ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಕ್ರಮಕ್ಕೆ ಭಾರತ ಕಿಡಿ

5ನೇ ಪ್ರಾಂತ್ಯವಾಗಿಸಲು ಸಿದ್ಧತೆ
Last Updated 5 ಏಪ್ರಿಲ್ 2017, 20:39 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಗಿಲ್ಗಿಟ್ ಮತ್ತು ಬಾಲ್ಟಿಸ್ತಾನವನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸಲು ಮುಂದಾಗಿರುವ ಪಾಕಿಸ್ತಾನದ ಕ್ರಮವನ್ನು  ಕೇಂದ್ರ ಸರ್ಕಾರ ಪ್ರಬಲವಾಗಿ ಖಂಡಿಸಿದೆ.

ಜತೆಗೆ, ‘ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರ ಒಳಗೊಂಡಂತೆ, ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಬಿಜು ಜನತಾ ದಳ ಸಂಸದ ಭ್ರತೃಹರಿ ಮಹತಾಬ್ ಅವರು ಶೂನ್ಯವೇಳೆಯಲ್ಲಿ, ‘ಈ ಪ್ರದೇಶಗಳನ್ನು ತನ್ನ ಐದನೇ ಪ್ರಾಂತ್ಯಗಳೆಂದು ಘೋಷಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ’ ಎಂದು ವಿಷಯವನ್ನು ಪ್ರಸ್ತಾಪಿಸಿದರು.

ನಂತರ, ‘ಈ ಪ್ರದೇಶಗಳು ಭಾರತದ ಭಾಗ ಎಂದು ನಮ್ಮ ಸಂವಿಧಾನ ಗುರುತಿಸಿದೆ. ಆದರೆ, ದೇಶ ವಿಭಜನೆ ವೇಳೆ ಈ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೈನಿಕರಿಗೆ ಬ್ರಿಟಿಷ್ ಅಧಿಕಾರಿಗಳು ಅವಕಾಶ ನೀಡಿದ್ದರು. ಬ್ರಿಟನ್‌ ಸಂಸತ್ತು ಈ ಬಗ್ಗೆ ಬಹಳ ಹಿಂದೆಯೇ ನಿರ್ಣಯ ಮಂಡಿಸಿದೆ. ಅದರಲ್ಲಿ, ‘ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ ಭಾರತದ ಭಾಗಗಳು. ಆದರೆ ಪಾಕಿಸ್ತಾನ ಇವನ್ನು 1947ರಿಂದಲೂ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ’ ಎಂದು ವಿವರಿಸಲಾಗಿದೆ. ಅದನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸುವ ಪಾಕಿಸ್ತಾನದ ನಡೆ ಏಕಪಕ್ಷೀಯವಾದುದು. ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ‘ಪಾಕಿಸ್ತಾನ ಮಾಡಿದ್ದು ಮಾತ್ರ ನಿಮಗೆ ಕಾಣುತ್ತಿದೆ. ಅದಕ್ಕೆ ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ ಎಂಬುದು ನಿಮಗೆ ಕಾಣುವುದಿಲ್ಲ. ಪಾಕಿಸ್ತಾನದ ನಡೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಖಂಡಿಸಲಾಗಿದೆ. ಈ ಪ್ರದೇಶಗಳು ಭಾರತದ ಭಾಗಗಳು ಎಂಬುದರಲ್ಲಿ ಅನುಮಾನವೇ ಬೇಡ’ ಎಂದು ಅವರ ಉತ್ತರಿಸಿದರು.

‘ಜನಾಂಗೀಯ ದಾಳಿ ಎನ್ನಲಾಗದು’

‘ಗ್ರೇಟರ್‌ ನೋಯ್ಡಾದಲ್ಲಿ ಆಫ್ರಿಕಾ ದೇಶಗಳ ಪ್ರಜೆಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಅದನ್ನು  ಈಗಲೇ, ಜನಾಂಗೀಯ ದಾಳಿ ಎಂದು  ಕರೆಯಲು ಸಾಧ್ಯವಿಲ್ಲ’ ಎಂದು ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಹೇಳಿದ್ದಾರೆ.

‘ಆಫ್ರಿಕಾ ದೇಶಗಳ ನಿಯೋಗದ ಮುಖ್ಯಸ್ಥರು ಇದನ್ನು ಜನಾಂಗೀಯ ದಾಳಿ  ಮತ್ತು ಭಾರತ ಸರ್ಕಾರ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ದುರದೃಷ್ಟದ ಹೇಳಿಕೆ. ಆಫ್ರಿಕಾದ ನಿಯೋಗದ ಹೇಳಿಕೆಯಿಂದ ಭಾರತಕ್ಕೆ ನೋವಾಗಿದೆ ಎಂಬುದನ್ನು, ಈಗಾಗಲೇ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಅವರು ಹೇಳಿದರು.
‘ದಾಳಿಗಳು ಪೂರ್ವಯೋಜಿತವಾಗಿರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT