ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ಹಾದಿ

‘ವಾಸ್ತುಶಿಲ್ಪದ ಅದ್ಭುತ’ಗಳಾಗಿ ಗುರುತಿಸಿಕೊಂಡ ಸಿಮೆಂಟ್‌
Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಆಧುನಿಕ ಮಾನವನಾಗರಿಕತೆಯ ಪ್ರಗತಿಯಲ್ಲಿ ಸಿಮೆಂಟ್‌ ವಹಿಸುತ್ತಿರುವ ಪಾತ್ರ ಮಹತ್ವದ್ದು. ಒಂದು ವೇಳೆ ಸಿಮೆಂಟ್‌ ಇಲ್ಲದಿದ್ದರೆ, ಜಗತ್ತಿನಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರ ಈ ಪರಿ ಬೆಳೆಯಲು ಸಾಧ್ಯವಾಗಿರುತ್ತಿರಲಿಲ್ಲವೇನೋ. ಮನೆ, ಶಾಲೆ, ಅಣೆಕಟ್ಟು... ಹೀಗೆ ಯಾವುದೇ ಕಟ್ಟಡ ನಿರ್ಮಿಸಲು ಸಿಮೆಂಟ್‌ ಬೇಕೇ ಬೇಕು. ಕಟ್ಟಡಗಳಿಗೆ ದೃಢತೆ ಕೊಡುವ ಸಾಮರ್ಥ್ಯ ಇದಕ್ಕಿದೆ. ಈ  ಸಾಮರ್ಥ್ಯವೇ ಅದನ್ನು ಆಧುನಿಕ ಜಗತ್ತಿನಲ್ಲಿ ಅತ್ಯಂತ ಬೇಡಿಕೆ ಇರುವ ವಸ್ತುವನ್ನಾಗಿ ಮಾಡಿದೆ.
 
ಸಿಮೆಂಟ್‌ನ ಪರಿಚಯ ಜನರಿಗೆ ಆಗಿದ್ದು ಇನ್ನೂರು ವರ್ಷಗಳ ಹಿಂದೆ. ಅದಕ್ಕೂ ಮುನ್ನ ಕಟ್ಟಡಗಳನ್ನು ನಿರ್ಮಿಸಲು ಸಿಮೆಂಟ್‌ನ ಜಾಗದಲ್ಲಿ ಬೇರೆ ವಸ್ತುಗಳನ್ನು ಬಳಸುತ್ತಿದ್ದರು. ಸಿಮೆಂಟ್‌ ಬಳಸದೇ ನಿರ್ಮಿಸಿರುವ ಹಲವು ಐತಿಹಾಸಿಕ ರಚನೆಗಳು ಇಂದಿಗೂ ಅತ್ಯಂತ ಸದೃಢವಾಗಿವೆ.

ಮಾತ್ರವಲ್ಲದೇ, ‘ವಾಸ್ತುಶಿಲ್ಪದ ಅದ್ಭುತ’ಗಳಾಗಿ ಗುರುತಿಸಿಕೊಂಡಿವೆ. ನಮ್ಮ ಕೆಆರ್‌ಎಸ್‌ ಅಣೆಕಟ್ಟೆ ಇದಕ್ಕೆ ಉದಾಹರಣೆ. 1924ರಲ್ಲಿ ನಿರ್ಮಿಸಲಾದ ಈ ಅಣೆಕಟ್ಟಿಗೆ ಸಿಮೆಂಟ್‌ ಬಳಸಿಯೇ ಇಲ್ಲ. ಸುಣ್ಣದ ಕಲ್ಲು ಮತ್ತು ಇಟ್ಟಿಗೆ ಪುಡಿಯನ್ನು ಬಳಸಿ ಮಾಡಿದ ‘ಸುರ್ಕಿ’ ಎಂಬ ವಿಶೇಷ ಗಾರೆಯಿಂದ ಇದನ್ನು ನಿರ್ಮಿಸಲಾಗಿದೆ.

ಮನುಷ್ಯ ತನ್ನ ಅಗತ್ಯಕ್ಕೆ ಅನುಗುಣವಾಗಿ ಕಾಲಾಂತರದಲ್ಲಿ ಮಾಡಿದ ಆವಿಷ್ಕಾರಗಳು ಆಧುನಿಕ ಸಿಮೆಂಟ್‌ನ ಹುಟ್ಟಿಗೆ ಕಾರಣ. ಹಾಗಾಗಿ, ಗಾರೆ ತಯಾರಿಸಲು ಈಗ ಬಳಸುತ್ತಿರುವ ಸಿಮೆಂಟ್‌ಗೂ, ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕಚ್ಚಾ ಸಿಮೆಂಟ್‌ಗೂ ನಂಟು ಇದೆ. ಈ ನಂಟು ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದು!
 
ಕಟ್ಟಡ ನಿರ್ಮಾಣಕ್ಕೆ ಮೊದಲ ಬಾರಿಗೆ ಗಾರೆಯನ್ನು ಬಳಸಿದ ಬಗ್ಗೆ ಸಾಕ್ಷ್ಯಗಳು ಸಿಗುವುದು ಈಜಿಪ್ಟ್‌ ನಾಗರಿಕತೆಯಲ್ಲಿ. ಸಾವಿರಾರು ವರ್ಷಗಳಿಂದ ಬಿಸಿಲು ಮಳೆಗೆ ಜಗ್ಗದೆ, ಜಗತ್ತಿಗೆ ದೊಡ್ಡ ಕೌತುಕವಾಗಿ ಕಾಣುವ ಪಿರಮಿಡ್‌ಗಳಿಗಿಂತ ದೊಡ್ಡ ಪುರಾವೆ ಇದಕ್ಕೆ ಬೇರೇನು ಬೇಕು? 
 
ಕ್ರಿ.ಪೂ 3000ರ ಅವಧಿಯಲ್ಲಿ ನಿರ್ಮಿಸಲಾಗಿರುವ ಈ ದೊಡ್ಡ ರಚನೆಗಳಲ್ಲಿ ಬಳಕೆಯಾಗಿದ್ದು ಆ ಕಾಲದ ಸಿಮೆಂಟ್‌. ನೈಸರ್ಗಿಕವಾಗಿ ಲಭ್ಯವಿದ್ದ ಸುಣ್ಣದ ಕಲ್ಲು ಮತ್ತು ಜಿಪ್ಸಮ್‌ (ಕ್ಯಾಲ್ಸಿಯಂ ಸಲ್ಫೇಟ್‌ ಖನಿಜ) ಬಳಸಿ ಪಿರಮಿಡ್‌ಗಳನ್ನು ನಿರ್ಮಿಸಲಾಗಿದೆ.
 
ಕಚ್ಚಾ ಸಿಮೆಂಟ್‌ ಅನ್ನು ಮತ್ತಷ್ಟು ಸುಧಾರಣೆಗೆ ಒಳಪಡಿಸಿದ್ದು ಪುರಾತನ ರೋಮನ್ನರು. ನೀರಿನೊಂದಿಗೆ ಬೆರೆಸಿದ ಸುಣ್ಣದ ಕಲ್ಲಿಗೆ ‘ಪೊಜೊಲಾನಾ’ ಎಂದು ಕರೆಯಲಾಗುತ್ತಿದ್ದ ಬೂದಿಯನ್ನು (ವೆಸುವಿಯಸ್‌ ಶಿಖರದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಹಾರಿದ ಬೂದಿ ಇದು) ಮಿಶ್ರಣ ಮಾಡಿ ಅವರು ಗಾರೆ ತಯಾರಿಸಿದ್ದರು.
 
ಈ ಮಿಶ್ರಣವನ್ನು ಬಳಸಿ ರೋಮನ್ನರು ಅತ್ಯದ್ಭುತ ಕಟ್ಟಡಗಳನ್ನು ನಿರ್ಮಿಸಿದ್ದರು. ಇಟಲಿಯಲ್ಲಿರುವ ಬೆಸಿಲಿಕಾ ಕಾನ್‌ಸ್ಟಂಟೈನ್‌ ಇದಕ್ಕೆ ತಾಜಾ ಉದಾಹರಣೆ. ಇನ್ನೂ ಕೆಲವೆಡೆ, ಸುಣ್ಣದ ಕಲ್ಲು, ನೀರು, ಇಟ್ಟಿಗೆಯ ಪುಡಿ ಅಥವಾ ಗಟ್ಟಿ ಮಣ್ಣಿನ ಪುಡಿ ಬೆರೆಸಿ ತಯಾರಿಸಿದ ಗಾರೆಯಿಂದಲೂ ಕಟ್ಟಡನಿರ್ಮಿಸಲಾಗುತ್ತಿತ್ತು. ಮಧ್ಯಕಾಲೀನ ಯುಗದಲ್ಲೂ ಈ ಪದ್ಧತಿ ಮುಂದುವರೆಯಿತು. ನೈಸರ್ಗಿಕವಾಗಿ ಲಭ್ಯವಿದ್ದ ವಸ್ತುಗಳನ್ನೇ ಗಾರೆ ತಯಾರಿಸಲು ಬಳಸುತ್ತಿದ್ದರು.
 
18ನೇ ಶತಮಾನದಲ್ಲಿ ಮಹತ್ವದ ಬೆಳವಣಿಗೆ ನಡೆಯಿತು. ಬ್ರಿಟನ್ನಿನ ಕಾರ್ನ್‌ವಾಲ್‌ ಕರಾವಳಿಯಿಂದ 14 ಕಿ.ಮೀ. ದೂರದಲ್ಲಿ ಎಡ್ಡಿಸ್ಟೋನ್‌ ಎಂದು ಕರೆಯಲಾಗುವ ಕಲ್ಲು ಬಂಡೆ ಮೇಲೆ ನಿರ್ಮಿಸಲಾಗಿದ್ದ ಲೈಟ್‌ಹೌಸ್‌ನ ಪುನರ್‌ ನಿರ್ಮಾಣದ ಜವಾಬ್ದಾರಿಯನ್ನು ಬ್ರಿಟನ್‌ ಎಂಜಿನಿಯರ್‌ ಜಾನ್‌ ಸ್ಮೆಟನ್‌ ಎಂಬುವವರಿಗೆ ವಹಿಸಲಾಯಿತು.

ಅದಕ್ಕೂ ಮೊದಲು ನಿರ್ಮಿಸಿದ್ದ ಲೈಟ್‌ ಹೌಸ್‌ ರಚನೆ ಅಷ್ಟು ಸಮರ್ಪಕವಾಗಿರಲಿಲ್ಲ. 1756ರಲ್ಲಿ ಸದೃಢ ಗಾರೆಯ ತಯಾರಿಕೆಗಾಗಿ ಸ್ಮೆಟನ್‌ ಹಲವು ಪ್ರಯೋಗಗಳನ್ನು ನಡೆಸಿದರು. ಸುಣ್ಣದ ಜೊತೆ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಮತ್ತು ಮಣ್ಣನ್ನು ಬೆರೆಸಿ ತಯಾರಿಸಿದ ಗಾರೆಯಿಂದ ಸದೃಢ ಲೈಟ್‌ಹೌಸ್‌ ನಿರ್ಮಾಣ ಸಾಧ್ಯ ಎಂಬುದನ್ನು ಅವರು ಕಂಡುಕೊಂಡರು. 1759 ಲೈಟ್‌ಹೌಸ್‌ ಅನ್ನು ಅವರು ಪುನರ್‌ ನಿರ್ಮಿಸಿದರು. ಅದು ಎಷ್ಟು ಗಟ್ಟಿಯಾಗಿತ್ತು ಎಂದರೆ, ಆ ರಚನೆ 126 ವರ್ಷಗಳ ಕಾಲ ಬಾಳಿಕೆ ಬಂದಿತ್ತು!.
 
1817ರಲ್ಲಿ ಯುವ ಎಂಜಿನಿಯರ್‌ ಲೂಯಿಸ್‌ ವಿಕಾಟ್‌ ಎಂಬುವವರು ಸುಣ್ಣ ಮತ್ತು ಜ್ವಾಲಾಮುಖಿಯ ಬೂದಿಯ ಮಿಶ್ರಣದ ಜಲೀಯ (ಹೈಡ್ರಾಲಿಕ್‌) ಗುಣಲಕ್ಷಣಗಳ ಬಗ್ಗೆ ಅಧ್ಯಯನ ನಡೆಸಿದರು. ನಿರ್ದಿಷ್ಟ ಪ್ರಮಾಣದ ಸುಣ್ಣದ ಕಲ್ಲು ಮತ್ತು ಸಿಲಿಕಾವನ್ನು ಬೆರೆಸಿ, ನಿರ್ದಿಷ್ಟ ಉಷ್ಣತೆಯಲ್ಲಿ ಅದನ್ನು ಬಿಸಿ ಮಾಡಿ, ನಂತರ ಅದನ್ನು ಅರೆದು ಕೈಗಾರಿಕಾ ಉದ್ದೇಶಕ್ಕೆ ಬಳಸಬಹುದಾದ ಸಿಮೆಂಟ್‌ ತಯಾರಿಸಿದರು. ಆದರೆ, ಇದಕ್ಕೆ ಅವರು ಪೇಟೆಂಟ್ ಪಡೆದಿರಲಿಲ್ಲ. ಕೇವಲ ಅದನ್ನು ತಯಾರಿಸುವ ವಿಧಾನವನ್ನು ಲಿಖಿತವಾಗಿ ಪ್ರಕಟಿಸಿದರು.
 
ಮುಂದಿನ ದಶಕದಲ್ಲಿ ಬಹುತೇಕ ಆಧುನಿಕ ಸಿಮೆಂಟ್‌ ಅನ್ನೇ ಹೋಲುವ ಸಿಮೆಂಟ್‌ ತಯಾರಾಯಿತು. 1824ರಲ್ಲಿ ಬ್ರಿಟನ್ನಿನ, ಕಲ್ಲು ಕಟ್ಟುವ ವೃತ್ತಿಯಲ್ಲಿ ತೊಡಗಿದ್ದ ಜೋಸೆಫ್‌ ಆಸ್ಪ್‌ಡಿನ್‌ ಎಂಬುವವರು ಲೂಯಿಸ್‌ ವಿಕಾಟ್‌ ಅವರು ಮಾಡಿದಂತೆಯೇ, ನಿರ್ದಿಷ್ಟ ಪ್ರಮಾಣದಲ್ಲಿ ಮಣ್ಣು ಮತ್ತು ಸುಣ್ಣದ ಕಲ್ಲನ್ನು ಮಿಶ್ರಣ ಮಾಡಿ, ಅದನ್ನು ಬಿಸಿ ಮಾಡಿ, ಅರೆದು ಸಿಮೆಂಟ್‌ ತಯಾರಿಸಿದರು.

ಇದನ್ನು ಪೋರ್ಟ್‌ಲ್ಯಾಂಡ್‌ ಸಿಮೆಂಟ್‌ ಎಂದು ಕರೆದರು. ದಕ್ಷಿಣ ಬ್ರಿಟನ್ನಿನ ಪೋರ್ಟ್‌ಲ್ಯಾಂಡ್‌ನಲ್ಲಿ ಕಂಡುಬರುತ್ತಿದ್ದ ಒಂದು ಬಗೆಯ ಕಲ್ಲನ್ನೇ ಈ ಸಿಮೆಂಟ್‌ ಹೋಲುತ್ತಿದ್ದುದರಿಂದ ಅದಕ್ಕೆ ಈ ಹೆಸರು ಇಡಲಾಗಿತ್ತು.
 
 ಆ ವೇಳೆಗಾಗಲೇ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಹೊಸ ಹೊಸ ಯೋಚನೆಗಳು, ಸಾಧ್ಯತೆಗಳು ಯೂರೋಪಿನಾದ್ಯಂತ ಹುಟ್ಟಿಕೊಳ್ಳುತ್ತಿದ್ದ ಕಾಲ ಅದು. ಸಿಮೆಂಟ್‌ ತಯಾರಿಕೆ ಕ್ಷೇತ್ರವೂ ಇದಕ್ಕೆ ಹೊರತಾಗಿರಲಿಲ್ಲ. ಹೊಸ ಯಂತ್ರಗಳು, ವಿನೂತನ ತಂತ್ರಜ್ಞಾನಗಳು ಸಿಮೆಂಟ್‌ ತಯಾರಿಕಾ ಕಾರ್ಖಾನೆಗಳ ಸ್ಥಾಪನೆಗೆ ನಾಂದಿ ಆಯಿತು.

ಭಾರಿ ಪ್ರಮಾಣದಲ್ಲಿ ಸಿಮೆಂಟ್‌ ಉತ್ಪಾದನೆ ಆರಂಭಗೊಂಡು ಜಗತ್ತಿನೆಲ್ಲೆಡೆ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಹೊಸ ದಿಶೆ ಸಿಕ್ಕಿತು. ಈಗ ಸಿಮೆಂಟ್‌ನದೇ ಬಹುದೊಡ್ಡ ಉದ್ಯಮ. ವೈಟ್‌ ಸಿಮೆಂಟ್‌ ಸೇರಿದಂತೆ ಹಲವು ಕಂಪೆನಿಗಳ ಸಿಮೆಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಇತ್ತೀಚೆಗಿನ ದಿನಗಳಲ್ಲಿ ಸಿಮೆಂಟ್‌ಗಿರುವ ಬೇಡಿಕೆ ಹೆಚ್ಚಿದೆ. ಮುಂದೆಯೂ ಅದರ ಬೇಡಿಕೆ ಹೀಗೆ ಇರಲಿದೆ. ಆಧುನಿಕ ಕಾಲಘಟ್ಟದ ಅಭಿವೃದ್ಧಿಯ ನಾಗಾಲೋಟ ನಿಲ್ಲುವವರೆಗೆ ಸಿಮೆಂಟ್‌ನ ಮೆರೆದಾಟ ಮುಂದುವರಿಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT