ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ: ಬಂಗಾರಪೇಟೆ ಜನರಿಗೆ ದೂಳಿನ ಮಜ್ಜನ

Last Updated 5 ಏಪ್ರಿಲ್ 2017, 11:12 IST
ಅಕ್ಷರ ಗಾತ್ರ

ಬಂಗಾರಪೇಟೆ: ಪ್ರಮುಖ ರಸ್ತೆಗಳೆಲ್ಲ ದೂಳುಮಯ, ಕಣ್ತೆರದು ಓಡಾಡುವುದೆ ಕಷ್ಟ, ವಾಹನಗಳ ಸವಾರರಿಗೆ ಅಡರುವ ದೂಳು.... 

ಇದು ಪಟ್ಟಣದ ಮುಖ್ಯರಸ್ತೆಯ ಸ್ಥಿತಿ. ಎಸ್‌.ಎನ್.ರೆಸಾರ್ಟ್‌ನಿಂದ ದೇಶಿಹಳ್ಳಿಯವರೆಗೂ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ರಸ್ತೆ ಎರಡೂ ಬದಿಯಲ್ಲಿ ಮಣ್ಣು ಅಗೆಯಲಾಗಿದ್ದು, ಗಾಳಿ ಬೀಸಿದ ಸಂದರ್ಭ ಹಾಗೂ ವಾಹನಗಳು ಚಲಿಸುವಾಗ ಇಡೀ ರಸ್ತೆಯನ್ನು ದೂಳು ಆವರಿಸುತ್ತದೆ.

ಅಲ್ಲದೆ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಪಟ್ಟಣದ ಬಸ್‌ ನಿಲ್ದಾಣದಿಂದ ಬೂದಿಕೋಟೆ ಕ್ರಾಸ್‌ವರೆಗಿನ ಕಟ್ಟಡಗಳ ತೆರವು ಕೆಲಸ ನಡೆದಿದೆ. ಇದರಿಂದ ಗಾಳಿ ಮತ್ತಷ್ಟು ಕಲುಷಿತಗೊಳ್ಳುತ್ತಿದೆ. ಮತ್ತೊಂದೆಡೆ ವಿಸ್ತರಣೆಗಾಗಿ ರಸ್ತೆ ಬದಿ ಇದ್ದ ಮರಗಳನ್ನು ಕಡಿಯಲಾಗಿದೆ. ಇದರಿಂದ ದೂಳು ತುಂಬಿದ ಗಾಳಿಯನ್ನು ಜನರು ಸೇವಿಸಬೇಕಾಗಿದೆ.
ಪಟ್ಟಣದ ಬಹುತೇಕ ರಸ್ತೆಗಳ ಡಾಂಬರ್ ಕಿತ್ತಿದೆ. ರಸ್ತೆಯಲ್ಲಿ ಮಣ್ಣು ಹರಡಿದೆ. ಬೂದಿಕೋಟೆ ಕ್ರಾಸ್‌ನಿಂದ ಹುಣಸನಹಳ್ಳಿ ರೈಲ್ವೆ ಗೇಟ್‌ವರೆಗಿನ ಮುಖ್ಯರಸ್ತೆ ಹಾಳಾಗಿದೆ. ಗುಂಡಿಗಳಿಗೆ ಟ್ರ್ಯಾಕ್ಟರ್‌ಗಟ್ಟಲೆ ಮಣ್ಣು ತುಂಬಿಸಲಾಗಿದೆ. ಅಲ್ಲದೆ ಕೆಲ ತಿಂಗಳ ಹಿಂದೆ ಈ ರಸ್ತೆ ಅಂಚಿನಲ್ಲಿ ಯರಗೋಳು ಪೈಪ್‌ಲೈನ್‌ ಹಾಕುವ ಕಾಮಗಾರಿ ನಡೆಯಿತು. ಅಂದಿನಿಂದ ಇಡೀ ರಸ್ತೆ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ಮಳೆ ಬಂದರೆ ಸಂಪೂರ್ಣವಾಗಿ ರಸ್ತೆ ಕೆಸರು ಗದ್ದೆಯಾಗುತ್ತದೆ. ಬಿಸಿಲು ಹೆಚ್ಚಾದರೆ ದೂಳು ಏಳುತ್ತದೆ. 

ವಿಪರೀತ ದೂಳಿನ ಸಮಸ್ಯೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಗಾಳಿ ಜೋರಾಗಿ ಬೀಸುವ ಸಂದರ್ಭ ದೂಳು ಮಿಶ್ರಿತ ಗಾಳಿಯಲ್ಲಿನ ಚಿಕ್ಕ ಕಣಗಳು, ನೊಣಗಳು ಕಣ್ಣಿಗೆ ಬಡಿದು ವಾಹನ ಓಡಿಸಲಾಗದೆ ಕೆಳಕ್ಕೆ ಬಿದ್ದಿರುವ ಉದಾಹರಣೆಗಳೂ ಇವೆ.

ದೂಳಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿದ್ದು ಉಸಿರಾಟ ಸಮಸ್ಯೆ, ಅಲರ್ಜಿ, ಅಸ್ತಮ ಪೀಡಿತರು ಕಷ್ಟಪಡುತ್ತಿದ್ದಾರೆ.  ದೂಳಿನ ಜತೆ ಗಾಳಿಯಲ್ಲಿ ವಾಹನಗಳ ಹೊಗೆ ಸೇರುತ್ತಿದೆ. ಪಟ್ಟಣದ ಮೂಲಕ ನಿತ್ಯ ಸಾವಿರಾರು ವಾಹನಗಳು ಕೋಲಾರ ಬೆಂಗಳೂರಿನತ್ತ ಸಂಚರಿಸುತ್ತವೆ. ಅಲ್ಲದೆ ಇಲ್ಲಿನ ಬಹುತೇಕ ದ್ವಿಚಕ್ರ, ತ್ರಿಚಕ್ರ ವಾಹನಗಳು ವಿಷ ಮಿಶ್ರಿತ ಹೊಗೆ ಹೊರಹೊಮ್ಮುತ್ತಿವೆ. ಇದರಿಂದ ಪಟ್ಟಣದ ವಾತಾವರಣ ಮಲಿನಗೊಂಡಿದೆ.

ಶೀಘ್ರಗತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಬೇಕು. ಪಟ್ಟಣದ ಇತರ ರಸ್ತೆಗಳಿಗೆ ಡಾಂಬರು ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

–ಕಾಂತರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT