ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳದಿಂಗಳ ನೋಡಾ...

ಆಯ್ದ ಕೆಲವು ಪತ್ರಗಳು
Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬನದ ಮಕ್ಕಳಾಗುವ ಹೊತ್ತು
ಏಪ್ರಿಲ್ ತಿಂಗಳಿಗೆ ಹಿಂದೆ ನಾವೆಲ್ಲಾ ಕರೆಯುತ್ತಿದ್ದದ್ದು ‘ಪಾಸು ಫೇಲ್’ ತಿಂಗಳೆಂದೇ. ಕಾರಣ, ಇಂದಿನಂತೆ ಸೆಮಿಸ್ಟರ್ ಪದ್ಧತಿ ಇಲ್ಲದ ಅಂದಿನ ಕಾಲದಲ್ಲಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ಏಪ್ರಿಲ್ ಹತ್ತಕ್ಕೇ ಪ್ರಕಟವಾಗುತ್ತಿತ್ತು ಮತ್ತು ಈಗಿನಂತೆ ಎಲ್ಲರನ್ನೂ ಪಾಸು ಮಾಡಲೇಬೇಕೆಂಬ ಹುಂಬ ಕಾನೂನೂ ಇರಲಿಲ್ಲ.

ವಿದ್ಯಾರ್ಥಿಗಳೂ, ಪೋಷಕರೂ, ನೆರೆಹೊರೆಯವರೂ ‘ಊಟ ತಿಂಡಿ ಆಯ್ತಾ?’ ಎನ್ನುವಷ್ಟೇ ಸರಳ ಸಹಜಸ್ಥಿತಿಯಲ್ಲಿ ‘ಪಾಸಾ? ಫೇಲಾ?’ ಎಂದು ಕೇಳಿ ಅದನ್ನು ಅಲ್ಲಿಗೇ ಬಿಡುತ್ತಿದ್ದರು. ಇನ್ನು ಫಸ್ಟ್ ಕ್ಲಾಸ್, ರ್‍್ಯಾಂಕ್‌ಗಳ ಪಿತ್ತವೂ ನೆತ್ತಿಗೇರಿರಲಿಲ್ಲ! ಫೇಲಾದವರಿಗೆ ಕೇವಲ ಕೆಲ ಗಂಟೆಗಳ  ಬೇಸರ. ನಂತರ ಜೂನ್ ಮಧ್ಯದವರೆಗೂ ಸಿಗುವ ರಜದ ಮಜದ ಕನಸಿನಲ್ಲಿ ಬೇಸರ ಯಾವಾಗಲೋ ಹಾರಿಹೋಗಿರುತ್ತಿತ್ತು.

ತೋಟ, ಗದ್ದೆ, ಕಾಡು ಮೇಡು ಎಂದು ಆಚೀಚೆ ಮನೆ ಹತ್ತಾರು ಹುಡುಗರು ಸೇರಿ ಸುತ್ತುತ್ತಾ, ಹೇರಳವಾಗಿ ಸಿಗುತ್ತಿದ್ದ ಕಾಡು ಹಣ್ಣು, ಕಾಯಿ, ಸೊಪ್ಪು ತಿನ್ನುತ್ತಾ, ಆಡುತ್ತಾ, ಕಚ್ಚಾಡುತ್ತಾ ಬಿಸಿಲ ಧಗೆಯಲ್ಲಿ ತೋಯ್ದು ಬೆವರಿಂದ ತೊಪ್ಪೆಯಾಗುತ್ತಿದ್ದೆವು. ತಲೆ ಕೂದಲಂತೂ ಯಾವಾಗಲೂ ಬೆವರಿಂದ ಅಂಟಂಟು.

ಬಟ್ಟೆಯಂತೂ ಗೇರು, ಮಾವು, ಹಲಸು, ರಂಜ, ಪೇರಳೆ ಇತ್ಯಾದಿ ಹಣ್ಣುಗಳ ಪರಿಮಳದ ಸಮ್ಮಿಶ್ರಣದ ಜೊತೆ ಕಲೆ,ಮ್ಯಾಣ,ಮಣ್ಣು, ಹಳ್ಳಿಯವರಾದ ನಾವು ಏಪ್ರಿಲ್‌ನಿಂದ ಮೂರು ತಿಂಗಳು ನಿಜವಾದ ‘ಬನದ ಮಕ್ಕಳು’ ಆಗಿ ಕಲಿತ ಪಕೃತಿ ಸೆಳೆತ ಇಂದಿಗೂ ಬೆಳದಿಂಗಳಂತೆ ತಂಪಾದ ರಮ್ಯ ಕನವರಿಕೆ.

ಇನ್ನು ಅಮ್ಮ ಅಜ್ಜಿಯರು ಸೇರಿ ಮಾಡುತ್ತಿದ್ದ ಹಪ್ಪಳ, ಸಂಡಿಗೆ, ಹಣ್ಣುಚೆಟ್ಟು(ಹಣ್ಣುಗಳ ಹಪ್ಪಳ)ಗಳನ್ನು ಬಿಸಿಲಿನಲ್ಲಿ ಒಣಹಾಕಿದಾಗ ಅದನ್ನು ಕಾಗೆ, ಮಂಗಗಳಿಂದ ಕಾಯುವುದು ನಮ್ಮ ಕಪಿ ಸೈನ್ಯದ ಕೆಲಸ. ಹಲಸಿನ ಹಪ್ಪಳದ ಹಿಟ್ಟನ್ನು ತಿನ್ನುತ್ತಾ, ಅರ್ಧಂಬರ್ಧ ಒಣಗಿದ ಹಪ್ಪಳ, ಸಂಡಿಗೆ ತಿನ್ನತ್ತಾ, ಕಾಗೆ ಹೆದರಿಸಲು ಡಬ್ಬ ಬಾರಿಸುತ್ತಾ ಬಿಸಿಲಲ್ಲಿ ನಾವೂ ಒಣಗಿದ ದಿನಗಳನ್ನು ಹೇಗೆ ಮರೆಯಲಿ?...

ಅಪ್ಪ ಅಜ್ಜ, ಕೆಲಸದವರು ಸೇರಿ ಮುಂಬರುವ ಮಳೆಗಾಲ ಎದುರಿಸಲು ಕೊಟ್ಟಿಗೆ ಮಾಡು ಹೊಚ್ಚೋದು, ಸುಡಲು ಕಟ್ಟಿಗೆ ಕಡಿದು ಕೂಡಿಡುವುದು, ಅಡಿಕೆ ಹಾಳೆ ಸಂಗ್ರಹಿಸುವುದು, ಒಣಗಿದ ಅಡಿಕೆ ಸಿಪ್ಪೆಯನ್ನು ಒಡ್ಡಿ ಮಾಡಿ ತುಂಬಿಸಿಡುವುದು, ಕೊನೆ ಮಟ್ಟೆ ಕಟ್ಟಿಡುವುದು, ಅಳ್ಳಟ್ಟೆ(ಆಲೆಮನೆಯಲ್ಲಿ ರಸ ತೆಗೆದ ಒಣಗಿದ ಕಬ್ಬಿನ ಜಲ್ಲೆ) ಸಂಗ್ರಹಿಸುವುದು ಇತ್ಯಾದಿ ಕೆಲಸ ಮಾಡುವಾಗ ಅವರೊಡನೆ ನಾವೂ ಖುಷಿಯಿಂದ ಕೈ ಜೋಡಿಸುತ್ತಿದ್ದೆವು.

ಬಾಳೆ ಮರ ತಂದು ಅದರ ರೆಪ್ಪೆ ಬಿಡಿಸಿ ಬಿಸಿಲಿನಲ್ಲಿ ಒಣಗಿಸಿ ಹೂಕಟ್ಟಲು, ಬೇಲಿ ಇತ್ಯಾದಿ ಕಟ್ಟಲು ಪರಿಸರಸ್ನೇಹಿ ಹಗ್ಗ ಮಾಡುತ್ತಿದ್ದ ನೆನಪೇ ಮಧುರ. ಇಂದಿನ ಗ್ಯಾಸ್, ಸೋಲಾರ್ ಹೀಟರ್, ಪ್ಲಾಸ್ಟಿಕ್ ಹಗ್ಗಗಳ ಮಾಯೆಯಲ್ಲಿ ಈ ಎಲ್ಲಾ ಮಳೆಗಾಲದ ತಯಾರಿಗಳೂ ಮಾಯವಾಗಿವೆ. ಒಟ್ಟಿನಲ್ಲಿ ಬದುಕೆಂಬ ತರಗತಿಯಲ್ಲಿ ಪಾಸಾಗಲು ಹಲವು ವಿಧದ ಪಾಠ ಕಲಿಸಿದ ಏಪ್ರಿಲ್ ತಿಂಗಳು ಅರಿವಿನ ಮಾಸ ಎಂದೇ ನನ್ನ ಅನಿಸಿಕೆ. ಅದಕ್ಕೇ ‘ಏಪ್ರಿಲ್ ಫೂಲ್’ ಎಂದಾಗ ಬೇಸರವಾಗುತ್ತೆ.
–ಹಾದಿಗಲ್ಲು ಸರಸ್ವತಿ, ಶಿವಮೊಗ್ಗ

ಏಪ್ರಿಲ್‌ನ ಶುಭ್ರ ಆಕಾಶದ ಸೆಳೆತ
ನಾನು ಸಣ್ಣವಳಿರುವಾಗ ಮನೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಏಪ್ರಿಲ್-ಮೇ ತಿಂಗಳುಗಳಲ್ಲಿ ರಾತ್ರಿ ವೇಳೆ ಸೆಕೆಯಿಂದ ಮನೆಯೊಳಗೆ ಮಲಗುವುದು ಕಷ್ಟವೆಂದು, ನನ್ನ ಅಪ್ಪ ಮಂಚವನ್ನು ಅಂಗಳದಲ್ಲಿ ಹಾಕಿ ಅಲ್ಲಿ ಮಲಗುತ್ತಿದ್ದರು. ತೋಟದಲ್ಲಿ ಕೆಲಸ ಮಾಡಿ ದಣಿದು ಬರುವ ಅವರು ಸ್ನಾನ ಮುಗಿಸಿ, ಚಹಾ ,ತಿಂಡಿ ಮುಗಿಸಿ ಆ ಮಂಚದಲ್ಲಿ ಮಲಗಿ ರೇಡಿಯೊ ಆಲಿಸುತ್ತಿದ್ದರು.

ನಾವು ಮಕ್ಕಳು ನಮ್ಮ ಓದು-ಬರಹ ಮುಗಿಸಿ ಹೊರಗೆ ಅಂಗಳದಲ್ಲಿ ಅಪ್ಪನ ಜೊತೆ ಕುಳಿತುಕೊಳ್ಳುತ್ತಿದ್ದೆವು. ಆಗ ಮೇಲೆ ಶುಭ್ರ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳು ಹಾಗೂ ಚಂದ್ರನನ್ನು ನೋಡಿ ನಮಗೆ ಬಹಳ ಖುಷಿಯೆನಿಸುತ್ತಿತ್ತು.

ಶುಕ್ರ ಗ್ರಹ, ಮಂಗಳ ಗ್ರಹ, ಧ್ರುವ ನಕ್ಷತ್ರ  ಹೀಗೆ ಅಪ್ಪ ಆಕಾಶಕಾಯಗಳನ್ನು ಪರಿಚಯಿಸುತ್ತಿದ್ದರು. ಪ್ರತಿದಿನವೂ ರಾತ್ರಿ ಆಕಾಶ ನೋಡದಿದ್ದರೆ ನಮಗೆ ಏನನ್ನೋ ಕಳಕೊಂಡಂತೆ ಅನಿಸುತ್ತಿತ್ತು.  ಸ್ವಲ್ಪ ಹೊತ್ತು ಆಕಾಶ ವೀಕ್ಷಣೆ ಮಾಡಿ ಒಳಗೆ ಬಂದು ಮಲಗುತ್ತಿದ್ದೆವು.

ಹಳ್ಳಿಯ ಸ್ವಚ್ಛಂದ ಪರಿಸರದಿಂದ ಮದುವೆಯ ಬಳಿಕ ಪಟ್ಟಣ ಸೇರಿದೆ. ರಾತ್ರಿಯ ಆಕಾಶ ವೀಕ್ಷಣೆಗೆ ಅನಿವಾರ್ಯವಾಗಿ ಕಡಿವಾಣ ಬಿತ್ತು. ತವರು ಮನೆಯನ್ನು ಮಿಸ್ ಮಾಡಿಕೊಂಡಷ್ಟೇ, ಆಕಾಶವನ್ನೂ  ಮಿಸ್ ಮಾಡಿಕೊಂಡಿದ್ದೆ. ನನ್ನ ಗಂಡನ ಮನೆಯಲ್ಲಿ ಸೊಳ್ಳೆಯ ಕಾಟಕ್ಕೆ ಹೆದರಿ ರಾತ್ರಿ ಕಿಟಕಿಗಳನ್ನೂ ತೆರೆಯುತ್ತಿರಲಿಲ್ಲ.

ಏಪ್ರಿಲ್ ತಿಂಗಳ ಒಂದು ರಾತ್ರಿ ಫ್ಯಾನಿನ ಗಾಳಿ ಬಿಸಿಯೆನಿಸಿದಾಗ ಒತ್ತಾಯ ಮಾಡಿ ಕಿಟಕಿ ತೆರೆದೆ. ಆ ಕಿಟಕಿಯ ಮೂಲಕ ಒಂದು ತುಂಡು ಆಕಾಶ, ಚಂದ್ರ ಹಾಗೂ ಕೆಲವು ನಕ್ಷತ್ರಗಳು ಗೋಚರಿಸಿದೆವು. ನನಗೆ ಒಮ್ಮೆಲೇ ತವರು ಮನೆಯ ನೆನಪಾಯಿತು. ಸಂತೋಷ,ದುಃಖಗಳ ಸಮ್ಮಿಶ್ರ ಭಾವದಲ್ಲಿ ಆಕಾಶ ನೋಡುತ್ತಾ ನಿದ್ದೆಗೆ ಜಾರಿದೆ. ಕ್ರಮೇಣ ಪಟ್ಟಣದ ಬದುಕಿಗೆ ಒಗ್ಗಿಕೊಂಡು ಆಕಾಶವನ್ನು ಮರೆತೇಬಿಟ್ಟಿದ್ದೆ.

ಆ ದಿನ ಹಗಲಿಡೀ ವಿದ್ಯುತ್ ಕಡಿತದಿಂದಾಗಿ ವಿದ್ಯುತ್ ಇರಲಿಲ್ಲ. ಕತ್ತಲಾಗುವ ಹೊತ್ತಿಗೆ ಕರೆಂಟ್ ಬಂತು. ರಾತ್ರಿ ಊಟ ಮುಗಿಸಿ ಮಲಗಿದೆವು. ಮಧ್ಯೆ ಪುನಃ ಕರೆಂಟ್ ಹೋಗಿರಬೇಕು. ಫ್ಯಾನ್ ತಿರುಗುವುದು ನಿಂತ ತಕ್ಷಣ ನನ್ನ ಮಕ್ಕಳಿಗೆ ಎಚ್ಚರವಾಯಿತು. ಸೆಕೆ ಸೆಕೆ ಎಂದು ಅವರು ಹಟ ಮಾಡಿದಾಗ ಪೇಪರ್ ಹಿಡಿದು ಗಾಳಿ ಹಾಕಿ ಸುಸ್ತಾದೆ.

ಕೊನೆಗೆ ನನ್ನ ಗಂಡ, ‘ಟೆರೇಸಲ್ಲಿ ಗಾಳಿ ಬೀಸುತ್ತೆ, ಅಲ್ಲಿ ಹೋಗಿ ಮಲಗೋಣ’ ಎಂದರು. ಚಾಪೆ, ದಿಂಬು ತೆಗೆದುಕೊಂಡು ಟೆರೇಸಿಗೆ ಹೋದೆವು. ಚಾಪೆ ಹಾಸಿ ಮಲಗಿದೆವು. ಸಣ್ಣಗೆ ಗಾಳಿ ಬೀಸುತ್ತಿತ್ತು. ಮಕ್ಕಳು ನಿದ್ರಿಸಬಹುದು ಎಂದುಕೊಂಡಿದ್ದೆವು. ಆದರೆ ಅಂಗಾತ ಮಲಗಿ ಮೇಲೆ ನೋಡುವಾಗ, ಮೋಡ ರಹಿತವಾದ ಆ ಏಪ್ರಿಲ್‌ನ ರಾತ್ರಿಯಲ್ಲಿ ಆಕಾಶದ ತುಂಬೆಲ್ಲಾ ಲಕ್ಷಾನುಗಟ್ಟಲೆ ನಕ್ಷತ್ರಗಳು ಮಿನುಗುತ್ತಿದ್ದವು. ಅರ್ಧ ಚಂದ್ರನೂ ಹೊಳೆಯುತ್ತಿದ್ದ.

ಜೀವನದಲ್ಲಿ ಪ್ರಥಮ ಬಾರಿ ಇಂತಹ ಮನಮೋಹಕ ದೃಶ್ಯವನ್ನು ನೋಡಿದ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾ ಅವರು ಈ ಅದ್ಭುತ ಸೌಂದರ್ಯವನ್ನು ಸವಿದದ್ದೇ ಸವಿದದ್ದು. ಆಕಾಶದ ಸೊಬಗನ್ನು ನೋಡುತ್ತಾ ಒಂದೆರಡು ಗಂಟೆಗಳು ಕಳೆದರೂ ಮಕ್ಕಳು ಮಲಗುವ ಲಕ್ಷಣ ಕಾಣದಿದ್ದಾಗ ವಿಧಿಯಿಲ್ಲದೇ ಅವರನ್ನು ಎಬ್ಬಿಸಿ ಪುನಃ ಒಳಗೆ ಬಂದು ಮಲಗಿದೆವು.

ಆ ಏಪ್ರಿಲ್ ರಾತ್ರಿಯ ನಂತರ ಮಕ್ಕಳು ಆಗಾಗ ರಾತ್ರಿ ಹೊತ್ತು ಚಂದಿರನನ್ನೂ, ನಕ್ಷತ್ರಗಳನ್ನೂ ತೋರಿಸು ಎಂದು ದುಂಬಾಲು ಬೀಳುತ್ತಾರೆ. ಮುಸ್ಸಂಜೆ ಹೊತ್ತಲ್ಲಿ ಟೆರೇಸ್ ಮೇಲೆ ಕುಳಿತು ಅರೆಬರೆ ಮೋಡಗಳಿರುವ ಆಕಾಶದಲ್ಲಿ ಸೂರ್ಯಾಸ್ತಮದ ವೇಳೆ ಮೂಡುವ ವರ್ಣ ಚಿತ್ತಾರವನ್ನು ಅವರಿಗೆ ತೋರಿಸುತ್ತೇನೆ.

ಬೆಳದಿಂಗಳ ರಾತ್ರಿಯ ಪೂರ್ಣ ಚಂದ್ರನನ್ನೂ, ಉಳಿದ ದಿನಗಳ ಚಂದ್ರ, ನಕ್ಷತ್ರಗಳನ್ನೂ ನೋಡುತ್ತಾ ಮಕ್ಕಳು ಖುಷಿಯಿಂದ ಕುಣಿಯುವಾಗ ನನಗೂ ಬಾಲ್ಯ ಮತ್ತೆ ಬಂದಂತೆ ಅನಿಸುತ್ತದೆ. ಬೆವರಿಳಿಸುವ ಸೆಖೆಯ ರಾತ್ರಿಗಳಲ್ಲೂ ಮನಕೆ ತಂಪೆರೆವ, ಏಪ್ರಿಲ್ ಮೇ ತಿಂಗಳುಗಳು ಆ ದೃಷ್ಟಿಯಿಂದ ನನಗೆ ಅಪ್ಯಾಯಮಾನವೆನಿಸಿವೆ. 
-ಜೆಸ್ಸಿ.ಪಿ.ವಿ. ಪುತ್ತೂರು

ಹಂತದಿಂದ ಹಂತದಲ್ಲಿ ಏಪ್ರಿಲ್ ಎಂಬ ಮಾಯಾವಿ
ಏಪ್ರಿಲ್ ಮಾಸ ನನ್ನೊಳಗೆ ನಾ ಇದುವರೆಗೆ ಕಳೆದ ಜೀವನದ ಹಲವು ಹಂತಗಳಲ್ಲಿ ಹಲವು ಮಜಲುಗಳನ್ನು ಕಾಣ್ಕೆಯಾಗಿಸಿದೆ. ಬಾಲ್ಯದಲ್ಲಿ ರಜಕ್ಕೆಂದು ಪಟ್ಟಣದಿಂದ ಮನೆಗೆ ಬರುತ್ತಿದ್ದಾಗ ಹಳ್ಳಿಯಲ್ಲಿ ಹಗಲು ರಾತ್ರಿ ಬೆಳಗುಗಳ ಪರಿವೆಯಿರದೇ ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸಿ ಆಡುತ್ತಿದ್ದಾಗ ಎಂದೂ ಬಿಸಿಲ ಬೇಗೆ ತಾಗುತ್ತಿರಲಿಲ್ಲ.

ಓರಗೆಯ ಗಂಡು ಮಕ್ಕಳಿಗೆ ಸಮವಾಗಿ ಬುಗುರಿ, ಗೋಲಿ, ಐಸ್‌ಪೈಸ್, ಲಗೋರಿ, ಚಿನ್ನಿ ದಾಂಡು, ಚೌಕಾಬಾರ, ಕಳ್ಳಾ ಪೊಲೀಸ್, ವಿಷಾಮೃತ, ಒಂದೇ ಎರಡೇ? ಮಧ್ಯಾಹ್ನದ ಬಿರು ಬಿಸಿಲು ಇಳಿದ ನಂತರ ಅಪ್ಪನನ್ನು ಕಾಡಿ, ಅತ್ತೆಯ ಮಕ್ಕಳ ಸಮಕ್ಕೆ ಅಪ್ಪನನ್ನು ಹಿಡಿದುಕೊಂಡು ಬಾಳೆ ಮರದ ಸಹಾಯದಿಂದ ಬಾವಿಗೆ ಧುಮುಕಿ ಕೈ ಕಾಲು ಬಡಿದು ಈಜಾಡುತ್ತಿದ್ದುದು ಸ್ವರ್ಗ ಸುಖಕ್ಕೆ ಸಮಾನ.

ಅದಕ್ಕೂ ಮುಂಚೆ ಉಟ್ಟ ಬಟ್ಟೆಯಲ್ಲೇ ತೋಟದ ತೊಟ್ಟಿಗಳಲ್ಲಿ ಸರತಿಯಂತೆ ಇಳಿದು ಮನ ತಣಿಯೆ ಮುಳುಗೇಳುತ್ತಿದ್ದುದು ಇದೇ ಏಪ್ರಿಲ್‌ನಲ್ಲಿ. ಆಗೆಲ್ಲಾ ಎಲ್ಲರೂ ಒಟ್ಟಿಗೆ ಆಡಿ ಮತ್ತದೇ ಹಸಿ ಬಟ್ಟೆ ಧರಿಸಿ ಏನೇನೂ ಮಾಡಿದರೂ ಯಾರಿಗೂ ಯಾವ ಇನ್‌ಫೆಕ್ಷನ್ ಇಲ್ಲ, ಯಾವ ಮಣ್ಣಂಗಟ್ಟಿನೂ ಇರ್ಲಿಲ್ಲ. ಸಂಜೆಗೆ ಬೀಳುವ ಒದೆಗಳ ಲೆಕ್ಕವೂ ಇಡುತ್ತಿರಲಿಲ್ಲ.

ಸ್ವಲ್ಪ ಮುಂದುವರೆದು, ಮಾಧ್ಯಮಿಕ ಹಂತಕ್ಕೆ ಬಂದಾಗ ಹಲಸು, ಮಾವು, ಬೇವುಗಳ ಸಂಗಮವಾಯಿತು. ಈ ಮಾಸ, ಮನೆಯವರಿಗೆ ತಿಳಿಯದಂತೆ ಯಾರಾದರೊಬ್ಬರು ಹಲಸಿನ ಕಾಯಿ ಹರಸಾಹಸ ಮಾಡಿ ಕೊಯ್ದು ಹಿರಿಯರಿಗೇ ತಿಳಿಯದ ಹಾಗೆ ತೋಟದ ಕಪ್ಪಿನಲ್ಲಿ ಸೋಗೆಯಡಿ ಅಡಗಿಸಿ ಹಣ್ಣು ಮಾಡಿ ಕದ್ದು ತಿಂದಾಗ ಅಮೃತವೇ ನಮ್ಮ ಬಾಯಿಗಳಲ್ಲಿ. ಅಂತೆಯೇ ಹಿರಿಯರ ಕಣ್ತಪ್ಪಿಸಿ ತಿನ್ನುತ್ತಿದ್ದ ತೋತಾಪುರಿ ಮಾವು, ಅದರೊಟ್ಟಿಗೆ ಕದ್ದು ತರುತ್ತಿದ್ದ ಖಾರದ ಪುಡಿ, ಉಪ್ಪು ಸಕ್ಕರೆಯ ಮಿಶ್ರಣ ನಿತ್ಯ ಹೋಳಿಗೆ ಹೂರಣ.

ಈ ರುಚಿ ನಾಲಗೆಯಲ್ಲಿ ಆರುವ ಮೊದಲೇ ಮನೆಯವರೆಲ್ಲಾ ಮಧ್ಯಾಹ್ನ ಮಲಗಿದರೆ ಕಳ್ಳ ಬೆಕ್ಕಿನಂತೆ ಹೊಂಚಿಕೊಳ್ಳುತ್ತಿದ್ದ ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಒಣಮೆಣಸಿನಕಾಯಿ, ಹೊಸ ಹುಣಸೇಹಣ್ಣು ಸೇರಿಸಿ ಕಲ್ಲಿನ ಮೇಲೆ ಜಜ್ಜಿ ಸೋಗೆ ಕಾಡ್ಡಿಗೆ ಅಂಟಿಸಿಕೊಂಡು ಚೀಪುತ್ತಾ ಊರೆಲ್ಲಾ ಸುತ್ತುವ ಕಾಯಕದ ಮುಂದೆ ಈಗಿನ ಪಿಜ್ಜಾ ಬರ್ಗರ್‌ಗಳೂ ಟುಸ್.

ಈ ರೌಂಡ್ ಮುಗಿಯುತ್ತಿದ್ದಂತೆ ನೇರಳೆ ಹಣ್ಣಿನ ಬೇಟೆ, ಒಂದೇ ಎರಡೇ? ಹೈಸ್ಕೂಲಿಗೆ ಬಂದಾಗ ಏಪ್ರಿಲ್ ಮಾಸದ ನಿಜ ಆವರಣವಾಗತೊಡಗಿತು. ಏಪ್ರಿಲ್ ಹತ್ತರಂದು ವರ್ಷವಿಡೀ ಶಾಲೆಗೆ ಮಣ್ಣು ಹೊತ್ತು ಆಡಬಾರದ್ದನ್ನು ಆಡಿದ, ಮಾಡಿದ ಫಲಿತಾಂಶದ ಪ್ರಕಟಣೆಯಲ್ವೆ? ಆ ದಿನ ಎಲ್ರಿಗೂ ಸುಳ್ಳು ಜ್ವರ, ಹೊಟ್ಟೆ ನೋವು, ತಲೆ ನೋವು ಎಲ್ಲಾ ಕಾಯಂ ಅತಿಥಿಗಳು.

ಹಿರಿಯರು ಪ್ರತೀ ವರ್ಷವೂ ಬೈದಿದ್ದೇ ಬಂತು. ಪ್ರತೀ ವರ್ಷವೂ ನಮ್ಮದು ಅದೇ ಬಾಳು ಗೋಳು. ಮೂರಕ್ಕಿಳಿಲಿಲ್ಲ– ಆರಕ್ಕೇರಲಿಲ್ಲ. ಈಗ ಈ ಹಂತದ ಏಪ್ರಿಲ್ ಬೇರೆ. ಬರಲಿರುವ ಮಳೆಗಾಲಕ್ಕೆ ನಾನಾ ನಿರೀಕ್ಷೆಗಳು.

ತೋಟದಲ್ಲಿ ಅಡಿಕೆ ತೆಂಗಿಗೆ ನೀರು ಸಾಕಾಗದಿರುವ ಕಳವಳಗಳು, ಏಪ್ರಿಲ್ ಬಂದರೂ ಬ್ಯಾಂಕ್ ಲೋನ್, ಮಂಡಿ ಸಾಲ ತೀರಿಸಲಾಗಲಿಲ್ಲವೆಂಬ ಹಳವಂಡಗಳು. ಏಪ್ರಿಲ್ ಕಳೆದ ನಂತರ ಬೆಳೆದ ಬೆಳೆಗಳು ಬೆಲೆ ಏರಿಸಿಕೊಳ್ಳಬಹುದೆಂಬ ಆಸೆಗಳು. ಮಕ್ಕಳು, ರಜೆಗೆ ಬರುವರೆಂಬ ಕನವರಿಕೆಗಳು, ಅವರ ಫಲಿತಾಂಶದ ಕನವರಿಕೆಗಳು... ಏನುಂಟು ಏನಿಲ್ಲ ಏಪ್ರಿಲ್‌ನಲ್ಲಿ? ಒಟ್ಟು ಏಪ್ರಿಲ್ ನಮಗೆ ಮಿಶ್ರ ಅನುಭವಗಳ ಸಂಗಮ. ಪ್ರತಿ ಬಾರಿಯೂ ಅದ ಕಳೆಯುವುದೊಂದು ಸಂಭ್ರಮ.
–ಹೇಮಲತಾ ಎನ್‌.ಸಿ. ಚಿಕ್ಕಮಗಳೂರು

ಮಲ್ಲಿಗೆ ಘಮ ತರುವ ತಂಪು
ಏಪ್ರಿಲ್ ಅನ್ನು ಹೇಗೆ ತಾನೆ ಮರೆಯಲು ಸಾಧ್ಯ? ಏಪ್ರಿಲ್ ಎಂದರೆ ಬಿಸಿಲು. ಹೊರಗೂ ಒಳಗೂ ಕುದಿಯುವ ಬೇಗೆ! ಉರಿ ಬಿಸಿ. ಬೆವರ ಧಾರೆ ಧಾರೆ!. ಜೊತೆಗೆ ಎಂಥದ್ದೋ ಕಿರಿಕಿರಿ!. ಹಾಗಂತ ಈ ತಿಂಗಳನ್ನು ಬೇಸರಪಟ್ಟು ದೂಡುವ ಹಾಗೆ ಎಂದೂ ಆಗದು.

ಯಾಕೆಂದರೆ ಬಿಸಿಲ ಜೊತೆಜೊತೆಗೇ ಹೊತ್ತು ತರುವ ವಿಧ ವಿಧ ಹಣ್ಣುಗಳ ಘಮಲು!. ಕಲ್ಲಂಗಡಿ ಕರಬೂಜ, ನಿಂಬೆ, ಬೆಲ್ಲದ ಪಾನಕಗಳ ಸವಿಸವಿ!. ಹಣ್ಣುಗಳ ರಾಜ ಮೆಲ್ಲಮೆಲ್ಲನೆ ಅಡಿ ಇಟ್ಟು ಹಣ್ಣಾಗಿ ಇಡೀ ಊರನ್ನೇ ಆವರಿಸಿಕೊಳ್ಳುವ ಕಾಲ. ಎಷ್ಟು ಸವಿದರೂ ಮುಗಿಯದ ಮತ್ತೆ ಮತ್ತೆ ಬೇಕು ಎನ್ನಿಸುವ ಮಾವಿನ ಹಣ್ಣುಗಳ ಸ್ವಾದವನ್ನೂ ಹೊತ್ತು ತರುವ ಏಪ್ರಿಲ್ ಮನಸ್ಸಿಗೆ ಮುದ ನೀಡುತ್ತಾ ಅಪ್ಯಾಯಮಾನವಾಗಿ ನಿಂತು ಬಿಡುತ್ತದೆ ಎನ್ನುವುದು ಖಂಡಿತ ಭ್ರಮೆಯಲ್ಲ!

ಏಪ್ರಿಲ್ ಎಂದರೆ ಮಲ್ಲಿಗೆ ಹೂಗಳ ರಾಶಿ, ಸುರಗಿ ಹೂಗಳ ಸುರಿಮಳೆ, ಬಿರುಬಿಸಿಲಿಗೆ ಮೈಯೊಡ್ಡಿ ರಾತ್ರಿಯಾದಂತೆ ಮೆಲ್ಲಗೆ ಪಕಳೆಗಳನ್ನರಳಿಸುವ ಮಲ್ಲಿಗೆ ಸುವಾಸನೆ ರಾತ್ರಿಯ ತುಂಬು ಚಂದಿರನ ಬೆಳಕಲ್ಲಿ ಸುರಿಸುವುದು ಬರೀ ತಂಪನ್ನೇ!. ಬೆಳಿಗ್ಗೆಯಿಂದ ಕಾದು ಕೆಂಡವಾದ ಭೂಮಿಯ ಒಡಲ ತುಂಬಾ ರಾತ್ರಿಯಾದಂತೆ ಸುರಗಿ ಹೂಗಳ ರಾಶಿಯನ್ನೇ ಸುರಿಸಿ ಪರಿಮಳ ಚೆಲ್ಲುವುದೂ ಈ ಏಪ್ರಿಲ್ ತಿಂಗಳೇ!

ಏಪ್ರಿಲ್ ಎಂದರೆ ರಾತ್ರಿಯಲ್ಲಿ ತಿರುಗುವ ಫ್ಯಾನ್ ಜೊತೆಗೆ ಹಾಸಿಗೆ ಮಂಚ ಬಿಟ್ಟು ಬರೀ ನೆಲದ ಮೇಲೆ ನಿರಾಳವಾಗಿ ಮೈ ಚೆಲ್ಲಿ ಉರುಳಾಡುವ ಸುಖ!. ತೀಡುವ ತಂಗಾಳಿಗೆ ಮೈಯೊಡ್ಡಿ ಬಾಲ್ಕನಿಯ ನೆಲದಲ್ಲಿ ಅಂಗಾತ ಮಲಗಿ ನಕ್ಷತ್ರಗಳ ಜೊತೆ ಸಂಭಾಷಣೆಗಿಳಿಯುವ ಅವುಗಳ ಮಧ್ಯ ಕಾಣದ ನನ್ನವರನ್ನು ಹುಡುಕುತ್ತಾ ಹೊಳೆವ ಚಂದಿರನನ್ನು ದಿಟ್ಟಿಸುತ್ತಾ, ನಗುವ ಸುಂದರ ರಾತ್ರಿ. ಮಲ್ಲಿಗೆ ಬಳ್ಳಿಯ ಪಕ್ಕದಲ್ಲೇ ಕುಳಿತು ಮೊಗ್ಗರಳುವ ಸೊಬಗನ್ನು ನೋಡುತ್ತಾ ಮೈ ಮರೆಯುವ ಸುಂದರ ಕ್ಷಣಗಳು ನನಗೆ ಸಿಗುವುದು ಈ ಏಪ್ರಿಲ್ ತಿಂಗಳಲ್ಲಿ ಮಾತ್ರ.

ಇಡೀ ಊರಿಗೆ ಕೆಂದೂಳಿನ ಸಿಂಚನವಾಗುತ್ತಿರುವಾಗ ಬಿರುಬಿಸಿಲಲ್ಲೇ ಬೈದುಕೊಂಡು ಕಚೇರಿಗೆ ತೆರಳುವ ನನ್ನಂಥ ಎಷ್ಟೋ ಮಂದಿ ರಾತ್ರಿಯಾಗುತ್ತಲೇ ತಿಂಗಳ ತಂಪಿನಲ್ಲಿ ಮನಸಾರೆ ನಿರಾಳವಾಗುತ್ತಾರೆ ಎನ್ನುವುದೂ ಅಷ್ಟೇ ನಿಜ!. ಏಪ್ರಿಲ್ ತಿಂಗಳೆಂದರೆ ನನ್ನ ಬದುಕಲ್ಲಿ ಬೇಗೆ ಜೊತೆಗೆ ನನ್ನ ಒಳಗುದಿಗೆ ತಂಪೆರೆಯುವ ತಿಂಗಳು.

ಬದುಕಿನ ಸಂಜೆಯಲ್ಲಿ ಒಂಟಿಯಾದ ನನಗೆ ನನ್ನವರೊಂದಿಗೆ ಕಳೆದ ಈ ತಿಂಗಳ ಬಾಲ್ಕನಿಯಲ್ಲಿನ ಸಂಜೆಗಳು ಬದುಕನ್ನೆದುರಿಸಲು ಚೈತನ್ಯ ತುಂಬಿ ಕೊಡುತ್ತದೆ. ಅರಳು ಮಲ್ಲಿಗೆ ನೋಡುತ್ತಾ ಮಾವಿನ ಹೋಳು, ಕಾಂಗ್ರೆಸ್ ಕಡಲೆ ಬೀಜವನ್ನು ಒಟ್ಟಿಗೆ ಸವಿಯುತ್ತಾ ನಾವಿಬ್ಬರೂ ಎಷ್ಟೋ ಸಮಸ್ಯೆಗಳನ್ನು ಚರ್ಚಿಸುತ್ತಾ ಒಬ್ಬರಿಗೊಬ್ಬರು ಸಮಾಧಾನವಾಗುತ್ತಿದ್ದ ಕಾಲ ಈ ತಿಂಗಳು. ನಗುತ್ತಾ, ನಗಿಸುತ್ತಾ ಮುನಿಯುತ್ತಾ, ಮನಸಾರೆ ಜಗಳವಾಡಿ ಮತ್ತೆ ಮಾತಾಡುತ್ತಾ ಬದುಕಿನ ಸವಿಯನ್ನು ಜೊತೆಜೊತೆಯಾಗಿ ಹಂಚಿಕೊಳ್ಳುತ್ತಿದ್ದುದು ಏಪ್ರಿಲ್ ತಿಂಗಳ ಸಂಜೆಗಳಲ್ಲಿ ತಂಪುಗಾಳಿಗೆ ಬಾಲ್ಕನಿಯಲ್ಲಿ ಕುಳಿತಾಗ!

ಬದುಕಿನೊಂದಿಗೆ ಬೆರೆತು ಹೋದ, ಉತ್ಸಾಹದ ಚಿಲುಮೆಯನ್ನೂ ಬತ್ತದ ನೆನಪುಗಳೊಂದಿಗೆ ಮತ್ತೆ ಮತ್ತೆ ಪುಟಿಯುವಂತೆ ಮಾಡುತ್ತಾ ಜೀವನ್ಮುಖಿಯಾಗುವತ್ತ ನನ್ನನ್ನು ಎಳೆದೊಯ್ಯುವಲ್ಲಿ ಈ ಏಪ್ರಿಲ್ ತಿಂಗಳ ಪಾತ್ರ ಬಹು ಮಹತ್ತರವಾದದ್ದು. ಹಾಗೆಂದೇ ಈ ತಿಂಗಳನ್ನು ನಾನು ಬೇಸರಿಸಲು ಸಾಧ್ಯವೇ ಇಲ್ಲ.

ಬೆಳಿಗ್ಗೆ ಉರಿಬಿಸಿಲು ಸುರಿದು ಸಂಜೆಗಳೆಲ್ಲ ತಂಪಾಗಿ ಕೈಹಿಡಿದು ನಗುವ ಈ ತಿಂಗಳು ಸದ್ದಿಲ್ಲದೇ ಆಪ್ತವಾಗುತ್ತದೆ. ಬಳ್ಳಿಯಲ್ಲಿ ತೂಗುವ ಮಲ್ಲಿಗೆ ಮಾರುಕಟ್ಟೆ ತುಂಬಾ ಒಪ್ಪವಾಗಿ ರಾಶಿ ಹಾಕಿದ ಮಾವು, ಕರಬೂಜ, ಕಲ್ಲಂಗಡಿ, ಸುರಗಿ ಹೂಗಳ ಪರಿಮಳ. ಬಾಯಿ ಚಪ್ಪರಿಸುವ ನೆಲ್ಲಿ, ಕಡ್ಲೆ, ಕಬ್ಬುಗಳ ಸಿರಿ ಔತಣ. ಒಂದೇ ಎರಡೇ? ಬರೆದರೆ ಒಂದೊಂದೂ ಕಥೆಯಾದೀತು. ಒಟ್ಟಿನಲ್ಲಿ ಈ ತಿಂಗಳು ಹೃದಯಕ್ಕೆ ಮನಸಿಗೆ ತೀರಾ ಹತ್ತಿರ. ಕಿರಿಕಿರಿಯಾದರೂ ಅಪ್ಪಿಕೊಳ್ಳುವ ಹಿತ, ಕೆಂಡದ ಬಿಸಿಯಾದರೂ ಬೆಳದಿಂಗಳ ತಂಪು, ದೂಳಿನ ಸ್ನಾನವಾದರೂ ಮಧುರ ಹೂಗಳ ಘಮಲು! ಏಪ್ರಿಲ್ ಎಂದರೆ ನನಗಿಷ್ಟ.
–ಡಿಂಕಿ ಬೆಂಗಳೂರು

ನೆನಪುಗಳು ಏಪ್ರಿಲ್‌ನ ಬಳುವಳಿ
ಏಪ್ರಿಲ್ ತಿಂಗಳೆಂದರೆ ಸಾಕು ಥಟ್ಟನೆ ಮೈ ಬೆವರುತ್ತದೆ. ಈ ಬಿಸಿಲ ಬೇಗೆಗೆ, ನಿಷ್ಕಾರುಣವಾದ ಧಗೆಗೆ ದೇಹ ಬಳಲಿ ಬೆಂಡಾಗುತ್ತದೆ. ಮನಸ್ಸು ಹೈರಾಣಾಗಿಬಿಡುತ್ತದೆ. ಆದರೆ ನಾವು ಪಡ್ಡೆ ಹುಡುಗರಾಗಿದ್ದಾಗ ಈ ಬಿಸಿಲ ಚೇಷ್ಟೆಗಳಿಗೆಲ್ಲಾ ಸೆಡ್ಡು ಹೊಡೆದು ಅದೆಷ್ಟೋ ಐನಾತಿ ಕೆಲಸಗಳಿಗೆ ಶಂಕುಸ್ಥಾಪನೆ ಮಾಡಿಬಿಡುತ್ತಿದ್ದೆವು. ಹೇಗಿದ್ರೂ ಪರೀಕ್ಷೆಯ ಪೀಕಲಾಟಗಳ ದಾಟಿ ಬಿಡುಗಡೆಯ ಭವ್ಯ ಸ್ವಾತಂತ್ರ್ಯ ಪಡೆದ ಹುಮ್ಮಸ್ಸಿನಲ್ಲಿರುತ್ತಿದ್ದೆವು.

ಪುಸ್ತಕಗಳ ಚಕಾರ ಎತ್ತದೆ ಕಳೆಯುವ ಈ ತಿಂಗಳೆಂದರೆ ನಮಗೆ ತುಂಬಾನೆ ಅಚ್ಚುಮೆಚ್ಚು. ದಿನಬೆಳಗಾಯಿತೆಂದರೆ ಸಾಕು ಊರಾಚೆಗಿನ ಕೆರೆಯ ಬಯಲಿನಲ್ಲಿ ನಮ್ಮ ತರುಣಪಡೆ ವಾಸ್ತವ್ಯ ಹೂಡುವುದು ಮಾಮೂಲಾಗಿಬಿಡುತ್ತಿತ್ತು. ದನ ಕುರಿ ಮೇಯಿಸುವುದು ಈಜಾಡುವುದು ನಮ್ಮ ದಿನಂಪ್ರತಿ ಕಸುಬು. ಹಲಸು,ಮಾವು, ಬಾಳೆತೋಟಗಳಿಗೆ ಮುಲಾಜಿಲ್ಲದೆ ಕನ್ನ ಹಾಕುವ ಕಲೆಗಳನ್ನೆಲ್ಲಾ ಈ ಘಳಿಗೆಯಲ್ಲೇ ಕರಗತ ಮಾಡಿಕೊಬಿಡ್ತಿದ್ವಿ.

ನಮ್ಮೂರ ‘ದಾಸಣ್ಣ’ ತಾತರ ತೆಂಗಿನ ತೋಟದಲ್ಲಿ ಕದ್ದು ಕುಡಿದ ಎಳನೀರು ರುಚಿಯ ಸ್ವಾದ ಮತ್ತೆ ಮತ್ತೆ ನೆನಪಾಗುತ್ತದೆ. ಬಾಲ್ಯದಲ್ಲಿ ಹೇಳಿಕೊಳ್ಳುವಂತಹ ಅಮೂಲ್ಯ ನೆನಪುಗಳೇನಾದ್ರೂ ಇದ್ದಿದ್ದೇ ಆದ್ರೆ ಅವು ಬಹುಪಾಲು ಈ ಏಪ್ರಿಲ್ ತಿಂಗಳಿನ ಬಳುವಳಿಗಳು. ಕಾಲೇಜು ದಿನಗಳಲ್ಲಂತೂ ‘ಏಪ್ರಿಲ್ ಫೂಲ್’ ಎಂಬ ಮೂರ್ಖರ ದಿನದ ಪ್ರಯುಕ್ತ ಆಡಿದ ದೊಂಬರಾಟದ ಕಪಿಚೇಷ್ಟೆಗಳಿಗೆ ಲೆಕ್ಕವಿಟ್ಟಿಲ್ಲ.

ಸರಿಹೊತ್ತಿನ ರಾತ್ರಿಯಲ್ಲಿ ಮನೆಯ ಟೆರೇಸಿನ ಮೇಲೆ ಆಗಸದ ಚುಕ್ಕಿಗಳತ್ತ ಕಣ್ಣು ನೆಟ್ಟು ದಿಟ್ಟಿಸುವಾಗ ವಾಹ್! ಎಷ್ಟೊಂದೆಲ್ಲಾ ಮಜಬೂತೆನಿಸುತ್ತಿತ್ತು. ಚಂದಿರನೂರಿಗೆ ಲಗ್ಗೆಯಿಟ್ಟು ಸುತ್ತಾಡಿ ಬಂದಂತಹ ಭಾವಲೋಕದ ವಿಸ್ತರಣೆ ಮಾಡ್ಕೋತಿದ್ದೆ. ಅರೆಬಲಿತ ಹೃದಯದೊಳಗೆ ಭರ್ತಿ ವಿರಹಗಳನ್ನು ತುಂಬಿಕೊಂಡು ಒದ್ದಾಡುವ ಕನವರಿಕೆ ರಾತ್ರಿಗಳಿಗೆಲ್ಲಾ ಕಡಿವಾಣದ ದಾರಿ ತಿಳಿಯದೆ ಕಂಗಾಲಾಗಿದ್ದುಂಟು. ಸೊಳ್ಳೆ ಸರ್ರನೆ ರಕ್ತಹೀರುವಾಗಲೂ ಅದರ ಪರಿವೆಯಿಲ್ಲದೆ ಅದೆಂಥದೋ ಧ್ಯಾನದಲ್ಲಿರುತ್ತಿದ್ದೆ.

ಆ ದಿನಗಳಲ್ಲೆಲ್ಲಾ ಯುಗಾದಿಯ ಸಂಭ್ರಮ. ಇಡೀ ಪ್ರಕೃತಿ ಹೊಸದಾಗಿ ಚಿಗುರುವ ಉಮೇದಿನಲ್ಲಿರುತ್ತಿತ್ತು.ಚಿಲಿಪಿಲಿ,ಕುಹೂಕುಹೂ ಲವಲವಿಕೆಯ ದನಿ ನಮ್ಮ ತಾರುಣ್ಯ ಎದೆಯಲ್ಲೆಲ್ಲಾ ಒಂದಷ್ಟು ಭರವಸೆ, ಜೀವನಪ್ರೀತಿಯ ಚಿಲುಮೆ ಉಕ್ಕಿಸುವಂತಿದ್ದವು.ಒಟ್ಟಾರೆ ಈ ಏಪ್ರಿಲ್ ತಿಂಗಳೆಂಬ ಬಂಧುವಿನ ಒಡನಾಟ ನಿಜಕ್ಕೂ  ಮಧುರಾತಿಮಧುರ. 
- ರವಿಕುಮಾರ್.ಎಸ್. ಕಾಕರಾಮನಹಳ್ಳಿ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT