ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ನಡುವೆ ಅಂಕಣಗೊಂದಿ ಅಂಗನವಾಡಿ

Last Updated 3 ಏಪ್ರಿಲ್ 2017, 9:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕಣಗೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ದಿನೇ ದಿನೇ ಅಸುರಕ್ಷಿತ ವಾತಾವರಣ ನಿರ್ಮಾಣವಾಗುತ್ತಿದ್ದು, ಅಂಗನವಾಡಿ ಶಿಕ್ಷಕಿಗೆ ಭಯದ ನಡುವೆ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ಪ್ರಾಥಮಿಕ ಶಾಲೆಯ ಪರಿಸರ ಹಸಿರಿನಿಂದ ನಳನಳಿಸುತ್ತಿದ್ದರೆ, ಇನ್ನೊಂದೆಡೆ ಅಂಗನವಾಡಿ ಪರಿಸರ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ಕೇಂದ್ರದಲ್ಲಿ ಒಂದು ಕಡೆ ಅನಾನುಕೂಲಕರ ರೀತಿಯಲ್ಲಿರುವ ಶೌಚಾಲಯದ ಸಮಸ್ಯೆ, ಹಿಂದುಗಡೆ ದೊಡ್ಡ ಹೊಂಡ, ಇನ್ನೊಂದು ಬದಿ ಗಲೀಜು ವಾತಾವರಣ ಹೀಗೆ ಯಾವ ಕಡೆ ನೋಡಿದರೆ ಈ ಕೇಂದ್ರದಲ್ಲಿ ಸಮಸ್ಯೆಗಳ ದರ್ಶನವಾಗುತ್ತದೆ.

ಶಾಲೆಯ ಹಿಂದೆಯೇ ಇರುವ ದೊಡ್ಡ ಗುಂಡಿ ಅಂಗನವಾಡಿ ಕೇಂದ್ರದ ಶಿಕ್ಷಕಿಯ ಪಾಲಿಗೆ ದುಸ್ವಪ್ನದಂತಾಗಿದೆ. ಮಳೆಗಾಲದಲ್ಲಿ ಗುಂಡಿಯು ನೀರಿನಿಂದು ತುಂಬಿ ದೊಡ್ಡ ಹೊಂಡವಾಗಿ ಪರಿವರ್ತನೆಯಾಗುತ್ತದೆ. ಆಗೆಲ್ಲ ಶಿಕ್ಷಕಿಗೆ ಮಕ್ಕಳ ಸುರಕ್ಷತೆಯದೇ ಚಿಂತೆಯಾಗುತ್ತದೆ. ಮಕ್ಕಳನ್ನು ಹೊರಗಡೆ ಕಳುಹಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಗುಂಡಿಯಲ್ಲಿ ನೀರು ನಿಲ್ಲುವುದರಿಂದ ಕೇಂದ್ರದ ಹಿಂದೆಲ್ಲ ಗಿಡಗಂಟಿಗಳು ಬೆಳೆದು ಹುಳು ಹುಪ್ಪಡಿಗಳು ಹರಿದಾಡುತ್ತವೆ.

‘ಅಂಗನವಾಡಿ ಕೇಂದ್ರದೊಳಗೆ ಎರಡ್ಮೂರು ಬಾರಿ ಹಾವು ಕಾಣಿಸಿಕೊಂಡು ಭಯಗೊಂಡಿರುವೆ. ಆಗೊಮ್ಮೆ, ಈಗೊಮ್ಮೆ ಹಾವುಗಳು ಕೇಂದ್ರದ ಸುತ್ತಲಿನ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಹೀಗಾಗಿ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ’ ಎಂದು ಶಿಕ್ಷಕಿ ಲಿಂಗಮ್ಮ ಹೇಳಿದರು.

‘ಪ್ರಾಥಮಿಕ ಶಾಲೆಯ ಬದಿ ಸುತ್ತಲೂ ಕಾಂಪೌಂಡ್ ಇದೆ. ಆದರೆ ಅಂಗನವಾಡಿ ಕೇಂದ್ರದ ಬಳಿ ಕಾಂಪೌಂಡ್‌ ಇಲ್ಲ. ಹೀಗಾಗಿ ಸ್ಥಳೀಯರು ಬಂದು ಕೇಂದ್ರದ ಆವರಣ ಗಲೀಜು ಮಾಡಿಹೋಗುತ್ತಾರೆ. ಇದಕ್ಕೆ ತಡೆ ಹಾಕಬೇಕಾದರೆ ಕೇಂದ್ರ ಬಳಿಯೂ ಸುತ್ತಲೂ ತಡೆ ಬೇಲಿ ಹಾಕಿಸಬೇಕು. ಈ ಕುರಿತು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರದ ಹಿಂದಿರುವ ಗುಂಡಿಯನ್ನು ಮಣ್ಣು ಹಾಕಿ ಸಮತಟ್ಟು ಮಾಡಿದರೆ ಮಕ್ಕಳಿಗೆ ಆಟ ಆಡಲು ಮೈದಾನವಾಗುತ್ತದೆ. ಇಲ್ಲದಿದ್ದರೆ ಕಡೆ ಪಕ್ಷ ಗುಂಡಿಯ ಸುತ್ತಲು ಬೇಲಿಯನ್ನಾದರೂ ನಿರ್ಮಿಸಿದರೆ ಮಕ್ಕಳು ಸುರಕ್ಷಿತವಾಗಿ ಇರುತ್ತವೆ. ಇಲ್ಲದಿದ್ದರೆ ನಮಗೆ ಭಯ ತಪ್ಪಿದ್ದಲ್ಲ. ಯಾವಾಗ ಏನಾಗುತ್ತದೋ ಎಂಬ ಅಂಜಿಕೆ ಸದಾ ಕಾಡುತ್ತದೆ’ ಎಂದು ತಿಳಿಸಿದರು.

ಶೌಚಾಲಯವೂ ಬೇಕು: ಸದ್ಯ ಕೇಂದ್ರದ ಎಡಭಾಗದಲ್ಲಿ ಇರುವ ಶೌಚಾಲಯವನ್ನು ಅಂಗನವಾಡಿ ಮಕ್ಕಳು ಬಳಕೆ ಮಾಡುತ್ತಿದ್ದಾರೆ. ಆ ಶೌಚಾಲಯ ಬಳಸಬೇಕಾದರೆ ಮಕ್ಕಳು ದೊಡ್ಡ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಾಗಿದೆ. ಇದು ಚಿಕ್ಕ ಮಕ್ಕಳಿಗೆ ಕಷ್ಟ. ಜತೆಗೆ ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರದ ಪರಿಸರದಲ್ಲಿ ಹೊಸದಾಗಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಶೌಚಾಲಯ ಕಟ್ಟಿಸಬೇಕಿದೆ.

‘ಈಗಷ್ಟೇ ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಸೋಮವಾರ ಅಂಕಣಗೊಂದಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿ ಸಹಕಾರದಲ್ಲಿ ಆ ಕೇಂದ್ರಕ್ಕೆ ಬೇಕಾದ ಸೌಲಭ್ಯ ಒದಗಿಸಿ ಕೊಡಲು ಕ್ರಮಕೈಗೊಳ್ಳುತ್ತೇನೆ’ ಎಂದು ಪ್ರಭಾರಿ ಶಿಶು ಅಭಿವೃದ್ಧಿ ಅಧಿಕಾರಿ (ಸಿಡಿಪಿಒ) ಮೊಹಮ್ಮದ್ ಉಸ್ಮಾನ್ ತಿಳಿಸಿದರು.

**

ಅಂಕಣಗೊಂದಿ ಅಂಗನವಾಡಿ ಸಮಸ್ಯೆ ಈವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಸೋಮವಾರವೇ ಆ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುವೆ.
-ಮೊಹಮ್ಮದ್ ಉಸ್ಮಾನ್, ಪ್ರಭಾರ ಸಿಡಿಪಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT