ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲದ ಅಂತರ್ಗತ ರಾಜಕೀಯ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಾಜ್ಯ ಅಂತರ್ಜಲ ನಿರ್ದೇಶನಾಲಯದ ವರದಿ ಪ್ರಕಾರ, ಎಲ್ಲಾ ತಾಲ್ಲೂಕುಗಳಲ್ಲಿ ಅಂತರ್ಜಲವನ್ನು ಮಿತಿ ಮೀರಿ ಬಳಕೆ ಮಾಡಲಾಗಿದೆ. ಅಂತರ್ಜಲದ ಮಟ್ಟ ಪಾತಾಳಕ್ಕೆ ಇಳಿಯುತ್ತಿದ್ದು, ಮುಂಬರುವ ದಿನಗಳಲ್ಲಿ ಭೀಕರ ಜಲಕ್ಷಾಮದ ಮುನ್ಸೂಚನೆ ನೀಡಿದೆ.

ದಶಕದ ಹಿಂದೆ ಬಯಲುಸೀಮೆಯಲ್ಲಿ 600ರಿಂದ 800 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಇಂದು ಅದು 1400ರಿಂದ 1800 ಅಡಿಗೆ ಕುಸಿದಿದೆ. ಹೆಚ್ಚು ಮಳೆ ಬೀಳುವ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ 400 ಅಡಿಯಿಂದ 600 ಅಡಿಗೆ ಕುಸಿದಿದೆ. ಈ ಅಪಾಯಕಾರಿ ಬೆಳವಣಿಗೆ ದಿಢೀರನೆ ಆಗಿಲ್ಲ. ಇದಕ್ಕೆ ಹಲವು ಬಗೆಯ ಕಾರಣ ಇದ್ದರೂ ಪ್ರಮುಖ ಕಾರಣ ರಾಜಕೀಯ ಹಿತಾಸಕ್ತಿ ಎಂಬುದನ್ನು ನಾವು ಗಮನಿಸಬೇಕು.

ಮತ ಗಳಿಸುವ ಹುನ್ನಾರ, ಅದಕ್ಕಾಗಿ ರಾಜಕೀಯ ಪಕ್ಷಗಳು ಪಾಲಿಸಿಕೊಂಡು ಬಂದಿರುವ ನೀತಿಯಿಂದಾಗಿ ನಮ್ಮ ಜಲ ಸಂಪನ್ಮೂಲಗಳನ್ನು ಬಲಿ ಕೊಡುವ ಪರಿಪಾಠ ಬೆಳೆದು ಬಂದಿದೆ. ಪುಕ್ಕಟೆ ವಿದ್ಯುತ್ ಸಂಪರ್ಕ ನೀಡಿ, ರೈತರು ಎಷ್ಟು ಬೇಕಾದರೂ ಕೊಳವೆ ಬಾವಿ ತೋಡಲು ಅನುಕೂಲ ಕಲ್ಪಿಸುವ ಕೆಲಸವನ್ನು ನಮ್ಮ ರಾಜಕೀಯ ನೇತಾರರು ಬಹಳ ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ.

ರೈತರಿಗೆ ಅನುಕೂಲ ಮಾಡುವ ಉದ್ದೇಶ ಒಳ್ಳೆಯದೇ. ಆದರೆ ಈಗ ಅದರ ದುರುಪಯೋಗ ಆಗುತ್ತಿರುವುದನ್ನು ತಿಳಿದೂ ಜಾಣ ಕುರುಡು ತೋರಿಸುತ್ತಿರುವ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜ್ಯದ, ಅದರಲ್ಲೂ ಮುಖ್ಯವಾಗಿ ಮುಂಬರುವ ಪೀಳಿಗೆಯ ನೀರಿನ ಹಕ್ಕನ್ನು ಕಸಿದುಕೊಳ್ಳಲು ವ್ಯವಸ್ಥಿತವಾದ ಸಂಚನ್ನು ರೂಪಿಸಿದ ಹಾಗೆ ಕಾಣುತ್ತದೆ.

ಅಂತರ್ಜಲ ಪಾತಾಳಕ್ಕೆ ಇಳಿಯಲು ಮತ್ತೊಂದು ಪ್ರಮುಖ ಕಾರಣ, ರಾಜ್ಯದ ಅರಣ್ಯ ಪ್ರದೇಶದಲ್ಲಿನ ಹಸಿರು ಕವಚ ಕ್ರಮೇಣ ಮಾಯವಾಗಿ ಬರಡಾಗುತ್ತಿರುವುದು. ಜನಸಂಖ್ಯೆ ಹೆಚ್ಚಾಗುತ್ತಿದ್ದು ಅರಣ್ಯದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಇದರ ಜೊತೆಗೆ ರಾಜಕಾರಣಿಗಳು ಕಾಡನ್ನು ಇನ್ನಷ್ಟು ನಾಶ ಮಾಡುವ ಹಾಗೆ ಜನಸಾಮಾನ್ಯರನ್ನು ಪ್ರೇರೇಪಿಸಿ, ಅವರಿಗೆ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿದರೆ ಹಕ್ಕನ್ನು ನೀಡುವ ಆಶ್ವಾಸನೆಯ ಆಮಿಷ ಒಡ್ಡಿ, ಕಾಡಿನ ನಾಶಕ್ಕೆ ಬೆಂಬಲ ನೀಡುವ ಕೆಲಸ ದಶಕಗಳಿಂದ ನಡೆಯುತ್ತಿದೆ. ಜಲ ಮರುಪೂರಣಕ್ಕೆ ಅತಿ ಅವಶ್ಯವಾದ ಹಸಿರು ಕವಚವನ್ನು ನಾಶ ಮಾಡಿದಾಗ ಅಂತರ್ಜಲ ಕುಸಿಯುವುದು ಸಹಜ.

ಈಗ ಉಳಿದಿರುವ ಕಾಡನ್ನು ರಕ್ಷಿಸುವ ಬದಲು ಅದನ್ನು ನಾಶ ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ನೀಡುತ್ತಿದೆ. ಕಿರು ಜಲ ವಿದ್ಯುತ್ ಯೋಜನೆಗಳು, ಎತ್ತಿನಹೊಳೆ ಹಾಗೂ ಇತರ ಬೃಹತ್ ಯೋಜನೆಗಳನ್ನು ಜಾರಿ ಮಾಡುವ ಧಾವಂತದಲ್ಲಿ ಕಾಡನ್ನು ಬಲಿ ಕೊಡುವ ಬಗ್ಗೆ ಸರ್ಕಾರ ಮತ್ತು ರಾಜಕಾರಣಿಗಳು ಪಕ್ಷಭೇದ ಮರೆತು ಒಂದಾಗಿ ಹಸಿರಿನ ನಾಶವನ್ನು ಸಮರ್ಥಿಸುತ್ತಿರುವುದು ಸರ್ವೇ ಸಾಮಾನ್ಯ.

ಈಗ ಪುನಃ ಮಲೆನಾಡಿನ ಅಳಿದುಳಿದ ಕಾಡನ್ನು ರಕ್ಷಿಸಿ ಎಂದು ಕಸ್ತೂರಿ ರಂಗನ್ ವರದಿ ಹೇಳಿದರೆ, ಅದರ ವಿರುದ್ಧ ರಾಜ್ಯ ಸರ್ಕಾರದ ಮಂತ್ರಿಗಳು ಆಧಾರ ಇಲ್ಲದೆ ಸುಳ್ಳು ಆರೋಪ ಮಾಡಿ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆದು, ಕಸ್ತೂರಿ ರಂಗನ್ ವರದಿ ತಮಗೆ ಒಪ್ಪಿಗೆ ಇಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಯಾವುದೇ ಆಧಾರವಿಲ್ಲದೆ ತಮ್ಮ ರಾಜಕೀಯ ಸ್ವಾರ್ಥ ಮತ್ತು ಹಸಿರು ಕವಚವನ್ನು ನಾಶ ಮಾಡುವ ಗುತ್ತಿಗೆದಾರರ ಹಿತವನ್ನು ಕಾಪಾಡಿಕೊಳ್ಳಲು ಬೊಬ್ಬೆ ಹಾಕುತ್ತ ಜನರನ್ನು ಮರುಳುಗೊಳಿಸುತ್ತಿದ್ದಾರೆ.

ಜಲ ಮರುಪೂರಣವನ್ನು ರಾಜ್ಯದ ನದಿಗಳು ಸಫಲವಾಗಿ ಮಾಡುತ್ತಿದ್ದ ಕಾಲ ಬದಲಾಗಿದೆ. ಮರಳು ಗಣಿಗಾರಿಕೆ ಹಾಗೂ ಮಿತಿಮೀರಿದ ಮರಳು ತೆಗೆಯುವ ಕೆಲಸದಿಂದಾಗಿ ಇಂದು ನದಿಗಳು, ನದಿ ಪಾತ್ರಗಳು ಬರಿದಾಗಿವೆ. ಜೀವ ಕಳೆದುಕೊಂಡ ನದಿಗಳಿಂದ ಜಲ ಮರುಪೂರಣ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳ ಮುಖಂಡರು ತಮ್ಮದೇ ಆದ ಬೆಂಬಲಿಗರ ಗುಂಪನ್ನು ಕಟ್ಟಿ, ಮರಳು ಮಾಫಿಯಾಕ್ಕೆ ಬೆನ್ನೆಲುಬಾಗಿ ನಿಂತು ಹಗಲು ದರೋಡೆ ಮಾಡಲು ಅನುವು ಮಾಡಿಕೊಡುತ್ತಿರುವಾಗ ನದಿ ಪಾತ್ರಗಳನ್ನು ಹೇಗೆ ಸಂರಕ್ಷಿಸಲು ಸಾಧ್ಯ?

ಇನ್ನು ರಾಜ್ಯದಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಬೃಹತ್ ಪ್ರಮಾಣದಲ್ಲಿ ಆರ್ಥಿಕ ಬೆಳೆಗಳಾದ ಅಡಿಕೆ, ಬಾಳೆ, ದಾಳಿಂಬೆ ಮತ್ತು ದ್ರಾಕ್ಷಿ  ಬೆಳೆಯುವಂತೆ ಅನುದಾನ ನೀಡಿ, ರೈತರು ವಾಣಿಜ್ಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಯಿತು. ಈ ಬೆಳೆಗಳನ್ನು ಬೆಳೆಯಲು ನೀರಾವರಿ ಅನಿವಾರ್ಯ.

ನೀರನ್ನು ಪಡೆಯಲು ರೈತರು ಕೊಳವೆ ಬಾವಿ ತೋಡಿ ಅಂತರ್ಜಲಕ್ಕೇ ಲಗ್ಗೆ ಇಟ್ಟರು. ಪುಕ್ಕಟೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸರ್ಕಾರದ ನೀತಿಯಿಂದಾಗಿ ರೈತರು ತಮ್ಮ ಹೊಲದಲ್ಲಿ ತೆರೆದ ಬಾವಿಯ ಬದಲು ಕೊಳವೆ ಬಾವಿಗೆ ಆದ್ಯತೆ ನೀಡಿ, ನೀರಾವರಿ ಎಂದರೆ ಕೇವಲ ಭೂಮಿಯ ಒಳಗಿನ ಅಂತರ್ಜಲವನ್ನು ತೆಗೆಯುವುದು ಎಂದು ನಂಬಿದ್ದಾರೆ.

ಯಾವ ಬೆಳೆಗೆ ಎಷ್ಟು ನೀರು ಅಗತ್ಯವಿದೆ ಎಂದು ಅರಿಯದೆ, ಕೇವಲ ನೀರನ್ನು ಹೆಚ್ಚು ಹಾಕಿದರೆ ಸಾಕು ಒಳ್ಳೆಯ ಬೆಳೆ ಬರುತ್ತದೆ ಎಂಬ ಹುಸಿ ನಂಬಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ಹಬ್ಬಿರುವ ಅಡಿಕೆ ಬೆಳೆ.

ಒಂದು ಅಡಿಕೆ ಮರಕ್ಕೆ ಒಂದು ದಿನಕ್ಕೆ 18 ಲೀಟರ್ ನೀರು ಸಾಕು. ಆದರೆ ವಿದ್ಯುತ್‌ ಇದ್ದಷ್ಟು ಹೊತ್ತೂ ನೀರನ್ನು ಹಾಯಿಸುವ ಅಡಿಕೆ ಬೆಳೆಗಾರರು 180 ಲೀಟರ್‌ನಷ್ಟು ನೀರನ್ನು ನೀಡುತ್ತಿದ್ದಾರೆ. ಹೀಗೆ ಕಬ್ಬಿಗೆ ಹಾಗೂ ನೀರಾವರಿ ಸೌಲಭ್ಯ ಹೊಂದಿರುವ ಭತ್ತ ಬೆಳೆಯುವ ಪ್ರದೇಶದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ದೇಶದಲ್ಲಿ ರಾಜಸ್ತಾನದ ನಂತರ ಹೆಚ್ಚಿನ ಒಣ ಭೂಮಿ ಇರುವುದು ನಮ್ಮ ರಾಜ್ಯದಲ್ಲಿ. ಈ ಸತ್ಯವನ್ನು ಅರಿತು ನಾವು ಕಡಿಮೆ ನೀರು ಹಾಕಿ ಬೆಳೆಯುವ ಬೆಳೆಗಳನ್ನು ಪ್ರೋತ್ಸಾಹಿಸಬೇಕಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಹೆಚ್ಚಿಗೆ ನೀರನ್ನು ಬೇಡುವ ಬೆಳೆಗಳಿಗೆ ಆದ್ಯತೆ ನೀಡಿ ಒಣ ಭೂಮಿಯನ್ನು ಇನ್ನೂ ಬರಡಾಗಿಸಲು ಹೊರಟಿರುವುದು ದೊಡ್ಡ ದುರಂತ.

ಇದರಿಂದ ಜಲ ಸಂಪನ್ಮೂಲಗಳ ದುರ್ಬಳಕೆ ಹಾಗೂ ಪ್ರಕೃತಿಯ ಸೃಜನಶೀಲ ಪ್ರಕ್ರಿಯೆಯನ್ನು ನಾಶಪಡಿಸಿದಂತೆ. ನಮ್ಮ ಕ್ಷಣಿಕ ಆಸೆಯನ್ನು ಪೂರೈಸಲು ಜೀವಜಲವನ್ನೇ ನಾಶ ಮಾಡಲು ಹೊರಟಿರುವ ಭಸ್ಮಾಸುರರಾಗಿದ್ದೇವೆ.

ಇಂತಹ ಪರಿಸ್ಥಿತಿಯಲ್ಲಿ ನೀರನ್ನು ಕಡಿಮೆ ಬಳಸಬೇಕು ಎನ್ನುವ ಮಾತು ಕೇವಲ ಒಂದು ಘೋಷಣೆಯಾಗಿ ಉಳಿಯುತ್ತದೆ. ಹಾಗೆಯೇ ಮಳೆ ನೀರನ್ನು ಇಂಗಿಸುವ ಕೆಲಸ ಮಾಡುವುದು ಅತಿ ಅವಶ್ಯ. ಮಿತಿಮೀರಿದ ಅಂತರ್ಜಲ ಬಳಕೆ, ಬರಗಾಲದಿಂದ ಮರುಪೂರಣ ಆಗದೇ ಇರುವ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ಜಲಕ್ಷಾಮಕ್ಕೆ ಆಮಂತ್ರಣ ನೀಡಿದಂತೆ.

ಈ ಸತ್ಯಸಂಗತಿಯನ್ನು ಆದಷ್ಟು ಬೇಗನೇ ಅರಿತು, ಸರ್ಕಾರ ಹಾಗೂ ಜನ ಎಚ್ಚೆತ್ತುಕೊಂಡು ಜಲ ಸಂಪತ್ತನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ರಾಜ್ಯವು ಗಂಭೀರ ಸ್ವರೂಪದ ಜಲಕ್ಷಾಮ ಎದುರಿಸುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT