ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ

Last Updated 3 ಏಪ್ರಿಲ್ 2017, 9:38 IST
ಅಕ್ಷರ ಗಾತ್ರ

ತುಮಕೂರು: ‘ಜಾತಿವಾರು ಜನಗಣತಿ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಒಳ ಮೀಸಲಾತಿ ಕುರಿತ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು’ ಎಂದು ಸಾಹಿತಿ ಕೆ.ಬಿ.ಸಿದ್ದಯ್ಯ ಒತ್ತಾಯಿಸಿದರು.

ನಗರದ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಹರ್ಡ್ಸ್‌ ಸಂಸ್ಥೆ ಏರ್ಪಡಿಸಿದ್ದ ವಿಚಾರ ಸಂಕಿರಣ, ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಪ್ರಸಕ್ತ ಕಾಲಘಟ್ಟದಲ್ಲಿ ಸಂಘಟಿತರಾಗಿ ಸೌಲಭ್ಯ ಪಡೆಯುವುದು ಅನಿವಾರ್ಯವಾಗಿದೆ. ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ಇಚ್ಛಾಶಕ್ತಿ ಪ್ರಕಟಿಸುತ್ತಿಲ್ಲ. ಹಾಗಾಗಿ ಹೋರಾಟದ ಹಾದಿ ಅನಿವಾರ್ಯವಾಗಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ವಿರುದ್ಧವಿಲ್ಲ. ಆದರೆ, ವರದಿ ಜಾರಿ ಮಾಡಲಾಗದ ಒತ್ತಡಗಳು ಅವರ ಮೇಲಿವೆ. ಅಂಥ ರಾಜಕೀಯ ಅಂಕುಶಗಳ ವಿರುದ್ಧ ಹೋರಾಟ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ವಿದ್ಯಾವಂತರಾಗುತ್ತಾ ಜಾತಿ ಅಸ್ಮಿತೆ ಕಳೆದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ನಾನು ಮೊದಲು ಮಾದಿಗ ಜಾತಿಯ ಸಾಂಸ್ಕೃತಿಕ ಕವಿಪ್ರಜ್ಞೆ. ಆನಂತರ ಕನ್ನಡ ಕವಿ’ ಎಂದು ಹೇಳಿದರು.

‘ಮಾದಿಗ ಸಂಸ್ಕೃತಿ, ರಾಜಕಾರಣ ಹಾಗೂ ಅರ್ಥಶಾಸ್ತ್ರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಸಮೀಕರಿಸಿ ನೋಡಬೇಕು. ಇಂತಹ ಆಲೋಚನಾ ಕ್ರಮಗಳಿಗೆ ವಿಚಾರ ಸಂಕಿರಣ, ಸಮುದಾಯ ಕಾರ್ಯಕ್ರಮಗಳು ವೇಗವರ್ಧಕವಾಗಿ ಕೆಲಸ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಎ.ನಾರಾಯಣಸ್ವಾಮಿ ಮಾತನಾಡಿ, ‘ಮಾದಿಗರ ಇಂದಿನ ಸ್ಥಿತಿಗೆ ಕಾರಣವಾದ ಸಂಗತಿಗಳನ್ನು ಅಧ್ಯಯನ ಮಾಡದಿದ್ದರೆ ಸಮುದಾಯವನ್ನು ಅರಿಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಸಮುದಾಯದ ಆರ್ಥಿಕ ಸದೃಢತೆಗೆ ಅಗತ್ಯವಾದ ಯೋಜನೆಗಳು ಸರ್ಕಾರ ರೂಪಿಸಿಲ್ಲ. ಕೆಲ ಯೋಜನೆಗಳಿದ್ದರೂ ಜನರಿಗೆ ತಲುಪಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ಹಾಗಾಗಿ ಸಮುದಾಯ ಅಧಿಕಾರಿಗಳು ವಾರಕ್ಕೆ ಒಂದು ದಿನ, ಇಲ್ಲವೇ ತಿಂಗಳಿಗೊಮ್ಮೆ  ಸಮುದಾಯದ ಜನ ವಾಸಿಸುವ ಪ್ರದೇಶಗಳಿಗೆ ಹೋಗಿ ತಿಳಿವಳಿಕೆ ಮೂಡಿಸಬೇಕು’ ಎಂದರು.

ಚಿಕ್ಕಬಳ್ಳಾಪುರದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್‌.ಅನುರಾಧಾ ಮಾತನಾಡಿ, ‘ಮೆಡಿಕಲ್ ಹಾಗೂ ಎಂಜಿನಿಯರಿಂಗ್‌ ಪದವೀಧರರನ್ನು ಸಮುದಾಯದತ್ತ ಆಕರ್ಷಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ಪಿಎಚ್‌.ಡಿ ಪದವೀಧರರು, ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಡಳಿತಾತ್ಮಕ ಹುದ್ದೆಗೆ ಬರಬೇಕು. ಇದರಿಂದ ಸಮುದಾಯಕ್ಕೆ ಕೊಡುಗೆ ನೀಡಬಹುದು’ ಎಂದು ಹೇಳಿದರು.

ವಿದ್ಯಾರ್ಥಿಯೂ ಅಲ್ಲ, ಉಪನ್ಯಾಸಕರೂ ಅಲ್ಲ: ‘ಡಾಕ್ಟರೇಟ್‌ ಪದವೀಧರರು ಇತ್ತ ವಿದ್ಯಾರ್ಥಿಯೂ ಅಲ್ಲ, ಅತ್ತ ಉಪನ್ಯಾಸಕರೂ ಅಲ್ಲ. ಅಂತರ ಪಿಶಾಚಿಗಳ ರೀತಿ ಇರಬೇಕಾದ ಪರಿಸ್ಥಿತಿ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಡಳಿತದಲ್ಲಿ ಭಾಗವಹಿಸಬೇಕು. ಇಲ್ಲವಾದರೆ ಕೇವಲ ಗೋಷ್ಠಿಗಳಲ್ಲಿ ಭಾಷಣಗಳಿಗೆ ಸೀಮಿತರಾಗಬೇಕಾಗುತ್ತದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ವೆಂಕಟರಾಜು ಸಲಹೆ ನೀಡಿದರು.

ಆದಿಜಾಂಬವ ಮಠದ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ, ಪಾವಗಡ ಶಾಸಕ ತಿಮ್ಮರಾಯಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯರಾದ ವೈ.ಎಚ್‌.ಹುಚ್ಚಯ್ಯ, ಕೆಂಚಮಾರಯ್ಯ, ರಾಜವರ್ಧನ ಪ್ರತಿಷ್ಠಾನದ ಅಶೋಕ್‌ ರಾಜವರ್ಧನ, ಅರುಣೋದಯ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಡಾ.ಎಲ್‌.ಮುಕುಂದ್‌, ಕೆ.ದೊರೆರಾಜು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್‌.ರಾಮಕೃಷ್ಣ, ಕಂಟಲಗೆರೆ ಸಣ್ಣ ಹೊನ್ನಯ್ಯ ಉಪಸ್ಥಿತರಿದ್ದರು.

**

ನಕಲಿ ಪ್ರಮಾಣ ಪತ್ರ ನೀಡಿ ಕೆಲಸ

‘ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರದ 10 ಸಾವಿರ ಮಂದಿ ನೌಕರರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಕೆಲಸ ಪಡೆದಿದ್ದಾರೆ’ ಎಂದು ರಘುಕುಮಾರ್‌ ಹೇಳಿದರು.

‘ಸಮುದಾಯದ ಪ್ರಸ್ತುತ ಸವಾಲುಗಳು ಹಾಗೂ ಜವಾಬ್ದಾರಿಗಳು’ ಕುರಿತು ವಿಷಯ ಮಂಡನೆ ಮಾಡಿದರು.

‘ಮೀಸಲಾತಿ ಪ್ರಕಾರ ಎ ದರ್ಜೆಯ ಶೇ 15ರಷ್ಟು ಸರ್ಕಾರಿ ಹುದ್ದೆಗಳು ಪರಿಶಿಷ್ಟರಿಗೆ ಮೀಸಲಿಡಬೇಕು. ಈಗ ಆ ಪ್ರಮಾಣ ಶೇ 8ರಷ್ಟಿದೆ. ಇದರಲ್ಲಿ ಮಾದಿಗ ಸಮುದಾಯದ ಪ್ರಮಾಣ ಶೇ 2 ದಾಟಿಲ್ಲ’ಎಂದು ವಿಷಾದಿಸಿದರು.

‘ಉನ್ನತ ಶಿಕ್ಷಣದಲ್ಲಿ ವಿದ್ಯಾವಂತರ ಸಂಖ್ಯೆ, ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರ ನೇಮಕದಲ್ಲೂ ಸಮುದಾಯಕ್ಕೆ ಕಡಿಮೆ ಪ್ರಾತಿನಿಧ್ಯ ಸಿಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

**

‘ರಾಜಕೀಯ ಅಧಿಕಾರ ಇಲ್ಲದೇ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ಮೀಸಲಾತಿ ಪಡೆಯುವ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು’.
-ಕೆ.ಬಿ.ಸಿದ್ದಯ್ಯ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT