ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ: ಮಲ್ಲಿಗೆ ಕಂಪು, ಬೆಳದಿಂಗಳ ಒನಪು!

Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ವಸಂತನ ಆಗಮನದೊಂದಿಗೆ ಮರ ಗಿಡಗಳಲ್ಲಿ ಹೊಸ ಚಿಗುರು ಕಾಣುತ್ತಿದೆ. ಚೈತ್ರದ ಚಂದಿರ ಪೂರ್ಣವಾಗಿ ಕಾಣಲು ಇನ್ನು ಕೆಲವೇ ದಿನಗಳು ಉಳಿದಿವೆ. ಏಪ್ರಿಲ್‌ 11ರ ಈ ಹುಣ್ಣಿಮೆ ವಿಶೇಷ ಸಂಭ್ರಮದೊಂದಿಗೆ ತಳಕು ಹಾಕಿಕೊಂಡಿದೆ. ಅದು ‘ಕರಗ’ದ ಸಂಭ್ರಮ! ಸುವಾಸನೆ ಸೂಸುವ ಮಲ್ಲಿಗೆ ಹೂಗಳ ಉತ್ಸವ.
 
‘ಬೆಂಗಳೂರು ಕರಗ’ ಬಹುಪ್ರಸಿದ್ಧ. ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ‘ಕರಗ’ ಉತ್ಸವಗಳು ನಡೆಯುತ್ತವೆ. ಆನೇಕಲ್‌, ಹೊಸಕೋಟೆ, ಮಾಲೂರು, ಚಿಕ್ಕಬಳ್ಳಾಪುರ, ಕೈವಾರ, ವೇಮಗಲ್‌, ನರಸಾಪುರ – ಹೀಗೆ ಹಳ್ಳಿ ಪಟ್ಟಣಗಳಲ್ಲಿ ‘ಕರಗ’ ಹಬ್ಬ ಪ್ರತಿ ವರ್ಷದ ರೂಢಿ.

ಸಾಮರಸ್ಯದ ಹಬ್ಬವೆಂದೇ ಹೆಸರಾದ ಕರಗ ‘ಶಕ್ತ್ಯುತ್ಸವ’ವೂ ಹೌದು. ಈ ಉತ್ಸವದಲ್ಲಿ ವಹ್ನಿಕುಲಸ್ಥರ (ತಿಗಳರು) ಮುಂದಾಳತ್ವ ಇದ್ದರೂ ಎಲ್ಲಾ ಧರ್ಮೀಯರೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಕರಗದ ಸಡಗರಕ್ಕೆ ಎಲ್ಲಾ ಊರುಗಳಲ್ಲಿ ಸಾಮಾನ್ಯನೆಲೆ ಶ್ರೀಧರ್ಮರಾಯ ಸ್ವಾಮಿ ದೇವಾಲಯ. ‘ದ್ರೌಪದಿ ಕರಗ’ವೆಂದು ಕರೆದರೂ ಹಲವೆಡೆ ಗ್ರಾಮದೇವತೆಗಳೂ ‘ಕರಗ’ಕ್ಕೆ ನೆಲೆ ನೀಡಿರುವುದಿದೆ. ತಿಗಳರು ವಾಸಿಸುವ ಬಹುತೇಕ ಎಲ್ಲಾ ಊರು–ಕೇರಿಗಳಲ್ಲೂ ‘ಕರಗ’ದ ಉತ್ಸವ ಇದ್ದೇ ಇರುತ್ತದೆ.
 
ಈ ಭಾವೈಕ್ಯತೆಯ ಹಬ್ಬಕ್ಕೆ ಮೈಸೂರಿನ ಯದುವಂಶದ ಅರಸರು ಪ್ರೋತ್ಸಾಹ ಕೊಟ್ಟರು. ಧರ್ಮರಾಯ ಗುಡಿ ಕಟ್ಟಲು, ‘ಕರಗ’ ಹಬ್ಬಕ್ಕೂ ಅವರೇ ನೆರವು ನೀಡಿದರು. ಬಹಳಷ್ಟು ಊರುಗಳಲ್ಲಿ ಕರಗಕ್ಕೆ ಆಹ್ವಾನ ಪತ್ರಿಕೆ ಅಚ್ಚಾಗುವುದು ಮೈಸೂರು ಅರಸರ ಹೆಸರಿನಲ್ಲಿ. ಇದು ಇಂದೂ ನಿಂತಿಲ್ಲ.

ಪಾಂಡವರ ಕುಲಕ್ಕೆ ಸೇರಿದ ವಹ್ನಿ ಕುಲಸ್ಥರು ಆರಾಧಿಸುವ ಧರ್ಮರಾಯನ ದೇವಾಲಯಗಳಲ್ಲಿ ದ್ರೌಪದಿಗೆ ಹೆಚ್ಚಿನ ಪ್ರಾಧಾನ್ಯ. ಕರಗ ಶಕ್ತಿಯ ಮೂಲಸೆಲೆಯೇ ದ್ರೌಪದಿ ಎಂಬುದು ಇದಕ್ಕೆ ಕಾರಣ. 

 
ಕೆಲವು ವಿಧಿವಿಧಾನಗಳನ್ನು ಹೊರತುಪಡಿಸಿದರೆ ಕರಗ ಕಾರ್ಯಕ್ರಮಗಳು ನಡೆಯುವುದೆಲ್ಲ ಸೂರ್ಯ ಮುಳುಗಿದ ಮೇಲೆ – ಚಂದಿರನ ಬೆಳಕಿನಲ್ಲಿ. ದೇವಾಲಯದ ಮುಂದೆ ಧ್ವಜಾರೋಹಣದಿಂದ ಕರಗೋತ್ಸವಕ್ಕೆ ಚಾಲನೆ. ಮೊದಲ ದಿನ – ಖಡ್ಗ, ವೀರ ಚಾವುಟಿ ಮತ್ತಿತರ ಪೂಜಾಪರಿಕರಗಳೊಂದಿಗೆ ಮೆರವಣಿಗೆ ನಡೆಯುತ್ತದೆ, ಆಯುಧಗಳ ಶುಚೀಕರಣವೂ ನಡೆಯುತ್ತದೆ.

ಎರಡನೇ ದಿನ ಹಸಿ ಅಥವಾ ಹಸೆಕರಗ. ಬೆಂಗಳೂರಿನಲ್ಲಿ ಪೂಜಾರಿ ಹಸಿಕರಗವನ್ನು ಸೊಂಟದ ಮೇಲಿಟ್ಟುಕೊಂಡು ಸಾಗಿದರೆ, ಉಳಿದೆಡೆ ಪುಟ್ಟ ಹಲಗೆ ಅಥವಾ ತಟ್ಟೆಯಲ್ಲಿಟ್ಟುಕೊಂಡು ಕುಣಿಸುತ್ತ ಸಾಗುವುದಿದೆ.

ಕೊಳಗದಲ್ಲಿ ಹಸಿಗಡಿಗೆಯೊಂದನ್ನು ಅಡಗಿಸಿಟ್ಟು, ಅದನ್ನು ಪೂಜಾರಿ ಹೊರತೆಗೆದು ತಾತ್ಕಾಲಿಕವಾಗಿ ಬಿಳಿ ಬಟ್ಟೆಗಳಿಂದ ಕಟ್ಟಿದ ಕುಟೀರಕ್ಕೆ ಹೊತ್ತೊಯ್ಯುತ್ತಾನೆ. ಅದನ್ನು ಮಲ್ಲಿಗೆ ಪುಷ್ಪಗಳಿಂದ ಅಲಂಕರಿಸಿ ವಾದ್ಯ–ಗಂಟೆನಾದದೊಂದಿಗೆ ಕುಣಿಸುತ್ತ ನಾಲ್ಕೈದು ಪೂಜಾಸ್ಥಾನಗಳಿಗೆ ಹೋಗಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ತಲುಪುವುದು ಸಂಪ್ರದಾಯ.
 
ವೀರಕುಮಾರರು ಕರಗ ಶಕ್ತ್ಯುತ್ಸವಕ್ಕೆ ಕಳೆ ಕಟ್ಟಿಸುತ್ತಾರೆ. ಧ್ವಜಾರೋಹಣದಿಂದ ಮೊದಲ್ಗೊಂಡು ವಸಂತೋತ್ಸವ ಮುಗಿಯುವರೆಗೆ ಕಂಕಣ ಕಟ್ಟಿಕೊಂಡು ಗುಡಿಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಕಚ್ಚೆ ಪಂಚೆ, ಪೇಟಾ, ರುಮಾಲು, ಬನಿಯನ್‌ – ಇವೆಲ್ಲ ವೀರಕುಮಾರರ ಪೋಷಾಕು. ಇವುಗಳಲ್ಲಿ ಪ್ರಮುಖವಾದ ಬಣ್ಣ ಹಳದಿ.
 
‘ಗೋವಿಂದ–ಗೋವಿಂದ’ ನಾಮಸ್ಮರಣೆಯೊಂದಿಗೆ ವೀರಕುಮಾರರು ಮೈತುಂಬಿಕೊಂಡು ಅಲಗುಸೇವೆ ಮಾಡುತ್ತಾರೆ. ಮೈಮೇಲೆ ಶಕ್ತಿ ಬಂದಾಗ ಖಡ್ಗಗಳಿಂದ ಎದೆಭಾಗಗಳಿಗೆ ಬಡಿದುಕೊಳ್ಳುವ ಸೇವೆಯಂತೂ ರೋಮಾಂಚಕಾರಿ. 
 
ಹಸಿಕರಗದ ಮರುದಿನ ಪೊಂಗಲ್‌ ಉತ್ಸವ ಮತ್ತು ದೀಪೋತ್ಸವ. ವಹ್ನಿಕುಲದ ಒಕ್ಕಲುಗಳಿಗೆ ಸೇರಿದ ಹೆಂಗಳೆಯರು ಹಸಿ ಹಿಟ್ಟಿನಿಂದ ಮಾಡಿದ ದೀಪಗಳನ್ನು ತಲೆಮೇಲೆ ಹೊತ್ತು ಗುಂಪುಗುಂಪಾಗಿ ಸಕಲ ವಾದ್ಯಗಳೊಡನೆ ಆಗಮಿಸಿ ಪೂಜೆ ಮಾಡಿಸುತ್ತಾರೆ.

ದೀಪಾರಾಧನೆಯ ಮಾರನೆಯ ದಿನ ದ್ರೌಪದಿ–ಧರ್ಮರಾಯರ ಲಗ್ನ. ಎಲ್ಲ ಜಾತಿ ಧರ್ಮದವರೂ ಪಾಲ್ಗೊಳ್ಳುವ ಈ ವಿವಾಹದಲ್ಲಿ ವಿವಿಧ ವಸ್ತು ವಿಶೇಷಗಳು ಹೊಣೆಯನ್ನು ವಹ್ನಿಕುಲಸ್ಥರೊಂದಿಗೆ ಬೇರೆ ಮತ ಧರ್ಮೀಯರೂ ಹೊತ್ತುಕೊಳ್ಳುವುದು ವೈಶಿಷ್ಟ್ಯಪೂರ್ಣ.  
 
ಹೂವಿನ ಕರಗವನ್ನು ತಲೆ ಮೇಲೆ ಧರಿಸಿದ ಪೂಜಾರಿ ಗುಡಿ ಒಳಗಿನಿಂದ ಬರುವುದು ಎಲ್ಲರಿಗೂ ಕಾತುರದ ಕ್ಷಣ. ಭಾವುಕರ ನಿರೀಕ್ಷೆಯ ಕ್ಷಣಗಳ ನಡುವೆ ರಪ್ಪೆಂದು ರಾಚುವ ಮಲ್ಲಿಗೆಯ ವಾಸನೆಯೊಂದಿಗೆ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಹೂವಿನ ಕರಗ ಬರುತ್ತದೆ. ಸಂಪೂರ್ಣ ಮಲ್ಲಿಗೆ ದಂಡೆ, ಅಲ್ಲಲ್ಲಿ ಕನಕಾಂಬರದ ಅಲಂಕಾರಿಕ ಎಸಳುಗಳು, ಚುನ್ನೆರಿಯ ನಕ್ಷತ್ರಗಳು, ಪುಟ್ಟ ಬಣ್ಣದ ಪತಾಕೆಗಳು.

ಶಿಖರದಲ್ಲಿ ಪುಟ್ಟ ಬ್ಯಾಟರಿ ಆಧಾರಿತ ಒಂಟಿದೀಪ. ದಂಡೆಯಲ್ಲಿ ಕಿರುನಗೆ ಸೂಸುವ ಗುಲಾಬಿದಳಗಳು. ಇವೆಲ್ಲ ವಿಶೇಷಗಳೊಂದಿಗೆ ‘ಕರಗ’ ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕುತ್ತ ಹೊರಹೋಗುತ್ತದೆ. ಇದರ ಜೊತೆಗೆ, ವೀರಕುಮಾರರ ಅಲಗು ಸೇವೆ, ಶಂಖಾನಾದ, ಗಂಟೆಗಳ ಶಬ್ದ, ಗೋವಿಂದ ನಾಮಸ್ಮರಣೆ ಸಡಗರಕ್ಕೆ ಇಂಬುನೀಡುತ್ತವೆ.
 
ಬೆಂಗಳೂರು ಕರಗಕ್ಕೂ ಉಳಿದೆಡೆ ನಡೆಯುವ ಹೂವಿನ ಕರಗಕ್ಕೂ ಆಚರಣೆಯಲ್ಲಿ ಕೊಂಚ ವ್ಯತ್ಯಾಸಗಳಿವೆ. ಬೆಂಗಳೂರಿನಲ್ಲಿ ಗೋವಿಂದ ನಾಮಸ್ಮರಣೆ, ಶಂಖ ಧ್ವನಿಯ ನಡುವೆ ಕರಗ ಮುಂದೆ ಸಾಗುತ್ತದೆ. ಬೇರೆ ಕೆಲವೆಡೆ ಗಂಟಾನಾದ, ತಮಟೆ ಸದ್ದು ‘ಕರಗ’ದ ಜೊತೆಗಿರುತ್ತದೆ.

ಮಧ್ಯರಾತ್ರಿ ನಂತರ ಎತ್ತುವ ಕರಗ ಸೂರ್ಯೋದಯಕ್ಕೆ ಮೊದಲೇ ಗುಡಿ ಸೇರುವುದು ಬೆಂಗಳೂರಿನ  ಸಂಪ್ರದಾಯ. ಬೇರೆ ಊರುಗಳಲ್ಲಿ ‘ಕರಗ’ ಮುಖ್ಯ ಭಾಗಗಳಿಗೆ ಭೇಟಿ ನೀಡುವುದೇ ಅಲ್ಲದೆ, ಮರುದಿನ ಸಂಜೆವರೆಗೆ ಸುತ್ತಾಡುವುದೂ ಇದೆ. ಕರಗ ಗರ್ಭಗುಡಿಗೆ ಸೇರುವ ಮೊದಲು ಅಗ್ನಿಕುಂಡ ಪ್ರವೇಶ ಕೂಡ ಕಾಯಂ ಆಚರಣೆ.
 
ಹೂವಿನ ಕರಗ ಮುಗಿದ ಎರಡು ದಿನಗಳ ಬಳಿಕ ಮಹಾಭಾರತ ಪಠಣ ಕಾರ್ಯಕ್ರಮ ನಡೆಯುತ್ತದೆ. ರಾತ್ರಿ ಪಠಣದ ಸಂದರ್ಭದಲ್ಲಿ ಪೋತುಲರಾಜು ಮೈ ಮೇಲೆ ಬಂದು, ಆತ ಜೀವಂತ ಮೇಕೆಯ ಕೊರಳನ್ನು ಹಲ್ಲಿನಿಂದ ಸೀಳಿ ರಕ್ತ ಹೀರುವ ಆಚರಣೆ ಇರುತ್ತದೆ. ಇದಾದ ಮರುದಿನ ಸಂಜೆ ವಸಂತೋತ್ಸವ.

ಇದೊಂದು ರೀತಿ ಓಕುಳಿಯಾಟ, ವಹ್ನಿಕುಲದ ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ಅರಿಶಿಣ ಕಲಿಸಿದ ನೀರನ್ನು ಬಿಂದಿಗೆಗಳಲ್ಲಿ ತುಂಬಿಸಿ, ಮೆರವಣಿಗೆಯಲ್ಲಿ ಧರ್ಮರಾಯಸ್ವಾಮಿ ದೇಗುಲಕ್ಕೆ ನೀರಿನ ಬಿಂದಿಗೆಗಳನ್ನು ತಂದು ವೃತ್ತಾಕಾರವಾಗಿ ಅಥವಾ ಸಾಲಾಗಿ ಇಡುತ್ತಾರೆ.
 
ಕರಗದ ಪೂಜಾರಿ ಒನಕೆ ಮೇಲೆ ಅರಿಶಿಣ ನೀರು ತುಂಬಿದ ತೆರೆದ ಪಾತ್ರೆ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಕುಣಿಯುತ್ತಾರೆ. ಇದಾದ ಮೇಲೆ ವೀರಕುಮಾರರ ‘ಓಕುಳಿಯಾಟ’. ಹೆಂಗಳೆಯರು ತಂದ ನೀರನ್ನು ಸಣ್ಣ ಪಾತ್ರೆಗಳಲ್ಲಿ ತುಂಬಿಕೊಂಡು ಪರಸ್ಪರ ಎರಚಾಡುತ್ತಾರೆ.

ಇದೊಂದು ಮೋಜಿನ ಸನ್ನಿವೇಶವೂ ಹೌದು. ಓಕುಳಿಯಾಡಿದ ನಂತರ ಖಾಲಿಕೊಡಗಳು, ಉತ್ಸವ ಮೂರ್ತಿಗಳು, ವೀರಕುಮಾರರ ಅಲಗುಗಳು, ಪೂಜಾಪರಿಕರಗಳನ್ನು ಮೆರವಣಿಗೆಯಲ್ಲಿ ಹತ್ತಿರದ ಕೊಳ–ಕಲ್ಯಾಣಿಗೆ ಒಯ್ದು ಶುಚಿಗೊಳಿಸಿ ಧರ್ಮರಾಯನ ಗುಡಿಗೆ ವಾಪಸ್ಸಾದರೆ, ಆ ವರ್ಷದ ‘ಕರಗ’ ಉತ್ಸವ ವಿಧಿ ಕೊನೆಯಾದಂತೆ. 
 
 
ಯುವಪಡೆ ಜೊತೆಗೆ ‘ಕರಗ’ದ ನಡಿಗೆ
‘ಕರಗ’ ಉತ್ಸವದಲ್ಲಿ ಪೂಜಾರಿಯೇ ಕೇಂದ್ರಬಿಂದು. ಕರಗ ಆಚರಣೆ ಸಂದರ್ಭ ಮಾತ್ರ ಆತನಿಗೆ ಮಾನ್ಯತೆ ತಂದುಕೊಡುವುದು. ಉಳಿದಂತೆ ಆತ ಅನಾಮಿಕ. ಕರಗ ಹೊರತುಪಡಿಸಿದರೆ ಉಳಿದೆಲ್ಲ ಸಮಯ ಅನಾಮಿಕರಾಗಿಯೇ ಉಳಿದಿರುವ ಕೆಲ ಕುಟುಂಬಗಳು ನಮ್ಮಲ್ಲಿವೆ.

ಮೊದಲಿಗೆ ಒಂದೋ ಎರಡೋ ಆಯ್ದ ಕುಟುಂಬಗಳು ಮಾತ್ರ ಕರಗ ಹೊರುವ ಕಾಯಕಕ್ಕೆ ನಿಗದಿಯಾಗಿದ್ದವು. ಕಾಲ ಕಳೆದಂತೆ ಕುಟುಂಬಗಳು ಹೆಚ್ಚಿದವು. ಕರಗ ಹೊರುವ ಪೂಜಾರಿಗಳ ಸಂಖ್ಯೆ ವೃದ್ಧಿಸಿತು. ಆದರೆ ಕರಗ ಉತ್ಸವ ಮಾಡುವ ಸ್ಥಳಗಳ ಸಂಖ್ಯೆ ಹೆಚ್ಚಾದಂತೇನಿಲ್ಲ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕರಗ ಹೊರುವ ಪೂಜಾರಿ ಕುಟುಂಬಗಳು ನಾಲ್ಕೈದು ಇರಬಹುದು. ಅವರಲ್ಲಿ ಬೇತಮಂಗಲ ಪೂಜಾರಿಗಳ ಕುಟುಂಬ ನಾಲ್ಕೈದು ತಲೆಮಾರುಗಳಿಂದ ಈ ವೃತ್ತಿಯನ್ನು ಬದ್ಧತೆಯಿಂದ ನಿರ್ವಹಿಸುತ್ತಾ ಬಂದಿದೆ. ಈಗ ಆ ಕುಟುಂಬದಲ್ಲಿ ಕರಗ ಉತ್ಸವದಲ್ಲಿ ಭಾಗವಹಿಸುವ ಆರು ಪೂಜಾರಿಗಳಿದ್ದಾರೆ.

ಬೆಂಗಳೂರಿನ ದೊಡ್ಡಕುಂಟೆ ಜೀವನಹಳ್ಳಿಯ ಯಲ್ಲಪ್ಪನವರು ಬೇತಮಂಗಲ ಪೂಜಾರಿ ಕುಟುಂಬದ ಮೂಲ ಪುರುಷ. ನೂರು ವರ್ಷಗಳಿಗೂ ಹಿಂದೆ ಬೇತಮಂಗಲ ಧರ್ಮರಾಯನಗುಡಿ ಪೂಜಾರಿಯಾಗಿ ಬಂದು ಕರಗ ಹೊರುವುದನ್ನು ವೃತ್ತಿ ಮಾಡಿಕೊಂಡ ಯಲ್ಲಪ್ಪನವರು, ಉಳಿದ ವೇಳೆ ಸಣ್ಣ ತಟಾಕಿನಲ್ಲಿ ಕಾಯಿಪಲ್ಲೆ, ಹೂ ಬೆಳೆದುಕೊಂಡು ಕುಟುಂಬ ನಿರ್ವಹಿಸುತ್ತಿದ್ದರು.

ಬೇತಮಂಗಲದ ಕುಟುಂಬದ ಕೀರ್ತಿಯನ್ನು ಜಿಲ್ಲೆಯ ತುಂಬಾ ಹರಡಿದವರು ಯಲ್ಲಪ್ಪನ ಮಗ ಪೂಜಾರಿ ಮುನಿಸ್ವಾಮಿ. ನೀಳಕಾಯದ ಮುನಿಸ್ವಾಮಿ ಅಪ್ರತಿಮ ಕರಗ ಪೂಜಾರಿ. ತಮಟೆ ಸದ್ದಿಗೆ ನರ್ತಿಸುತ್ತ ನೋಡುವವರನ್ನು ಮೋಡಿ ಮಾಡುತ್ತಿದ್ದ ನರ್ತನ ಕಲೆಯನ್ನು ಕೈವಶ ಮಾಡಿಕೊಂಡಿದ್ದವರು.

ಪರಂಪರಾನುಗತವಾಗಿ ರೂಢಿಸಿಕೊಂಡು ಬರುವ ಕರಗ ಪೂಜಾರಿ ಕುಟುಂಬದಲ್ಲಿ ಹದಿಹರೆಯದವರು ಕರಗ ಹೊರುವ ಕಾಯಕಕ್ಕೆ ಇಳಿಯುತ್ತಾರೆ. ಪೋಷಕರೊಂದಿಗೆ ಸಹೋದರರೊಂದಿಗೆ ಕರಗ ಕಾರ್ಯಕ್ರಮಗಳಲ್ಲಿ ಚಿಕ್ಕಂದಿನಿಂದಲೇ ಭಾಗವಹಿಸಿ ರೀತಿ ರಿವಾಜುಗಳನ್ನು ಮೈಗೂಡಿಸಿಕೊಳ್ಳುತ್ತಾರೆ.

ಇಪ್ಪತ್ತರ ಆಸುಪಾಸಿನಲ್ಲಿ ಯುವಕರು ‘ಒನಕೆ ಕರಗ’ ಎತ್ತುವ ಮೂಲಕ ಹೂವಿನ ಕರಗ ಹೊರುವುದಕ್ಕೆ ತಾಲೀಮು ಆರಂಭಿಸುತ್ತಾರೆ. ಇಪ್ಪತ್ತರ ವಯಸ್ಸಿನಿಂದ 35–40ನವರೆಗಿನ ವಯಸ್ಸು ಇವರು ಕರಗ ಹೊರುವ ಕಾಲಾವಧಿ.

ಮೊದಲಿಗೆ ತಮಟೆ, ನಾಗಸ್ವರ ವಾದನಗಳಿಗೆ ಹೆಜ್ಜೆ ಹಾಕುವುದಿತ್ತು. ಈಗ ಕಾಲ ಬದಲಾಗಿದೆ. ವೇದಿಕೆಗಳ ಮೇಲೆ ಬ್ಯಾಂಡ್, ತಮಟೆ, ನಾಗಸ್ವರಗಳ ವಾದ್ಯಗಳಿಗೆ ನರ್ತಿಸಬೇಕಾದ ಅನಿವಾರ್ಯ.

ಬೇತಮಂಗಲ ಕುಟುಂಬ ಬಿಟ್ಟರೆ, ಹೋಳೂರು, ಎಸ್. ಅಗ್ರಹಾರ, ಲಕ್ಕೂರು, ಮಾಲೂರು, ದೊಡ್ಡ ಕಡತೂರು, ಯಲ್ಲೂರು ಮೊದಲಾದ ಕಡೆಗಳಲ್ಲಿ ಪೂಜಾರಿ ಕುಟುಂಬಗಳಿವೆ. ಈಚೆಗೆ ಕುಪ್ಪಂ ಕಡೆಯ ಕುಟುಂಬಗಳು ಮುಳುಬಾಗಿಲಿಗೆ ವಲಸೆ ಬಂದು ಕರಗ ಹೊರುವ ವೃತ್ತಿಯನ್ನು ನಡೆಸುತ್ತಿರುವುದೂ ಉಂಟು.

‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪಡೆದಿರುವ ಏಕಮಾತ್ರ ಕರಗದ ಪೂಜಾರಿ ಬೇತಮಂಗಲದ ನಾಗರಾಜ್. ಪ್ರಖ್ಯಾತ ಪೂಜಾರಿ ಮುನಿಸ್ವಾಮಿ ಅವರ ಮೂವರು ಪುತ್ರರಲ್ಲೊಬ್ಬರು.

ಅರವತ್ತರ ಅಂಚಿನಲ್ಲಿರುವ ನಾಗರಾಜ್ ಅವರ ಸಹೋದರರ ಮಕ್ಕಳಾದ ಲಕ್ಷ್ಮೀನಾರಾಯಣ, ಮಂಜುನಾಥ, ದಿಲೀಪ್‌ಕುಮಾರ, ರಾಮಚಂದ್ರ, ನಾರಾಯಣ ಸ್ವಾಮಿ ಇವರೆಲ್ಲ ಕರಗ ಪೂಜಾರಿ ವೃತ್ತಿಯಲ್ಲಿದ್ದಾರೆ. ನಾಗರಾಜ್ ಮಗ ಕಾಂತರಾಜು ತುಮಕೂರು ಸಿದ್ಧಗಂಗಾ ಮಠದಲ್ಲಿ ಓದಿ, ಈಗ ತಂದೆಯೊಡನೆ ಪೂಜಾರಿ ವೃತ್ತಿಗೆ ತಯಾರಿ ನಡೆಸಿದ್ದಾರೆ.

ಒಳ್ಳೆಯ ಮೈಕಟ್ಟಿನ, ನೇಮ–ನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ಹಾಗೂ ಕರಗ ಹೊರುವ ಕಾರ್ಯವನ್ನು ವಂಶ ಪಾರಂಪರ್ಯವಾಗಿ ಗಳಿಸಿಕೊಂಡ ಈ ಯುವಪಡೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವೆಡೆ ಕರಗ ಹೊರುವ ಕಾಯಕದಲ್ಲಿ ಈಗ ನಿರತವಾಗಿವೆ.

ಹೆಚ್ಚು ಓದದ, ಉದ್ಯೋಗಗಳನ್ನು ಕಾಣದ ಕರಗದ ಪೂಜಾರಿಗಳು ಕರಗದ ಋತುವಿನಲ್ಲಿ ಎಲ್ಲರಿಂದಲೂ ಪೂಜನೀಯರು. ಆಗ ಭಕ್ತಾದಿಗಳು ಕೊಡುವ ಸಣ್ಣ ಮೊತ್ತದ ಕಾಣಿಕೆ ಬಿಟ್ಟರೆ ಬೇರೆ ಸಮಯದಲ್ಲಿ ಇವರ ಹೊಟ್ಟೆಪಾಡಿಗೆ ದಾರಿಗಳು ಕಡಿಮೆ. ಸರ್ಕಾರ ಅಥವಾ ದೇವಾಲಯಗಳಿಂದ ನಿಗದಿತ ಸಂಭಾವನೆ ಕೊಡುವ ಪದ್ಧತಿ ಇಲ್ಲ. ಪಶುಪಾಲನೆ, ಬೇಸಾಯವನ್ನು ಕೆಲವರು ನಂಬಿಕೊಂಡಿದ್ದರೂ ಅದರಿಂದ ಆಗುತ್ತಿರುವ ಉತ್ಪತ್ತಿ ಗೌಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT