ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಯ ಬಂಧ ಮೀರಿದ ಉತ್ಸವ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಾಳೆಯಿಂದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ. ಉತ್ಸವದ  7ನೇ ದಿನ,  ಅಂದರೆ ಸೌರಮಾನ ದ್ವಾದಶಿ ಪುಷ್ಯ ನಕ್ಷತ್ರದ ದಿನ ಜರುಗುವ ಮಹಾ ರಥೋತ್ಸವದಂದು ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಮೆರವಣಿಗೆ ಉತ್ಸವದ ಕೇಂದ್ರಬಿಂದು. ಈ ಉತ್ಸವವನ್ನು ದಲಿತರೇ ಮುಂದೆ ನಿಂತು ನಡೆಸುವುದು ವಿಶೇಷ. ಅಂದು ರಾತ್ರಿಯಿಂದ ಬೆಳಗಿನವರೆಗೆ ಹರಿಜನರು ಚೆಲುವನಾರಾಯಣನ ಉತ್ಸವಮೂರ್ತಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಉತ್ಸಾಹದಿಂದ ಮೆರವಣಿಗೆ ನಡೆಸುತ್ತಾರೆ. ಮೈಸೂರಿನ ಅಶೋಕಪುರಂನಲ್ಲಿರುವ ಕಾಳಿಕಾಂಬ ಟ್ರಸ್ಟ್ ಈ ಆಚರಣೆಯ ನೇತೃತ್ವ ವಹಿಸುತ್ತದೆ.

ರಥೋತ್ಸವದ 10ನೇ ದಿನ ನಡೆಯುವ ಚೆಲುವನಾರಾಯಣಸ್ವಾಮಿಯ ತೀರ್ಥಸ್ನಾನ ಆಚರಣೆಯೂ ದಲಿತರ ಪೌರೋಹಿತ್ಯದಲ್ಲೇ ನಡೆಯುತ್ತದೆ. ಮೇಲುಕೋಟೆ ಸುತ್ತಮುತ್ತಲಿನ ಮತ್ತು ದೂರದ ಊರುಗಳ ಸಹಸ್ರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕುರಿ ಅಥವಾ ಮೇಕೆ ಕೊಯ್ದು ಬಾಡೂಟ ಸಹಿತ ಅನ್ನದಾನ ಮಾಡುವ ಹರಿಸೇವೆ, ಪಂಚ ಕಲ್ಯಾಣಿಯ ನಾಲ್ಕೂ ಮೂಲೆಗಳಲ್ಲಿ ನಡೆಯುವ ಪಂಚಾಮೃತ ಸಹಿತ ಮಡೆ ಸೇವೆ, ವಡಗಲೈ (ಇಂಗ್ಲಿಷ್‌ನ ‘ಯು’ ಆಕಾರ) ನಾಮ ಮತ್ತು ತೆಂಗಲೈ (ತ್ರಿಶೂಲ ಮಾದರಿ) ‘ನಾಮಧಾರಣಾ ಕೈಂಕರ್ಯ’ಗಳು ಕೂಡ ಇವರಿಂದಲೇ ನಡೆಯುತ್ತವೆ. ಮಕ್ಕಳಿಗೆ ನಾಮಕರಣ, ಗಂಗೆ ಪೂಜೆ, ಹರಕೆ ಹೊತ್ತವರ ಬಾಯಿ ಬೀಗದ ಸೇವೆಗಳನ್ನು ‘ದಲಿತ ದಾಸಯ್ಯ’ಗಳು ಮುಂದೆ ನಿಂತು ನಡೆಸಿಕೊಡುತ್ತಾರೆ. ಪಂಚ ಕಲ್ಯಾಣಿಯ ಬಳಿ, ದಲಿತರ ಪೌರೋಹಿತ್ಯದಲ್ಲಿ ಮದುವೆಗಳು ಕೂಡ ನಡೆಯುತ್ತವೆ. ಈ ಎಲ್ಲ ಕೈಂಕರ್ಯಗಳನ್ನು ನಡೆಸುವವರ ಕಾಲು ಮುಟ್ಟಿ ಜನರು ಭಕ್ತಿಯಿಂದ ನಮಸ್ಕರಿಸುತ್ತಾರೆ.

ಸಂಕ್ರಾಂತಿ ಹಬ್ಬದ ಮಾರನೆ ದಿನ ಮೇಲುಕೋಟೆಯಲ್ಲಿ ನಡೆಯುವ ‘ಅಂಗಮಣಿ ಉತ್ಸವ’ಕ್ಕೂ ಇವರದ್ದೇ ಮೇಲುಸ್ತುವಾರಿ.

ಈ ಉತ್ಸವಕ್ಕೆ ಕಾರಣ ಎನ್ನಲಾದ ಹಿನ್ನೆಲೆ ಆಸಕ್ತಿ ಹುಟ್ಟಿಸುತ್ತದೆ. ‘ಚೆಲುವನಾರಾಯಣಸ್ವಾಮಿ ಹೆಣ್ಣು ನೋಡಲು ಹೋಗುತ್ತಿದ್ದ ಸಂದರ್ಭದಲ್ಲಿ ಮೊಲವೊಂದು ಅಡ್ಡಲಾಯಿತಂತೆ. ಆದಿವಾಸಿಗಳು ಮಾರಕಾಸ್ತ್ರಗಳಿಂದ ಆ ಮೊಲವನ್ನು ಕೊಲ್ಲಲು ಮುಂದಾದಾಗ ಚೆಲುವನಾರಾಯಣಸ್ವಾಮಿ ಅವರನ್ನು ತಡೆದು ಶಂಖ, ಜಾಗಟೆ, ಬೋನಾಸಿಗಳನ್ನು ಅವರಿಗೆ ದಯಪಾಲಿಸಿ ತನ್ನ ಸನ್ನಿಧಾನದಲ್ಲಿ ಭಕ್ತಿ ಮಾರ್ಗದಲ್ಲಿ ಬಾಳುವಂತೆ ಆಶೀರ್ವದಿಸಿದರಂತೆ. ಅದನ್ನು ತಮ್ಮ ದಿವ್ಯದೃಷ್ಟಿಯಿಂದ ಕಂಡುಕೊಂಡ ರಾಮಾನುಜಾಚಾರ್ಯರು ದಲಿತರಿಗೆ ‘ದಾಸಯ್ಯನ ದೀಕ್ಷೆ’ ನೀಡಿದರು ಎಂಬ ನಂಬಿಕೆಯಿದೆ. ದೇವಾಲಯದ ಸ್ಥಾನೀಕರ ಬಳಿ ಪ್ರತಿ ವರ್ಷ ದಲಿತರಾದಿಯಾಗಿ ಇತರ ಜಾತಿಯ ಜನರು ದಾಸಯ್ಯನ ದೀಕ್ಷೆ ಪಡೆಯುವ ಪರಂಪರೆ ಈಗಲೂ ನಡೆಯುತ್ತಿದೆ’ ಎಂದು ಎಂಟು ವರ್ಷಗಳ ಹಿಂದೆ ದೀಕ್ಷೆ ಪಡೆದಿರುವ ಮೇಲುಕೋಟೆ ಸಮೀಪದ ಗೌಡಗೆರೆ ಗ್ರಾಮದ ಯುವಕ ಅಶೋಕ ಹೇಳುತ್ತಾರೆ. ರಥಸಪ್ತಮಿಯಂದು ಪ್ರತಿ ವರ್ಷ ದಾಸಯ್ಯನ ದೀಕ್ಷೆ ಪಡೆದ ನೂರಾರು ಮಂದಿ ಮೇಲುಕೋಟೆಯಲ್ಲಿ ಸೇರುತ್ತಾರೆ. ಹೀಗೆ ಬರುವವರು ಪುಷ್ಪಮಾಲೆ ಧರಿಸಿ ಬಾನ್ಕಿ (ಕಹಳೆ ಮಾದರಿಯ ವಾದ್ಯ), ಜಾಗಟೆ ಬಾರಿಸುತ್ತಾ ಬೋನಾಸಿ ಸಹಿತ ನೆರೆದ ಭಕ್ತರನ್ನು ಆಶೀರ್ವದಿಸುವುದು ವಾಡಿಕೆ.

(ಪಂಚ ಕಲ್ಯಾಣಿ ಬಳಿ ನಿತ್ಯವೂ ಬಾನ್ಕಿ ಊದುವ ದಾಸಯ್ಯ)

ನೀರು ಉಕ್ಕುವ ಸೋಜಿಗ

ರಥೋತ್ಸವದ 9ನೇ ದಿನ ಅಂದರೆ, ತೀರ್ಥಸ್ನಾನದ ಮುನ್ನಾ ದಿನ ಮೇಲುಕೋಟೆ ಸಮೀಪದ ನಾರಾಯಣಪುರ ಎಂಬ ಗ್ರಾಮದ ಬಳಿ ದಲಿತರ ಜಮೀನಿನಲ್ಲಿ ನೀರು ಉಕ್ಕುವ ಸೋಜಿಗ ನಡೆಯುತ್ತದೆ. ನೆಲ ಮಟ್ಟದಿಂದ ಒಂದು ಅಡಿ ಆಳದಲ್ಲಿ ನೀರು ಕೈಗೆ ಸಿಗುತ್ತದೆ. ‘ನಾರಾಯಣಪುರದ ಬಳಿ ಮೂರು ಅಡಿ ಅಗಲದ ಪುಟ್ಟ ಕುಂಡಿಕೆಯಲ್ಲಿ, ಬೇಸಿಗೆಯಲ್ಲಿ ನೀರು ಒಸರುವ ಕೌತುಕವನ್ನು ನೋಡಲು ನೂರಾರು ಮಂದಿ ಸೇರುತ್ತಾರೆ. ಅದನ್ನೇ ತೀರ್ಥವೆಂದು ಭಾವಿಸಿ ಜಾತಿ, ಮತ, ಪಂಗಡವೆನ್ನದೆ ಎಲ್ಲರೂ ಭಕ್ತಿಯಿಂದ ಸೇವಿಸುತ್ತಾರೆ’ ಎಂದು ಸ್ಥಾನೀಕಂ ಸಂತಾನರಾಮನ್‌ ಹೇಳುತ್ತಾರೆ.

ದಿಲ್ಲಿ ಉತ್ಸವ: ಇದು ಚೆಲುವನಾರಾಯಣನ ಉತ್ಸವ ಮೂರ್ತಿಯನ್ನು ರಾಮಾನುಜರು ಮೇಲುಕೋಟೆಗೆ ತಂದ ದಿನದ ನೆನಪಿಗಾಗಿ ನಡೆಯುವ ಉತ್ಸವ. ವೈರಮುಡಿ ಉತ್ಸವಕ್ಕೂ ಮುನ್ನ, ಮಾರ್ಚ್‌ ತಿಂಗಳಿನಲ್ಲಿ ಇದು ಜರುಗುತ್ತದೆ. ಚೆಲುವನಾರಾಯಣನ ಉತ್ಸವಮೂರ್ತಿ ದೆಹಲಿಯ ಸುಲ್ತಾನನ ಬಳಿ ಇದೆ ಎಂದು ತಿಳಿದ ರಾಮಾನುಜರು ಹರಿಜನರು ಮತ್ತು ಯತಿಗಳ ಜತೆ ಸುಲ್ತಾನನ ಬಳಿ ತೆರಳಿ ಮೂರ್ತಿಯನ್ನು ಕೊಡುವಂತೆ ಕೇಳಿದರು. ಸುಲ್ತಾನನ ಮಗಳು ಬೀಬಿ (ವರನಂದಿ)ಯ ಅಂತಃಪುರದಲ್ಲಿದ್ದ ರಾಮಪ್ರಿಯ ಮೂರ್ತಿಗೆ ಶಲ್ವ ಪಿಳ್ಳೈ ಎಂದು ಹೆಸರಿಟ್ಟು ಕರೆತಂದರು.

ಹೀಗೆ ಕರೆತರುವಾಗ ಬೀಬಿಯು ಮತ್ತೆ ಮೂರ್ತಿಯನ್ನು ಪಡೆಯಲು ಹಿಂಬಾಲಿಸಿ ಬಂದು ಇಲ್ಲೇ ಉಳಿದಳು. ಆಕೆಯು ಹೊರಗಿನವಳಾದ್ದರಿಂದ ಸ್ಥಳೀಯರು ಆಕೆಯನ್ನು ‘ಹೊರಗಿರಮ್ಮ’ ಎಂದು ಕರೆದರು. ಮೇಲುಕೋಟೆ ಸನಿಹದ ದೇವರಹಳ್ಳಿ, ನ್ಯಾಮನಹಳ್ಳಿ, ಕದಲಗೆರೆ ಮತ್ತು ಕಾಡೇನಹಳ್ಳಿ ಗ್ರಾಮಸ್ಥರು ಈಗಲೂ ಹೊರಗಿರಮ್ಮ (ಬೀಬಿ)ನ ಜಾತ್ರೆ ನಡೆಸುತ್ತಾರೆ. ಮೇಲುಕೋಟೆಯಲ್ಲಿ ಬೀಬಿಯು ಲಕ್ಷ್ಮೀ ಸ್ವರೂಪಳಾಗಿ ಚೆಲುವನಾರಾಯಣನಲ್ಲಿ ಐಕ್ಯಳಾದಳು ಎಂದು ಜನರು ನಂಬಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಚೆಲುವನಾರಾಯಣರಾಯಸ್ವಾಮಿಯ ಪಾದದಲ್ಲಿ ಆಕೆಯ ವಿಗ್ರಹ ಇದ್ದು, ‘ವರನಂದಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ದೇಗುಲದ ಅಭಿವೃದ್ಧಿ

ವಿಷ್ಣುವರ್ಧನನ ಮಂತ್ರಿಯಾಗಿದ್ದ ಸುರಿಗೆ ನಾಗಣ್ಣ ಎಂಬುವನು ರಾಮಾನುಜಾಚಾರ್ಯದ ಕೋರಿಕೆ ಮೇರೆಗೆ ಮೇಲುಕೋಟೆಯಲ್ಲಿ ಚೆಲುವನಾರಾಯಣನ ದೇಗುಲ ನಿರ್ಮಿಸಿ ದೇವರಿಗೆ ಕೆಲವು ಗ್ರಾಮಗಳನ್ನು ದತ್ತಿ ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಕ್ರಿ.ಶ.1128ರ ಬಿಟ್ಟಿದೇವನ ಶಾಸನದ ಪ್ರಕಾರ ಮೇಲುಕೋಟೆಯಲ್ಲಿ ವಿಷ್ಣುವರ್ಧನನ ಅರಮನೆಯೂ ಇತ್ತು. ವಿಜಯನಗರದ ಪ್ರೌಢ ದೇವರಾಯ ಈ ದೇಗುಲವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ.

ಮೈಸೂರಿನ ರಾಜ ಒಡೆಯರ್‌ ದೇವರಿಗೆ ರಾಜಮುಡಿ ಕಿರೀಟ ಮತ್ತು ಆಭರಣಗಳನ್ನು ಮಾಡಿಸಿಕೊಟ್ಟರು. ಟಿಪ್ಪು ಸುಲ್ತಾನ್‌ ಈ ದೇವಾಲಯಕ್ಕೆ ಆನೆಗಳು, ಬೆಳ್ಳಿ ಬಟ್ಟಲು, ನಗಾರಿ, ಉದ್ದರಣೆ ಮತ್ತು ಯೋಗಾನರಸಿಂಹಸ್ವಾಮಿ ದೇಗುಲಕ್ಕೆ ಬಂಗಾರದ ಬಟ್ಟಲನ್ನು ಕಾಣಿಕೆ ನೀಡಿದ್ದಾನೆ ಎಂದು ಇತಿಹಾಸ ಹೇಳುತ್ತದೆ.

(ಚೆಲುವನಾರಾಯಣಸ್ವಾಮಿಯ ಬ್ರಹ್ಮೋತ್ಸವದ ದೃಶ್ಯ)

**

ವೈರಮುಡಿ ಬ್ರಹ್ಮೋತ್ಸವ

ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಬ್ರಹ್ಮೋತ್ಸವ ಪ್ರಸಿದ್ಧಿ ಪಡೆದಿದೆ. ಚೆಲುವನಾರಾಯಣನಿಗೆ ಧರಿಸುವ ವೈರಮುಡಿ (ವಜ್ರಖಚಿತ ಕಿರೀಟ) ಈ ಮೊದಲು ಮೈಸೂರು ದೊರೆಗಳ ಸುಪರ್ದಿಯಲ್ಲಿತ್ತು. 1976ರ ನಂತರ ಮಂಡ್ಯದ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗುತ್ತದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದಲ್ಲಿ ವೈರಮುಡಿ ಉತ್ಸವ ನಡೆಯುತ್ತದೆ. ವೈರಮುಡಿ ಮತ್ತು ರಾಜಮುಡಿಗಳನ್ನು ರಾಜ ಮರ್ಯಾದೆಯಿಂದ ಮೇಲುಕೋಟೆಗೆ ತರಲಾಗುತ್ತದೆ. ಮಾರ್ಗಮಧ್ಯೆ ಹತ್ತಾರು ಗ್ರಾಮಗಳಲ್ಲಿ ಅದಕ್ಕೆ ಪೂಜೆ ನಡೆಯುತ್ತದೆ. ವೈರಮುಡಿ ಮತ್ತು ರಾಜಮುಡಿಗಳನ್ನು ಪಲ್ಲಕ್ಕಿಯಲ್ಲಿಟ್ಟು ರಾತ್ರಿಯಿಂದ ಮುಂಜಾನೆವರೆಗೆ ಮೇಲುಕೋಟೆಯ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಮೇಲುಕೋಟೆ ಬೆಂಗಳೂರಿನಿಂದ 140 ಕಿ.ಮೀ ಹಾಗೂ ಜಿಲ್ಲಾ ಕೇಂದ್ರ ಮಂಡ್ಯದಿಂದ 36 ಕಿ.ಮೀ. ದೂರದಲ್ಲಿದೆ. ಮೈಸೂರು, ಮಂಡ್ಯದಿಂದ ಸಾರಿಗೆ ಸಂಸ್ಥೆ ಬಸ್‌ ಹಾಗೂ ಖಾಸಗಿ ವಾಹನ ಸೌಲಭ್ಯ ಇದೆ. ಉಳಿದುಕೊಳ್ಳಲು ಇಲ್ಲಿ ಪ್ರವಾಸಿ ಮಂದಿರವೂ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT