ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಇಳುವರಿ ಕೊಟ್ಟ ಗ್ಯಾಲನ್ ತಳಿ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬದನೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ಜಾಗ, ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಜಗದಾಳ ಗ್ರಾಮದ ದೇವರಾಜ ರಾಠಿ. ಬನಹಟ್ಟಿಯಿಂದ ಮುಧೋಳ ರಸ್ತೆಯ ಬದಿಗಿರುವ ಕಲ್ಲು ಗುಡ್ಡದಂತಿರುವ ಕೇವಲ 10 ಗುಂಟೆ ಜಮೀನಿನಲ್ಲಿ ಗ್ಯಾಲನ್‌ ತಳಿಯ ಬದನೆಕಾಯಿಯನ್ನು ಇವರು ಬೆಳೆಯುತ್ತಿದ್ದಾರೆ.

ಮೊದಲಿನಿಂದಲೂ ದೇವರಾಜ ಅವರು ಕೃಷಿಯಲ್ಲಿ ಹೊಸತನದ ಪ್ರಯೋಗಗಳನ್ನು ಮಾಡಿ ಹೆಸರು ಮಾಡಿದವರು. ಇದೀಗ ಅವರು ಬದನೆ ಕೃಷಿಯಲ್ಲಿ ವಿನೂತನ ಪ್ರಯೋಗ ಮಾಡಿದ್ದಾರೆ. ಇದರಿಂದಾಗಿ ನಾಟಿ ಮಾಡಿದ 60 ರಿಂದ 70 ದಿನಕ್ಕೆ ಬೆಳೆ ಕಟಾವಿಗೆ ಬಂದಿದೆ. ಒಂದು ಬದನೆಕಾಯಿಯ ತೂಕ 900 ಗ್ರಾಂ ನಿಂದ ಒಂದು ಕೆ.ಜಿವರೆಗೆ ಇದೆ. ಒಂದು ಗಿಡಕ್ಕೆ 100 ಕೆ.ಜಿ ಇಳುವರಿ ಬರುತ್ತಿದೆ.

ಎಕರೆಗೆ 4 ಟ್ರಕ್ ತಿಪ್ಪೆ ಗೊಬ್ಬರ ಹಾಗೂ ಇತರ ಕೆಲವು ಗೊಬ್ಬರವನ್ನು ಸೇರಿಸಿ, 10 ಚೀಲ ಬೇವಿನ ಹಿಂಡಿ ಹಾಕಿ ಬೆಡ್‌ ನಿರ್ಮಾಣ ಮಾಡಿಕೊಂಡು ಗಿಡದಿಂದ ಗಿಡಕ್ಕೆ  ಮೂರೂವರೆ ಅಡಿ ಮತ್ತು  ಸಾಲಿನಿಂದ ಸಾಲಿಗೆ  6 ಅಡಿಯಂತೆ 600 ಗಿಡಗಳನ್ನು ಪ್ಲಾಸ್ಟಿಕ್‌ ಮಲ್ಚಿಂಗ್‌ ಮಾಡಿ ನಾಟಿ ಮಾಡಿದ್ದಾರೆ. ಗಿಡಗಳು ಬಾಗದಿರಲಿ ಎಂದು ಬಳ್ಳಿಗಳನ್ನು ಮೇಲಕ್ಕೆ ಕಟ್ಟಲಾಗಿದೆ.

‘ನಾಟಿ ಮಾಡಿದ ನಂತರ ಐದಾರು ದಿನಕ್ಕೆ ಒಂದು ಬಾರಿ ಹನಿ ನೀರಾವರಿ ಮೂಲಕ ಜೀವಾಮೃತ ಮತ್ತು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಹಾಕಬೇಕು. ಇದರಿಂದ ಬೆಳೆಗಳು ಉತ್ತಮವಾಗಿ ಬರುತ್ತವೆ. ಅಲ್ಲದೆ ವಾತಾವರಣಕ್ಕೆ ತಕ್ಕಂತೆ ಔಷಧಿಯನ್ನು ಸಿಂಪಡಿಸಿ ಕಾಳಜಿ ಪೂರ್ವಕವಾಗಿ ಬೆಳೆಸಿದರೆ ಬೆಳೆ ಉತ್ತಮವಾಗಿ ಬರುತ್ತದೆ. 8 ರಿಂದ 10 ತಿಂಗಳಿನಲ್ಲಿ 10 ಗುಂಟೆಯಲ್ಲಿ 600 ಸಸಿಗಳಿಂದ 60 ಟನ್ ಬದನೆಕಾಯಿ ಇಳುವರಿಯನ್ನು ಪಡೆಯಬಹುದು. ಕಾಯಿಗಳಿಗೆ ಬಿಸಿಲು ಹೆಚ್ಚಿಗೆ ಬೀಳಬಾರದು ಎಂದು ನೆರಳು ಮಾಡಲು ಸೀರೆಗಳನ್ನು ಕಟ್ಟಿ ನೆರಳಿನ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ದೇವರಾಜ.

ಈ ತಳಿಯ ಬದನೆಕಾಯಿಗೆ ಗೋವಾ, ಅಹ್ಮದಾಬಾದ್, ಮುಂಬೈ, ಹೈದರಾಬಾದ್‌ಗಳಲ್ಲಿ ಉತ್ತಮ ಮಾರುಕಟ್ಟೆ ಇದೆ. ಸದ್ಯ ಒಂದು ಕೆ.ಜಿ. ಬದನೆಕಾಯಿ  30ರಿಂದ 40 ರೂಪಾಯಿವರೆಗೆ ಮಾರಾಟವಾಗುತ್ತದೆ. ಮಹಾರಾಷ್ಟ್ರದಿಂದ ಬೀಜವನ್ನು ತರಿಸಿ ಇಲ್ಲಿಯೇ ಸಸಿಗಳನ್ನು ತಯಾರಿಸಿರುವುದರಿಂದ ವೆಚ್ಚ ಕಡಿಮೆಯಾಗುತ್ತದೆ. ಒಟ್ಟು 1.5 ಲಕ್ಷ ಖರ್ಚು ಆದರೆ ಸದ್ಯದ ಮಾರುಕಟ್ಟೆಯ ಬೆಲೆಯನ್ನು ಗಮನಿಸಿದಾಗ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು ಎನ್ನುವುದು ಅವರ ಅನುಭವದ ಮಾತು.

‘ಮಹಾರಾಷ್ಟ್ರದ ರೈತರು ಈ ತಳಿಯ ಬದನೆಯನ್ನು ಒಂದು ಎಕರೆ ಭೂಮಿಯಲ್ಲಿ ಅಂದಾಜು  80 ರಿಂದ 100 ಟನ್ ಇಳುವರಿಯನ್ನು ಪಡೆದುಕೊಂಡಿದ್ದಾರೆ. ಈಗ ಪ್ರಾಯೋಗಿಕವಾಗಿ ಈ ಬೆಳೆಯನ್ನು ಬೆಳೆದಿದ್ದೇನೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಭೂಮಿ ಬಳಸಿಕೊಂಡು ಗ್ಯಾಲನ್‌ ತಳಿಯ ಬದನೆಕಾಯಿ ಬೆಳೆಯುವ ಯೋಜನೆ ಹೊಂದಿದ್ದೇನೆ. ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.

ಸಂಪರ್ಕಕ್ಕೆ: 9448986438

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT