ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಪ್ರೇಮಿ ಶಿಕ್ಷಕ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹಲವರಿಗೆ ಪಕ್ಷಿಗಳನ್ನು ತಂದು ಪಂಜರದಲ್ಲಿ ಇಟ್ಟು ಸಾಕುವುದು ಹವ್ಯಾಸ. ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಶಿಕ್ಷಕ ಮಹೇಶ ಪೂಜಾರಿ ಹಾಗಲ್ಲ. ಹಕ್ಕಿಗಳಿಗಾಗಿಯೇ ಕೃತಕ ಗೂಡುಗಳನ್ನು ನಿರ್ಮಿಸಿ ಅವುಗಳಿಗೆ ಆಸರೆ ನೀಡುತ್ತಿದ್ದಾರೆ. ಕೃಷಿ ಪ್ರೇಮಿಯೂ ಇವರಾಗಿದ್ದು ಇವರಿಗೆ ‘ಕೃಷಿಶಿಕ್ಷಕ’ ಎಂದೂ ಕರೆಯಬಹುದು.

ರಜಾ ದಿನಗಳನ್ನು ಮನೆಯ ಕೈತೋಟದ ಅಂದ ಮಾಡುವುದರ ಜೊತೆ ಪಕ್ಷಿಗಳ ಆರೈಕೆಗಾಗಿ ಮೀಸಲು. ಮನೆಯ ಅಂಗಳದಲ್ಲಿ ಬಾಳೆ, ತೆಂಗು, ಅಡಿಕೆ, ಏಲಕ್ಕಿ, ನಿಂಬೆ, ವೆನಿಲಾ ಬೆಳೆದಿರುವುದು ಮಾತ್ರವಲ್ಲದೇ, ಮೂರು ಮೀಟರ್‌ ಸುತ್ತಳತೆಯಲ್ಲಿ ದ್ರಾಕ್ಷಿ, ಮಾವು, ಪೇರಲೆ, ಕಿತ್ತಳೆ ಹಣ್ಣುಗಳನ್ನು ಬೆಳೆಸಿದ್ದಾರೆ. ಇನ್ನೊಂದೆಡೆ, 14 ಜಾತಿಯ ದಾಸವಾಳ, ಮೂರು ತಳಿಯ ಕಾಕಡ ಹೂವಿನ ಗಿಡ ಜೊತೆ ಮೆಂತ್ಯ, ಕೊತ್ತಂಬರಿ, ಬದನೆಕಾಯಿ, ಪಡವಲಕಾಯಿ, ಹಾಗಲಕಾಯಿ, ಕರಿಬೇವು ಸೇರಿದಂತೆ ವೈವಿಧ್ಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಈ ತೋಟದಲ್ಲಿ ಹಕ್ಕಿಗಳಿಗೆ ನೆಲೆಯಾಗುವ ಗೂಡುಗಳಿಗೆ ಆದ್ಯತೆ. ಬಾಲ್ಯದಲ್ಲಿಯೇ ಪಕ್ಷಿಗಳ ಬಗ್ಗೆ ತಿಳಿದುಕೊಂಡಿದ್ದ ಇವರು, ವಿದ್ಯುತ್‌ ಸ್ಪರ್ಶ ಅಥವಾ ಇನ್ನಾವುದೇ ಅಪಘಾತದಿಂದ ನೆಲದಲ್ಲಿ ಬಿದ್ದ ಅಪ್ರಜ್ಞಾವಸ್ಥೆಯ ಪಕ್ಷಿಗಳನ್ನು ಕಂಡರೆ ತಕ್ಷಣ ತಮ್ಮ ಬೈಕನ್ನು ನಿಲ್ಲಿಸಿ ಕುಡಿಯಲು ಇಟ್ಟಿದ್ದ ಬಾಟಲಿ ನೀರನ್ನು ಹಕ್ಕಿಗೆ ಸಿಂಪಡಿಸಿ ಅದನ್ನು ಬದುಕಿಸುವ ಯತ್ನ ಮಾಡುತ್ತಾರೆ. ಒಂದು ವೇಳೆ ಅದು ಸತ್ತು ಹೋದರೆ ಅದನ್ನು ರಸ್ತೆಯ ಪಕ್ಕದ ತಗ್ಗಿಗೆ ಹಾಕಿ ಮಣ್ಣು ಮುಚ್ಚಿ ಬರುತ್ತಾರೆ.  ಹೀಗೆ ಪಕ್ಷಿಗಳ ಬಗ್ಗೆ ತಿಳಿದುಕೊಂಡಿರುವ ಇವರು ಮನೆಯಲ್ಲಿಯೇ ಪುಟ್ಟ ಪಕ್ಷಿಧಾಮವೊಂದನ್ನು ಸೃಷ್ಟಿಸಿದ್ದಾರೆ.

ಆರಂಭದಲ್ಲಿ ನಾಲ್ಕು ಲವ್‌ಬರ್ಡ್‌ ಪಕ್ಷಿಗಳನ್ನು ಸಾಕಿದ್ದ ಇವರ ಮನೆಯಲ್ಲಿ ಸದ್ಯ 30ಕ್ಕೂ ಹೆಚ್ಚು ಪಕ್ಷಿಗಳಿವೆ. 20ಕ್ಕೂ ಹೆಚ್ಚು ಪಕ್ಷಿ ಮರಿಗಳನ್ನು ಇತರರಿಗೆ ಸಾಕಲು ಕೊಟ್ಟಿದ್ದಾರೆ. ಅಲ್ಲದೇ ಇವರ ಮನೆ ಅಂಗಳದಲ್ಲಿ ಸಿಂಪಗೆ, ಬುಲ್‌ಬುಲ್, ಸೂರಹಕ್ಕಿ, ಗೊಂಗ್‌ (ಇಂಡಿಯನ್‌ ಲ್ಯಾಬರ್‌), ಬಳುವ ಸೇರಿದಂತೆ ವಿವಿಧ ಹಕ್ಕಿಗಳು ಋತುಮಾನಕ್ಕೆ ತಕ್ಕಂತೆ ಗೂಡು ಕಟ್ಟುತ್ತವೆ.

‘ಮುದ್ದೇಬಿಹಾಳ ಸಮೀಪದ ಬಿದರಕುಂದಿಯಲ್ಲಿ ಪ್ರಾಥಮಿಕ ಶಾಲೆ ಕಲಿಯುತ್ತಿದ್ದಾಗ ಶಾಲಾ ರಜೆಯ ದಿನಗಳಲ್ಲಿ ಸುತ್ತಮುತ್ತಲಿನ ಬೆಟ್ಟ ಸುತ್ತಿ ಕಂಡ ಕಂಡ ಮರಗಳನ್ನು ಏರಿ ಅಲ್ಲಿನ ಪಕ್ಷಿಗಳ ಗೂಡುಗಳನ್ನು ಆಸಕ್ತಿಯಿಂದ ನೋಡುವುದಲ್ಲದೇ ಪಕ್ಷಿಗಳು ಬದುಕುವ ಶೈಲಿ ಬಗ್ಗೆ ತಿಳಿದುಕೊಂಡಿದ್ದೇನೆ. ಗಿಳಿ ಹಿಡಿಯಬೇಕೆಂದು ಮರ ಏರಿ ಕಾಗೆಯ ಗೂಡಿಗೆ ಕೈಹಾಕಿ ಮೊಟ್ಟೆಯನ್ನು ವೀಕ್ಷಿಸುತ್ತಿದ್ದಾಗ ಕಾಗೆ ಹಿಂಡು ಬೆನ್ನಟ್ಟಿದ ಘಟನೆಯು ನಡೆದಿದೆ’ ಎಂದು ಬಾಲ್ಯದಲ್ಲಿನ ಪಕ್ಷಿಪ್ರೇಮದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.

ಉರಗ ಪ್ರೇಮಿ ಈ ಶಿಕ್ಷಕ
ತಮ್ಮ ಕೈತೋಟದ ಪರಿಸರದಲ್ಲಿ ಆಗಾಗ್ಗೆ ಹಾವುಗಳು ಬರುತ್ತವೆ. ಅವುಗಳನ್ನು ಕೊಲ್ಲದೇ ಕೈಯಲ್ಲಿ ಹಿಡಿದು ಡಬ್ಬದಲ್ಲಿ ರಕ್ಷಿಸಿಟ್ಟು ನಂತರ ಊರ ಹೊರಗಿನ ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ಉರಗ ಪ್ರೇಮಿ ಎನಿಸಿಕೊಂಡಿದ್ದಾರೆ. ಅಲ್ಲದೇ ಇದುವರೆಗೂ ಪಟ್ಟಣದ ಇತರರ ಮನೆಯಲ್ಲಿ ಕಾಣಿಸಿಕೊಂಡಿದ್ದ 60ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಊರ ಹೊರಗೆ ಬಿಟ್ಟು ಬಂದಿರುವ ಇವರು, ವಿಷಪೂರಿತವಲ್ಲದ ಹಾವುಗಳನ್ನು ಮಾತ್ರ ಹಿಡಿಯುತ್ತೇನೆ ಎನ್ನುತ್ತಾರೆ. ಆಧುನಿಕ ಜಂಜಾಟದಲ್ಲಿ ಬಿಡುವೇ ಸಿಗುತ್ತಿಲ್ಲ ಎಂದು ಮನೆ ಕೆಲಸ ಸೇರಿದಂತೆ ಸುತ್ತಮುತ್ತಲಿನ ಪರಿಸರ ಮರೆಯುತ್ತಿರುವವರಿಗೆ ಈ ಶಿಕ್ಷಕರು ಮಾದರಿಯಾಗಿದ್ದಾರೆ.

ಹಾಗೆಯೇ, ತಮ್ಮ ಕೈತೋಟಕ್ಕೆ ಕೇವಲ ಸಾವಯವ ಗೊಬ್ಬರ ಬಳಸುವ ಇವರು ಉತ್ತಮ ಫಸಲನ್ನು ತೆಗೆಯುತ್ತಿದ್ದಾರೆ. ಮನೆಯಲ್ಲಿನ ಕೊಳೆತ ಟೊಮೆಟೊ, ವಿವಿಧ ತರಕಾರಿ ಹಾಗೂ ನೆಲಕ್ಕುದುರಿದ ಮರದ ಹಸೆ ಎಲೆಗಳನ್ನು ದಪ್ಪನೆಯ ಪ್ಲಾಸ್ಟಿಕ್ ಪೈಪ್‌ಗೆ ಹಾಕುತ್ತಾರೆ. ಅದು ತುಂಬಿದ ನಂತರ ಅದರ ಬಾಯಿಯನ್ನು ಪ್ಲಾಸ್ಟಿಕ್ ಹಾಳೆಯಿಂದ ಕೆಲ ದಿನಗಳವರೆಗೆ ಭದ್ರಪಡಿಸುತ್ತಾರೆ. ಕೊಳೆತು ಗೊಬ್ಬರವಾದ ನಂತರ ಮನೆಯಲ್ಲಿನ ಗಿಡ ಹಾಗೂ ಕೈತೋಟಕ್ಕೆ ಗೊಬ್ಬರವಾಗಿ ಬಳಕೆ ಮಾಡುತ್ತಿದ್ದಾರೆ. ಮಾಹಿತಿಗೆ: ಮಹೇಶ ಪೂಜಾರಿ–9880851581.

**

ಕೃತಕ ಗೂಡು

ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಸಂತತಿ ಹೆಚ್ಚಿಸುವ ಪಣ ತೊಟ್ಟಂತಿರುವ ಇವರು, ತಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಾಣ ಮಾಡಿದ್ದಾರೆ. ಗುಬ್ಬಚ್ಚಿಗಳು ಕೃತಕ ಗೂಡಿನಲ್ಲಿ ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತಿವೆ.

ಇವರ ಕೈತೋಟದ ಗಿಡಗಳಲ್ಲಿ ಹತ್ತಾರು ಜೇನುಗೂಡುಗಳಿವೆ. ಈ ಗೂಡುಗಳಿಂದ ಪ್ರತಿವರ್ಷ ಸುಮಾರು ಒಂದು ಕೆ.ಜಿಯಷ್ಟು ಜೇನುತುಪ್ಪ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT