ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ಸರ್ಕಾರಗಳು: ಆರೋಪ

Last Updated 4 ಏಪ್ರಿಲ್ 2017, 9:56 IST
ಅಕ್ಷರ ಗಾತ್ರ


ಬಾಗೇಪಲ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳಿಂದ ದೇಶದ ಜನರು ಅಪಾಯಕ್ಕೆ ಸಿಲುಕಿದ್ದಾರೆ. ಅಗತ್ಯ ವಸ್ತುಗಳ ಬೆಳೆಗಳು ಗಗನಕ್ಕೇರಿದ್ದರಿಂದ ದೇಶದ ಜನತೆ ಅಪಾಯಕ್ಕೆ ಸಿಲುಕಿದ್ದರೂ ಸರ್ಕಾರಗಳು ಕಿಂಚಿತ್ತು ಗಮನಹರಿಸಿಲ್ಲ ಎಂದು ಕೆಪಿಆರ್ ಎಸ್ ರಾಜ್ಯ ಉಪಾಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಡಾ.ಬಿ.ಆರ್.ಅಂಬೇಡ್ಕರ್ ಪುತ್ಥುಳಿ ಎದುರು ಕೆ ಪಿ ಆರ್ ಎಸ್ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಕುಡಿಯುವ ನೀರು ಅಭಾವವಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಡಿಯುವ ನೀರಿಗಾಗಿ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಸುಮಾರು ₹ 62 ಕೋಟಿ ತೆರಿಗೆಯನ್ನು ಚಿನ್ನದ ವ್ಯಾಪಾರಸ್ಥರಿಗೆ ಹಾಗೂ ಕಾರ್ಪೋರೇಟ್‌ ವಲಯದವರಿಗೆ ಅನುಕೂಲವಾಗುವ ರೀತಿಯಲ್ಲಿ ವಿನಾಯಿತಿ ನೀಡಿದ್ದಾರೆ. ಈ ಹಣವನ್ನು ದೇಶದ ಪ್ರತಿಯೊಂದು ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಒದಗಿಸದೆ ದೇಶದ ಶ್ರೀಮಂತರಿಗೆ ಅನುಕೂಲವಾಗುವ ರೀತಿಯಲ್ಲಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸತತವಾಗಿ ನಾಲ್ಕು ವರ್ಷಗಳಿಂದ ಬರಗಾಲ ಸಂಭವಿಸಿದ್ದರೂ ಸಾಲಮನ್ನಾ ಮಾಡಲಿಕ್ಕೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ನಡೆದಿದೆ. ಇದಕ್ಕೆ ಸರ್ಕಾರ ಕಾನೂನಿನ ಪ್ರಕಾರ ಕ್ರಮ ಜರುಗಿಸಿದರೆ ಸುಮಾರು ₹ 800 ಕೋಟಿ ಆದಾಯ ಬರಲಿದೆ ಎಂದು ತಿಳಿಸಿದರು.

ಶಾಶ್ವತ ನೀರಾವರಿ ಬಗ್ಗೆ ರಾಜಕೀಯ ನಾಯಕರುಗಳಲ್ಲಿ ಇಚ್ಛಾಶಕ್ತಿಯಿಲ್ಲ, ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ  ದೇವೇಗೌಡ, ಸಂಸದ ವೀರಪ್ಪಮೊಯಿಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಕ್ಕೆ ತಕ್ಕಂತೆ ಮಾತನಾಡುವ ಶೈಲಿ ಬೆಳೆಸಿಕೊಂಡಿದ್ದಾರೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಬರಬೇಕಾದರೆ ಪ್ರತಿಯೊಬ್ಬರು ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಸುಮಾರು 150 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಿದ್ದರು ಅಧಿವೇಶನದಲ್ಲಿ ಚರ್ಚಿಸಲು ಕೇವಲ 14 ಶಾಸಕರು ಹಾಜರಾಗಿದ್ದರು. ಬರ ತಾಲ್ಲೂಕುಗಳಿಂದ ಆಯ್ಕೆಯಾಗಿದ್ದ ಜನಪ್ರತಿನಿಧಿಗಳು ಹಾಜರಾಗದೆ ಇರುವುದು ದುರದೃಷ್ಟಕರ ಎಂದರು.

ಕೆ ಪಿ ಆರ್ ಎಸ್ ತಾಲ್ಲೂಕು ಕಾರ್ಯದರ್ಶಿ ಜೆಸಿಬಿ ಪಿ.ಮಂಜುನಾಥರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರಿಗೆ ನಿವೇಶನ, ವಸತಿ, ಶಾಶ್ವತ ನೀರಾವರಿ ಸಮಸ್ಯೆ, ಮಾರುಕಟ್ಟೆ ಸುಧಾರಣೆ, ಸಾರಿಗೆ ಸೌಲಭ್ಯ, ಸಬ್ಸಿಡಿ ದರ, ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿತ, ಹೈನುಗಾರಿಕೆ, ರೇಷ್ಮೆ ಗೂಡಿಗೆ ನಿಗದಿತ ಬೆಲೆ, ಕೃಷಿ ರಂಗದಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸಮ್ಮೇಳನದಲ್ಲಿ ರೂಪರೇಶಗಳು ತಯಾರಿಸಿ ಸರ್ಕಾರದ ವಿರುದ್ಧ ಹೋರಾಡಲಿಕ್ಕೆ ಪ್ರಯತ್ನಿಸಲಾಗುವುದು ಎಂದರು.

ಆಂಧ್ರಪ್ರದೇಶ ಪ್ರಾಂತ ರೈತ ಸಂಘಂ ರಾಜ್ಯದ ಕಾರ್ಯದರ್ಶಿ ಓಬಳೇಶ್ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿಗೆ ಆದ್ಯತೆ ನೀಡಿ ಕೃಷಿ ರಂಗವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದವರು ಮೂರು ವರ್ಷ ಕಳೆದರೂ ಇದುವರೆವಿಗೂ ಅದರ ಪ್ರಸ್ತಾವನೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಆರ್ಎಸ್‌ನ ಜಿಲ್ಲಾ ಕಾರ್ಯದರ್ಶಿ ಚೆನ್ನರಾಯಪ್ಪ ಮಾತನಾಡಿ, ಬಡವರ, ಕಾರ್ಮಿಕರ, ರೈತರ, ವಿದ್ಯಾರ್ಥಿಗಳ, ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಪೊಲೀಸರು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಶೋಷಿತ ವರ್ಗದವರ ರಕ್ಷಣೆಗಾಗಿ ಸುಮಾರು 30 ವರ್ಷಗಳಿಂದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಈ ಭಾಗದಲ್ಲಿ ಹೋರಾಟ ಮಾಡಿ ರಕ್ಷಣೆ ತಂದು ಕೊಡುವುದರಲ್ಲಿ ಸಿಪಿಎಂ ಪಕ್ಷ ಪ್ರಮುಖವಾಗಿದೆ ಎಂದರು.

ತಾಲ್ಲೂಕಿನ ಕೆ ಪಿ ಆರ್ ಎಸ್ ಗೌರವಾಧ್ಯಕ್ಷ ಬಿ.ವಿ.ರಾಮರೆಡ್ಡಿ, ಖಜಾಂಚಿ ಎ.ಎನ್.ಶ್ರೀರಾಮಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಗೋಪಿನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಗೋವರ್ಧನಾಚಾರಿ ತಾಲ್ಲೂಕಿನ ಸಿಐಟಿಯು ಅಧ್ಯಕ್ಷ ಆಂಜಿನೇಯರೆಡ್ಡಿ, ತಾಲ್ಲೂಕಿನ ಡಿವೈಎಫ್ಐ ಅಧ್ಯಕ್ಷ ಹೇಮಚಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಧಾಕರರೆಡ್ಡಿ, ಶ್ರೀರಾಮನಾಯಕ್, ಜಯಮ್ಮ ಜಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸ್ವರೂಪರಾಣಿ ವೆಂಕಟರಂಗಾರೆಡ್ಡಿ, ಪಾಪಿರೆಡ್ಡಿ, ಎ.ಶಂಕರ ಮುಖಂಡರಾದ ಬಾಲಕೃಷ್ಣ, ನಾರಾಯಣಸ್ವಾಮಿ, ಆರ್.ಕೃಷ್ಣಮೂರ್ತಿ, ಎ.ನರಸಿಂಹಪ್ಪ, ಸುಗುಣಮ್ಮ ಅಮರಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT