ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೊಳಗೂ ಅರಳುವ ಒಳಿತಿನ ಹೂವು

Last Updated 4 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಭರತ್‌ ಮತ್ತು ಶಾಲನ್ ಸವೂರ್‌
ನಾವು ಮೌನದ ಹಬ್ಬಗಳನ್ನು ಆಚರಿಸಿದಾಗ ಜೀವನ ಇನ್ನಷ್ಟು ಸುಂದರವಾಗುತ್ತದೆ. ಕಿವಿಗಡಚಿಕ್ಕುವ ಸಂಗೀತವಿಲ್ಲ, ಪಟಾಕಿಗಳ ಅಬ್ಬರವಿಲ್ಲ, ಕೂಗಾಟಗಳಿಲ್ಲ, ಅನಗತ್ಯ ಹರಟೆಗಳಿಲ್ಲ. ಒಂದು ಆಳವಾದ ಸೌಹಾರ್ದ ಮೌನ. ಈ ಬಗೆಯ ಮೌನ ನಿಮ್ಮಲ್ಲಿನ ಕಂಡಿರದ, ಕೇಳಿರದ, ಸುಂದರ ಅನುಭವವನ್ನು ತಂದುಕೊಡುತ್ತದೆ. ಆ ಅನುಭವ ಎಂಥದ್ದು? ಆನಂದನಲ್ಲಿನ ಅಂಶಗಳನ್ನು ಮಾತಂಗಾಳಿಗೆ ಬುದ್ಧ ವಿವರಿಸಿರುವ ವಿಶಿಷ್ಟ ಅನಂತದ ಸಂಗತಿಯನ್ನು ಕೇಳಿ.
 
ಒಂದು ದಿನ ಆನಂದ ಎಂಬ ಸನ್ಯಾಸಿ ಭಿಕ್ಷಾಟನೆಯ ತನ್ನ ದೈನಂದಿನ ಚಟುವಟಿಕೆಗೆ ತೆರಳಿದ. ಅದು ತೀರಾ ಬಿಸಿಲಿನ ತಾಪದ ದಿನ. ಬಾಯಾರಿ ಬಳಲಿದ ಆತನಿಗೆ ಬಾವಿಯೊಂದು ಕಾಣಿಸಿತು. ಬಾವಿಯ ಸಮೀಪದ ಕಟ್ಟೆಯಲ್ಲಿದ್ದ ಯುವತಿ ಮಾತಂಗಾಳ ಬಳಿ ಕುಳಿತ. 
 
‘ನನಗೆ ನೀರು ಕೊಡುವಿರಾ?’ ಎಂದು ಆಕೆಯನ್ನು ಕೇಳಿದಾಗ, ‘ನಾನು ನಿಮಗೆ ನೀರು ಕೊಡಲು ಸಾಧ್ಯವಿಲ್ಲ. ನಾನು ಅಸ್ಪೃಶ್ಯೆ. ನಿಮಗೆ ಮೈಲಿಗೆಯಾಗುತ್ತದೆ’ ಎಂದುತ್ತರಿಸಿದಳು. ಅದಕ್ಕೆ ಆನಂದ ಹಿತವಾಗಿ ಆಕೆಗೆ ಸತ್ಯವನ್ನು ವಿವರಿಸಿದ. ‘ನಾವೆಲ್ಲರೂ ಸಮಾನರು. ಎಲ್ಲರೂ ಪರಿಶುದ್ಧರು.
 
ನಾನು ಮಲಿನವಾಗುವುದಿಲ್ಲ. ಅದಕ್ಕಾಗಿ ಹೆದರಬೇಡ’. ತಾನೂ ಪರಿಶುದ್ಧಳೆಂಬುದನ್ನು ಕೇಳಿದ ಆಕೆ ಆನಂದತುಂದಿಲಳಾಗಿ ಆನಂದನಿಗೆ ನೀರು ನೀಡಿದಳು. ದಾಹ ತೀರುವವರೆಗೆ ನೀರು ಕುಡಿದ ಆನಂದ, ಬಳಿಕ ಗೌರವದಿಂದ ಆಕೆಗೆ ಕೈಗಳನ್ನು ಮುಗಿದು, ಕೃತಜ್ಞತೆ ಹೇಳಿ ತನ್ನ ಹಾದಿ ಹಿಡಿದ.
 
ಆದರೆ ಮಾತಂಗಾ, ಆನಂದನೊಂದಿಗೆ ಪ್ರೀತಿಯಲ್ಲಿ ಬಿದ್ದಳು. ಅವರೆಷ್ಟು ದಯಾಳು, ಉತ್ತಮರು, ಶಾಂತರು... ಆಕೆ ಯೋಚಿಸಿದಳು, ನಾನು ನನ್ನೆಲ್ಲಾ ಬದುಕನ್ನು ಅವರೊಟ್ಟಿಗೆ ಕಳೆಯಬೇಕು. ಅದನ್ನು ಆಕೆ ತನ್ನ ತಾಯಿಗೂ ತಿಳಿಸಿದಳು. ಅದಕ್ಕಾಗಿ ಉಪಾಯ ಮಾಡಿದರು. ಮರುದಿನ ಆನಂದ ತಮ್ಮ ಬೊಗಸೆಯನ್ನು ಚಾಚಿದಾಗ, ಊಟಕ್ಕೆ ಬರುವಂತೆ ಮನೆಗೆ ಆಹ್ವಾನಿಸಿದರು.
 
ಅಲ್ಲಿ, ಆತನ ಮನಸಿಗೆ ಮಸುಕು ಕವಿಯುವಂತಹ ಔಷಧವುಳ್ಳ ಚಹಾ ನೀಡಿದರು. ಚಹಾ ಕುಡಿದಂತೆ, ಏನೂ ಸಮಸ್ಯೆಯಾಗುತ್ತಿದೆ ಎಂಬುದು ಆನಂದನ ಅರಿವಿಗೆ ಬಂತು. ತಾನು ಯಾವುದೋ ಸುಳಿಯೊಳಗೆ ಸಿಕ್ಕಿದ್ದು ಗೊತ್ತಾಯಿತು. ಕೂಡಲೇ ಪದ್ಮಾಸನ ಹಾಕಿಕೊಂಡು ಕಣ್ಣುಗಳನ್ನು ಮುಚ್ಚಿಕೊಂಡ. ತನ್ನ ಉಸಿರಾಟದ ಮೇಲೆ ಗಮನವಿರಿಸಿ ಧ್ಯಾನ ಆರಂಭಿಸಿದ. 
 
ಗಂಟೆಗಳುರುಳಿದವು. ಆನಂದ ಇನ್ನೂ ಏಕೆ ಬರಲಿಲ್ಲ ಎಂದು ಬುದ್ಧನಿಗೆ ಆಶ್ಚರ್ಯವಾಯಿತು. ಆತನನ್ನು ಹುಡುಕಿ ತರುವಂತೆ ಇಬ್ಬರು ಸನ್ಯಾಸಿಗಳಿಗೆ ಸೂಚಿಸಿದ. ಸುದೀರ್ಘ ಹುಡುಕಾಟದ ಬಳಿಕ, ಮಾತಂಗಾಳ ಮನೆಯಲ್ಲಿ ಧ್ಯಾನಕ್ಕೆ ಕುಳಿತಿದ್ದ ಆನಂದ ಕಣ್ಣಿಗೆ ಬಿದ್ದ. ಅವರ ನಿಧಾನವಾಗಿ ಆತನನ್ನು ಗುರುವಿನ ಹತ್ತಿರ ಕರೆತಂದರು. ತಮ್ಮೊಂದಿಗೆ ಬರುವಂತೆ ಅವರು ತನ್ನನ್ನೂ ಆತ್ಮೀಯತೆಯಿಂದ ಆಹ್ವಾನಿಸಿದ್ದನ್ನು ಕಂಡು ಮಾತಂಗಾ ಕಣ್ಣೀರಿಟ್ಟಳು. 
 
ಬುದ್ಧ, ಮಾತಂಗಾಳನ್ನು ಆಪ್ತತೆಯಿಂದ ಕೇಳಿದ, ‘ನೀನು ಆನಂದನನ್ನು ಅಷ್ಟೊಂದು ಪ್ರೀತಿಸುತ್ತೀಯಾ?’ ಸಂಕಟದಿಂದಲೇ ಆಕೆ ಹೌದೆಂದು ತಲೆ ಅಲ್ಲಾಡಿಸಿದಳು. ಮತ್ತೆ ಬುದ್ಧ ಕೇಳಿದ, ‘ಆನಂದನಲ್ಲಿ ಏನನ್ನು ಪ್ರೀತಿಸುತ್ತಿದ್ದೀಯಾ?’ ಮಾತಂಗಾ ಉತ್ಸಾಹದಿಂದ ನುಡಿದಳು, ‘ಎಲ್ಲವನ್ನೂ! ಆತನ ಕಣ್ಣುಗಳು, ಆತನ ಮೂಗು, ಆತನ ಕಿವಿಗಳು’. ಆಕೆಯ ಮಾತುಗಳನ್ನು ಅರ್ಥಮಾಡಿಕೊಂಡ ಬುದ್ಧ ಹೇಳಿದ, ‘ನೀನು ಆನಂದನಲ್ಲಿ ನೋಡದೆ ಇರುವ ಅನೇಕ ಸಂಗತಿಗಳಿವೆ. ಅವುಗಳನ್ನು ನೋಡಲು ನಿನ್ನಿಂದ ಸಾಧ್ಯವಾದರೆ ಅವನನ್ನು ಇನ್ನಷ್ಟು ಪ್ರೀತಿಸುತ್ತೀಯ’. ‘ಹೌದಾ’ ಎಂದು ಉದ್ಗರಿಸಿದ ಮಾತಂಗಾ, ‘ಯಾವ ರೀತಿ?’ ಎಂದು ಕಾತರದಿಂದ ಕೇಳಿದಳು. 
 
‘ಆನಂದನ ದೈವತ್ವ, ಪ್ರೀತಿಸುವ ಅಗಾಧ ಸಾಮರ್ಥ್ಯ. ನೀನು ಆತನಲ್ಲಿ ನೋಡಿದ್ದು, ಆತನ ಕಣ್ಣುಗಳು, ಮೂಗು, ಕಿವಿಗಳನ್ನು. ಅನೇಕ ಜನರಿಗೆ ಸಹಾಯ ಮಾಡುವ ಸಲುವಾಗಿ ಸನ್ಯಾಸಿಯಾಗಲು ಆತ ಸಿರಿವಂತ ಕುಟುಂಬದ ಬದುಕನ್ನು ತ್ಯಜಿಸಿದ. ಆನಂದ ಒಂದೆರಡು ಜನರೊಂದಿಗೆ ಇದ್ದ ಮಾತ್ರಕ್ಕೆ ಸಂತೋಷದಿಂದ ಇರಲಾರ. ಏಕೆಂದರೆ ಆ ಸಂತೋಷ ತೀರಾ ಕಿರಿದು. ಆತನದು ಅದ್ಭುತ ಮನಸು. ಆತ ಸಾವಿರಾರು ಮತ್ತು ಸಾವಿರಾರು ಜನರನ್ನು ಪ್ರೀತಿಸುತ್ತಾನೆ. ಆನಂದನ ದೈವತ್ವದ ಪ್ರಕೃತಿ ಅತಿ ಸುಂದರ’. 
 
‘ನೀನು ಆನಂದನನ್ನು ನಿಜವಾಗಿಯೂ ಪ್ರೀತಿಸುವುದಾದರೆ, ಆತನನ್ನು ಒಂದು ಸಂಬಂಧಕ್ಕೆ ಸೀಮಿತವಾಗಿರಲು ನೀನು ಬಿಡಲಾರೆ. ಬದಲು, ಆತನ ಮಹಾನ್‌ ದೈವತ್ವ ಎಲ್ಲೆಡೆ ಹರಡಲು ಅನುವು ಮಾಡಿಕೊಡುವೆ. ಆನಂದ ತಂಗಾಳಿಯಂತೆ. ನೀನು ಅದನ್ನು ಪಡೆದುಕೊಳ್ಳಬೇಕೆಂದು ಸಣ್ಣ ಪೆಟ್ಟಿಗೆಯಲ್ಲಿ ಮುಚ್ಚಿಟ್ಟರೆ ಈ ಸಿಹಿಯಾದ, ತಾಜಾ ತಂಗಾಳಿಯನ್ನು ಕಳೆದುಕೊಳ್ಳುತ್ತೀಯ. ಆನಂದ ನೀಲ ಗಗನದಲ್ಲಿ ತೇಲುವ ಶುದ್ಧ ಬಿಳಿ ಮೋಡದಂತೆ.
 
ನೀನು ಆ ಮೋಡವನ್ನು ಹಿಡಿದು ಪೆಟ್ಟಿಗೆಯಲ್ಲಿ ಬಂಧಿಸಿಟ್ಟರೆ ಆಗ ನೀನು ಆನಂದನನ್ನು ಕೊಂದು ಹಾಕುವೆ. ನೀನು ಆನಂದನಲ್ಲಿನ ಅತ್ಯಂತ ಸುಂದರ ಸಂಗತಿಗಳನ್ನು ನೋಡಬೇಕೆಂದಿದ್ದರೆ, ಆತನನ್ನು ವಿಶಾಲ ಹೃದಯದಿಂದ ಪ್ರೀತಿಸು. ಆತನನ್ನು ಆನಂದನನ್ನಾಗಿಯೇ ಇರಿಸಲು ಸಹಾಯ ಮಾಡು. ಸುಂದರ ನೀಲಾಕಾಶದಲ್ಲಿ ತೇಲುವ ಮೋಡಕ್ಕೆ, ಅದು ಮೋಡವಾಗಿಯೇ ಇರಲು ಸಹಾಯ ಮಾಡುವಂತೆ’.
 
‘ಮಾತಂಗಾ...’ ಬುದ್ಧ ಮೆದುವಾಗಿ ನುಡಿದ, ‘ನಿನ್ನಲ್ಲೂ ದೈವತ್ವ ಮತ್ತು ಪ್ರೀತಿಯಿದೆ. ನೀನು ನಿಜಕ್ಕೂ ಆನಂದನಲ್ಲಿನ ದೈವತ್ವವನ್ನು ಪ್ರೀತಿಸಿದರೆ, ನಿನ್ನಲ್ಲಿನ ದೈವತ್ವವನ್ನೂ ಕಂಡುಕೊಳ್ಳುವುದು ಸಾಧ್ಯ’. ಮಾತಂಗಾಳ ಅಚ್ಚರಿ ಕಂಡು ಬುದ್ಧ ಮುಂದುವರಿಸಿದ, ‘ನೀನು ನಿಜಕ್ಕೂ ನಿನ್ನೊಳಗೆ ಸೌಂದರ್ಯ, ಒಳಿತು ಮತ್ತು ಸತ್ಯವನ್ನು ಹೊಂದಿದ್ದೀಯ. ಎಲ್ಲರೂ ಅದನ್ನು ಹೊಂದಿರುತ್ತಾರೆ. ನಾವು ಪ್ರತಿಯೊಬ್ಬರೂ ಸಾವಿರಾರು ಜನರಲ್ಲಿ ಸಂತೋಷವನ್ನು ತರಬಹುದು’.
 
ಆ ದಿನದಿಂದ ಮಾತಂಗಾಳ ಈ ಜ್ಞಾನದೊಳಗೆ ದೈವತ್ವದ ಹೂವು ಅರಳಿತು. ಆಕೆಯ ಪ್ರೀತಿ ತೆರೆದುಕೊಂಡಿತು ಮತ್ತು ಎಲ್ಲರನ್ನೂ ಒಳಗೊಳ್ಳತೊಡಗಿತು. 
ಮೌನ ನಮ್ಮೊಳಗಿನ ಅನಂತ ದೈವತ್ವದ ಆಹ್ಲಾದಕರ ಜ್ಞಾನದೊಳಗೆ ಪ್ರವೇಶ ಕಲ್ಪಿಸುತ್ತದೆ. ಒಂದು ನಿಶ್ಶಬ್ದ ಮನಸ್ಥಿತಿ ಚಿಕಿತ್ಸಾದಾಯಕ. ನಿಮ್ಮಲ್ಲಿನ ಸಂಘರ್ಷಗಳ ಕಾರಣಗಳತ್ತ ಸೂಕ್ಷ್ಮವಾಗಿ ನೋಡಿ. ಅವು ಅಸಂತೋಷ, ವಿರೋಧಿಸುವಿಕೆ, ಕಾಠಿಣ್ಯ ಅಥವಾ ಆರೋಪಿಸುವಂತಹ ಮಾತುಗಳನ್ನು ಪ್ರಜ್ಞಾಪೂರ್ವಕವಾಗಿ ಹಿಡಿದಿಟ್ಟುಕೊಳ್ಳುವುದರಿಂದ ಸಂಭವಿಸುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
ಮೌನದಲ್ಲಿ ನೀವು ಅರ್ಥೈಸಿಕೊಳ್ಳುವುದರೊಂದಿಗೆ ಆಲಿಸುವುದನ್ನು ಮತ್ತು ರಚನಾತ್ಮಕವಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು. ಮೌನವೆಂಬುದು ಶಾಂತಿಯ ಹಬ್ಬ. ಮೌನದ ಮೂಲಕ ನಮ್ಮದೇ ಅಪ್ರಜ್ಞಾಪೂರ್ವಕ ನಕಾರಾತ್ಮಕ ದಾರಿಗಳನ್ನು ಗುರುತಿಸಿಕೊಳ್ಳುತ್ತೇವೆ. ಬೇರೆಯವರಿಗೆ ನೋವು ನೀಡಿದ್ದಕ್ಕಾಗಿ ಬೇಸರಪಟ್ಟುಕೊಳ್ಳುತ್ತೇವೆ. ಬೇರೆಯವರ ಮನಸಿಗೆ ಘಾಸಿ ಉಂಟುಮಾಡುವ ಯಾವುದೇ ನಕಾರಾತ್ಮಕ ಮಾತುಗಳನ್ನು ಆಡುವುದನ್ನು ನಿಯಂತ್ರಿಸುತ್ತೇವೆ. ನಮ್ಮಲ್ಲಿನ ನಕಾರಾತ್ಮಕತೆಯನ್ನು ನಿರಂತರವಾಗಿ ಖಾಲಿಗೊಳಿಸುತ್ತೇವೆ.

ಬೆಡಗು ನಮ್ಮ ಮೂಲಕ ಹರಿಯುತ್ತದೆ. ನಾವು ಮೃದುವಾಗುತ್ತೇವೆ. ಎಲ್ಲೆಡೆ ಹರ್ಷ ಹರಡುವ ಸೌಹಾರ್ದ ಮನಸ್ಥಿತಿಯನ್ನು ಅಳವಡಿಸಿಕೊಳ್ಳುತ್ತೇವೆ. ಸೂರ್ಯನೆಡೆಗೆ ಹೂವು ತಿರುಗಿದಂತೆ, ನಾವು ನಮ್ಮ ಮುಖವನ್ನು ಸೌಹಾರ್ದದತ್ತ ತಿರುಗಿಸುತ್ತೇವೆ. ಒಮ್ಮೆ ಆ ಸೌಹಾರ್ದದ ಸವಿ ಸವಿದರೆ ಅದು ನಮ್ಮಲ್ಲಿಯೇ ಉಳಿದುಕೊಳ್ಳಬೇಕೆಂದು ಹಂಬಲಿಸುತ್ತೇವೆ. 
 
ಮಿಗಿಲಾಗಿ, ಸೌಹಾರ್ದವೆಂದರೇನು? ಎಲ್ಲರೊಂದಿಗೆ ಒಂದಾಗುವುದು. ಸೌಹಾರ್ದವೆಂದರೆ? ದೈವತ್ವ, ಸಂಪೂರ್ಣ ಶಾಂತಿ. ಕಡಲಿನ ಎಲ್ಲ ಅಲೆಗಳೂ ಹರಿದು ಜಿಗಿದು ಮತ್ತು ಒಂದಾಗಿ ಬೀಳುತ್ತವೆಯಲ್ಲ. ಸೌಹಾರ್ದವೆಂಬುದು ಅಂದವಾಗಿ ಸಂಯೋಜಿಸಿದ ಶಾಂತಿಯ ನರ್ತನ, ರಮ್ಯತೆಯ ಉತ್ಸವ... ಮೌನದೊಳಗೆ ಇಳಿಯಿರಿ ಮತ್ತು ನಿಮ್ಮ ದೈವತ್ವವನ್ನು ಮರಳಿ ಪಡೆದುಕೊಳ್ಳಿ.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT