ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವಿಧ ಬಳಕೆಗೆ ಬೇಕು ದರಕು

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಜಿ.ಎಂ. ಬೊಮ್ನಳ್ಳಿ

**

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ತೋಟಕ್ಕೆ ಸತ್ವ ಒದಗಿಸುವ ಸಾವಯವ ಗೊಬ್ಬರಗಳಲ್ಲಿ ಸೊಪ್ಪಿನ ಬೆಟ್ಟದ ದರಕು ಮುಖ್ಯ ಕಚ್ಚಾವಸ್ತುವಾಗಿದೆ. ತೋಟದಲ್ಲಿ ಬೇಸಿಗೆಯಲ್ಲಿ ತೇವಾಂಶವನ್ನು ಕಾಪಿಡುವ, ಮಳೆಗಾಲದಲ್ಲಿ ತೋಟದಲ್ಲಿ ಮಣ್ಣಿನ ಸವಕಳಿ ತಡೆಯುವ, ತೋಟದಲ್ಲಿನ ಕಳೆ ನಿಯಂತ್ರಣ, ಹೀಗೆ ಹಲವು ಉಪಯುಕ್ತ ಕಾರ್ಯವನ್ನು ಬೆಟ್ಟದ ದರಕು ಮಾಡುತ್ತದೆ. ಅವೆಲ್ಲಕ್ಕಿಂತ ಮುಖ್ಯವಾಗಿ, ತೋಟದ ಬೆಳೆಗಳಿಗೆ ಸತ್ವಯುತ ಆಹಾರವನ್ನು ಒದಗಿಸುವ ಸಾಮರ್ಥ್ಯ ಕಾಡಿನ ಒಣಎಲೆಗಳಿಗಿದೆ. ಕಡಿಮೆ ಶ್ರಮದಲ್ಲಿ ತೋಟದ ಸತ್ವವನ್ನು ಉಳಿಸಿಕೊಳ್ಳಲು ಪ್ರತಿವರ್ಷವೂ ತೋಟಕ್ಕೆ ದರಕು ಹಾಕಿಸುವುದು ಉಪಯುಕ್ತ ಕ್ರಮ ಎನ್ನುತ್ತಾರೆ ಮಲೆನಾಡಿನಲ್ಲಿ ಹಿರಿಯರು.

ಚಳಿಗಾಲದಲ್ಲಿ ಎಲ್ಲ ಎಲೆಗಳನ್ನೂ ಉದುರಿಸುವುದು ಮಲೆನಾಡಿನ ಸೊಪ್ಪಿನಬೆಟ್ಟದ ಬಹುತೇಕ ಮರಗಳ ಲಕ್ಷಣ. ನೆಲಕ್ಕೆ ಉದುರಿದ ಒಣಎಲೆಗಳನ್ನು ಸಂಗ್ರಹಿಸಿ ತಂದು ಅವನ್ನು ತೋಟಕ್ಕೆ ಮೇಲು ಹಾಸಾಗಿ ಹರಡುವುದು ಅಥವಾ ಗೊಬ್ಬರ ಗುಂಡಿಗೆ ಹಾಕಿ ಸೆಗಣಿ ದ್ರಾವಣದ ಮಿಶ್ರಣದೊಂದಿಗೆ ಉತ್ತಮ ಸಾವಯವ ಗೊಬ್ಬರ ತಯಾರಿಸುವುದು ಕೃಷಿಕರ ವಾರ್ಷಿಕ ಕಾರ್ಯವಾಗಿದೆ. ಸಾಮಾನ್ಯವಾಗಿ, ಮಾರ್ಚ್‌ನಿಂದ ಆರಂಭವಾಗಿ ಮಳೆಗಾಲದ ಆರಂಭದವರೆಗಿನ ಸುಮಾರು ಮೂರ್ನಾಲ್ಕು ತಿಂಗಳು ಮಲೆನಾಡಿನ ಕಾಡು ಬೆಟ್ಟಗಳಲ್ಲಿ ರೈತರು ತರಗೆಲೆ ಗುಡಿಸಿ ಸಂಗ್ರಹಿಸುವ ದೃಶ್ಯವನ್ನು ಕಾಣಬಹುದು. ತೋಟಕ್ಕೆ ರಾಸಾಯನಿಕ ಗೊಬ್ಬರ ಬಳಸುವ ರೈತರಿಗಿಂತ ತರಗಲೆಗಳಂತಹ ಸುಲಭದ ಕಚ್ಚಾವಸ್ತುಗಳನ್ನೇ ಹಾಕಿಸಿ ತೋಟದ ಸತ್ವ ಉಳಿಸಲು ಬಯಸುವವರೇ ಹೆಚ್ಚಿದ್ದಾರೆ. ಆ ಕಾರಣಕ್ಕೆ ದರಕು ಗುಡಿಸಿ ತರುವ ವಿವಿಧ ದೃಶ್ಯಗಳನ್ನು ಈ ಭಾಗದಲ್ಲಿ ಇಂದಿಗೂ ಕಾಣಬಹುದಾಗಿದೆ.

ಸೊಪ್ಪಿನ ಬೆಟ್ಟಗಳು

ಉತ್ತರಕನ್ನಡ ಜಿಲ್ಲೆಯಲ್ಲಿ ಅಡಿಕೆ ಒಂದು ಪ್ರಮುಖ ಬೆಳೆ. ಇಲ್ಲಿನ ಅಡಿಕೆ ಬೆಳೆಗಾರರ ಕೃಷಿ ಸಂಬಂಧಿ ಬಳಕೆಗಾಗಿ ಅಂದಿನ ಬ್ರಿಟಿಷ್ ಸರ್ಕಾರ ಈ ಭಾಗದ ಅಡಿಕೆ ರೈತರಿಗೆ ‘ಸೊಪ್ಪಿನ ಬೆಟ್ಟ’ಗಳೆಂಬ ಅರಣ್ಯದ ಹಕ್ಕನ್ನು ನೀಡಿದೆ. ಎಕರೆ ಅಡಿಕೆ ತೋಟಕ್ಕೆ ಸರಾಸರಿ ಆರೇಳು ಎಕರೆ ಸೊಪ್ಪಿನ ಬೆಟ್ಟದ ಹಕ್ಕು ನೀಡಿ, ಅದರಲ್ಲಿನ ಒಣ ಕಟ್ಟಿಗೆ, ಚಿಕ್ಕ ಕಟ್ಟಿಗೆ, ಹಸಿಸೊಪ್ಪು, ತರಗೆಲೆಗಳನ್ನು ಹಾಗೂ ಕಿರುಅರಣ್ಯ ಉತ್ಪನ್ನದಲ್ಲೂ ರೈತರಿಗೆ ಅರ್ಧ ಪಾಲು ಬಳಸಲು ಅವಕಾಶ ನೀಡಿದೆ. ಇದರ ಉಪಯೋಗವನ್ನು ರೈತರು ಈಗಲೂ ಪಡೆಯುತ್ತಿದ್ದು, ಸೊಪ್ಪಿನ ಬೆಟ್ಟದ ಕಾಳಜಿ ಪೂರ್ವಕ ನಿರ್ವಹಣೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಅದರ ಒಂದು ಭಾಗವೇ ಬೆಟ್ಟದ ತರಗೆಲೆಗಳನ್ನು ಪ್ರತಿವರ್ಷ ಗುಡಿಸುವುದು ಮತ್ತು ಸಂಗ್ರಹಿಸಿದ ದರಕಿನಿಂದ ಉತ್ತಮ ಸಾವಯವ ಗೊಬ್ಬರ ತಯಾರಿಸುವುದಾಗಿದೆ.

ಕತ್ತ-ಸೆಣಬು ದಾರದಿಂದ ಮಾಡಿದ ‘ಕಲ್ಲಿ’ ಎಂಬ ಬಲೆಯಾಕಾರದ ದರಕು ಸಂಗ್ರಾಹಕಗಳ ಬದಲು, ಈಗ ತರಗೆಲೆ ತುಂಬಿ ತರಲು ಅನುಕೂಲವಾಗುವಂತ ಪ್ಲಾಸ್ಟಿಕ್ ಬಟ್ಟೆಗಳು ಪೇಟೆಗೆ ಬಂದಿವೆ. ದರಕು ಗುಡಿಸಲು ಸರಳ ಯಂತ್ರಗಳು (ಪ್ರೆಶರ್ ಮೂಲಕ ಗಾಳಿ ಎಳೆದುಕೊಳ್ಳುವ, ಆ ಮೂಲಕ ನೆಲದಲ್ಲಿ ಹರಡಿದ್ದ ತರಗೆಲೆಗಳನ್ನು ಒಟ್ಟುಮಾಡುವ ಸರಳ ಯಂತ್ರ) ಬಂದಿವೆ. ಕೃಷಿ ಕೂಲಿಗಳನ್ನು ಬಳಸಿಕೊಂಡು ದರಕು ಒಟ್ಟು ಮಾಡಲು ಕಬ್ಬಿಣದ ಪುಟ್ಟ ಸಲಕರಣೆಗಳು ಈಗಾಗಲೇ ಬಳಕೆಯಲ್ಲಿವೆ. ಒಟ್ಟಿನಲ್ಲಿ, ಬೆಟ್ಟದ ದರಕು ಸಂಗ್ರಹಿಸಿ ತಂದು ತೋಟಕ್ಕೆ ಹಾಕಿಸುವ ಕೆಲಸ ಈಗ ಸರಳವೂ, ಸುಲಭವೂ ಆಗಿದ್ದು, ತೋಟಕ್ಕೆ ಅದರಿಂದ ಪ್ರಯೋಜನವು ಬೆಟ್ಟದಷ್ಟಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT