ ಇದು ಒಂದೇ ಉಸಿರಿನಲ್ಲಿ  ಆಗಿ ಬಿಡಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ. 
 
ಕ್ರಿಕೆಟ್‌ ಅನ್ನೇ ಉದಾಹರಣೆಯಾಗಿ ಕೊಡುವುದಾದರೆ ಭಾರತ ತಂಡ 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಜಯಿಸಿತ್ತು. ಮತ್ತೊಂದು ಟ್ರೋಫಿ ಗೆಲ್ಲಲು  2011ರ ವರೆಗೆ ಕಾಯಬೇಕಾಯಿತು. ಒಂದು ಟ್ರೋಫಿಗಾಗಿ ಕ್ರಿಕೆಟ್‌ ಪ್ರೇಮಿಗಳು 28 ವರ್ಷ ಕಾದಿದ್ದಾರೆ.
 
ಹಾಗಂದ ಮಾತ್ರಕ್ಕೆ ಹಾಕಿ ವಿಶ್ವಕಪ್‌ನಲ್ಲಿ ಇಷ್ಟು ವರ್ಷ ನಾವು ಟ್ರೋಫಿ ಗೆಲ್ಲಲಾಗದಕ್ಕೆ ಕಾರಣಗಳನ್ನು  ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ವೇಳೆಗಾಗಲೇ ಇನ್ನೊಂದು ಸಲ ವಿಶ್ವಕಪ್ ಗೆದ್ದಿರಬೇಕಿತ್ತು. ಆದರೆ ಹಿಂದಿನ ಕೆಲ ವರ್ಷಗಳಲ್ಲಿ ಹಾಕಿ ತಂಡದಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. 
 
ಆದರೆ ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ತಂಡದವರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಬಲಿಷ್ಠ ತಂಡಗಳನ್ನು ಮಣಿಸಿ ಮುನ್ನುಗ್ಗುತ್ತಿದ್ದಾರೆ. ಇದು ಆರಂಭವಷ್ಟೇ, ಮುಂದೆ ಇನ್ನಷ್ಟು ದೊಡ್ಡ ಸಾಧನೆಯ ನಿರೀಕ್ಷೆ ಇಟ್ಟುಕೊಳ್ಳ ಬಹುದು. ರ್‍ಯಾಂಕಿಂಗ್‌ನಲ್ಲಿಯೂ ಮೇಲಿಂದ ಮೇಲೆ ಸುಧಾರಣೆಯಾಗುತ್ತಿದೆ. 
 
2010ರಲ್ಲಿ ನವದೆಹಲಿ ಮತ್ತು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಭಾರತ ಬೆಳ್ಳಿ ಪದಕಗಳನ್ನು ಗೆದ್ದಿತ್ತು.  ಚೀನಾದ ಗುವಾಂಜ್‌ ಜೌ ಮತ್ತು ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಕಂಚು ಹಾಗೂ ಚಿನ್ನದ ಪದಕಗಳನ್ನು ಜಯಿಸಿತ್ತು.  ನಾವು ಆಡುತ್ತಿದ್ದಾಗಿನ ದಿನಗಳಿಗೆ ಮಾಡಿದ ಸಾಧನೆಗೆ ಹೋಲಿಸಿದರೆ ಈಗಿನ ತಂಡದ್ದೇ ಉತ್ತಮ ಸಾಧನೆ ಎನಿಸುತ್ತದೆ. 
 
ಇದೆಲ್ಲಕ್ಕಿಂತ ಹೆಚ್ಚಾಗಿ ಸೀನಿಯರ್ ತಂಡದವರಿಗೆ ಸ್ಫೂರ್ತಿಯಾಗುವಂತಹ ಸಾಧನೆಯನ್ನು ಜೂನಿಯರ್ ತಂಡದದರು ಮಾಡಿದ್ದಾರೆ. ಯಾವುದೇ ಶಿಬಿರವಿರಲಿ ಅಭ್ಯಾಸದ ವೇಳೆ ಪಡೆಯುವ ತರಬೇತಿಗೂ, ಪಂದ್ಯದ ವೇಳೆ ತೋರಿಸುವ ಸಾಮರ್ಥ್ಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.
 
ಅಭ್ಯಾಸದ ಸಂದರ್ಭದಲ್ಲಿ ಆಟಗಾರರಷ್ಟೇ ಇರುತ್ತಾರೆ. ಆದರೆ ಪಂದ್ಯದ ವೇಳೆ ದೇಶದ 125 ಕೋಟಿ ಜನರ ಆಶಯ ಮತ್ತು  ನಿರೀಕ್ಷೆಯ ಮೂಟೆ ಹೊತ್ತು ಆಡಬೇಕಾಗುತ್ತದೆ. ಆದ್ದರಿಂದ ಜೂನಿಯರ್ ಆಟಗಾರರಿಗೆ ಅಷ್ಟೊಂದು ಧೈರ್ಯ ಇರುವುದಿಲ್ಲ. ಅವರಿಗೆ ಉತ್ತಮ ತರಬೇತಿ ಮತ್ತು ಹಿರಿಯರ ಮಾರ್ಗದರ್ಶನ ಲಭಿಸಿದರೆ ಜೂನಿಯರ್ ತಂಡದ ಆಟಗಾರರೂ ಸೀನಿಯರ್ ತಂಡದಲ್ಲಿ ಗಮನ ಸೆಳೆಯಬಲ್ಲರು. ಇದೆಲ್ಲದಕ್ಕೂ ಸಮಯ ಬೇಕಾಗುತ್ತದೆ. 
 
ಈಗಿನ ಭಾರತ ತಂಡ ಅನುಭವಿಗಳ ಮತ್ತು ಹೊಸ ಆಟಗಾರರ ಮಿಶ್ರಣವಾಗಿದೆ. ಹೊಸಬರ ಮೇಲೆಯೇ ಎಲ್ಲಾ ಜವಾಬ್ದಾರಿ ಹಾಕಲು ಆಗುವುದಿಲ್ಲ. ಆದ್ದರಿಂದ ತಂಡದ ಹಿರಿಯ ಆಟಗಾರರು ತಮ್ಮ ಕರ್ತವ್ಯ ನಿಭಾಯಿಸುವ ಜೊತೆಗೆ ಹೊಸ ತಂಡವನ್ನು ಕಟ್ಟುವ ಜವಾಬ್ದಾರಿ ತೆಗೆದುಕೊಳ್ಳಬೇಕು.
 
ಹಾಕಿ ಬದಲಾಗಿಲ್ಲ 
ನಾವು ಆಡುತ್ತಿದ್ದಾಗಿನ ದಿನಗಳಿಗೂ ಇವತ್ತಿಗೂ ನಿಯಮಗಳಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಹಾಕಿ ಕ್ರೀಡೆ ಯಾವತ್ತೂ ಬದಲಾಗಿಲ್ಲ, ಆಗುವುದೂ ಇಲ್ಲ.
ಬದಲಾದ ಕಾಲಕ್ಕೆ ತಕ್ಕಂತೆ ಹೊಸ ನಿಯಮಗಳಷ್ಟೇ ಬಂದಿವೆ.

15 ನಿಮಿಷಗಳಿಗೆ ಒಂದು ಕ್ವಾರ್ಟರ್ ಲೆಕ್ಕದಲ್ಲಿ ನಾಲ್ಕು ಕ್ವಾರ್ಟರ್‌ಗಳಿಗೆ ಒಂದು ಪಂದ್ಯದ ಸಮಯ ನಿಗದಿ ಮಾಡಲಾಗಿದೆ. ಇವೆಲ್ಲವೂ ಸಹಜ. ಹೊಸ ಸವಾಲು ಮತ್ತು ನಿಯಮಗಳಿಗೆ ಹೊಂದಿಕೊಂಡು ನಮ್ಮವರು ಚೆನ್ನಾಗಿಯೇ ಆಡುತ್ತಿದ್ದಾರೆ.
 
ವಿಶ್ವಕಪ್ ಆರಂಭವಾಗಲು  18 ತಿಂಗಳು ಕಾಲಾವಕಾಶ ಇದೆ. ಅಲ್ಲಿ ಭಾರತ ಹೇಗೆ ಆಡುತ್ತದೆ ಎನ್ನುವ ವಿಚಾರವನ್ನು ಸದ್ಯಕ್ಕೆ  ಬದಿಗೆ ಇಡೋಣ.  ಈಗ ನಮ್ಮಲ್ಲರ ಗಮನ ಅಜ್ಲನ್‌ ಷಾ ಕಪ್‌ ಟೂರ್ನಿ. ಅಲ್ಲಿ ಗೆದ್ದ ಬಳಿಕ ವಿಶ್ವ ಹಾಕಿ ಲೀಗ್ ಸೆಮಿಫೈನಲ್ಸ್‌. ನಂತರ ವಿವಿಧ ದೇಶಗಳ ಎದುರು ನಡೆಯುವ ಸರಣಿಗಳು.
 
ವಿಶ್ವಕಪ್‌ ಜಯಿಸಬೇಕೆನ್ನುವುದು  ದೊಡ್ಡ ಗುರಿ. ಅದಕ್ಕೆ ಸಜ್ಜಾಗಲು ಅನೇಕ ಸಣ್ಣ ಸಣ್ಣ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ.  ಆದ್ದರಿಂದ ಮುಂಬರುವ ಒಂದೊಂದು ಟೂರ್ನಿಗಳಲ್ಲಿಯೂ,  ಗೆಲುವು ಸಾಧಿಸುತ್ತಾ, ತಂಡದ ಬಲ ಹೆಚ್ಚಿಸುತ್ತಾ ದೊಡ್ಡ ಗುರಿಗೆ ಕೈ ಹಾಕಬೇಕು.
 
ಲೇಖಕರು: 2004ರ ಒಲಿಂಪಿಕ್ಸ್‌, 2010ರ ಕಾಮನ್‌ ವೆಲ್ತ್ ಮತ್ತು ಗುವಾಂಗ್ ಜೌ ಏಷ್ಯನ್‌ ಕ್ರೀಡಾಕೂಟ ಗಳಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. ಈಗ ಸೀನಿಯರ್ ತಂಡದ ಸಹಾಯಕ ಕೋಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT