ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಲ್ಲದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ತರಾತುರಿ!

Last Updated 5 ಏಪ್ರಿಲ್ 2017, 11:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ತಾಲ್ಲೂಕಿನ ಎಸ್.ಗೊಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗ ಭೂದಾನವಾಗಿ ಬಂದು 40 ವರ್ಷ ಕಳೆದರೂ ಈವರೆಗೆ ಶಾಲೆಯ ಮುಖ್ಯ ಶಿಕ್ಷಕರಾಗಲಿ, ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಆ ಆಸ್ತಿಯ ಖಾತೆ ಮಾಡಿಸುವ ಗೋಜಿಗೆ ಹೋಗಿಲ್ಲ. ಬದಲು, ಹಕ್ಕು ಇಲ್ಲದ ಆ ಜಾಗದಲ್ಲಿ ತರಾತುರಿಯಲ್ಲಿ ಇದೀಗ ದಾನಿಗಳ ನೆರವಿನಿಂದ ಹೊಸ ಕಟ್ಟಡ ಕಟ್ಟಲು ಸಿದ್ಧತೆ ನಡೆದಿದೆ.

ಈ ಶಾಲೆಯಲ್ಲಿ ಎರಡು ಕೊಠಡಿಗಳು ತುಂಬಾ ಶಿಥಿಲಗೊಂಡಿವೆ. ಅದರಿಂದಾಗಿ ಶಾಲೆಗೆ ಕೊಠಡಿಗಳ ಕೊರತೆ ಕಾಡುತ್ತಿತ್ತು. ಬೆಂಗಳೂರು ರೋಟರಿ ಕ್ಲಬ್, ಜರ್ಮನ್ ಕಂಪೆನಿಯೊಂದರ ಸಹಯೋಗದಲ್ಲಿ ಆ ಎರಡು ಕೊಠಡಿಗಳನ್ನು ನೆಲಸಮಗೊಳಿಸಿ ಆ ಜಾಗದಲ್ಲಿ ಹೊಸ ಕಟ್ಟಡ ಕಟ್ಟಿಸಿಕೊಡಲು ಮುಂದೆ ಬಂದಿದೆ. ಆದರೆ ಈವರೆಗೆ ಆ ಶಾಲೆ ಇರುವ ಜಾಗದ ಹಕ್ಕು ಭೂದಾನಿಗಳ ಹೆಸರಿನಲ್ಲಿಯೇ ಇದೆ. ಅದನ್ನು ಶಾಲೆಯ ಹೆಸರಿಗೆ ಬದಲಾಯಿಸಿಕೊಳ್ಳುವ ಕೆಲಸ ಮಾತ್ರ ಈವರೆಗೆ ಯಾರು ಮಾಡಿಲ್ಲ.

ಕಟ್ಟಡ ಕಟ್ಟಿದರೆ ಏನಾಗುತ್ತದೆ?: ಚಿಕ್ಕಬಳ್ಳಾಪುರ ತಾಲ್ಲೂಕು ಒಂದರಲ್ಲಿಯೇ ದಾನಿಗಳು ನೀಡಿದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಶಾಲೆಗಳಿವೆ. ಈ ಪೈಕಿ ಕೆಲವೆಡೆ ಭೂದಾನ ನೀಡಿದ ಕುಟುಂಬದವರು ಪುನಃ ಜಾಗ ನಮಗೆ ವಾಪಸ್‌ ನೀಡಿ ಎಂದು ಕಾನೂನು ಹೋರಾಟ ನಡೆಸುತ್ತಿರುವ ಅನೇಕ ಪ್ರಕರಣಗಳಿವೆ. ಆ ಪೈಕಿ ಮರಸನಹಳ್ಳಿ, ವಡ್ರೇಪಾಳ್ಯ, ತಿರ್ನಳ್ಳಿ ಶಾಲೆಯ ಜಾಗ ಕುರಿತಂತೆ ಈಗಾಗಲೇ ವಿವಾದಗಳು ತಾರಕಕ್ಕೆ ಏರಿವೆ. ಅನೇಕ ಕಡೆಗಳಲ್ಲಿ ಶಾಲೆಯ ಜಾಗಗಳನ್ನು ಒತ್ತುವರಿ ಕೂಡ ಮಾಡಿಕೊಂಡಿರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರುಗಳು ಬಂದಿವೆ.

ಒಂದೊಮ್ಮೆ ಶಾಲೆಗೆ ದಾನವಾಗಿ ಬಂದ ಆಸ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಿ ಕಟ್ಟಡ ಕಟ್ಟಿದರೆ ಮುಂದೊಂದು ದಿನ ದಾನಿಗಳ ಕುಟುಂಬದವರು ಬಂದು ತಕರಾರು ತೆಗೆದರೆ ಆಗ ಸಮಸ್ಯೆ ಉದ್ಭವವಾಗುತ್ತದೆ. ಆದ್ದರಿಂದ, ಶಾಲೆಯ ಮುಖ್ಯ ಶಿಕ್ಷಕರು, ಬಿಇಒ ಅವರು ದಾನವಾಗಿ  ಬಂದ ಜಾಗದಲ್ಲಿ ಹೊಸದಾಗಿ ಕಟ್ಟಡಗಳನ್ನು ಕಟ್ಟಿಸುವ ಪೂರ್ವದಲ್ಲಿ ಆ ಜಾಗವನ್ನು ಶಾಲೆಗೆ ಹೆಸರಿಗೆ ಬದಲಾಯಿಸಿಕೊಂಡು ಖಾತೆ ಮಾಡಿಸಿಕೊಳ್ಳುವ ಕೆಲಸ ಮಾಡಬೇಕು. ಅದು ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ಶಿಕ್ಷಣ ಇಲಾಖೆಯ ಅನೇಕ ಅಧಿಕಾರಿಗಳು ಹೇಳುತ್ತಾರೆ.

ಎಸ್.ಗೊಲ್ಲಹಳ್ಳಿ ಶಾಲೆ ಇರುವ ಜಾಗದ ತನ್ನದು ಎಂದು ಹೇಳಿಕೊಳ್ಳುವಂತಹ ಒಂದೇ ಒಂದು ದಾಖಲೆ ಕೂಡ ಆ ಶಾಲೆಯಲ್ಲಿ ಇಲ್ಲ. ಆದರೂ ಆ ಶಾಲೆಯಲ್ಲಿ ಹೊಸ ಕಟ್ಟಲು ಕಟ್ಟಡಗಳ ನಿರ್ಮಾಣ ಕೆಲಸಕ್ಕಾಗಿ ಭಾನುವಾರದಿಂದಲೇ ಕಾರ್ಮಿಕರ ತಂಡವೊಂದು ಬಂದು ಬೀಡು ಬಿಟ್ಟಿದೆ.

ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ಶ್ರೀನಾಥ್ ಅವರನ್ನು ಪ್ರಶ್ನಿಸಿದರೆ, ‘ನಾನು ಕಾರ್ಮಿಕರಿಗೆ ಇಲ್ಲಿ ಯಾವುದೇ ಕೆಲಸ ಮಾಡಬೇಡಿ ಎಂದು ಹೇಳಿರುವೆ. ಆದರೂ ಇವರು (ಎಸ್‌.ಗೊಲ್ಲಹಳ್ಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಸುನೀಲ್) ಬಂದು ಕೆಲಸ ಮಾಡಿಸುತ್ತಿದ್ದಾರೆ. ನಮ್ಮ ಬಳಿ ಶಾಲೆಯ ಜಾಗದ ಕುರಿತು ದಾಖಲೆಗಳಿಲ್ಲ. ನಾನೇನು ಮಾಡಲಿ ಹೇಳಿ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸ್ಥಳದಲ್ಲಿಯೇ ಇದ್ದ ಸುನಿಲ್‌ ಅವರನ್ನು ವಿಚಾರಿಸಿದರೆ, ‘ಶಾಲೆಯ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಕೊಟ್ಟ ಹೌಸ್‌ಲಿಸ್ಟ್‌ ಇದೆಯಲ್ಲ’ ಎಂದರು. ಹೌಸ್‌ಲಿಸ್ಟ್‌ ಆಧಾರದಲ್ಲಿಯೇ ಶಾಲೆಯ ಜಾಗ ನಮ್ಮದು ಎನ್ನುವ ಹಕ್ಕು ಸಾಧಿಸಲು ಸಾಧ್ಯವೆ? ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರುತ್ತರರಾದರು.

‘ಇದೀಗ ನಮೂನೆ 9ಮತ್ತು 11ಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಹಿಂದೊಮ್ಮೆ ಸರ್ವೇಯರ್‌ ಬಂದು ಅಳತೆ ಮಾಡಿಕೊಂಡು ಹೋದರೂ ಪ್ರಯೋಜನವಾಗಿಲ್ಲ. ಪುನಃ ಸರ್ವೆ ಮಾಡಿಸಲು ಅರ್ಜಿ ಸಲ್ಲಿಸಲಾಗಿದೆ. ಇನ್ನೂ ರೋಟರಿ ಸಂಸ್ಥೆಯೊಂದಿಗೆ ಈ ಬಗ್ಗೆ ಒಡಂಬಡಿಕೆ ಮಾಡಿಕೊಂಡಿಲ್ಲ’ ಎಂದು ಹೇಳಿದರು.

‘ಎಸ್‌.ಗೊಲ್ಲಹಳ್ಳಿ ಶಾಲೆಯ ಜಾಗದ ವಿಚಾರವಾಗಿ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದೇವೆ. ಅವರು ಕೂಡ ದಾಖಲಾತಿ ಮಾಡಿಸಿಕೊಳ್ಳಲು ಸಹಾಯ ಮಾಡುವುದಾಗಿ ಹೇಳಿದ್ದಾರೆ. ದಾಖಲೆಗಳೆಲ್ಲ ಸಿದ್ಧವಾದ ಬಳಿಕವೇ ಕಟ್ಟಡ ಕಾಮಗಾರಿ ನಡೆಯಲಿದೆ. ಶಾಲೆಗೆ ಕಾರ್ಮಿಕರನ್ನು ಯಾರು ಕರೆದುಕೊಂಡು ಬಂದರೋ ನನಗೆ ಗೊತ್ತಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎನ್.ಶ್ರೀಕಂಠ ತಿಳಿಸಿದರು.

‘ಭೂಮಿ ದಾನವಾಗಿ ಬಂದು 40 ವರ್ಷಗಳು ಕಳೆದರೂ ಅದನ್ನು ಶಾಲೆಯ ಹೆಸರಿನಲ್ಲಿ ಮಾಡಿಸಿಕೊಳ್ಳಲು ಈವರೆಗೆ ಯಾರೊಬ್ಬರೂ ಆಸಕ್ತಿ ತೋರಿಸಲಿಲ್ಲ. ಇದೀಗ ಲಕ್ಷಗಟ್ಟಲೇ ಹಣ ಬರುತ್ತಿದ್ದೆ ಎಂದಾಗ ಕೆಲವರು ತುಂಬಾ ಕಾಳಜಿಯಿಂದ ಓಡಾಡುತ್ತಿದ್ದಾರೆ. ಇದೇ ಕಾಳಜಿಯನ್ನು ಅವರು ಶಾಲೆಯ ಆಸ್ತಿಯ ಖಾತೆ, ಪಹಣಿ ಮಾಡಿಸಲು ತೋರಿಸಬೇಕಿತ್ತು. ಇದನ್ನೆಲ್ಲ ನೋಡಿದಾಗ ಏನೋ ಅಕ್ರಮ ನಡೆಯುತ್ತಿರುವ ಸಂಶಯ ಬರುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಎಸ್.ಗೊಲ್ಲಹಳ್ಳಿಯ ನಿವಾಸಿಯೊಬ್ಬರು ಹೇಳಿದರು.

**

ದೇಣಿಗೆ ಮೊತ್ತದ ಬಗ್ಗೆ ಗೊಂದಲ!

ಇತ್ತೀಚೆಗಷ್ಟೇ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಅವರು, ‘ಗೊಲ್ಲಹಳ್ಳಿಯಲ್ಲಿ ಜರ್ಮನ್‌ ಕಂಪೆನಿಯವರು ₹ 50 ಲಕ್ಷ ವೆಚ್ಚದಲ್ಲಿ ಕಟ್ಟಡ ಕಟ್ಟಿಸಲು ಮುಂದೆ ಬಂದಿದ್ದಾರೆ’ ಎಂದು ಹೇಳಿದ್ದರು. ಈ ಬಗ್ಗೆ ವಿಚಾರಿಸಿದರೆ ಶಿಕ್ಷಣ ಇಲಾಖೆಯ ಯಾವ ಅಧಿಕಾರಿ ಯಿಂದಲೂ ಸ್ಪಷ್ಟ ಉತ್ತರ ಸಿಗಲಿಲ್ಲ.

ಶಾಲೆಯ ಮುಖ್ಯಶಿಕ್ಷಕ ಶ್ರೀನಾಥ್ ಅವರು ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದರು. ‘ರೋಟರಿಯವರು ಕೊಠಡಿಗಳನ್ನು ಕಟ್ಟಲು ₹  20 ಲಕ್ಷ ವೆಚ್ಚ ಮಾಡುತ್ತಿದ್ದಾರೆ’ ಎಂದು  ಸಿಆರ್‌ಪಿ ಸುನಿಲ್ ತಿಳಿಸಿದರು.

‘ಅಷ್ಟು ಮೊತ್ತದಲ್ಲಿ ಎರಡು ಕೊಠಡಿಗಳು, ಅಡುಗೆಕೋಣೆ, ಶೌಚಾಲಯ ನಿರ್ಮಿಸಲು ಸಾಧ್ಯವೆ’ ಎಂದು ಮರು ಪ್ರಶ್ನಿಸಿದಾಗ ‘ರೋಟರಿಯವರು ನೀಡುವ ಅನುದಾನದ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ’ ಎಂದರು.

ಬಿಇಒ, ಡಿಡಿಪಿಐ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಬಳಿ ಕೂಡ ಎಷ್ಟು ವೆಚ್ಚದಲ್ಲಿ ಕಟ್ಟಡ ಕಟ್ಟುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT