ಸಂವೇದಿ ಸೂಚ್ಯಂಕ ಮಾನದಂಡವಲ್ಲ

ಹಣಕಾಸು ವರ್ಷದ ಅಂತ್ಯದ  ಕೊನೆಯ ವಾರ  ಸಂವೇದಿ ಸೂಚ್ಯಂಕ 199 ಅಂಶಗಳ ಏರಿಕೆ ಕಂಡಿದೆ. ಮಧ್ಯಮ ಶ್ರೇಣಿಯ ಸೂಚ್ಯಂಕ 247 ಅಂಶ ಏರಿಕೆ ಕಂಡರೆ, ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 356 ಅಂಶ ಏರಿಕೆ ಪ್ರದರ್ಶಿಸಿದೆ.

ಸಂವೇದಿ ಸೂಚ್ಯಂಕ ಮಾನದಂಡವಲ್ಲ

ಷೇರುಪೇಟೆಯ ಬೆಳವಣಿಗೆಗಳನ್ನು  ಕೇವಲ ಸಂವೇದಿ ಸೂಚ್ಯಂಕ ಮತ್ತು ವಲಯಾಧಾರಿತ ಸೂಚ್ಯಂಕಗಳನ್ನು ಆಧಾರವಾಗಿಸಿಕೊಂಡು  ಅಳೆಯುವುದು ಮಾಡುವುದು ಸರಿಯಲ್ಲ ಎಂಬ ವಾತಾವರಣ ನಿರ್ಮಿತವಾಗಿದೆ. 

ಹಣಕಾಸು ವರ್ಷದ ಅಂತ್ಯದ  ಕೊನೆಯ ವಾರ  ಸಂವೇದಿ ಸೂಚ್ಯಂಕ 199 ಅಂಶಗಳ ಏರಿಕೆ ಕಂಡಿದೆ. ಮಧ್ಯಮ ಶ್ರೇಣಿಯ ಸೂಚ್ಯಂಕ 247 ಅಂಶ ಏರಿಕೆ ಕಂಡರೆ, ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 356 ಅಂಶ ಏರಿಕೆ ಪ್ರದರ್ಶಿಸಿದೆ. 

ಈ ವಾತಾವರಣಕ್ಕೆ ಪೂರಕವಾಗಿ ವಿದೇಶಿ ವಿತ್ತೀಯ ಸಂಸ್ಥೆಗಳು ಸುಮಾರು ₹7,226 ಕೋಟಿ ಹೂಡಿಕೆ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳೂ ಸಹ ₹4,245 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಅಂದರೆ ಸುಮಾರು ₹11 ಸಾವಿರ ಕೋಟಿ ಹಣ ಹೂಡಿಕೆಯಾದರೂ ಸಂವೇದಿ ಸೂಚ್ಯಂಕ ಕೇವಲ  ₹199 ಅಂಶಗಳಷ್ಟು ಮಾತ್ರ  ಏರಿಕೆ ಕಂಡಿತು. ಅಂದರೆ, ಆ  ಹೂಡಿಕೆಯು ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳತ್ತ ಹೂಡಿಕೆಯಾಗಿದೆ. 

ವರ್ಷದ ಕೊನೆಯ ದಿನವಾದ  ಮಾರ್ಚ್ 31ರಂದು ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ವಾರ್ಷಿಕ ಗರಿಷ್ಠ ತಲುಪಿವೆ. ಇಂತಹ ಸಂದರ್ಭದಲ್ಲಿ ಈ ವಲಯಗಳ ಷೇರುಗಳಲ್ಲಿ ಹೂಡಿಕೆ  ನಿರ್ಧಾರ ಸರಿಯಲ್ಲ.  ಷೇರಿನ ದರ ಗರಿಷ್ಠದಲ್ಲಿದ್ದಾಗ ಕೇವಲ ಲಾಭದ ನಗದೀಕರಣ ಸುರಕ್ಷಿತ. 
ಹೂಡಿಕೆಗಾಗಿ ಕೆಲವು ಅಗ್ರಮಾನ್ಯ ಕಂಪೆನಿಗಳಾದ ದಿವೀಸ್ ಲ್ಯಾಬ್,  ಡಾಕ್ಟರ್ ರೆಡ್ಡೀಸ್ ಲ್ಯಾಬ್, ಅಶೋಕ್ ಲೇಲ್ಯಾಂಡ್‌, ಎನ್ಎಂಡಿಸಿ,  ಇಂಜಿನೀಯರ್ಸ್ ಇಂಡಿಯಾ, ಮುಂತಾದ ಕಂಪೆನಿಗಳತ್ತ ಗಮನ ಹರಿಸಬಹುದಾಗಿದೆ. ಉತ್ತಮ ಕಂಪೆನಿಗಳ ಷೇರಿನ ಬೆಲೆಗಳು ಕುಸಿತದಲ್ಲಿದ್ದಾಗ  ದೀರ್ಘಕಾಲೀನ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ.

ಪೇಟೆಯ ಬಂಡವಾಳೀಕರಣ ಮೌಲ್ಯ ಸಹ ₹121.54 ಲಕ್ಷ ಕೋಟಿಗೆ ಏರಿಕೆ ಕಂಡು ಸರ್ವಕಾಲೀನ ದಾಖಲೆ ನಿರ್ಮಿಸಿದೆ.   ಈ ಮಟ್ಟದ ಭಾರಿ ಏರಿಕೆಗೆ ಅಗ್ರಮಾನ್ಯ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಎಚ್‌ಡಿ ಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್,  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಾರ್ಸನ್ ಅಂಡ್ ಟೊಬ್ರೊ, ಟಾಟಾ ಸ್ಟೀಲ್‌ನಂತಹ ಕಂಪೆನಿಗಳ ಕೊಡುಗೆ ಗಮನಾರ್ಹವಾಗಿದೆ.

ಶುಕ್ರವಾರ ಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕವು ಇಳಿಕೆಯಲ್ಲೇ ಇದ್ದು, ಇಳಿಕೆಯು ಮಧ್ಯಾಹ್ನದ ವೇಳೆಗೆ ಸ್ವಲ್ಪ ಚೇತರಿಕೆ ಕಂಡಿತು.  ಈ ಚೇತರಿಕೆಯ ಹಿಂದೆ ಅಗ್ರಮಾನ್ಯ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಲಾರ್ಸನ್ ಅಂಡ್ ಟೊಬ್ರೊ, ಡಾಕ್ಟರ್ ರೆಡ್ಡೀಸ್ ಲ್ಯಾಬ್  ಏರಿಕೆ ಕಾರಣವಾಗಿದೆ. 

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರಿನ ಬೆಲೆ ಏರಿಕೆಗೆ ಜಿಯೋ ಚಂದಾದಾರರ ಬೆಂಬಲ ಕಾರಣವಾಗಿರಿಸಿಕೊಂಡಿದೆ. ಈ ಹಿಂದೆ ಇಳಿಕೆ ಕಾಣಲು ಭಾರತೀಯ ಷೇರುಪೇಟೆಯ ನಿಯಂತ್ರಣ ಮಂಡಳಿ  ‘ಸೆಬಿ’ ವಿಧಿಸಿದ ಮೂಲಾಧಾರಿತ ಪೇಟೆಯ ಅಮಾನತು ಕಾರಣವಾಗಿತ್ತು. 

ಮಾರುತಿ ಸುಜುಕಿ ಷೇರಿನ ಬೆಲೆ ಏರಿಕೆಗೆ ಏ.1ರಿಂದ ಜಾರಿಯಾಗಲಿರುವ ಹೊಸ ಬಿಎಸ್4 ಮಾನದಂಡದಿಂದ ಕಂಪೆನಿ ಅಭಾದಿತ ಎಂಬುವುದು ನೆಪವಾಗಿತ್ತು.  ಸಾರ್ವಜನಿಕ ತೈಲ ಕಂಪೆನಿಗಳು ಇತ್ತೀಚಿಗೆ ಎರಡನೇ ಮಧ್ಯಂತರ ಲಾಭಾಂಶ ವಿತರಣೆ ನಂತರ ನಿರ್ಲಕ್ಷ್ಯಕ್ಕೊಳಗಾಗಿದ್ದವು.   ಶುಕ್ರವಾರ ಮೂಲಾಧಾರಿತ ಪೇಟೆಯ ಹೊಸ ಚುಕ್ತಾ ಚಕ್ರದ ಕಾರಣ ಈ ವಲಯದ ಷೇರುಗಳು ಬೇಡಿಕೆಯಲ್ಲಿದ್ದವು.

ರೇಟಿಂಗ್ ನೀಡುವ ಕಂಪೆನಿ ಕ್ರೆಡಿಟ್ ಅನಾಲಿಸಿಸ್ ಅಂಡ್ ರಿಸರ್ಚ್ ಲಿಮಿಟೆಡ್‌ ಈ ವಾರದಲ್ಲಿ ₹1,470ರಿಂದ ₹1,693ರವರೆಗೂ ಏರಿಕೆ ಕಂಡಿದೆ.  ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ₹1,720 ನ್ನು ದಾಟಿತ್ತು. ಶುಕ್ರವಾರ  ವಹಿವಾಟಿನ ಅಂತಿಮ 20 ನಿಮಿಷಗಳಲ್ಲಿ ಸುಮಾರು ₹80ರಷ್ಟು ಸರಳ ರೇಖೆಯಲ್ಲಿ ಏರಿಕೆ ಕಂಡಿದೆ. 

ಪೇಟೆಯ ವಹಿವಾಟಿನ ನಂತರ ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಮಾಹಿತಿ ಪ್ರಕಾರ  ಏ.1ರಿಂದ ಕಂಪೆನಿಯ ನೌಕರರು, ನಿರ್ದೇಶಕರು ಕಂಪೆನಿಯ ಷೇರುಗಳಲ್ಲಿ ಚಟುವಟಿಕೆ ನಡೆಸದಂತೆ ವಹಿವಾಟು  ಗವಾಕ್ಷಿ (ಟ್ರೇಡಿಂಗ್ ವಿಂಡೊ) ಮುಚ್ಚಲಾಗುವುದು ಎಂಬ ಸುದ್ದಿ ಹೊರಬಿದ್ದಿದೆ. 

ಕಂಪೆನಿ ಏನಾದರೂ ಕಾರ್ಪೊರೇಟ್ ಫಲಗಳನ್ನು ಪ್ರಕಟಿಸುವ ಮುನ್ನ ಈ ಪ್ರಕ್ರಿಯೆ ಜಾರಿಯಾಗುತ್ತದೆ. ಇದು ಕಂಪೆನಿ ಪ್ರಕಟಿಸಬಹುದಾದ
ಲಾಭಾಂಶಕ್ಕೆ ಮುನ್ನುಡಿಯೋ ಕಾದುನೋಡಬೇಕು. 

ಪೇಟೆ ಎಲ್ಲರ ನಿರೀಕ್ಷೆ, ಅಪೇಕ್ಷೆಗಳಿಗಿಂತ ಮುಂದಿರುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಹೆಚ್ಐಎಲ್ ಲಿಮಿಟೆಡ್ ಕಂಪೆನಿ ವರ್ಣ ಲೇಪಿತ ಸ್ಟೀಲ್‌ಶೀಟ್‌ಗಳನ್ನು ಬಾಲ್‌ಸೊರ್‌  ಘಟಕದಲ್ಲಿ ಉತ್ಪಾದನೆ ಆರಂಭಿಸಿದ ಸುದ್ದಿ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ಶುಕ್ರವಾರ ಷೇರಿನ ಬೆಲೆ ₹795  ಅನ್ನು  ತಲುಪಿ ವಾರ್ಷಿಕ ಗರಿಷ್ಠ  ದಾಖಲಿಸಿದೆ. 

ಈ ಕೆಳಮಧ್ಯಮ ಶ್ರೇಣಿಯ ಕಂಪೆನಿ ಕಳೆದ ಒಂದು ತಿಂಗಳಲ್ಲಿ ₹623 ರಿಂದ ಏರಿಕೆ ಕಂಡು ₹795 ರವರೆಗೂ ಏರಿಕೆ ಕಂಡಿರುವ ವೇಗವನ್ನು ಗಮನಿಸಿದರೆ ಸ್ಥಿರತೆ ಕಾಣುವ ಸಾಧ್ಯತೆ ಕಡಿಮೆಯಾಗಿದೆ. ಕಂಪೆನಿ ಈ ಶೀಟ್‌ಗಳನ್ನು ತನ್ನ ಹೆಗ್ಗುರುತಾದ  ಚಾರ್‌ಮಿನಾರ್‌ ಹೆಸರಿನಲ್ಲಿ ಮಾರಾಟ ಮಾಡಲಿದೆ. ಮಧ್ಯಮ ಶ್ರೇಣಿಯ ಕಂಪೆನಿ ಎರೋಸ್ ಇಂಟರ್ ನ್ಯಾಷನಲ್ ಮೀಡಿಯಾ ಲಿಮಿಟೆಡ್‌ ಷೇರಿನ ಬೆಲೆ ಒಂದು ತಿಂಗಳಲ್ಲಿ ₹197 ರಿಂದ ₹308ರವರೆಗೂ ಏರಿಕೆ ಪ್ರದರ್ಶಿಸಿ ₹275 ರ ಸಮೀಪ ವಾರಾಂತ್ಯ ಕಂಡಿದೆ. 

ಈ ವಾರದಲ್ಲಿ ಷೇರಿನ ಬೆಲೆಯು ₹270ರ ಸಮೀಪದಿಂದ ₹308ರವರೆಗೂ ತ್ವರಿತ ಏರಿಕೆ ಕಂಡು ಸ್ಥಿರತೆ ಕಾಣದೆ ಇಳಿಕೆ ಕಂಡು ₹253ರವರೆಗೂ ತಲುಪಿ ಚೇತರಿಸಿಕೊಂಡಿದೆ.  ಈ ರೀತಿಯ ವರ್ತನೆ ಷೇರಿನ ಬೆಲೆ ಗರಿಷ್ಠದಲ್ಲಿದ್ದಾಗ ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ.

ಹೊಸ ಷೇರು: ಇತ್ತೀಚಿಗೆ ಪ್ರತಿ ಷೇರಿಗೆ ₹502 ರಂತೆ ಸಾರ್ವಜನಿಕ ವಿತರಣೆ ಮಾಡಿದ  ಸಿಎಲ್ ಎಜುಕೇಟ್ ಲಿಮಿಟೆಡ್  ಷೇರುಗಳು ಮಾರ್ಚ್‌ 31ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ  ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.  ಆರಂಭದ ₹398 ರಿಂದ ₹417.90 ರವರೆಗೂ ಏರಿಕೆ ಕಂಡಿತು. ಟಿ ವಿಭಾಗದಲ್ಲಿ ಲಿಸ್ಟಿಂಗ್ ಆದ್ದರಿಂದ ವಹಿವಾಟು ನೀರಸವಾಗಿತ್ತು.

ಲಾಭಾಂಶ: ವೇದಾಂತ ಲಿಮಿಟೆಡ್ ಪ್ರತಿ ಷೇರಿಗೆ ₹17.70ರ ಮಧ್ಯಂತರ ಲಾಭಾಂಶ  ಪ್ರಕಟಿಸಿದ್ದು, ಏ.12 ನಿಗದಿತ ದಿನವಾಗಿದೆ.  ಇದೇ  ಸಮೂಹದ  ಕಂಪೆನಿ ಹಿಂದುಸ್ತಾನ್ ಜಿಂಕ್ ಪ್ರತಿ ಷೇರಿಗೆ ₹27.50ರಂತೆ ಲಾಭಾಂಶ ವಿತರಿಸಿದ ಕಾರಣ ಈ ಸಮೂಹದ ಖಜಾನೆಗೆ ₹7,500 ಕೋಟಿ   ಸೇರಿದ ಕಾರಣ  ಅದು ಷೇರುದಾರರಿಗೆ ಬೃಹತ್ ಪ್ರಮಾಣದ ಲಾಭಾಂಶ ವಿತರಿಸುತ್ತಿದೆ.

ಇದೇ ಸಮೂಹದ ಕೈರ್ನ್ ಇಂಡಿಯಾ, ವೇದಾಂತದಲ್ಲಿ ವಿಲೀನಗೊಳ್ಳುವ ಕಾರಣ ವಿಲೀನದ ನಂತರ ಆ ಷೇರುದಾರರಿಗೂ ಲಾಭಾಂಶ ಪಡೆಯುವ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ.  ಈ ಲಾಭಾಂಶ ವಿತರಣೆಗೆ ಕಂಪೆನಿಯು ₹6,580 ಕೋಟಿ ವ್ಯಯಿಸಲಿದೆ.  ಕಾಲ್ಗೇಟ್ ಪಾಮೋಲಿವ್‌ ಕಂಪೆನಿ ಏ.7ರಂದು  ಮಧ್ಯಂತರ ಲಾಭಾಂಶ ಪ್ರಕಟಿಸುವ ಸುದ್ದಿ ಷೇರಿನ ಬೆಲೆಯನ್ನು, ಬಹಳ ದಿನಗಳ ಮೇಲೆ ₹1,000  ಗಡಿದಾಟುವಂತೆ ಮಾಡಿತು.
ಬೋನಸ್ ಷೇರು: ಸಾರ್ವಜನಿಕ ವಲಯದ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ ವಿತರಿಸಲಿರುವ 1:4ರ ಅನುಪಾತದ ಬೋನಸ್ ಷೇರಿಗೆ  ಏ.6 ನಿಗದಿತ ದಿನವಾಗಿದ್ದು, 5ರಿಂದ ಬೋನಸ್ ಷೇರು ರಹಿತ ವಹಿವಾಟು ಆರಂಭವಾಗಲಿದೆ.

ಹಕ್ಕಿನ ಷೇರು: ವರ್ಧಮಾನ್ ಸ್ಪೆಷಲ್ ಸ್ಟೀಲ್ಸ್ ಲಿಮಿಟೆಡ್  ಪ್ರತಿ ಷೇರಿಗೆ ₹50 ರಂತೆ ವಿತರಿಸಲಿರುವ ಹಕ್ಕಿನ ಷೇರಿಗೆ ಏ.  10 ನಿಗದಿತ ದಿನವಾಗಿದೆ.

ವಾರದ ವಿಶೇಷ
ಭಾವನಾತ್ಮಕ ನಿರ್ಧಾರ ಬೇಡ

2016–17ನೇ ಹಣಕಾಸು ವರ್ಷ ಕೊನೆಗೊಂಡಿದ್ದು, ಮುಂದಿನ ಹಣಕಾಸು  ವರ್ಷಕ್ಕೆ ಪದಾರ್ಪಣೆ ಮಾಡಿಯಾಗಿದೆ. ಷೇರುಪೇಟೆಯ ಸೂಚ್ಯಂಕಗಳು ಉತ್ತಮ ಏರಿಕೆಯಿಂದ ಮಿಂಚಿವೆ.  ಆದರೆ ಕೆಲವು ಕಂಪೆನಿಗಳು ತಟಸ್ಥವಾಗಿವೆ, ಕೆಲವು ಕುಸಿತ ಕಂಡಿವೆ.  

ರೆಕ್ಸಿಟ್,  ಬ್ರೆಕ್ಸಿಟ್,  ಸರ್ಜಿಕಲ್ ಸ್ಟ್ರೈಕ್,  ಉತ್ತರ ಪ್ರದೇಶ ಸೇರಿ  5 ರಾಜ್ಯಗಳ ಚುನಾವಣೆಯ ಫಲಿತಾಂಶ, ನೋಟುರದ್ದತಿ,  ಬ್ಯಾಂಕ್ ಬಡ್ಡಿ ದರ ಕಡಿತ,   ಬಿಎಸ್ 3 ವಾಹನಗಳ ಮೇಲೆ  ಸುಪ್ರೀಂ ಕೋರ್ಟ್ ವಿಧಿಸಿದ ನಿರ್ಬಂಧ  ಪೇಟೆಯ ಮೇಲೆ ಗಾಢ ಪ್ರಭಾವ ಬೀರಿವೆ.   

ವಲಯಾಧಾರಿತವಾಗಿ ಲಿಸ್ಟೆಡ್ ಕಂಪೆನಿ ಐಡಿಯಾ ಸೆಲ್ಯುಲರ್‌ ಮತ್ತು ವೊಡಾಫೋನ್‌ಗಳ ವಿಲೀನ,  ಮ್ಯಾಕ್ಸ್  ಮತ್ತು ಎಚ್‌ಡಿಎಫ್‌ಸಿ ವಿಮಾ ಕಂಪೆನಿಗಳ ವಿಲೀನ,  ಅಮೆರಿಕದ ಎಫ್‌ಡಿಎ ಕೈಗೊಂಡ ತನಿಖೆಗಳ ಫಲಿತಾಂಶ ಮತ್ತು ವಿಧಿಸಿದ ನಿರ್ಬಂಧ, ಇನ್ಫೊಸಿಸ್‌  ಪ್ರವರ್ತಕರ ಮತ್ತು ಆಡಳಿತ ಮಂಡಳಿಯ ತಿಕ್ಕಾಟ, ಟಾಟಾ ಸಮೂಹದ ಅಧ್ಯಕ್ಷರ ಗೊಂದಲ, ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಸಂಸ್ಥೆಗಳ ರೇಟಿಂಗ್ ಬದಲಾವಣೆ ಮುಂತಾದವು ಷೇರಿನ ಬೆಲೆಗಳಲ್ಲಿ ಹೆಚ್ಚಿನ ಏರಿಳಿತದೊಂದಿಗೆ ಅಸ್ಥಿರತೆ ಉಂಟುಮಾಡಿವೆ. 

ಹೆಚ್ಚಿನ ಸೂಚ್ಯಂಕಗಳು ವಾರ್ಷಿಕ ಗರಿಷ್ಠದಲ್ಲಿರುವ ಈ ಸಮಯದಲ್ಲಿ ಉತ್ತಮ ಕಂಪೆನಿಗಳು ಬೆಲೆ ಕುಸಿತ ಕಂಡಾಗ ಮಾತ್ರ ದೀರ್ಘಕಾಲೀನವಾಗಿ ಚಿಂತನೆ ನಡೆಸಿ ಹೂಡಿಕೆ ಮಾಡಬೇಕು.   ಹಣಕಾಸು ವರ್ಷಾಂತ್ಯದ  ಕಾರಣ ಬಹಳಷ್ಟು ಕಂಪೆನಿಗಳು ಭಾರಿ ಚಟುವಟಿಕೆ ನಡೆಸಿದವು. ಇವುಗಳಲ್ಲಿ ಅಗ್ರಮಾನ್ಯ ಕಂಪೆನಿ, ಕೆಳದರ್ಜೆ ಮತ್ತು ಕಳಪೆ ಕಂಪೆನಿ ಸೇರಿವೆ.  ಇಂಡಸ್ ಇಂಡ್ ಬ್ಯಾಂಕ್,  ಡಿ ಬಿ ಕಾರ್ಪ್, ಬಾಂಬೆ ಡೈಯಿಂಗ್, ರಿಲಯನ್ಸ್ ಪವರ್,  ಗಲ್ಫ್ ಆಯಿಲ್ ಲೂಬ್ರಿಕಂಟ್ಸ್, ಫ್ಯೂಚರ್ ಕನ್ಸೂಮರ್ಸ್, ಗ್ಯಾಮನ್ ಇನ್ಫ್ರಾ, ರುಚಿ ಇನ್ಫ್ರಾ, ಮನಕ್ಸಿಯ ಸ್ಟಿಲ್ ಮುಂತಾದವು ಮಾರ್ಚ್‌ನಲ್ಲಿ ಗಜಗಾತ್ರದ ವಹಿವಾಟು ದಾಖಲಿಸಿವೆ.  

ಮೊದಲ ವಾರದಲ್ಲಿ ಖಾಸಗಿ ವಲಯದ ಕೋಟಕ್ ಮಹಿಂದ್ರಾ ಬ್ಯಾಂಕ್ ನ ಪ್ರವರ್ತಕರು ಶೇ1.5 ಭಾಗಿತ್ವ ಮಾರಾಟ ಮಾಡಿ ಸುಮಾರು ₹2,200 ಕೋಟಿಗೂ ಹೆಚ್ಚಿನ ಹಣ ಗಳಿಸಿದರೆ, ಕೊನೆ ವಾರದಲ್ಲಿ ಈ ಬ್ಯಾಂಕ್ 6.20 ಕೋಟಿ ಷೇರುಗಳನ್ನು ಎಫ್‌ಪಿಓ, ಎಡಿಆರ್, ಜಿಡಿಆರ್, ಮೂಲಕ ಮಾರಾಟ ಮಾಡಿ ಸಂಪನ್ಮೂಲ ಸಂಗ್ರಹಣೆಯ ಗುರಿಹೊಂದಿದೆ. ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಂಡು ತನ್ನ ಅಸ್ತಿತ್ವ  ಕಳೆದುಕೊಂಡಿದೆ.  ಜಾಗತೀಕರಣ ಮತ್ತು ತಾಂತ್ರಿಕರಣದ ಫಲವಾಗಿ  ರಾಜ್ಯದ ಮತ್ತೊಂದು  ಸಂಸ್ಥೆ  ಬೆಂಗಳೂರು ಷೇರು ವಿನಿಮಯ ಕೇಂದ್ರ  ಸಹ ತನ್ನ ಮಾನ್ಯತೆ ರದ್ದು ಪಡಿಸಿಕೊಳ್ಳುವಂತೆ ಮಾಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಯಾವುದೂ ನಿಶ್ಚಿತವಲ್ಲ, ಈ ಅಸಮತೋಲನೆಯ ಸಂದರ್ಭದಲ್ಲಿ ಸೃಷ್ಟಿಯಾಗುವ ಅವಕಾಶಗಳ ಲಾಭ ಪಡೆಯುವ ಗುಣ ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ.  ಮುಂದಿನ ದಿನಗಳಲ್ಲಿ ಬ್ಯಾಂಕ್ ಬಡ್ಡಿದರ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ಇದ್ದು, ಪರ್ಯಾಯವಾಗಿ ಹೂಡಿಕೆಗೆ ಷೇರುಪೇಟೆಯೊಂದೇ ಉತ್ತಮವೆನಿಸುತ್ತದೆ. 

ಪೇಟೆಯ ಪ್ರಮುಖ ಗುಣವಾದ ಅವಶ್ಯಕತೆಯಿದ್ದಾಗ ತಕ್ಷಣದಲ್ಲಿ ನಗದೀಕರಿಸಿಕೊಳ್ಳುವ ಸಾಧ್ಯತೆಯೇ ಮುಖ್ಯ ಆಕರ್ಷಣೆಯಾಗಿದೆ.  ಸಾಧ್ಯವಾದಷ್ಟು ನಿಮ್ಮ ಹೂಡಿಕೆಗುಚ್ಛ ಹೆಚ್ಚು ಉತ್ತಮ ಕಂಪೆನಿಗಳ ಷೇರುಗಳನ್ನು ಹೊಂದಿದ್ದಲ್ಲಿ, ನಿಮಗೆ ನಿರಂತರವಾದ ಆದಾಯ ಗಳಿಸಿಕೊಡುವುದು ಸಾಧ್ಯ.  ಭಾವನಾತ್ಮಕ ನಿರ್ಧಾರಗಳಿಂದ ದೂರವಿದ್ದು, ವಾಸ್ತವ ಪರಿಸ್ಥಿತಿಗೆ ಆದ್ಯತೆ ಇರಲಿ.

ಮೊ: 9886313380 (ಸಂಜೆ 4.30ರ ನಂತರ)

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018