ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನ ಪ್ರಕ್ರಿಯೆ ಚುರುಕಿಗೆ ಕ್ರಮ ಕೈಗೊಳ್ಳಿ

Last Updated 5 ಏಪ್ರಿಲ್ 2017, 20:35 IST
ಅಕ್ಷರ ಗಾತ್ರ

ರಾಷ್ಟ್ರದಾದ್ಯಂತ ನ್ಯಾಯಾಲಯಗಳಲ್ಲಿ ಸುಮಾರು ಮೂರು  ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ. ಹೀಗಾಗಿ ನ್ಯಾಯದಾನ ಪ್ರಕ್ರಿಯೆಯನ್ನು  ಚುರುಕುಗೊಳಿಸಬೇಕಾಗಿರುವ ಅಗತ್ಯವನ್ನು ಅಲ್ಲಗಳೆಯಲಾಗದು.  ವರ್ಷಾನುಗಟ್ಟಲೆ ಎಳೆದರೂ ಅನೇಕ ಪ್ರಕರಣಗಳು ಇತ್ಯರ್ಥಗೊಳ್ಳುವುದೇ ಇಲ್ಲ. ಇಂತಹ ಸಂದರ್ಭದಲ್ಲಿ  ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ  ಜೆ.ಎಸ್. ಖೇಹರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿರುವುದು ಮುಖ್ಯವಾದದ್ದು. ಜೊತೆಗೆ, ನ್ಯಾಯದಾನ  ಪ್ರಕ್ರಿಯೆಯನ್ನು ಹಳಿಗೆ ತರಲು ವಿಡಿಯೊ ಕಾನ್ಫೆರೆನ್ಸಿಂಗ್‌ನಂತಹ ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನದ ಮಹತ್ವ ಅರಿತುಕೊಳ್ಳುವುದೂ ಮುಖ್ಯ ಎಂದು  ಅಲಹಾಬಾದ್ ಹೈಕೋರ್ಟ್‌ನ 150ನೇ ವಾರ್ಷಿಕೋತ್ಸವದಲ್ಲಿ ಭಾಷಣ ಮಾಡುತ್ತಾ  ಪ್ರಧಾನಿ ಹೇಳಿದ್ದಾರೆ. ಇಂತಹ ಕ್ರಮದಿಂದ  ಮೊಕದ್ದಮೆಗಳನ್ನು ಸಕಾಲದಲ್ಲಿ ನಿರ್ವಹಿಸುವುದು ಸಾಧ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ, ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳನ್ನೂ ಈ ವ್ಯವಸ್ಥೆ ಮೂಲಕ ನ್ಯಾಯಾಲಯದಲ್ಲಿ ಹಾಜರು ಪಡಿಸುವುದು ಸಾಧ್ಯವಾಗುತ್ತದೆ.  ಇದು ಬೀರುವ ಪರಿಣಾಮ ಅಪಾರ. ಏಕೆಂದರೆ, ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ ನೀಡುವ ಜೈಲುಶಿಕ್ಷೆಗಿಂತ ಹೆಚ್ಚಿನ ಅವಧಿಯ  ಜೈಲುಶಿಕ್ಷೆಯನ್ನು ವಿಚಾರಣಾಧೀನ ಕೈದಿಗಳು ಅನುಭವಿಸುವಂತಹ  ದುರವಸ್ಥೆ ಇದೆ.  ಇಂತಹ ಸ್ಥಿತಿಯನ್ನು ಕೊನೆಗಾಣಿಸಲು ಇದರಿಂದ ಸಾಧ್ಯವಾಗಬಹುದು. ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿಯುವುದಕ್ಕೆ ಅನೇಕ ಕಾರಣಗಳಿವೆ. ಸ್ವತಃ ದಾವೆ ಹೂಡಿದವರೂ  ಕೋರ್ಟ್ ದಿನಾಂಕಗಳನ್ನು ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ  ಪದೇಪದೇ ವಿಚಾರಣೆ ಮುಂದೂಡಿಕೆ ಆಗುತ್ತಲೇ ಇರುತ್ತದೆ. ಇದಕ್ಕಾಗಿ ನ್ಯಾಯದಾನ  ಪ್ರಕ್ರಿಯೆಯನ್ನು ಒಂದು ಹಂತಕ್ಕೆ ತರಲು ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸುವುದು ಮುಖ್ಯ. ತಂತ್ರಜ್ಞಾನ ಬಹಳಷ್ಟು ಸಮಯವನ್ನು ಉಳಿಸುವಂತಹದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿಸ್ತೃತ ಮಟ್ಟದಲ್ಲಿ  ತಂತ್ರಜ್ಞಾನದ ಅಳವಡಿಕೆಗೆ ಸಂಪನ್ಮೂಲದ ಅಡೆತಡೆಗಳು ಎದುರಾಗಬಹುದು.  ಇದನ್ನು ನಿರ್ವಹಿಸುವುದೂ ಮುಖ್ಯ.

ಪರಸ್ಪರ ಮಾತುಕತೆಗಳಲ್ಲಿ ಪರಿಹರಿಸಿಕೊಳ್ಳಬಹುದಾದ ವಿವಾದಗಳು ಕೋರ್ಟ್ ಮೆಟ್ಟಿಲು ಏರದಂತೆ ನೋಡಿಕೊಳ್ಳುವುದೂ ಇಲ್ಲಿ ಅವಶ್ಯ.   ಕೋರ್ಟ್‌ನ ಸಮಯ ಅನಗತ್ಯವಾಗಿ ಇಂತಹ ಪ್ರಕರಣಗಳಿಗೆ ವಿನಿಯೋಗವಾಗುವಂತಾಗಬಾರದು. ತ್ವರಿತ ನ್ಯಾಯಾಲಯಗಳ ಸ್ಥಾಪನೆ ಹೆಚ್ಚಾಗಬೇಕು. ಇದರಿಂದ ಜೈಲುಗಳಲ್ಲಿ  ಕೈದಿಗಳ ದಟ್ಟಣೆಯೂ ಕಡಿಮೆಯಾಗುತ್ತದೆ.

ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ತುಂಬಬೇಕಾದುದು ತಕ್ಷಣದ ಅಗತ್ಯ. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ನೇಮಕಾತಿಗಳನ್ನು ಸರ್ಕಾರವೂ ತ್ವರಿತಗೊಳಿಸಿದೆ ಎಂಬುದು ಸಮಾಧಾನಕರ.  ಈ  ಮಧ್ಯೆ ಇದೇ ಮೊದಲ ಬಾರಿಗೆ ಬೇಸಿಗೆ ರಜೆ ತೆಗೆದುಕೊಳ್ಳದಿರಲು ಸುಪ್ರೀಂ ಕೋರ್ಟ್‌ನ  28 ನ್ಯಾಯಮೂರ್ತಿಗಳ ಪೈಕಿ 15 ಮಂದಿ ಒಪ್ಪಿಕೊಂಡಿರುವುದು ಮಹತ್ವದ ಸಂಗತಿ.   ಮೇ ತಿಂಗಳಿಂದ ಜುಲೈ ತಿಂಗಳವರೆಗೆ ಎರಡು ತಿಂಗಳ ಕಾಲದ ಸುದೀರ್ಘ ರಜೆಯಲ್ಲೂ ಕೆಲಸ ಮಾಡಲು ಈ ನ್ಯಾಯಮೂರ್ತಿಗಳು ನಿರ್ಧರಿಸಿರುವುದು  ಸಕಾರಾತ್ಮಕ ನಡೆ.  ಈ ರಜೆ ಅವಧಿಯಲ್ಲಿ  ಪ್ರಮುಖ ಪ್ರಕರಣಗಳ ವಿಚಾರಣೆಗಾಗಿ ಮೂರು ಸಾಂವಿಧಾನಿಕ ಪೀಠಗಳು ಕಾರ್ಯನಿರ್ವಹಿಸಲಿವೆ.  ಇಂತಹದೊಂದು ಮಹತ್ವದ ಬದಲಾವಣೆಗೆ ಸಿದ್ಧರಾಗಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಾದರಿಯನ್ನು  ಹೈಕೋರ್ಟ್ ನ್ಯಾಯಮೂರ್ತಿಗಳೂ ಅನುಸರಿಸುವರೇ ಎಂಬುದು ಪ್ರಶ್ನೆ.

ಬೇಸಿಗೆ ರಜೆ ಅವಧಿಯಲ್ಲಿ  ಎಲ್ಲಾ ನ್ಯಾಯಾಧೀಶರು ಕೇವಲ ಐದು ದಿನಗಳು ಕೆಲಸ ಮಾಡಿದರೂ ಸಾವಿರಾರು ಪ್ರಕರಣಗಳಿಗೆ  ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.  ಆದರೂ  ಬಾಕಿ ಇರುವ ಪ್ರಕರಣಗಳನ್ನು ಗಮನಿಸಿದಲ್ಲಿ ಇದಕ್ಕೆ  ಇನ್ನೂ ಹೆಚ್ಚಿನ ಸಮಯ ಹಿಡಿಯುತ್ತದೆ ಎಂಬುದು ಕಹಿ ವಾಸ್ತವ. ಹೀಗಿದ್ದೂ ಬದಲಾವಣೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಿದ್ಧರಾಗಿದ್ದಾರೆ ಎಂಬುದೇ ಮುಖ್ಯ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ವಕೀಲರು ಸಹಕಾರ ನೀಡಲು ಮುಂದಾಗುತ್ತಾರೆಯೇ? ಎಂದು ಕೇಳಿಕೊಳ್ಳಬೇಕಾಗಿದೆ. ಏಕೆಂದರೆ 1961ರ ವಕೀಲರ ಕಾಯಿದೆಗೆ ಉದ್ದೇಶಿತ ತಿದ್ದುಪಡಿ ವಿರೋಧಿಸಿ ಮಾರ್ಚ್ 31ರಂದು ರಾಷ್ಟ್ರದಾದ್ಯಂತ ವಕೀಲರು ಮುಷ್ಕರ ನಡೆಸಿದ್ದಾರೆ. ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿಕೊಂಡು ಮುಷ್ಕರ ನಡೆಸುವವರಿಗೆ ಶಿಕ್ಷೆ ವಿಧಿಸುವ ಉದ್ದೇಶ ಈ ತಿದ್ದುಪಡಿಯಲ್ಲಿದೆ. 

ವಕೀಲರನ್ನು ಶಿಸ್ತಿನ ಹಾದಿಗೆ ತರುವ ಇಂತಹ ಪ್ರಯತ್ನಗಳಿಗೂ ವಕೀಲರು ಸವಾಲು ಎಸೆಯುತ್ತಿರುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT