ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಚಾಲನೆಗೆ ಬೇಕು ನಿರಂತರ ನಿಗಾ ವ್ಯವಸ್ಥೆ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್‌ಗಳ ವ್ಯಾಪ್ತಿಯಲ್ಲಿ ಬಾರ್‌ಗಳು ಮತ್ತು ಮದ್ಯದ ಅಂಗಡಿಗಳು ಇರಬಾರದು ಎಂಬ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಬದಲಾಯಿಸಿದೆ. ಹೊಸ ಆದೇಶದಂತೆ ಹೆದ್ದಾರಿಯಿಂದ 220 ಮೀಟರ್‌ಗಳ ವ್ಯಾಪ್ತಿಯಲ್ಲಿ ಮದ್ಯ ಪೂರೈಸುವ ವ್ಯವಸ್ಥೆ ಇರುವಂತಿಲ್ಲ.

ಹೆದ್ದಾರಿಯ ಬದಿಯಲ್ಲಿ ಮದ್ಯ ಪೂರೈಸುವ ವ್ಯವಸ್ಥೆ ಇದ್ದರೆ ಅದು ವಾಹನ ಅವಘಡಗಳಿಗೆ ಕಾರಣವಾಗುತ್ತದೆ ಎಂಬುದು ಸುಪ್ರೀಂ ಕೋರ್ಟ್‌ನ ತರ್ಕ. ಆದರೆ ಇದು ಸಮಸ್ಯೆಯನ್ನು ಸಮಗ್ರವಾಗಿ ಗ್ರಹಿಸದ ಅಪಕ್ವ ತರ್ಕ ಎಂದು ಹೇಳಲೇಬೇಕಾಗಿದೆ.

ಭಾರತದಲ್ಲಿ ಸಂಭವಿಸುವ ವಾಹನ ಅಪಘಾತಗಳಿಗೂ ಮದ್ಯ ಸೇವಿಸಿ ವಾಹನ ಚಲಾಯಿಸುವುದಕ್ಕೂ ಇರುವ ಹತ್ತಿರದ ಸಂಬಂಧವನ್ನು ಕಳೆದ ಐದು ವರ್ಷಗಳಲ್ಲಿ ಹೊರಬಿದ್ದಿರುವ ಅನೇಕ ಅಧ್ಯಯನಗಳು ಮತ್ತೆ ಮತ್ತೆ ಸಾಬೀತು ಮಾಡಿವೆ. 2010ರಲ್ಲಿ ಬಿಡುಗಡೆಯಾದ ಅಂಕಿ ಅಂಶಗಳು ಹೇಳುತ್ತಿರುವಂತೆ ವಾಹನ ಅಪಘಾತಗಳಲ್ಲಿ ಶೇಕಡ 70ರಷ್ಟು ಮದ್ಯ ಸೇವನೆಯೊಂದಿಗೆ ಸಂಬಂಧ ಹೊಂದಿವೆ.

2015ರ ಅಂಕಿ ಅಂಶಗಳು ಮದ್ಯ ಸೇವನೆಯಿಂದ ಸಂಭವಿಸುವ ವಾಹನ ಅಪಘಾತಗಳ ಪ್ರಮಾಣ ಶೇಕಡ 40 ಎಂದು ಹೇಳುತ್ತವೆ. ಈ ಅಂಕಿ-ಅಂಶಗಳು ಹೇಳದೇ ಇರುವ ಸಂಗತಿಯೊಂದಿದೆ. ಅದು ಹೆದ್ದಾರಿಯ ಬದಿಯಲ್ಲಿರುವ ಬಾರ್‌ಗಳಿಗೂ ಅಪಘಾತಕ್ಕೂ ಇರುವ ಸಂಬಂಧ. ಅಪಘಾತಕ್ಕೆ ಕಾರಣರಾದ ಚಾಲಕರಲ್ಲಿ ಎಷ್ಟು ಮಂದಿ ಹೆದ್ದಾರಿ ಬದಿಯ ಬಾರ್‌ಗಳಲ್ಲಿ ಮದ್ಯ ಸೇವಿಸಿದ್ದರು ಎಂಬುದನ್ನು ತಿಳಿಸುವ ಯಾವ ಅಂಕಿ-ಅಂಶವೂ ಈ ತನಕ ಹೊರಬಿದ್ದಿಲ್ಲ.

ಮದ್ಯ ಸೇವನೆಯಿಂದ ಸಂಭವಿಸುವ ಅಪಘಾತಗಳ ಹೆಚ್ಚಳದ ಹಿಂದೆ ಇರುವ ಮುಖ್ಯ ಕಾರಣ ಕಾನೂನು ಪಾಲನೆಯನ್ನು ಖಾತರಿಪಡಿಸಿಕೊಳ್ಳುವ ವ್ಯವಸ್ಥೆ ಸೋಲು. ಸುಪ್ರೀಂ ಕೋರ್ಟ್‌ನ ತೀರ್ಪು ರೋಗದ ಕಾರಣವನ್ನು ಗುರುತಿಸಿ ಔಷಧ ನೀಡುವ ಬದಲಿಗೆ ರೋಗ ಲಕ್ಷಣಕ್ಕೆ ಔಷಧ ನೀಡುವ ಸುಲಭ ಮಾರ್ಗವನ್ನು ಅನುಸರಿಸಿದೆ.

ಈ ಬಗೆಯ ಅಪಕ್ವ ವಿಶ್ಲೇಷಣೆಗಳ ಫಲವಾಗಿ ಹೊರಬೀಳುವ ತೀರ್ಪುಗಳು ಹೊಸ ಬಗೆಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಮದ್ಯ ಸೇವಿಸಿ ವಾಹನ ಚಲಾಯಿಸುವ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ. ಇದನ್ನು ನಿಯಂತ್ರಿಸುವುದಕ್ಕೆ ಯಾವ ದೇಶವೂ ಹೆದ್ದಾರಿಯ ಬದಿಯಲ್ಲಿ ಬಾರ್‌ಗಳಿರಬಾರದು ಎಂಬ ತೀರ್ಮಾನಕ್ಕೆ ಬಂದಿಲ್ಲ. ಬದಲಿಗೆ ಸುರಕ್ಷ ಚಾಲನೆಯನ್ನು ಖಾತರಿಪಡಿಸಿಕೊಳ್ಳುವ ವ್ಯವಸ್ಥೆಯನ್ನು ಹೆಚ್ಚು ಬಲಗೊಳಿಸಿದೆ. ಹೆದ್ದಾರಿ ಚಾಲನೆಯ ಮೇಲೆ ನಿಗಾ ಇಡುವ ಕಾರ್ಯಪಡೆಗಳನ್ನು ರೂಪಿಸಿವೆ.

ಸುಪ್ರೀಂ ಕೋರ್ಟ್‌ನ ತೀರ್ಪು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದರೂ ಅಧಿಕೃತ ಬಾರ್‌ಗಳು ಇಲ್ಲವಾಗಿ ಆ ಸ್ಥಳಗಳಲ್ಲಿ ಅನಧಿಕೃತ ಬಾರ್‌ಗಳು ಹೆಚ್ಚಬಹುದಷ್ಟೇ. ಸಂಪೂರ್ಣ ಪಾನ ನಿಷೇಧವನ್ನು ಜಾರಿಗೆ ತಂದಿರುವ ರಾಜ್ಯಗಳಲ್ಲಿ ಅಕ್ರಮ ಮದ್ಯದ ದಂಧೆ ಸುಸೂತ್ರವಾಗಿ ನಡೆಯುತ್ತಿರುವಂತೆ ಹೆದ್ದಾರಿಯ ಬದಿಯಲ್ಲೂ ಅನಿಯಂತ್ರಿತ ಮತ್ತು ಅನಧಿಕೃತ ಮದ್ಯದ ಅಡ್ಡೆಗಳು ಹೆಚ್ಚುತ್ತವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಅಲ್ಲದೇ ಆತಿಥ್ಯೋದ್ಯಮದ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ.

ಪಾನ ನಿಷೇಧ, ಹೆದ್ದಾರಿಯ ಬದಿಯಲ್ಲಿ ಬಾರ್ ನಿಷೇಧದಂಥ ಅಪಕ್ವ ಹಾಗೂ ಅತಾರ್ಕಿಕ ನಿರ್ಧಾರಗಳ ಬದಲಿಗೆ ಹೆಚ್ಚು ಯೋಜಿತವಾದ ಕ್ರಮಗಳ ಬಗ್ಗೆ ನಾವು ಯೋಚಿಸಬೇಕಾಗಿದೆ. ಹೆದ್ದಾರಿಯೂ ಸೇರಿದಂತೆ ಎಲ್ಲೆಡೆ ನಡೆಯುವ ರಸ್ತೆ ಅವಘಡಗಳ ಕಾರಣವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಬಹುಮುಖ್ಯವಾಗಿ ಕಂಡುಬರುವ ಅಂಶವೆಂದರೆ ಬೇಜವಾಬ್ದಾರಿ ವಾಹನ ಚಾಲನೆ.

ಇದನ್ನು ನಿವಾರಿಸುವುದಕ್ಕೆ ವಾಹನ ಚಾಲನಾ ಪರವಾನಗಿ ನೀಡುವ ಕ್ರಿಯೆಯನ್ನು ಹೆಚ್ಚು ಶಿಸ್ತಿಗೆ ಒಳಪಡಿಸಬೇಕು. ಜೊತೆಗೆ ಚಾಲನೆಯ ಮೇಲೆ ನಿರಂತರ ನಿಗಾ ಇರಿಸುವ ತಂತ್ರಗಳನ್ನು ರೂಪಿಸಬೇಕು. ಇದರ ಜೊತೆಗೆ ಮದ್ಯ ಸೇವಿಸಿ ವಾಹನ ಚಲಾಯಿಸುವುದರ ವಿರುದ್ಧ ಜಾಗೃತಿ ಮೂಡಿಸುವ ಪ್ರಕ್ರಿಯೆಯನ್ನು ಹೆಚ್ಚು ತೀವ್ರಗೊಳಿಸಬೇಕು. ಇದು ಕೇವಲ ಮಾಹಿತಿಯನ್ನು ಹಂಚುವ ಕ್ರಿಯೆಯಷ್ಟೇ ಆಗಿ ಉಳಿಯಬೇಕಾಗಿಲ್ಲ.

ದಿಢೀರ್ ತಪಾಸಣೆಯಂಥ ಕ್ರಮಗಳೂ ಇದರ ಭಾಗವಾಗಬೇಕು. ಇದು ಕೇವಲ ಒಂದು ಸಪ್ತಾಹಕ್ಕೋ ತಿಂಗಳಿಗೋ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಪಾನಮತ್ತರಾಗಿ ವಾಹನ ಚಲಾಯಿಸುವವರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ಸುರಕ್ಷಿತ ಚಾಲನೆಗೆ ಈ ಎಲ್ಲಾ ಕ್ರಮಗಳ ಜೊತೆಗೆ ಚಾಲಕರಿಗೆ ಅನುಕೂಲವಾಗಿ ಸಂಚಾರ ಸಂಕೇತಗಳು, ರಸ್ತೆಯ ಗುಣಮಟ್ಟ ಇತ್ಯಾದಿಗಳತ್ತಲೂ ಗಮನಹರಿಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT