ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಶುದ್ಧಿಯ ಕಾಯಕವಿದು

Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆದಿತ್ಯಾ ಗಾಂಧಿ– ಸಾಹಿಬಾ
ವಿದ್ಯಾಭ್ಯಾಸ ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬುದು ಎಲ್ಲರ ಕನಸು. ಆದರೆ ಕೌಶಲ ಮತ್ತು ನೈಪುಣ್ಯದ ಕೊರತೆಯಿಂದಾಗಿ ವಿಶ್ವವಿದ್ಯಾಲಯದಿಂದ ಹೊರಬಂದ ಕೂಡಲೇ ಎಲ್ಲರಿಗೂ ಕೆಲಸ ಸಿಗುವುದಿಲ್ಲ ಎನ್ನುತ್ತಾರೆ ‘ಪರ್ಪಲ್ ಸ್ಕ್ವಿರಿಲ್’ (Purple Squirrel) ಕಂಪೆನಿಯ ಆದಿತ್ಯಾ ಗಾಂಧಿ.

ಮುಂಬೈನವರಾದ ಆದಿತ್ಯಾ ಗಾಂಧಿ, ಹಣಕಾಸು ವ್ಯವಹಾರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರತಿಷ್ಠಿತ ಕಾರ್ಪೊರೇಟ್ ಕಂಪೆನಿಗಳಲ್ಲಿ ಹತ್ತು ವರ್ಷ ಕೆಲಸ ಮಾಡಿದ ಅನುಭವ ಅವರದ್ದು. ಆಗ ತಾನೇ ವಿದ್ಯಾಭ್ಯಾಸ ಪೂರೈಸಿ ಕೆಲಸಕ್ಕೆ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲದ ಕೊರತೆ ಇರುವುದನ್ನು ತಮ್ಮ ಹತ್ತು ವರ್ಷಗಳ ವೃತ್ತಿ ಜೀವನದಲ್ಲಿ ಆದಿತ್ಯಾ ಗಮನಿಸಿದ್ದರು.

ಎಂಜಿನಿಯರಿಂಗ್, ಸಾಫ್ಟ್‌ವೇರ್, ಮ್ಯಾನೇಜ್್ಮೆಂಟ್, ಹಣಕಾಸು, ಮಾನವ ಸಂಪನ್ಮೂಲ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಆರಂಭಿಕವಾಗಿ ಆ ವೃತ್ತಿಯ ಕುರಿತಂತೆ ತರಬೇತಿ ನೀಡುವುದು ಅವಶ್ಯಕ ಎಂಬುದನ್ನು ಮನಗಂಡರು. ದೇಶದಲ್ಲಿ ಕೆಲವು ದೊಡ್ಡ ದೊಡ್ಡ ಕಂಪೆನಿಗಳು ಮಾತ್ರ ತರಬೇತಿ ಕೊಡುವ ಕೆಲಸ ಮಾಡುತ್ತಿವೆ.

ಆದರೆ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕಂಪೆನಿಗಳು ಕೇವಲ ಅನುಭವಿಗಳಿಗೆ ಮಣೆ ಹಾಕುತ್ತಿವೆ. ಹೊಸಬರನ್ನು ಇಂತಹ ಸಂದಿಗ್ಧತೆಯಿಂದ ಪಾರುಮಾಡುವ ಸಲುವಾಗಿ ‘ಪರ್ಪಲ್ ಸ್ಕ್ವಿರಿಲ್’ ಕಂಪೆನಿ ಪ್ರಾರಂಭಿಸಿರುವುದಾಗಿ ಆದಿತ್ಯಾ ಹೇಳುತ್ತಾರೆ. ಇವರೊಂದಿಗೆ ಕೈ ಜೋಡಿಸಿದ್ದು ಸಾಹಿಬಾ. ‘ಪರ್ಪಲ್ ಸ್ಕ್ವಿರಿಲ್’ ಕಂಪೆನಿಯಲ್ಲಿ  ಎಲ್ಲ ವೃತ್ತಿಯ ಬಗ್ಗೆ ಆರಂಭಿಕ ತರಬೇತಿ ನೀಡಲಾಗುತ್ತದೆ.

ಉದಾಹರಣೆಗೆ, ವಾಣಿಜ್ಯ ಪದವಿ ಪಡೆದಿರುವವರು ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕು ಎಂಬ ಆಕಾಂಕ್ಷೆ  ಹೊಂದಿರುತ್ತಾರೆ. ಅವರಿಗೆ ಬ್ಯಾಂಕ್‌ಗಳಲ್ಲಿನ ಕೆಲಸದ ವೈಖರಿ ಬಗ್ಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಅವರು ಸುಲಭವಾಗಿ ಖಾಸಗಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆದುಕೊಳ್ಳಬಹುದು. ಇಲ್ಲಿಯವರೆಗೂ ಸುಮಾರು 10 ಸಾವಿರ ಜನರಿಗೆ ತರಬೇತಿ ನೀಡಲಾಗಿದ್ದು ಅವರೆಲ್ಲ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆದಿತ್ಯಾ  ಹೇಳುತ್ತಾರೆ. purplesq.com/

ಭೂಮಕೇಶ್ ಮಿಶ್ರಾ
ಧರ್ಮಶಾಲಾದ ಯುವಕ ಭೂಮಕೇಶ್ ಮಿಶ್ರಾ ವಿದೇಶಿ ಗೆಳೆಯ ಟ್ಯುರಿಲ್ಲೊ ಜತೆ ಸೇರಿ ‘ಮೇಧಾ’ ಎಂಬ ಸ್ವಯಂ ಸೇವಾ ಸಂಸ್ಥೆ ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಭೂಮಕೇಶ್ ಅಮೆರಿಕದಲ್ಲಿ ಪದವಿ ಪಡೆದ ಬಳಿಕ ಮರಳಿ ಭಾರತಕ್ಕೆ ಬಂದರು. ಹೊಟ್ಟೆಪಾಡಿಗಾಗಿ ಸ್ಕಾಟ್‌ಲ್ಯಾಂಡ್ ದೇಶದ ರಾಯಲ್ ಬ್ಯಾಂಕ್ ಹಣಕಾಸು ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಕಿರುಸಾಲ ಕೊಡುವ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಆ ಕಿರುಸಾಲ, ಯುವಕರಿಗೆ ಪ್ರಯೋಜನವಾಗುತ್ತಿರಲಿಲ್ಲ ಎಂಬುದು ಅವರ ಗಮನಕ್ಕೆ ಬಂತ್ತು.

ವಿದ್ಯಾವಂತ ಯುವಕರಿಗೆ ವೃತ್ತಿ ಕೌಶಲದ ತರಬೇತಿ ಕೊಟ್ಟು ಹಣಕಾಸು ನೆರವು ನೀಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ ಎಂಬ ಅಂಶವನ್ನು ರಾಯಲ್ ಬ್ಯಾಂಕ್ ವರಿಷ್ಠರ ಬಳಿ ಹೇಳಿದರು. ಅಧಿಕಾರಿಗಳು ಭೂಮಕೇಶ್ ಹೇಳಿದ ಅಂಶವನ್ನು ಪರಿಗಣಿಸಲಿಲ್ಲ.



ಈ ಹಂತದಲ್ಲಿ ಅವರಿಗೆ ಅಮೆರಿಕದ ಟ್ಯುರಿಲ್ಲೊ ಎಂಬುವರ ಪರಿಚಯವಾಯಿತು. ಅವರ ಬಳಿ ಯುವಕರಿಗೆ ವೃತ್ತಿ ಕೌಶಲ ತರಬೇತಿ ನೀಡುವ ಬಗ್ಗೆ ಭೂಮಕೇಶ್ ಚರ್ಚೆ ಮಾಡಿದರು. ಟ್ಯುರಿಲ್ಲೊ ಅವರಿಗೆ ಗ್ರಾಮೀಣಾಭಿವೃದ್ದಿ ವಿಷಯದಲ್ಲಿ ವಿಶೇಷ ಆಸಕ್ತಿ ಇದ್ದುದರಿಂದ ಸ್ವಯಂ ಸೇವಾ ಸಂಸ್ಥೆ ಆರಂಭಿಸುವಂತೆ ಭೂಮಕೇಶ್‌ಗೆ ಸಲಹೆ ಕೊಟ್ಟರು. ಆಗ ಆರಂಭವಾಗಿದ್ದೇ ‘ಮೇಧಾ’.

ಹಿಂದುಳಿದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಚತ್ತೀಸ್‌ಗಢ ರಾಜ್ಯಗಳಲ್ಲಿ ಮೇಧಾ ಸಂಸ್ಥೆ ಕೆಲಸ ಮಾಡುತ್ತಿದೆ. ಅಲ್ಲಿನ ನಿರುದ್ಯೋಗಿ ಯುವಕರಿಗೆ ತರಬೇತಿ ಕೊಟ್ಟು ಸ್ವಯಂ ಉದ್ಯೋಗಕ್ಕೆ ಹಣಕಾಸು ನೆರವು ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 800 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಟ್ಟಾಗ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂಬುದು ಭೂಮಕೇಶ್ ಅಭಿಮತ. medha.org.in/about/

ಆಶಿಶ್ ರಾಜ್‌ಪಾಲ್
ದೆಹಲಿಯ ಆಶಿಶ್ ರಾಜ್‌ಪಾಲ್ ವೃತ್ತಿಯಲ್ಲಿ ಎಂಜಿನಿಯರ್ ಆದರೂ ಭಾರತದ ಸಾಂಪ್ರದಾಯಿಕ ಮತ್ತು ರೂಢಿಗತ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆ ತರಬೇಕು ಎಂಬ ಕನಸು ಕಂಡವರು. ಮುಂದೆ ವಿದೇಶಗಳಿಗೆ ತೆರಳಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿಕೊಂಡು ಭಾರತಕ್ಕೆ ಮರಳಿದರು. ನಂತರ 2008ರಲ್ಲಿ ಎಕ್ಸೀಡ್ ಎಂಬ ಶಿಕ್ಷಣ ಸಂಸ್ಥೆ ಹುಟ್ಟುಹಾಕುವ ಮೂಲಕ ವೈಜ್ಞಾನಿಕ ಕಲಿಕೆಗೆ ನಾಂದಿ ಹಾಡಿದರು.

ಆಶಿಶ್, ಪದವಿಯ ಬಳಿಕ ಕೆಲಸ ಹುಡುಕಿಕೊಂಡು ಪ್ಯಾರಿಸ್‌ಗೆ ತೆರಳಿದರು. ಈ ಹಂತದಲ್ಲಿ ಅವರಿಗೆ ಭಾರತೀಯ ಮತ್ತು ಫ್ರಾನ್ಸ್ ಶಿಕ್ಷಣ ಪದ್ಧತಿಯನ್ನು ತುಲನೆ ಮಾಡುವ ಅವಕಾಶ ಲಭಿಸಿತು. ಇಲ್ಲಿನ ಕಲಿಕೆಯ ಮುಂದೆ ಭಾರತದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪದ್ಧತಿ ಅವರಿಗೆ ಸಪ್ಪೆಯಾಗಿ ಕಂಡಿತು. ಶಿಕ್ಷಣ ಕ್ಷೇತ್ರದಲ್ಲಿ ಹೊಸತನ್ನು ಸಾಧಿಸಬೇಕು ಎಂಬ ಹಂಬಲದಲ್ಲಿ ಅಮೆರಿಕ, ಸಿಂಗಪುರ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡಿದರು. ನಂತರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿದರು.



ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಲಿಯುತ್ತಿರುವ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಅತಿ ಕಡಿಮೆ ಬಂಡವಾಳದಲ್ಲಿ ಎಕ್ಸೀಡ್ ಸಂಸ್ಥೆ ಪ್ರಾರಂಭಿಸಿದರು. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದೇ ಎಕ್ಸೀಡ್ ಸಂಸ್ಥೆಯ ಮೂಲ ಉದ್ದೇಶ. ಪಠ್ಯದ ಜತೆಗೆ ಸಾಮಾನ್ಯ ಜ್ಞಾನ, ವೃತ್ತಿ ಕೌಶಲ, ರಾಜಕೀಯ ಪ್ರಜ್ಞೆ, ಸಾಹಿತ್ಯ ಮತ್ತು ಕಲೆಯನ್ನು ವಿಶೇಷವಾಗಿ ಬೋಧನೆ ಮಾಡಲಾಗುತ್ತದೆ.

ಯುವಕರು ತಾವು ಅಭ್ಯಾಸ ಮಾಡಿದ ಶಿಕ್ಷಣ ವೃತ್ತಿಗೆ ಜೋತು ಬಿದ್ದಿರುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದು ಎನ್ನುತ್ತಾರೆ ಆಶೀಶ್. ಎಕ್ಸೀಡ್‌ ಬೋಧನೆಯ ಉದ್ದೇಶ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಶಾಲಾ ಪಠ್ಯದ ಜತೆಗೆ ಭವಿಷ್ಯ ರೂಪಿಸುವಂತಹ ಶಿಕ್ಷಣ ನೀಡಬೇಕಾಗಿರುವುದು ಇಂದಿನ  ಸರ್ಕಾರಗಳ ಬಹುದೊಡ್ಡ ಜವಾಬ್ದಾರಿ ಎನ್ನುತ್ತಾರೆ ಆಶಿಶ್. xseededucation.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT